ಗ್ರಾಮನಗರ

ಈಗ ಹಳ್ಳಿಗಳೂ ಫ್ಯಾಶನ್ ಬಣ್ಣ ಹಚ್ಚಿಕೊಳ್ಳುತ್ತಿವೆ. ನಗರಮುಖಿಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಸಿಟಿ ಮಾದರಿಯ ಮನೆಗಳು ತಲೆ ಎತ್ತುತ್ತಿವೆ. ಹೀಗಿರುವಾಗ ಮೈಸೂರಿನ ನಜರ್ದಾದ್ನ ಸೆಂಚೂರಿ ಪಾರ್ಕ್ ಬಡಾವಣೆಯಲ್ಲಿ ಪುರಾತನ ಕಾಲದ ಮಾದರಿಯ ತೊಟ್ಟಿ ಮನೆ ತಲೆ ಎತ್ತಿದೆ.
ಪ್ರಸನ್ನಕುಮಾರ್- ಹೇಮಲತಾ ದಂಪತಿ ನಿರ್ಮಿಸಿರುವ ವಿಜಯ್ ನಿವಾಸವೇ ಈ ತೊಟ್ಟಿ ಮನೆ. ನಗರದಲ್ಲಿದ್ದರೂ ಈ ಮನೆಗೆ ಕಾಂಪೌಂಡ್ ಇಲ್ಲ. ಮನೆಯ ಮುಂದೆ ಪುಟ್ಟದಾದ ಗಾರ್ಡನ್ ಇದೆ. ಅಲ್ಲೊಂದು ಬದಿಯಲ್ಲಿ ಹಳೇ ಕಾಲದ ಮಾದರಿಯ ತೆರೆದ ಬಾವಿ. ಮತ್ತೊಂದು ಬದಿಯಲ್ಲಿ ಕಾರು ನಿಲುಗಡೆಗೆ ಸ್ಥಳಾವಕಾಶ. ಕಾರು ನಿಲುಗಡೆ ಸ್ಥಳದಲ್ಲಿ ಹಸಿರು ಬಳ್ಳಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆಯಿಂದ ಮನೆಯ ಮುಖ್ಯದ್ವಾರಕ್ಕೆ ಹೋಗಲು ಕಲ್ಲು ನೆಲಹಾಸು ಹಾಕಲಾಗಿದೆ. ಉಳಿದ ಜಾಗದಲ್ಲಿ ವಿವಿಧ ಮಾದರಿಯ ಸಸ್ಯಗಳನ್ನು ಬೆಳೆಸಲಾಗಿದೆ. ಅಲ್ಲದೆ ಹಸಿರು ಲಾನ್ ಅನ್ನೂ ನಿರ್ಮಿಸಲಾಗಿದೆ. ಹೊರಗಿನಿಂದ ಟೆರೇಸ್ಗೆ ಹೋಗಲು ವೃತ್ತಾಕಾರದ ಮೆಟ್ಟಿಲುಗಳಿವೆ.
ಮನೆಯ ಚಾವಣಿಗೆ ದೊಡ್ಡ ದೊಡ್ಡ ಹೆಂಚು. ಮುಖ್ಯದ್ವಾರ ಹಳ್ಳಿ ಕಾಲದ ತೊಟ್ಟಿ ಮನೆಯಂತೆಯೇ. ಮುಖ್ಯದ್ವಾರದ ಎದುರೇ ಹಳೇ ಕಾಲದ ದೊಡ್ಡದಾದ ಪಾತ್ರೆ ಇಟ್ಟು, ಅದರಲ್ಲಿ ನೀರು ಹಾಕಿ, ಬಣ್ಣ ಬಣ್ಣದ ಹೂವು ಹಾಕಲಾಗಿದೆ. ಅಲ್ಲದೆ, ಕಬ್ಬಿನ ಸೂಲಂಗಿ ಹೂವನ್ನು ಮಧ್ಯ ಭಾಗದಲ್ಲಿ ಜೋಡಿಸಲಾಗಿದೆ. ಮನೆಯ ಜಗುಲಿ ಎರಡೂ ಬದಿಯ ಹಳೇ ಕಾಲದ ಪುಟ್ಟ ಪುಟ್ಟ ಮಂಚಗಳನ್ನು ಹಾಕಿದ್ದು, ಅವುಗಳನ್ನು ಸೋಫಾ ಸೆಟ್ನಂತೆ ಬಳಸಲಾಗುತ್ತಿದೆ. ಮನೆಯ ಗೋಡೆಗೆ ಆಧುನಿಕ ಕಾಲದ ದೀಪಗಳನ್ನು ಹಾಕಿದ್ದರೂ ಮನೆಯ ಸೂರಿಗೆ ಹಳೇ ಕಾಲದ ಲ್ಯಾಟೀನ್ ಮಾದರಿಯ ದೀಪಗಳನ್ನು ಅಳಡಿಸಿರುವುದು ಅಂದ ಹೆಚ್ಚಿಸಿದೆ. ಅಲ್ಲದೆ ಬಲಭಾಗದಲ್ಲಿ ಶೂ ರ್ಯಾಕ್ ಮತ್ತು ಬುಕ್ ರ್ಯಾಕ್ ಇದೆ. ಅಲ್ಲಿ ಹಳೇ ಕಾಲದ ಹೂಜಿ ಮಾದರಿಯ ದೊಡ್ಡ ವಸ್ತುವನ್ನು ಅಲಂಕಾರಿಕವಾಗಿ ಜೋಡಿಸಲಾಗಿದೆ.
50್ಢ100 ನಿವೇಶನದಲ್ಲಿ ನಿರ್ಮಿಸಿರುವ ಮನೆಯ ನೆಲ ಅಂತಸ್ತಿನಲ್ಲಿ ವಿಶಾಲವಾದ ಹಾಲ್, ತೆರೆದ ಅಡುಗೆಮನೆ ಮಾತ್ರ ಇದೆ. ಅಡುಗೆ ಮನೆಗೆ ಹೊಂದಿಕೊಂಡಂತೆ ದೇವರಮನೆ ಹಾಗೂ ದಾಸ್ತಾನು ಕೊಠಡಿ ಇದೆ. ಇತರೆ ಯಾವುದೇ ಕೊಠಡಿಗಳಿಲ್ಲ. ತೊಟ್ಟಿ ಮನೆಯಂತೆಯೇ ಮಳೆಯ ನೀರು ನೇರವಾಗಿ ಬೀಳಲು ದೊಡ್ಡದಾದ ಜಾಗ ಇದೆ. ಅಲ್ಲೂ ಸಣ್ಣಪುಟ್ಟ ಗಿಡಗಳನ್ನು ಬೆಳೆಸಲಾಗಿದೆ. ಹಾಲ್ನಲ್ಲೇ ಅತಿಥಿಗಳಿಗೆ ಎರಡು ಜೋಡಿ ಹಾಸಿಗೆಗಳನ್ನು ಹಾಕಲಾಗಿದೆ. ಅಲ್ಲಿ ಎಲ್ಇಡಿ ಟಿವಿ ಹೊರತುಪಡಿಸಿದರೆ ಟೀಪಾಯಿ, ಡ್ರೆಸ್ಸಿಂಗ್ ಟೇಬಲ್ ಮತ್ತಿತರ ಪೀಠೋಪಕರಣಗಳು ಪುರಾತನ ಕಾಲದವು. ಇವುಗಳನ್ನು ಪ್ರಸನ್ನಕುಮಾರ್ರ ತಂದೆ ಸುದರ್ಶನ್, ತಾಯಿ ಸುಶೀಲಾ, ಅಜ್ಜಿ ಸೋನಿ ಬಳಸುತ್ತಿದ್ದರು ಎಂಬುದು ವಿಶೇಷ.
ಮೊದಲ ಅಂತಸ್ತಿಗೆ ಹೋಗುವಾಗ ಮೆಟ್ಟಿಲುಗಳನ್ನು ಮರದಿಂದ ನಿರ್ಮಿಸಲಾಗಿದೆ. ಮನೆಯ ತೊಟ್ಟಿ ಕಂಬಗಳನ್ನು ಗೊಬ್ಬಳಿ ಮರದಿಂದ, ಮುಖ್ಯ ದ್ವಾರವನ್ನು ಬೀಟೆ ಮರದಿಂದ, ಉಳಿದ ಕಿಟಕಿ, ಬಾಗಿಲು, ಮೆಟ್ಟಿಲುಗಳನ್ನು ಹೊನ್ನೆ ಮರದಿಂದ ನಿರ್ಮಿಸಲಾಗಿದೆ. ಮೊದಲ ಅಂತಸ್ತಿನಲ್ಲಿ ಎರಡು ವಿಶಾಲ ಕೊಠಡಿಗಳು. ಅಲ್ಲಿನ ಮಂಚ ಸೇರಿದಂತೆ ಎಲ್ಲ ಪೀಠೋಪಕರಣಗಳೂ ಹಳೇ ಕಾಲದವು. ಅವುಗಳಿಗೆ ಹೊಂದಿಕೊಂಡಂತೆ ಡ್ರೆಸ್ಸಿಂಗ್ ರೂಂ, ಸ್ನಾನದ ಮನೆ ಮತ್ತು ಶೌಚಾಲಯಗಳಿವೆ. ಟಾಯ್ಲೆಟ್ಗೆ ಮಳೆ ನೀರು ನೇರವಾಗಿ ಬೀಳುವ ವ್ಯವಸ್ಥೆ. ಇದರಿಂದ ಬೆಳಕು ಮತ್ತು ಗಾಳಿಯೂ ಚೆನ್ನಾಗಿದೆ. ಆ ಕೊಠಡಿಗಳಿಂದ ಎರಡು ಕಡೆಗೂ ಬಾಲ್ಕನಿಗಳಿದ್ದು, ಒಂದು ಕಡೆಯಿಂದ ಕಾರಂಜಿ ಕೆರೆಯ ವಾತಾವರಣ ಕಣ್ಣಿಗೆ ತಂಪು ಉಂಟು ಮಾಡುತ್ತದೆ. ಬಾಲ್ಕನಿಯ ಮಧ್ಯ ಜಾಗದಲ್ಲಿ ಬೆತ್ತದ ಕುರ್ಚಿಗಳಿವೆ.
ಒಟ್ಟಾರೆ ಇಡೀ ಮನೆಯನ್ನು ನೈಸರ್ಗಿಕ ಗಾಳಿ ಮತ್ತು ಬೆಳಕು ಯಥೇಚ್ಛವಾಗಿ ಬರುವಂತೆ ನಿರ್ಮಿಸಲಾಗಿದೆ. ಹೀಗಾಗಿ ಫ್ಯಾನ್ ಮತ್ತು ಲೈಟ್ಗಳ ಬಳಕೆ ಕಡಿಮೆ. ಸದಾ ತಂಪು ತಂಪು ವಾತಾವರಣ. ನಾವು ಚಿಕ್ಕಂದಿನಿಂದಲೂ ಹೆಂಚಿನ ಮನೆಯಲ್ಲೇ ವಾಸಿಸುತ್ದಿದ್ದೇವೆ. ಈಗಲೂ ಅದೇ ರೀತಿ ಇರಬೇಕು ಎನಿಸಿತು. ಅದಕ್ಕಾಗಿ ಈ ರೀತಿಯ ಮನೆ ನಿರ್ಮಿಸಿದ್ದೇನೆ. ಬೋರಯ್ಯ, ಬಸವಯ್ಯ ಅವರ ಮೊಮ್ಮಗ ಲೋಕೇಶ್ ಅವರದ್ದೇ ವಾಸ್ತುಶಿಲ್ಪ ಮತ್ತು ಮಾರ್ಗದರ್ಶನ. ಅವರಿಂದಾಗಿಯೇ ಮನೆ ಈ ರೀತಿ ಚೆಂದವಾಗಿ ನಿರ್ಮಾಣವಾಗಿದೆ ಎನ್ನುತ್ತಾರೆ ಪ್ರಸನ್ನಕುಮಾರ್.
ಈ ಬಡಾವಣೆಗೆ ಬರುವವರು ಈ ತೊಟ್ಟಿ ಮನೆಗೆ ಅಂದಕ್ಕೆ ಬೆರಗಾಗದೇ ಇರುವುದಿಲ್ಲ. ಕೆಲವರು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾ ಶೂಟಿಂಗ್ಗೂ ಕೇಳಿದ್ದಾರೆ. ಆದರೆ ಕೊಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎನ್ನುತ್ತಾರೆ ಹೇಮಲತಾ.
ಅಂಶಿ ಪ್ರಸನ್ನಕುಮಾರ್
ಚಿತ್ರಗಳು- ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


