ಮಹಿಳೆ-ಮನೆ-ಬದುಕು

ಶಿವ ಸನ್ನಿಧಿ

ಮೈಸೂರು ನಗರವನ್ನು ಸಾಂಸ್ಕೃತಿಕ ರಾಜಧಾನಿ ಎಂದು ಕೇವಲ ಔಪಚಾರಿಕವಾಗಿ ಕರೆಯುವುದು ವಾಡಿಕೆಯಲ್ಲ. ನಗರದ ರಸ್ತೆಗಳನ್ನು...

ಶಿವ ಸನ್ನಿಧಿ
Published On :

ಮೈಸೂರು ನಗರವನ್ನು ಸಾಂಸ್ಕೃತಿಕ ರಾಜಧಾನಿ ಎಂದು ಕೇವಲ ಔಪಚಾರಿಕವಾಗಿ ಕರೆಯುವುದು ವಾಡಿಕೆಯಲ್ಲ. ನಗರದ ರಸ್ತೆಗಳನ್ನು ಸುತ್ತಾಡಿದರೆ ಸಾಕು ಭವ್ಯ ಪರಂಪರೆಯ ಸಾಂಸ್ಕೃತಿಕ ನೆಲೆ ಅನಾವರಣಗೊಳ್ಳುತ್ತದೆ. ದೀಪದ ಕಂಬಗಳು, ಉದ್ಯಾನಗಳು, ಗ್ರಿಲ್‌ಗಳು, ಕಟ್ಟಡಗಳು, ವೃತ್ತಗಳು, ಚೌಕಗಳು, ಕಮಾನುಗಳು, ದ್ವಾರಗಳು, ಮಹಲುಗಳು, ಅರಮನೆಗಳು, ದೇಗುಲಗಳು, ಗುಮ್ಮಟಗಳು, ಬಂಗಲೆಗಳು, ಬಡವ- ಬಲ್ಲಿದರ ವಾಸದ ಮನೆಗಳು, ಅಗ್ರಹಾರಗಳು ಮೈಸೂರಿನ ಗತವೈಭವ ಸಾರುತ್ತವೆ.
ಈ ಭವ್ಯ ಸ್ಮಾರಕಗಳ ಸೌಂದರ್ಯವನ್ನು ಅಲ್ಲಿನ ವಿಸ್ಮಯವನ್ನು ಮುಂದಿನ ಪೀಳಿಗೆಗೆ ದಾಖಲಾಗುವಂತೆ ಸೆರೆ ಹಿಡಿಯುತ್ತಿರುವ ಕಲಾವಿದರೊಬ್ಬರು ಪರಂಪರೆಯಿಂದ ಸ್ಫೂರ್ತಿ ಪಡೆದು, ಮೈಸೂರಿನ ವಾಗ್ದೇವಿ ನಗರ ಬಡಾವಣೆಯಲ್ಲಿ ಕಪ್ಪು- ಬಿಳುಪು ಮನೆ ಕಟ್ಟಿಸಿದ್ದಾರೆ. ಅದರ ಹೆಸರೇ 'ಅರಮನೆ'.
'ಏನಿದು ಮನೆಯ ಹೆಸರು ಅರಮನೆ?' ಎಂದು ಪ್ರಶ್ನಿಸಿದರೆ, 'ನನಗೆ ಮೈಸೂರಿನ ಪರಂಪರೆಯ ಬಗ್ಗೆ ಅಪಾರ ಅಭಿಮಾನ. ಹೀಗಾಗಿಯೇ ಮನೆಗೆ ಅರಮನೆ ಅಂತಿಟ್ಟಿದ್ದೇನೆ' ಎನ್ನುತ್ತಾರೆ ಕಲಾವಿದ ಶಿವಕುಮಾರ್ ಎಚ್. ದೊಡ್ಡರಸಿನಕೆರೆ.
ಶಿವಕುಮಾರ್ ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನವರು. ಮೈಸೂರಿನ ವಿಜಯನಗರದ ಶ್ರೀ ಕಲಾನಿಕೇತನ ಕಲಾಶಾಲೆಯ ಹಿರಿಯ ವಿದ್ಯಾರ್ಥಿ. ಕಲಾಶಿಕ್ಷಣ ಪಡೆದ ನಂತರ 10 ವರ್ಷ ಅಮೃತಾ ವಿದ್ಯಾಲಯ, ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದರು. ಇದೀಗ ಮನೆಯಲ್ಲೇ ಕಲಾಶಾಲೆ ನಡೆಸುತ್ತಿದ್ದಾರೆ.
22x40 ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಈ ಮನೆ ನೋಡಿದರೆ ಕಪ್ಪು- ಬಿಳುಪು ಸಿನಿಮಾ ನೋಡಿದಂತಾಗುತ್ತದೆ. ಏಕೆಂದರೆ, ಅವರು ಇಡೀ ಮನೆಯಲ್ಲಿ ಕಪ್ಪು- ಬಿಳುಪು ಬಿಟ್ಟು ಬೇರಾವುದೇ ಬಣ್ಣ ಕಾಣಿಸದು. 'ನನಗೆ ವಿವಿಧ ಬಣ್ಣಗಳನ್ನು ನೋಡಿ ಬೇಜಾರಾಗಿತ್ತು. ಕಪ್ಪು ಮತ್ತು ಬಿಳುಪು ಪರಿಕಲ್ಪನೆ ಮೊದಲಿನಿಂದಲೂ ಇಷ್ಟ. ಹೀಗಾಗಿ ಇಡೀ ಮನೆಯನ್ನು ಕಪ್ಪು- ಬಿಳುಪಿನಲ್ಲಿಯೇ ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಿಸಿದ್ದೇನೆ' ಎನ್ನುತ್ತಾರೆ.
2011ರಲ್ಲಿ ನೆಲ ಅಂತಸ್ತು ನಿರ್ಮಿಸಿದರು. ಅದಕ್ಕೆ ರು. 8 ಲಕ್ಷ ವೆಚ್ಚವಾಗಿತ್ತು. ಮರುವರ್ಷವೇ ಮೊದಲ ಅಂತಸ್ತು ಹಾಗೂ ಎರಡನೇ ಅಂತಸ್ತಿನಲ್ಲಿ ಗ್ಯಾಲರಿ ನಿರ್ಮಿಸಿದರು. ಅದಕ್ಕೆ ವೆಚ್ಚವಾಗಿದ್ದು ಕೇವಲ ರು. 5 ಲಕ್ಷ. ನೆಲ ಅಂತಸ್ತಿನ ಮನೆಯಲ್ಲಿ ವಿಶಾಲವಾದ ಹಾಲ್, ಅಡುಗೆ ಮನೆ, ಅದಕ್ಕೆ ಹೊಂದಿಕೊಂಡಂತೆ ಡೈನಿಂಗ್ ಹಾಲ್ ಹಾಗೂ ದೇವರಮನೆ, ಎರಡು ಬೆಡ್ ರೂಂ, ಸ್ನಾನಗೃಹ, ಶೌಚಾಲಯ, ಬಟ್ಟೆ ಒಣಗಲು ಹಾಕಲು ಪ್ಯಾಸೇಜ್ ಇದೆ. ಮೊದಲ ಅಂತಸ್ತಿನಲ್ಲೂ ಈ ಎಲ್ಲಾ ಸೌಲಭ್ಯಗಳಿವೆ. ಆದರೆ ನೆಲ ಅಂತಸ್ತಿಗಿಂತ ಮೊದಲ ಅಂತಸ್ತಿನಲ್ಲಿ ವಿನ್ಯಾಸವನ್ನು ಮತ್ತಷ್ಟು ಉತ್ತಮಗೊಳಿಸಲಾಗಿದೆ. ಎರಡನೇ ಅಂತಸ್ತಿನಲ್ಲಿರುವ ಗ್ಯಾಲರಿಯಲ್ಲಿ ಅರಮನೆ ಸ್ಕೂಲ್ ಆಫ್ ಆರ್ಟ್ಸ್ ನಡೆಸಲಾಗುತ್ತಿದೆ.
ಎಲ್ಲಾ ಬಾಗಿಲುಗಳು ಹಾಗೂ ಕಿಟಕಿಗಳು ಹಳೇ ಕಾಲದ ಹಳ್ಳಿ ಮನೆಯ ಕಿಟಕಿ- ಬಾಗಿಲುಗಳಂತಿವೆ. ಬಾಗಿಲುಗಳ ಪಟ್ಟಿಗಳಿಗೆ ಮಾತ್ರ ಬೇವಿನಮರ ಬಳಸಲಾಗಿದೆ. ಉಳಿದಂತೆ ಪ್ಲೈವುಡ್ ಶೀಟು. ಪಟ್ಟಿಗಳು ಗಟ್ಟಿ ಇರುವುದರಿಂದ ಸುರಕ್ಷತೆಗೇನೂ ಅಪಾಯವಿಲ್ಲ. ಮೊದಲ ಅಂತಸ್ತು ಹಾಗೂ ಎರಡನೇ ಅಂತಸ್ತಿಗೆ ಹೋಗುವ ಮೆಟ್ಟಿಲುಗಳಿಗೆ ಕಬ್ಬಿಣದ ಫ್ರೇಮ್ ಹಾಗೂ ಸಾದರಳ್ಳಿ ಚಪ್ಪಡಿ ಕಲ್ಲುಗಳನ್ನು ಬಳಸಲಾಗಿದೆ.
ಕಿಟಕಿ, ಬಾಗಿಲುಗಳ ಮೇಲೆ ಕಲೆಗಳ ಚಿತ್ತಾರ ಕಾಣುತ್ತವೆ. ಮನೆಯ ಕರೆಗಂಟೆ ಒತ್ತಿದರೆ ದೇಗುಲದ ಗಂಟೆ ಬಾರಿಸಿದಂತಾಗುತ್ತದೆ. ಟಿಪಾಯಿ ಮೇಲೆ ಸೈಕಲ್ ಮಾದರಿಯ ಪೇಪರ್ ಸ್ಟ್ಯಾಂಡ್ ಇಡಲಾಗಿದೆ. ಅಡುಗೆ ಮನೆ- ದೇವರಮನೆ- ಡೈನಿಂಗ್ ಟೇಬಲ್ ಒಂದಕ್ಕೊಂದು ಹೊಂದಿಕೊಂಡಂತಿವೆ. ತಾರಸಿಗೆ, ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡಿಲ್ಲ. ತಾರಸಿ ಹಾಕುವಾಗಲೇ ಕೆಳಗಡೆ ಪ್ಲಾಸ್ಟಿಕ್ ಶೀಟ್ ಹಾಕಿ ಎಳೆದಿರುವುದರಿಂದ ಅದೇ ಒಂದು ರೀತಿ ಕಲಾತ್ಮಕವಾಗಿದೆ. ಗೋಡೆಗೆ ಹೊಂದಿಕೊಂಡಂತೆ ಇಟ್ಟಿಗೆ ಬಳಸಿ ಟಿವಿ ಸ್ಟ್ಯಾಂಡ್ ನಿರ್ಮಿಸಲಾಗಿದೆ.
ಈ ಮನೆಯಲ್ಲಿ ಮಂಚಗಳಿಲ್ಲ. ಬದಲಿಗೆ ಕಬ್ಬಿಣದ ಫ್ರೇಮ್ ಬಳಸಿ, ಅದರ ಮೇಲೆ ಪ್ಲೈವುಡ್ ಶೀಟ್‌ಗಳನ್ನು ಹಾಕಿ, ಸ್ಟೋರೇಜ್ ಯೂನಿಟ್ ಕಮ್ ಮಂಚದಂತೆ ಬಳಸಲಾಗುತ್ತಿದೆ. ಪೀಠೋಪಕರಣಗಳನ್ನು ಕಬ್ಬಿಣ ಫ್ರೇಮ್‌ನಿಂದ ಮಾಡಿ, ಕುಷನ್ ಹಾಕಲಾಗಿದೆ. ಗೋಡೆಗಳ ಮೇಲೆ ಅಲ್ಲಲ್ಲಿ ಅಚ್ಚುಕಲೆಯಲ್ಲಿ ವಿವಿಧ ಕಲಾಕೃತಿ ನಿರ್ಮಿಸಲಾಗಿದೆ. ನೆಲಕ್ಕೆ ಸೆಮಿ ವೆಟ್ರಿಫೈಡ್ ಟೈಲ್ಸ್ ಬಳಸಲಾಗಿದೆ. ಕೆಲವೆಡೆ ಆಂಧ್ರದ ಬೇತಂಚರ್ಲ ಕೂಡ ಬಳಸಲಾಗಿದೆ. ಅಡುಗೆ ಮನೆಯಲ್ಲಿ ಸಾಕಷ್ಟು ಬೆಳಕು ಬರುವಂತೆ ಹೆಂಚು ಅಳವಡಿಸಲಾಗಿದೆ.
ಕಪ್ಪು- ಬಿಳುಪಿನ ಈ ಪುಟ್ಟ ಅರಮನೆಗೆ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಸೇರಿದಂತೆ ಹಲವರು ಭೇಟಿ ನೀಡಿ, ಮೆಚ್ಚುಗೆ ಸೂಚಿಸಿದ್ದಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಿಸಿರುವ ಈ ಕಪ್ಪು- ಬಿಳುಪು ಪುಟ್ಟ ಅರಮನೆಯ ಬಗ್ಗೆ ನೀವು ತಿಳಿಯಲು ಶಿವಕುಮಾರ್, ಮೊ. 98440 32172 ಸಂಪರ್ಕಿಸಬಹುದು.

- ಅಂಶಿ ಪ್ರಸನ್ನಕುಮಾರ್
ಚಿತ್ರ- ಎಸ್. ಮಂಜುನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.