ಬದಲಾದ ಸನ್ನಿವೇಷ
ಬದಲಾವಣೆ ಜಗದ ನಿಯಮ. ಚಿಗುರಿದ ಮರ ಒಣಗಲೇಬೇಕು, ಹಾಗೆಯೇ ಚೈತ್ರ ಮಾಸ ಬಂದರೆ ಮತ್ತೆ ಚಿಗುರಲೇ ಬೇಕು. ಇದು ಪ್ರಕೃತಿ ನಿಯಮ.

ಬದಲಾವಣೆ ಜಗದ ನಿಯಮ. ಚಿಗುರಿದ ಮರ ಒಣಗಲೇಬೇಕು, ಹಾಗೆಯೇ ಚೈತ್ರ ಮಾಸ ಬಂದರೆ ಮತ್ತೆ ಚಿಗುರಲೇ ಬೇಕು. ಇದು ಪ್ರಕೃತಿ ನಿಯಮ. ಹೊಸ ನೀರು ಬಂದರೆ ಹಳೆಯ ನೀರು ಕೊಚ್ಚಿ ಹೋಗಲೇಬೇಕು ನಿಜ, ಇಂದು ಹೊಸ ನೀರೆಂದು ಅಂದುಕೊಂಡದ್ದು ನಾಳೆ ಹಳೆಯದಾಗುತ್ತದೆ. ನಮ್ಮ ನಡುವೆ ಸಂಸ್ಕೃತಿ, ಸಂಪ್ರದಾಯ ಎಂದು ಬೊಬ್ಬೆ ಹೊಡೆಯುವವರಿದ್ದಾರೆ, ಹಾಗೆಯೇ ಆಧುನಿಕತೆಯ ದಾಸರಾಗಿರುವವರೂ ಇದ್ದಾರೆ. ಈ ಮಧ್ಯ ಬದಲಾವಣೆ ಎಂಬುದು ತಾನೊಂದೇ ಶಾಶ್ವತ ಎಂದು ಬೀಗುತ್ತದೆ.
ದಿನಗಳುರುಳಿದಂತೆ ಇಂದಿನ ಯುವಪೀಳಿಗೆ ಹೊಸ ಹೊಸ ವಿನ್ಯಾಸಗಳಿಗಾಗಿ ಎದುರು ನೋಡುತ್ತಿದೆ. ನಮ್ಮಜ್ಜಿ ತಾತ ಜತೆಗೆ ಅಪ್ಪ ಅಮ್ಮನೂ 'ಇವರದ್ದೇನಿದು ಅವತಾರ?' ಎಂದು ಬಾಯಿಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ. ಪೂರಕವಾಗಿ ವೈವಿಧ್ಯಮಯ ಉಡುಗೆಗಳು, ಅಲಂಕಾರಿಕ ವಸ್ತುಗಳು, ಹ್ಯಾಂಡ್‌ಬ್ಯಾಗ್‌ಗಳು, ಚಪ್ಪಲಿಗಳು, ಮನೆಯಲ್ಲಿ ಬಳಸುವ ಪಾತ್ರೆಗಳೂ ಸೇರಿದಂತೆ ಹಲವು ವಸ್ತುಗಳು ಆಧುನಿಕತೆಯ ಮೆರುಗಿನಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬದಲಾವಣೆಯೆಂಬುದು ದಾಪುಗಾಲು ಹಾಕಿ ಜನರನ್ನು ತನ್ನ ಜತೆಗೆ ಎಳೆದೊಯ್ಯುತ್ತಿದೆ. ಹೀಗಿರುವಾಗ ಆಧುನಿಕತೆಯೆಂಬುದು ಹಳೆಯ ಶೈಲಿಗೆ ಹೊಸ ವಿನ್ಯಾಸವನ್ನು ಕೊಡುತ್ತ ಸಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿರುವ ಅಲಂಕಾರಿಕ ವಸ್ತುಗಳಾದ ಓಲೆ, ಮೂಗುತಿ, ಜಡೆಬಿಲ್ಲೆ, ಕಾಸಿನಸರ, ಕಾಲ್ಗೆಜ್ಜೆ, ಬಳೆ, ಕಾಲುಂಗುರ ಇನ್ನಿತ್ಯಾದಿಗಳ ಬಳಕೆಯು ಹಿಂದಿನ ಕಾಲದಲ್ಲಿ ಸಂಪ್ರದಾಯವೆಂಬಂತೆ ನಮ್ಮ ರೂಢಿಯಲ್ಲಿ ಒಂದಾಗಿದ್ದವು. ಬರುಬರುತ್ತ ಹೊಸ ಮೆಟಲ್ಲು, ಮೆಟೀರಿಯಲ್ಲಿನ ಭರಾಟೆಯಲ್ಲಿ ಅವು ತೆರೆಮರೆಗೆ ಸರಿದವು. ಅವುಗಳನ್ನು ಧರಿಸುವವರು ಮೂಢರು, ಸಂಪ್ರದಾಯಗಳು ಹಿಂದಿನ ತಲೆಮಾರಿಗೆ ಸಾಕು ನಮ್ಮದೇನಿದ್ದರು ಮಾಡರ್ನ್ ಎಂದು ಬೀಗುತ್ತ ನಮ್ಮ ಹೊಸ ತಲೆಮಾರು ಮುಂದೆ ಸಾಗಿತು. ಅಚ್ಚರಿಯೆಂದರೆ ಬರುಬರುತ್ತ ಹಳೆಯ ಸಾಂಪ್ರದಾಯಿಕ ವಸ್ತುಗಳೇ ಆಧುನಿಕ ಮೆರುಗನ್ನು ಪಡೆದವು.
ನಮ್ಮಲ್ಲಿ ಸೀರೆಗೆ ವಿಶಿಷ್ಟ ಸ್ಥಾನ. ಹೆಣ್ಣು ಮಕ್ಕಳಿಗೆ ಸೀರೆಯೇ ಶ್ರೇಷ್ಠ ಎಂದು ಹಿರಿಯರು ಹೇಳುತ್ತಲೇ ಬಂದರು. ಆದರೆ ಆಧುನೀಕರಣದ ಸುಳಿಗೆ ಸಿಲುಕಿ ಸೀರೆಯ ಬದಲಿಗೆ ವಿವಿಧ ವಿನ್ಯಾಸದ ಉಡುಪುಗಳ ಕಾರುಬಾರು ಶುರುವಾಯಿತು. ಎತ್ತ ನೋಡಿದರೂ ಬಣ್ಣ ಬಣ್ಣದ ಸೆಲ್ವಾರ್, ಜೀನ್ಸ್- ಟಿಶರ್ಟ್, ಸ್ಕರ್ಟ್ ತೊಟ್ಟು ಬೀಗುವ ಲಲನೆಯರು. ಆ ಟ್ರೆಂಡ್ ಒಂದು ಮಟ್ಟಿಗೆ ಮುನ್ನಡೆ ಸಾಧಿಸಿತ್ತು. ದಿನ ಕಳೆದಂತೆ ಸೀರೆಯು ವಿವಿಧ ವಿನ್ಯಾಸದಲ್ಲಿ ಮೂಡಿಬಂದು ಹೆಂಗಳೆಯರನ್ನು ಮತ್ತೆ ತನ್ನಡೆಗೆ ಸುಳಿಯುವಂತೆ ಮಾಡಿತು. ಹಬ್ಬ, ಮದುವೆ, ಶುಭ ಸಮಾರಂಭಗಳಲ್ಲಿ, ಕಾಲೇಜು ವಾರ್ಷಿಕೋತ್ಸವದಲ್ಲಿ ಸೀರೆಯನ್ನುಟ್ಟ ವಯ್ಯಾರಿಯರು. ಕಾಟನ್ ಸೀರೆಗಳ ವೈವಿಧ್ಯತೆ ನೋಡಿದರೆ ಎಂಥವರಿಗಾದರೂ ಸೀರೆಯನ್ನೇ ಉಡೋಣ ಅನ್ನಿಸಿಬಿಡಬಹುದು.
ಇನ್ನು ಓಲೆ, ಮೂಗುತಿ, ಜಡೆಬಿಲ್ಲೆಗಳು, ಕಾಸಿನಸರಗಳು, ಕಾಲ್ಗೆಜ್ಜೆ, ಬಳೆಗಳು, ಕಾಲುಂಗುರಗಳನ್ನು ಹಿಂದಿನ ಕಾಲದಲ್ಲಿ ಪ್ರತಿ ಹೆಣ್ಣುಮಕ್ಕಳೂ ಇಷ್ಟಪಡುತ್ತಿದ್ದರು. ಕಾಲಾಂತರದಲ್ಲಿ ಅವೆಲ್ಲಾ ತೆರೆಮರೆಗೆ ಸರಿದಿದ್ದನ್ನು ಮರೆಯುವಂತಿಲ್ಲ. ಬರುಬರುತ್ತ ಇವುಗಳಿಗೂ ತಯಾರಕರು ಆಧುನಿಕ ಮೆರುಗನ್ನು ನೀಡಿ ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿಸಿಕೊಳ್ಳುವ ಸಲುವಾಗಿ ಕಣ್ಣಿಗೆ ಮುದ ನೀಡುವಂಥವುಗಳನ್ನು ತಂದರು. ಸಹಜವಾಗಿಯೇ ಸೌಂದರ್ಯಕ್ಕೆ ಸೋಲುವ ಹೆಣ್ಣುಮಕ್ಕಳು ಈ ಅವಕಾಶವನ್ನು ಬಿಟ್ಟಾರೆಯೆ? ತಮ್ಮ ಅಂದವನ್ನು ಮತ್ತಷ್ಟು ಮೆರುಗುಗೊಳಿಸಲು ಮುಂದಾದರು. ವಿವಾಹಿತೆಯರಿಗೆ ಮೀಸಲಾಗಿದ್ದ ಕಾಲುಂಗುರವನ್ನು ಫ್ಯಾಷನ್ನಿಗಾಗಿ ಹಾಕಿಕೊಳ್ಳುವವರನ್ನು ಆಗೀಗ ಕಾಣುತ್ತಿರುತ್ತೇವೆ. ಹುಡುಗರಿಗೆ ಪಾಪ, ಕನ್‌ಫ್ಯೂಶನ್ನು... ಪ್ರೊಪೋಸ್ ಮಾಡಲೋ ಬೇಡವೋ?
ಹ್ಯಾಂಡ್‌ಬ್ಯಾಗ್‌ಗಳು, ಚಪ್ಪಲಿಗಳನ್ನಂತೂ ಮರೆಯುವಂತಿಲ್ಲ ಬಿಡಿ. ಈಗಂತೂ ಎಣಿಸಲು ಅಸಾಧ್ಯವಾದಂಥ ವಿನ್ಯಾಸಗಳಲ್ಲಿ, ವೈವಿಧ್ಯಮಯ ಬಣ್ಣಗಳ ಬ್ಯಾಗು, ಚಪ್ಪಲಿಗಳು ಬಂದಿವೆ. ಒಮ್ಮೆ ಎಂ.ಜಿ. ರಸ್ತೆಯತ್ತ ಕಣ್ಣು ಹಾಯಿಸಿದರೆ ಸಾಕು, ಸಾಲು ಸಾಲು ಹೊಸೆದಂತಿರುವ ಅಂಗಡಿಗಳು ತಮ್ಮಲ್ಲಿರುವ ರಂಗು ರಂಗಿನ ಬ್ಯಾಗುಗಳನ್ನು ಹೊರಗಡೆ ನೇತು ಹಾಕಿರುತ್ತಾರೆ. ನಮಗೆ ಅವಶ್ಯವಿಲ್ಲದಿದ್ದರೂ ಅವುಗಳ ರೀತಿಗೆ ಮನಸೋತು ಅತ್ತಕಡೆ ನಡೆಯುವಂತೆ ಮಾಡುತ್ತವೆ. ಹಿಂದೆ ಪ್ರಾಥಮಿಕ ಹಂತದಲ್ಲಿ ಒಂದು ಹಿಡಿಯನ್ನುಳ್ಳ, ಜೋಳಿಗೆಯಾಕಾರದ ಬ್ಯಾಗುಗಳನ್ನು ನೇತು ಹಾಕಿಕೊಂಡು ಓಡುತ್ತಿದ್ದೆವು. ಸಾಮಾನ್ಯವಾಗಿ ಚರ್ಮದಿಂದ ತಯಾರಾದ ಸೀದಾ- ಸಾದಾ ಉಂಗುಷ್ಟದ ಚಪ್ಪಲಿಗಳು ಮಾತ್ರ ಇದ್ದವು. ತದನಂತರ ಪ್ಲಾಸ್ಟಿಕ್‌ನಿಂದ ತಯಾರಾದ ಎತ್ತರದ ಚಪ್ಪಲಿಗಳು ಬಂದವು. ಗಿಡ್ಡವಾಗಿದ್ದವರಿಗೆ ಎತ್ತರವಾಗಿ ಕಾಣುವ ಅವಕಾಶ ಒದಗಿ ಬಂತು. ಇನ್ನು ಮೊದಲೇ ಎತ್ತರವಾಗಿದ್ದವರಿಗೂ ಒಂದು ಅವಕಾಶ ಫ್ಲಾಟ್ ಚಪ್ಪಲಿಗಳ ಮೂಲಕ ಬಂದಿತು. ಇವೆಲ್ಲ ಕಳೆದಮೇಲೆ ಮತ್ತದೇ ಪ್ಲಾಸ್ಟಿಕ್ ನಿಂದ ತಯಾರಾದ ಉಂಗುಷ್ಟದ ಚಪ್ಪಲಿಗಳ ಕಾರುಬಾರು ಶುರುವಾಗಿದೆ.
ಬಹುಶಃ ಇದಕ್ಕೇ ಇರಬೇಕು, 'ಹಾಡು ಹಳೆಯದಾದರೇನು, ಭಾವ ನವ ನವೀನ' ಎಂಬ ಹಾಡು ನಮಗೆ ಗೊತ್ತಿಲ್ಲದಂತೆ ಇಷ್ಟವಾಗುತ್ತದೆ. ನಿಶ್ಯಬ್ದದೊಳಗೆ ಗುನುಗುವ ಹಾಗೆ ದಿನಗಳುರುಳಿದಂತೆ ಬದಲಾವಣೆಯ ಗಾಳಿ ಬೀಸುತ್ತಲೇ ಇರುತ್ತದೆ. ಆ ಗಾಳಿಯ ಜತೆಗೆ ಹೊಸದಾದ ಭಾವ ಸುಮ್ಮನೇ ತೇಲಿಬರುತ್ತದೆ.
- ರಮ್ಯಶ್ರೀ ಜಿ.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


