ಕಂದನ ಮುಂದೆ ಕಿರಿಕಿರಿ
ಪುಷ್ಪ ಮತ್ತು ರಾಜೇಶ್ ಅವರ ದಾಂಪತ್ಯಕ್ಕೆ 14 ವರ್ಷ. ಯಾವುದೋ ಚಿಕ್ಕ ವಿಷಯಕ್ಕೆ ಸಂಬಂಧಿಸಿದಂತೆ ಈಗ ಇಬ್ಬರೂ...

ಪುಷ್ಪ ಮತ್ತು ರಾಜೇಶ್ ಅವರ ದಾಂಪತ್ಯಕ್ಕೆ 14 ವರ್ಷ. ಯಾವುದೋ ಚಿಕ್ಕ ವಿಷಯಕ್ಕೆ ಸಂಬಂಧಿಸಿದಂತೆ ಈಗ ಇಬ್ಬರೂ ಬೇರೆಯಾಗಲು ನಿರ್ಧರಿಸಿ ವಿಚ್ಛೇದನಕ್ಕೆ ಮುಂದಾದರು. ಇನ್ನು ಈ ದಂಪತಿಗೆ ಇದ್ದ ಏಕಮಾತ್ರ ಪುತ್ರಿ ವಚನಾ ಯಾರ ಜತೆ ಬೆಳೆಯಬೇಕು? ವಚನಾಳಿಗೆ ತಂದೆ- ತಾಯಿ ಇಬ್ಬರೂ ಇಷ್ಟ. ಯಾರ ಬಳಿ ಹೋಗಬೇಕು ಎಂದು ಇಚ್ಛಿಸುತ್ತಿಯಾ ಎಂಬ ಪೋಷಕರ ಪ್ರಶ್ನೆಗೆ ಕಣ್ಣೀರು ಫಳಫಳನೇ ಹೊರ ಹರಿಯಿತು. ಆಕೆ, 'ನಿಮ್ಮಿಬ್ಬರಿಗೆ ಬೇಡವೆಂದರೆ ವಸತಿ ಶಾಲೆಗೆ ಕಳುಹಿಸಿ ಬಿಡಿ. ಆದರೆ ನಿಮ್ಮ ಜಗಳದಲ್ಲಿ ಅಪ್ಪನ ಜತೆ ಅಥವಾ ಅಮ್ಮನ ಜತೆ ಎಂದು ಪ್ರತ್ಯೇಕ ಮಾಡಿ ಬೇರೆ ಬೇರೆ ಇರುವಂತೆ ಹಂಚಿಕೆ ಮಾಡಬೇಡಿ. ನಿಮ್ಮ ಜಗಳಕ್ಕೆ ಕಾರಣ ನಾನು ಆದರೆ ಕ್ಷಮಿಸಿ' ನೋವಿನಿಂದ ನುಡಿದಳು. ಮಗಳ ಮಾತಿನಿಂದ ಎಚ್ಚೆತ್ತ ಪೋಷಕರು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಸುಮಿತ್ರಾ ಮತ್ತು ರಘು ದಂಪತಿಗೆ ಇಬ್ಬರು ಮಕ್ಕಳು. ಐದು ವರ್ಷದ ಮಗಳು ನೇತ್ರಾ ಅಮ್ಮನಲ್ಲಿ ಕೇಳುತ್ತಾಳೆ, 'ಅಪ್ಪ ಸತ್ತು ಹೋಗಿಬಿಡುತ್ತಾರ?' ಸುಮಿತ್ರಾಳಿಗೆ ಒಂದು ನಿಮಿಷ ಏನು ಹೇಳಬೇಕೆಂದೇ ತೋಚಲಿಲ್ಲ. ಸುಮಿತ್ರಾ ಮತ್ತು ರಘು ಯಾವಾಗಲೂ ಮಗಳ ಮುಂದೆ ಜಗಳವಾಡುತ್ತಿದ್ದರು. ಒಮ್ಮೆ ಜಗಳದ ಮಧ್ಯ ತಂದೆ ಪದೇಪದೆ 'ಸತ್ತು ಹೋಗುತ್ತೀನಿ' ಎಂದು ಹೇಳುತ್ತಿದ್ದರು. ಮಗಳು ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ತಾಯಿಗೆ ಪ್ರಶ್ನಿಸಿದಳು. ಸುಮಿತ್ರಾಗೆ ಉತ್ತರ ನೀಡಲು ಆಗದೆ ಮೌನ ವಹಿಸಿದಳು.
ಸುಗುಣ ಮತ್ತು ವಿಜಯ ದಂಪತಿ ಮನೆಯಲ್ಲಿ ಆರ್ಥಿಕ, ಕೌಟುಂಬಿಕ ವಿಚಾರಕ್ಕೆ ನಿತ್ಯ ಜಗಳವಾಗುತ್ತಿತ್ತು. ಇವರ ಜಗಳ ನೋಡಿದ ಮಗ ಶಾಲೆಯಲ್ಲಿ ತನ್ನ ಸ್ನೇಹಿತರಿಗೆ, 'ಸಚಿನ್ ಸಿಕ್ಸ್ ಹೊಡೆದ ರೀತಿಯಲ್ಲಿ ಅಮ್ಮ ಅಪ್ಪನಿಗೆ ಚೊಂಬೆಸೆದರು. ಅಪ್ಪನ ತಲೆಯಲ್ಲಿ ರಕ್ತ ಬಂತು' ಎಂದು ಕ್ರಿಕೆಟ್ ಕಾಮೆಂಟರಿ ಥರ ವಿವರಿಸುತ್ತಿದ್ದ.
ಮೇಲೆ ಹೇಳಿದ ಈ ಎಲ್ಲ ಉದಾಹರಣೆಗಳು ಅನೇಕ ಕುಟುಂಬಗಳಲ್ಲಿ ನಡೆಯುವಂಥವೇ ಆಗಿವೆ. ಇವು ಮಕ್ಕಳ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬ ಅರಿವು ಹೆತ್ತವರಲ್ಲಿ ಇರಬೇಕು. ಯಾರ ಮನೆಯಲ್ಲಿ ಜಗಳವಿರಲ್ಲ ಹೇಳಿ? ಯಾವುದೇ ಜಗಳವಿರಬಹುದು ಮಕ್ಕಳ ಮುಂದೆ ನಡೆಯಲೇಬಾರದು. ಈ ಜಗಳ ಪುಟ್ಟ ಮನಸ್ಸಿನ ಮೇಲೆ ಆಳವಾದ ಬರೆ ಎಳೆದಂತಾಗುತ್ತದೆ.
ಮಕ್ಕಳ ಮುಂದೆ ತಂದೆ-ತಾಯಿ ಜಗಳ ಆಡಿದಾಗ ಮಕ್ಕಳ ಮೆದುಳಿನ ಅಭಿವೃದ್ಧಿ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಪೋಷಕರು ಮಕ್ಕಳ ಮುಂದೆ ಜಗಳ ಮಾಡೋದು ಕಡಿಮೆ ಮಾಡಿದರೆ, 'ಅಪ್ಪ ಸತ್ತು ಹೋಗುತ್ತಾರ?' ಎನ್ನುವಂಥ ಪ್ರಶ್ನೆಯನ್ನು ಮಕ್ಕಳು ಕೇಳೋದಿಲ್ಲ!
-ಜ್ಯೋತಿ ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


