ತಾಯಿ ಬಾ ಬಾ

ಪುಟ್ಟ ಕುಟುಂಬ. ಗಂಡ-ಹೆಂಡತಿ ಇಬ್ಬರ ದುಡಿಮೆ. ಮಗುವಿನ ಲಾಲನೆ-ಪಾಲನೆಗೆ ಮಾತ್ರ ಕೆಲಸದಾಕೆಯ ಹೊಣೆ.
ಲಾಕರ್ನಲ್ಲಿ ಬಂಗಾರಗಳನ್ನಿಟ್ಟು ಅದಕ್ಕಿಂತ ಹೆಚ್ಚು ಬೆಲೆಬಾಳುವ ಮಗುವನ್ನು ಯಾವುದೇ ರಕ್ಷಣೆಯಿಲ್ಲದೇ ಗುರುತು ಪರಿಚಯವಿಲ್ಲದ ಆಯಿಯ ಕೈಯಲ್ಲಿ ಬಿಟ್ಟು ಹೋಗುವುದು ಇಂದಿನ ಸಾಮಾನ್ಯ ದೃಶ್ಯ.
ಶಾಲೆಯಿಂದ ಬರುವ ಮಗುವನ್ನು ನಿರೀಕ್ಷಿಸುತ್ತಾ ನಿಲ್ಲುವ ತಾಯಿಯ ಕಲ್ಪನೆ ಮಕ್ಕಳಿಗಾದರೂ ಹೇಗೆ ತಾನೆ ಬಂದೀತು? ಶಾಲೆಯಿಂದ ಬಂದೊಡನೆ ಅಮ್ಮನ ಮಡಿಲಿನಲ್ಲಿ ಕರಗಿ ಹೋಗುವ ಮಗುವಿನ ಆಸೆ ನಿರೀಕ್ಷೆಯಾಗಿಯೇ ಉಳಿದಿರುತ್ತದೆ.
ಅಮ್ಮಾ ಕೆಲಸಕ್ಕೆ ಹೋಗಬೇಡ ಅನ್ನೋದು ಮಗು ಅಮ್ಮನ ಮುಂದಿಡುವ ನಿತ್ಯದ ಬೇಡಿಕೆ. ಅದಕ್ಕೆ ಅಮ್ಮನಿಂದ ಹ್ಞೂಂಗುಟ್ಟುವ ಮೂಲಕ ಸಮ್ಮತಿ ಸೂಚನೆ. ಆದರೆ ಇದು ಹುಸಿ ಭರವಸೆಯೆಂದು ಆಕೆಗೆ ತಿಳಿದಿದೆ. ಆದರೆ ಮಗುವಿಗೆ ಆಕೆಯಲ್ಲಿ ಯೇನೋ ನಂಬಿಕೆ.
ಇಂದಾದರೂ ಅಮ್ಮ ಮನೆಯಲ್ಲಿರಬಹುದೇ? ಅಮ್ಮ ಆಫೀಸ್ಗೆ ರಜೆ ಹಾಕಿರಬಹುದೇ, ಇವತ್ತು ಒಂದು ದಿನವಾದರೂ ಅಮ್ಮನ ತೋಳಲ್ಲಿ ಮಲಗಿ ಕಥೆ ಕೇಳಿ ನಿದ್ರಿಸಬಹುದೇ? ಹೀಗೆ ನೂರಾರು ಆಕಾಂಕ್ಷೆಗಳ ಹೊತ್ತು ಶಾಲಾ ವಾಹನದಿಂದ ಇಳಿದರೆ. ನಿರೀಕ್ಷೆಗಳ ಭಂಡಾರವೇ ಕಳಚಿದಂಥ ಅನುಭವ.
ಈ ರೀತಿ ಆಕಾಂಕ್ಷೆಗಳನ್ನು ಹೊತ್ತು ಮನೆಗೆ ತೆರಳುವ ಮೊದಲು ತನ್ನ ಗೆಳೆಯ-ಗೆಳತಿಯರು ಅಮ್ಮನ ಕೈಹಿಡಿದು ನಗುನಗುತ್ತಾ ಮಾತನಾಡಿಕೊಂಡು ಬರುವುದನ್ನು ನೋಡಿ ಮನದೊಳಗೇ ನೋವನ್ನು ಪಡುತ್ತಾ, ಆದರೂ ಎಲ್ಲೋ ತನ್ನ ಮನದಾಳದಲ್ಲಿ ಆಸೆಯನ್ನು ಇಟ್ಟು ಮಗು ಬರುತ್ತದೆ.
ಬೆಳಗ್ಗೆ ಆದೊಡನೇ 'ಅಮ್ಮಾ, ಇವತ್ತೊಂದು ದಿನ ನನ್ನ ಶಾಲೆಗೆ ಕರಕೊಂಡು ಹೋಗು. ನೀನೇ ಪುನಾ ಕರಕೊಂಡು ಬರಬೇಕು' ಎಂದು ಹೇಳುವಾಗ ಈ ಬೇಡಿಕೆಗಳನ್ನು ಈಡೇರಿಸಲು ಅಮ್ಮ ಅಸಹಾಯಕಳು. ಆದರೆ ಏನೂ ಅರಿಯದ ಕಂದಮ್ಮಗಳಿಗೆ ಇದು ಅಗತ್ಯದ ಒಲುಮೆ.
ತಿಂಗಳಿಗೊಮ್ಮೆ ಆಯಿಗೆ ಸಂಬಳ ಕೊಟ್ಟಾಕ್ಷಣ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವ ನಂಬಿಕೆ. ಕರುಳ ಕುಡಿಗೆ ಸುಂದರ ಬದುಕನ್ನು ನಿರ್ಮಿಸುವ ತುಡಿತ ಎಲ್ಲ ತಾಯಿಯದ್ದು ಆದ ಕಾರಣ ಕೆಲಸದ ಅನಿವಾರ್ಯತೆ.
ತಾಯಿಗೂ ಕೆಲವು ಬಾರಿ ಅನ್ನಿಸುವುದು ಸಹಜ ಒಡವೆಗಳಿಗೆ ಲಾಕರ್ ಮಾಡಿ ಅದನ್ನು ಕಳ್ಳರ ಕೈಗೆ ಸಿಗದಂತೆ ಭದ್ರವಾಗಿ ಇರಿಸುತ್ತೇವೆ. ಆದರೆ ಮಗುವನ್ನು ಯಾವ ನಂಬಿಕೆ ಮೇರೆಗೆ ಅಪರಿಚಿತ ಕೆಲಸದವರ ಕೈಯಲ್ಲಿ ಇನ್ನು ನೀನು ಭದ್ರವೆಂದು ಭಾವಿಸಿ ಕೆಲಸಕ್ಕೆ ತೆರಳುತ್ತೇವೆ.
ಮಗುವಿಗೆ ಸುರಕ್ಷತೆ ಹಂದರ ಕಟ್ಟಿಕೊಡಲು ಸಾಧ್ಯ. ಅಪರಿಚಿತ ಮಹಿಳೆಯೂ ಮಗುವಿನ ವಾತ್ಸಲ್ಯದಲ್ಲಿ ಬಂಧಿಯಾಗಿ ಮಗುವನ್ನು ತನ್ನಷ್ಟೇ ಅಕ್ಕರೆಯಿಂದ ನೋಡಿಕೊಳ್ಳುವಳೆಂಬ ಭರವಸೆ. ಆದರೆ ಅದಕ್ಕಿಂತ ಮಿಗಿಲಾಗಿ ಮಗು ತಾಯಿಯ ಮೇಲೆ ಭರವಸೆ ಇಟ್ಟಿರುತ್ತದೆ.
-ನಯನಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


