ಮಹಿಳೆ-ಮನೆ-ಬದುಕು

ಚಿಕ್ಕ ಅಮ್ಮ

5 ವರ್ಷ, 7 ತಿಂಗಳು, 17ನೇ ದಿನ- ನಾವೆಲ್ಲ ಅತ್ತುಕೊಂಡು ಶಾಲೆಗೆ ಹೋಗುತ್ತಿದ್ದ ವಯಸ್ಸು, ಇಲ್ಲವೇ ಇನ್ನೆಲ್ಲೋ...

ಚಿಕ್ಕ ಅಮ್ಮ
Published On :

5 ವರ್ಷ, 7 ತಿಂಗಳು, 17ನೇ ದಿನ- ನಾವೆಲ್ಲ ಅತ್ತುಕೊಂಡು ಶಾಲೆಗೆ ಹೋಗುತ್ತಿದ್ದ ವಯಸ್ಸು, ಇಲ್ಲವೇ ಇನ್ನೆಲ್ಲೋ ಗೆಳೆಯರೊಂದಿಗೆ ತೊದಲು ಮಾತುಗಳೊಂದಿಗೆ ಆಟವಾಡುತ್ತಿರಬಹುದಾದ ಸಮಯ- ಅಂದು ಅದೇ ವಯಸ್ಸಿನ ಈ ಹುಡುಗಿ 2.7 ಕೆಜಿ ತೂಕದ ತನ್ನ ಮೊದಲ ಗಂಡುಮಗುವೊಂದನ್ನು ಎತ್ತಿಕೊಂಡಿದ್ದಳು!
ಪ್ರಪಂಚದ ಅತಿ ಚಿಕ್ಕ ವಯಸ್ಸಿನ ತಾಯಿ ಎನಿಸಿಕೊಂಡ, ಆಡುವ ಕೂಸಿನ ಕೈಯಲ್ಲಿ ಅಪ್ಪ ಯಾರು ಎಂದೇ ತಿಳಿಯದ ಕೂಸು ಅಳುತ್ತಿತ್ತು! ಇದು ನಡೆದದ್ದು 1939ರಲ್ಲಿ ಪೆರು ದೇಶದಲ್ಲಿ. 81ರ ಹರೆಯದ ಈಕೆ ಈಗ ಪೆರುವಿನ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದಾಳೆ.
ಅಂದು 5 ವರ್ಷದ ಹುಡುಗಿ ಲೀನಾ ಮೆಡಿನಾಳ ಹೊಟ್ಟೆ ದೊಡ್ಡವಾಗಿದ್ದನ್ನು ಕಂಡ ತಂದೆತಾಯಿ ಗೆಡ್ಡೆ ಬೆಳೆದಿರಬೇಕೆಂದೆಣಿಸಿ ಆಸ್ಪತ್ರೆಗೆ ಕರೆತಂದರು. ಆದರೆ ಆಕೆ ಏಳು ತಿಂಗಳ ಗರ್ಭಿಣಿ ಎಂಬ ವಿಷಯ ಹೆತ್ತವರಿಗಷ್ಟೇ ಅಲ್ಲ, ಡಾಕ್ಟರ್‌ಗಳಿಗೂ ಆಘಾತ ತಂದಿತ್ತು. ಎರಡು ತಿಂಗಳ ನಂತರ ಆಪರೇಶನ್ ಮಾಡಿ ಮಗುವನ್ನು ಹೊರ ತೆಗೆಯಲಾಯಿತು. ಇವರನ್ನು ನೋಡಿಕೊಂಡ ಡಾಕ್ಟರ್ ಗೆರಾರ್ಡೋ ಹೆಸರನ್ನೇ ಮಗುವಿಗೆ ಇಡಲಾಯಿತು.
ಯಾವುದೇ ಥರದಲ್ಲಿ ವಿಚಾರಣೆ ನಡೆಸಿದರೂ ತಂದೆ ಯಾರೆಂದು ಆಕೆಯಿಂದ ಬಾಯ್ಬಿಡಿಸಲಾಗಲಿಲ್ಲ. ಬಹುಷಃ ಆಕೆಗೆ ತಿಳಿದೂ ಇರಲಿಲ್ಲ.
ವಿಷಯ ತಿಳಿದ ಅಮೆರಿಕನ್ ಸಂಸ್ಥೆಯೊಂದು ಹುಡುಗಿಗೆ ಅಂದಿನ ಕಾಲದಲ್ಲೇ 5000 ಡಾಲರ್ ನೀಡಲು ಮುಂದೆ ಬಂದಿತ್ತು. ಆದರೆ ಮಗು ಹುಟ್ಟುವ ಸಂದರ್ಭವನ್ನು ಚಿತ್ರೀಕರಣ ಮಾಡುವ ಕರಾರಿನೊಂದಿಗೆ. ಹೆತ್ತವರು ಒಪ್ಪಲಿಲ್ಲ. ಹೀಗಾಗಿ ಈಕೆ ಏಳೂವರೆ ತಿಂಗಳ ಗರ್ಭಿಣಿಯಾಗಿದ್ದಾಗಿನ ಒಂದೇ ಒಂದು ಫೋಟೊ ಮಾತ್ರ ವೈದ್ಯಕೀಯ ಅಧ್ಯಯನಗಳಿಗೆ ಲಭ್ಯವಿದೆ.
ನಂತರದ ದಿನಗಳಲ್ಲಿ ಆಕೆಯ ಹಾಗೂ ಅವಳ ಮಗುವಿನ ಆರೋಗ್ಯ ಸೇರಿದಂತೆ ಶಿಕ್ಷಣವನ್ನೂ ನೋಡಿಕೊಂಡ ಡಾ. ಗೆರಾಲ್ಡ್ ಆಕೆಗೆ ತನ್ನದೇ ಕ್ಲಿನಿಕ್‌ನಲ್ಲಿ ಸೆಕ್ರೆಟರಿಯಾಗಿ ಸೇರಿಸಿಕೊಂಡರು. ಇಪ್ಪತ್ತನೆಯ ವಯಸ್ಸಿನಲ್ಲಿ ರಾಲ್ ಜುರಾಡೋ ಎಂಬಾತನನ್ನು ಮದುವೆಯಾದ ಮೆಡಿನಾ ತನ್ನ 38ನೇ ವಯಸ್ಸಿನಲ್ಲಿ ಎರಡನೆಯ ಮಗನನ್ನು ಹೆತ್ತಳು. ಆಕೆಯ ಎರಡನೇ ಮಗನಿಗೂ, ಮೊದಲನೇ ಮಗನಿಗೂ 33 ವರ್ಷಗಳ ಅಂತರ!
ಇಷ್ಟೆಲ್ಲ ಹೇಳಲು ಕಾರಣ, ಮೊನ್ನೆ ಮೊನ್ನೆ ಪ್ರಪಂಚದ ಅತಿ ಚಿಕ್ಕ ವಯಸ್ಸಿನ ತಂದೆತಾಯಿ ಪಟ್ಟ ಹೊತ್ತ ಬ್ರಿಟನ್ನಿನ ಪ್ರೈಮರಿ ಸ್ಕೂಲ್ ಒಂದರಲ್ಲಿ ಓದುತ್ತಿರುವ 12ರ ಪೋರಿ ಹಾಗೂ 13ರ ಪೋರ. ಈ ಮಕ್ಕಳಿಬ್ಬರ ಹೆತ್ತವರು ತಮ್ಮ ಮೊಮ್ಮಗುವನ್ನು ಒಪ್ಪಿಕೊಂಡಿದ್ದು ಒಟ್ಟಿಗೇ ಬೆಳೆಸುವುದಾಗಿ ಘೋಷಿಸಿದ್ದಾರೆ.

-ರೇಶ್ಮಾರಾವ್ ಸೊನ್ಲೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.