ಪ್ರೀತಿ ಪ್ರಶ್ನೋತ್ತರ
ಆಫೀಸಿನಲ್ಲಂದು ಇದ್ದಕ್ಕಿದ್ದಂತೆ ನಿರ್ಧರಿಸಿದ ಲಂಚ್‌ಗೆಂದು ಇಡೀ ಟೀಮಿನ ಸದಸ್ಯರೆಲ್ಲರೂ ರೆಸ್ಟೋರೆಂಟಿನತ್ತ ಹೋಗುತ್ತಿದ್ದಾರೆ...

ಆಫೀಸಿನಲ್ಲಂದು ಇದ್ದಕ್ಕಿದ್ದಂತೆ ನಿರ್ಧರಿಸಿದ ಲಂಚ್‌ಗೆಂದು ಇಡೀ ಟೀಮಿನ ಸದಸ್ಯರೆಲ್ಲರೂ ರೆಸ್ಟೋರೆಂಟಿನತ್ತ ಹೋಗುತ್ತಿದ್ದಾರೆ. ತನ್ನ ಮೂರ್ನಾಲ್ಕು ಸಹೋದ್ಯೋಗಿಗಳ ಜತೆ ಕಾರಿನಲ್ಲಿ ಕುಳಿತವಳ ಫೋನಿಗೆ ಆಕೆಯ ಪ್ರಿಯಕರನಿಂದ ಕರೆ ಬರುತ್ತದೆ. ಹಿಂದೆಯೇ ಅವನಿಂದ ಪುಂಖಾನುಪುಂಖವಾಗಿ ಪ್ರಶ್ನೆಗಳು. ಎಲ್ಲಿಗೆ ಹೋಗ್ತಿದ್ದೀಯ? ಯಾರ ಜತೆ? ಯಾವಾಗ ಪ್ಲ್ಯಾನ್ ಆಗಿದ್ದು? ಮುಂಚೆ ಯಾಕೆ ಹೇಳಲಿಲ್ಲ? ಈಗ ಎಲ್ಲಿದ್ದೀಯ? ಹೇಗೆ ಹೋಗ್ತಾ ಇದ್ದೀಯ? ಪಕ್ಕ ಯಾರಿದ್ದಾರೆ? ಅವನ ಬಗ್ಗೆ ಹೇಳೇ ಇಲ್ಲ ನೀನು, ಮೊನ್ನೆ ಎಸ್ಸೆಮ್ಮೆಸ್ ಕಳುಹಿಸಿದ್ದನಲ್ಲ ಅವನಾ?
ಪಕ್ಕದಲ್ಲಿ ಕುಳಿತ ಸಹೋದ್ಯೋಗಿಗೆ ತಿಳಿಯದಂತೆ ಮುಜುಗರದಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೂ ಸಹನೆಯ ಕಟ್ಟೆಯೊಡೆದು ಮನಸ್ಸೇಕೋ ಕುದಿವ ಅಗ್ನಿಪರ್ವತದಂತಾಗಿದೆ. ಕೋಪದಲ್ಲಿ ಆಕೆ ಫೋನಿಟ್ಟ ರೀತಿಯೇ ನಡೆದ ವಿಷಯವನ್ನು ಪಕ್ಕದಲ್ಲಿದ್ದವರಿಗೆ ಸೂಕ್ಷ್ಮವಾಗಿ ಹೇಳಿದಂತಿತ್ತು. ಎಲ್ಲರ ಜತೆಯಿದ್ದರೂ ಏನೋ ಅಸಮಾಧಾನ. ಊಟ ಮುಗಿಸಿ ಮತ್ತೆ ಕ್ಯಾಬಿನ್ನಿಗೆ ಬಂದರೂ ತಲೆಯಲ್ಲಿ ಗಿರಕಿ ಹೊಡೆವ ಅದೇ ಪ್ರಶ್ನೆಗಳು. ಇಡೀ ದಿನ ಕೆಲಸದಲ್ಲಿ ಏಕಾಗ್ರತೆ ಸಾಧಿಸಲಾಗುತ್ತಿಲ್ಲ. ನಿಜಕ್ಕೂ ತಾನು ನಿಂತಿದ್ದನ್ನು, ಕೂತದ್ದನ್ನು, ದಿನನಿತ್ಯದ ಇಂಚಿ ಂಚನ್ನೂ ಬಿಡದೇ ಹೇಳಲು ಶುರುವಿಟ್ಟುಕೊಂಡಿದ್ದೇ ತಪ್ಪಾಯಿತೇ? ಬಾಳಸಂಗಾತಿಯ ಆಯ್ಕೆಯಲ್ಲಿ ತಪ್ಪಾಯಿತೇ? ಎಂಬ ಪ್ರಶ್ನೆ ಮನದ ಮೂಲೆಯಲ್ಲಿ ಚಿಗುರೊಡೆಯಿತು.
ಏಕೆ ಹೀಗೆ?
ಗಮನಿಸಿ. ಆ ಹುಡುಗಿಯ ಪ್ರಿಯಕರ ತೋರಿದ್ದು ಅನುಮಾನವಲ್ಲ. ಅದು ಅವರಿಬ್ಬರೂ ಪರಸ್ಪರ ಶುರುಮಾಡಿ ಬೆಳೆಸಿಕೊಂಡ ದಿನನಿತ್ಯದ ಪರಿಪಾಠ. ಕೇವಲ ಆ ಹುಡುಗಿಯಷ್ಟೇ ಅಲ್ಲ. ಇದು ಪ್ರೇಮಿಸಿದ ಬಹುಪಾಲು ಹುಡುಗ ಹುಡುಗಿಯರು ದಿನಕಳೆದಂತೆ ಎದುರಿಸುವ ಸಮಸ್ಯೆ. ಶುರುವಿನಲ್ಲಿ ಸ್ವೀಟ್ ನಥಿಂಗುಗಳನ್ನು ಗಂಟೆಗಟ್ಟಲೆ ಕಿವಿಯಲ್ಲಿ ಉಸುರುತ್ತಾ ಎಲ್ಲವನ್ನೂ ಹೇಳಿಕೊಂಡು ಖಾಲಿಯಾಗುವಾಗ ದೊರಕುವ ಸಾರ್ಥಕ್ಯದ ಭಾವ ಕೊಂಚ ದಿನಗಳಲ್ಲೇ ದಿನಚರಿಯಂತೆ ಬದಲಾಗುತ್ತದೆ. ಹೇಳಿಕೊಳ್ಳಲು ಏನೂ ಇಲ್ಲವೆಂದ ಮೇಲೂ ಸುಮ್ಮನೆ ಮೊಬೈಲ್‌ನಲ್ಲಿ ಸಂಭಾಷಣೆಯನ್ನು ಗಂಟೆಗಟ್ಟಲೆ ಮುಂದುವರಿಸುವ ಸಂದರ್ಭಗಳಲ್ಲೇ ಅನವಶ್ಯ ದಿನಚರಿಗಳ ಬಗ್ಗೆ ಪ್ರಶ್ನೋತ್ತರ ಶುರು.
ತಿಳಿಹೇಳಿ
ಪ್ರತಿಯೊಬ್ಬರಿಗೂ ಅವರದ್ದೇ ಖಾಸಗಿ ಬದುಕಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಖಾಸಗಿ ಕ್ಷಣಗಳು ಕಳೆದುಹೋಗುತ್ತಿವೆ ಎಂಬ ಸೂಚನೆ ದೊರಕಿದ ತಕ್ಷಣ ಸಂಗಾತಿಗೆ ಅದರ ಬಗ್ಗೆ ತಿಳಿಹೇಳಿ, ಅವರ ಅನುಮಾನ ಪರಿಹರಿಸುವತ್ತ ಗಮನ ಕೊಡಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಈಗಾಗಲೇ ಅಂಥದ್ದೊಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇವೆ ಎಂದಾದರೆ ಸಾವಧಾನವಾಗಿಯೇ ಸಂಗಾತಿಗೆ ಈ ಮುಜುಗರದ ಸನ್ನಿವೇಶದ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಬೇಕು. ಈ ಎರಡೂ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವೆಂದರೆ ಯಾವುದೋ ಜಗಳದ ಮಧ್ಯ ಈ ವಿಷಯದ ಪ್ರಸ್ತಾಪ ಸಲ್ಲ. ಅದು ಸಂಬಂಧವನ್ನು ಇನ್ನಷ್ಟು ಕೆಡಿಸುತ್ತದೆ. ಸಂಗಾತಿಯ ಖಾಸಗಿತನವನ್ನು ಗೌರವಿಸುತ್ತೇನೆಂದು ನಿರ್ಧರಿಸಿ ಅದರಂತೆ ನಡೆದುಕೊಳ್ಳಿ. ಆಗ ಬದುಕು ಖಂಡಿತಾ ವರ್ಣರಂಜಿತವಾಗಿ ಬದಲಾಗುತ್ತದೆ. ಪ್ರೀತಿ ಉಸಿರಾಗಬೇಕೆ ಹೊರತು, ಉಸಿರು ಕಟ್ಟಿಸಬಾರದು. ಅಲ್ಲವೇ?
-ಸಂತೋಷ್‌ಕುಮಾರ್ ಎಲ್.ಎಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


