ಮಹಿಳೆ-ಮನೆ-ಬದುಕು

ಧರ್ಮಸ್ಥಳದ ಕೋಗಿಲೆ!

ಧರ್ಮಸ್ಥಳದ ಕೋಗಿಲೆ!
Published On :

ಧರ್ಮಸ್ಥಳದಲ್ಲಿ ನಡೆಯುವ ಬಹುತೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಂಡವರಿಗೆ ಸುಮಧುರ ಕಂಠಸಿರಿಯ ಮನೋರಮಾ ಅವರ ಪರಿಚಯವಿರುತ್ತದೆ. ಇಂಥ ಸಮಾರಂಭಗಳಿಗೆ ಕಳೆ ಕಟ್ಟುವುದೇ ಅವರು ಮಂಜುಳ ದನಿಯಿಂದ ಹಾಡುವ ಪ್ರಾರ್ಥನಾಗೀತೆಯ ಶುಭಾರಂಭದ ಮೂಲಕ. ಶಾಸ್ತ್ರೀಯ ಸಂಗೀತದಲ್ಲಂತೂ ಶ್ರೋತೃಗಳನ್ನು ಭಾವಯಾನದಲ್ಲಿ ತೇಲಿಸಬಲ್ಲ ಕೋಗಿಲೆ ಇವರು. ಶಾಂತಿವನ ಟ್ರಸ್ಟ್‌ನ ನಿರ್ದೇಶಕ ಸೀತಾರಾಮ ತೋಳ್ಪಡಿತ್ತಾಯರ ಧರ್ಮಪತ್ನಿ ಇವರು. ಪ್ರತಿವರ್ಷ ಪ್ರತಿಭಾ ಕಾರಂಜಿ ಮೊದಲಾದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವುದನ್ನೊಂದು ಸೇವೆಯಾಗಿ ನಡೆಸಿಕೊಂಡು ಬರುತ್ತಿರುವುದೂ ಇವರ ಹೆಗ್ಗಳಿಕೆ.

ಮನೋರಮಾ ಸಾಂಪ್ರದಾಯಿಕ ಸಂಗೀತದ ವಾತಾವರಣದಲ್ಲಿ ಬೆಳೆದು ಬಂದವರು. ತಾಯಿ ಪದ್ಮಾವತಮ್ಮನಿಗೆ ಸಂಗೀತ ಜ್ಞಾನವಿಲ್ಲದಿದ್ದರೂ ಸುಮಧುರವಾಗಿ ಕೀರ್ತನೆಗಳನ್ನು ಹಾಡುತ್ತಿದ್ದರು. ಮಕ್ಕಳಿಗೂ ಅವರು ಕಲಿಸಿದ ತೊದಲುನುಡಿ ಭಜನೆಯೇ. ತಮ್ಮ ಸೂರ್ಯನಾರಾಯಣ ಕಲ್ಲೂರಾಯರು ಯಕ್ಷಗಾನದ ಹೆಸರಾಂತ ಭಾಗವತರು. ಅಜ್ಜ ತಾಳ ಮದ್ದಳೆಯ ವಾಕ್ಕೋವಿದ.
ವಿದ್ಯಾರ್ಥಿಯಾಗಿದ್ದಾಗ ಭಕ್ತಿಗೀತೆ, ಭಾವಗೀತೆಗಳ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಮನೋರಮಾ, ಮದುವೆಯಾದ ಮೇಲೆ ಪತಿಯಿಂದ ಧಾರಾಳ ಪ್ರೋತ್ಸಾಹ ಪಡೆದುಕೊಂಡರು. ಪತಿ ಚಂಡೆ ಮದ್ದಲೆವಾದಕರು. ಮಕ್ಕಳಾದ ಅನಂತರ ತನ್ನ ವಿಧಿಯುಕ್ತ ಸಂಗೀತ ಕಲಿಕೆಯನ್ನಾರಂಭಿಸಿದ ಮನೋರಮಾ, ಶಾಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದರು. ಬಿಡುವಿದ್ದಾಗ ಮಾತ್ರ ಸಂಗೀತದತ್ತ ಗಮನ ಹರಿಸಿದರು. ಮುಂಡ್ರುಪಾಡಿ ಲೀಲಾ ಶ್ರೀಧರರಾವ್‌ರಿಂದ ಸಂಗೀತದ ದೀಕ್ಷೆ. ಆರು ವರ್ಷಗಳಲ್ಲಿ ಜೂನಿಯರ್ ಮುಗಿಸಿ, ಸೀನಿಯರ್ ಪರೀಕ್ಷೆಯಲ್ಲೂ ತೇರ್ಗಡೆಯಾದರು. ರಾಘವೇಂದ್ರ ತೋಳ್ಪಡಿತ್ತಾಯರಿಂದ ಯಕ್ಷಗಾನ ಭಾಗವತಿಕೆಯೂ ಒಲಿಯಿತು. ಜತೆಗೆ ಜೋತಿಷ್ಯದಲ್ಲೂ ಒಂದಿಷ್ಟು ಪ್ರೌಢಿಮೆ ಸಿದ್ದಿಸಿತು.
ಮನೋರಮಾಗೆ ಪುರಂದರ ದಾಸರ ಕೀರ್ತನೆಗಳೆಂದರೆ ಬಲು ಇಷ್ಟವಂತೆ. ಭೈರವಿ ರಾಗದಲ್ಲಿ 'ಭಜಿಸಿ ಬದುಕೆಲೊ ಮನುಜ' ಹಾಗೂ ಪೂರ್ವಿ ರಾಗದಲ್ಲಿ 'ಭಿನ್ನಹಕೆ ಬಾಯಿಲ್ಲವಯ್ಯ' ಕೀರ್ತನೆಗಳನ್ನು ಅವರು ಹಾಡಿದರೆ ಕೇಳುಗರ ಕಿವಿಗಳಿಗೆ ಅಮೃತರಸ ಪಾನದ ಅನುಭವ. ಅಕ್ಕ ಮಹಾದೇವಿಯ ವಚನಗಳನ್ನೂ ಸೊಗಸಾಗಿ ಹಾಡುತ್ತಾರೆ. ಯುವಜನ ಮೇಳಗಳಲ್ಲಿ ಹಾಡಿದ ಜನಪದ ಗೀತೆಗಳಿಗೆ ಬಹುಮಾನಗಳು ಬಂದಿವೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಈ ಕಂಠಸಿರಿಯ ರಸಧಾರೆ ಹರಿದಿದೆ.

ಧರ್ಮಸ್ಥಳ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಭಜನಾ ಕಮ್ಮಟದಲ್ಲಿ ಮನೋರಮಾ ಸಂಪನ್ಮೂಲ ವ್ಯಕ್ತಿಯಾಗಿ ಭಜನೆಯನ್ನು ಕಲಿಸುತ್ತಾರೆ. ಪುರಾಣ ವಾಚನವನ್ನೂ ಮಾಡುತ್ತಾರೆ. ಚಂದ್ರಶೇಖರ ಕೆದಿಲಾಯರ ಪ್ರೇರಣೆಯಿಂದ ಗಮಕ ಕಲೆಯಲ್ಲೂ ಪಾರಂಗತರು.
ಹಾಡುಗಳಿಗೆ ಸ್ವತಃ ರಾಗ ಸಂಯೋಜಿಸಬಲ್ಲ ಮನೋರಮಾ, ಹೇಮಾವತಿ ವಿ. ಹೆಗ್ಗಡೆಯವರು ರಚಿಸಿದ ಅನೇಕ ಸೀಮಂತದ ಹಾಡು, ಸೋಬಾನೆ ಹಾಡುಗಳಿಗೆ ರಾಗ ಜೋಡಿಸಿ ಹಾಡಿದ್ದಾರೆ. ನಿಸಾರ್ ಅಹಮದ್‌ರ 'ಎಲ್ಲ ಮರೆತಿರುವಾಗ...', ಕುವೆಂಪು  ಅವರ 'ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ' ಎಂಬ ಭಾವಗೀತೆಗಳೆಂದರೆ ಅವರಿಗೆ ಪಂಚಪ್ರಾಣ. ಇಂಥ ಹಲವು ಗೀತೆಗಳನ್ನು ರಾಗ ಜೋಡಿಸಿ ಹಾಡಿರುವ ಅವರು ಆಕಾಶವಾಣಿಯ ಗೀತಲಹರಿಯ ಮೂಲಕ 10 ವರ್ಷಗಳಿಂದ ಕಂಠಸುಧೆಯನ್ನು ತೇಲಿಬಿಡುತ್ತಿದ್ದಾರೆ. ಇವರನ್ನು ಅಭಿನಂದಿಸಲು ನೀವು ಮೊ. 9481755369 ಸಂಪರ್ಕಿಸಬಹುದು.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.