ಮಹಿಳೆ-ಮನೆ-ಬದುಕು

ಗುಪ್ತಗಾಮಿನಿ

ಗುಪ್ತಗಾಮಿನಿ
Published On :

'ಅಮ್ಮ, ನಾನೂ ಇವರೂ ಮುಂದಿನವಾರ ಸಿಂಗಾಪುರಕ್ಕೆ ಹೋಗುತ್ತಿದ್ದೇವೆ. ನೀನು ಮನೆಯಲ್ಲಿ ಯಾರ ಹತ್ತಿರವೂ ಬಾಯಿ ಬಿಡಬೇಡ. ಅಣ್ಣ, ಅತ್ತಿಗೆ ಅಥವಾ ಯಾರಿಗೂ ಹೇಳಬೇಡ. ಸುಮ್ಮನೆ ಹೊಟ್ಟೆ ಉರಿದುಕೊಳ್ಳುತ್ತಾರೆ. ನಿನ್ನ ಮಹಿಳಾ ಮಂಡಲಿ ಸದಸ್ಯರಿಗಂತೂ ಇದರ ಸುಳಿವೂ ಸಿಗುವುದು ಬೇಡ. ಆಯ್ತಾ?' ಮಗಳ ದೂರವಾಣಿ ಕರೆಗೆ ತಾಯಿಯ ಹೂಗುಡುವಿಕೆ. 'ಅಯ್ಯೋ ಖಂಡಿತಾ ಇಲ್ಲಮ್ಮ, ನೀವಿಬ್ಬರೂ ಆರಾಮವಾಗಿ ಹೋಗಿ ಬನ್ನಿ.ನಾನು ಯಾರಿಗೂ ತಿಳಿಸುವುದಿಲ್ಲ. ಇವರಿಗೂ ಹೇಳುತ್ತೇನೆ.'

ಇನ್ನೊಂದು ಕರೆ. 'ಹೇ ರಮ್ಯಾ, ನಿನಗೆ ಗೊತ್ತಾ? ನನ್ನ ಬಾಯ್‌ಫ್ರೆಂಡ್ ವಿವೇಕ್ ನಾಳೆ ನಮ್ಮ ಬಗ್ಗೆ ಅವನ ತಾಯಿ ತಂದೆಯರ ಹತ್ತಿರ ಮಾತಾಡ್ತಾನಂತೆ. ನೀನು ಯಾರ ಹತ್ತಿರವೂ ಬಾಯಿ ಬಿಡ್ಬೇಡ. ಅದರಲ್ಲೂ ಆ ಕಾವ್ಯನ ಬಳಿ. ಗೊತ್ತಾಯ್ತಾ?' ಸ್ನೇಹಿತೆಯ ಮಾತಿಗೆ ಇವಳ ಜೋಡಣೆ, 'ಕಂಗ್ರಾಟ್ಸ್ ಕಣೆ. ಇಲ್ಲ ಕಣೆ, ನಾನ್ಯಾರಿಗೂ ಹೇಳುವುದಿಲ್ಲ'.

ಈ ರೀತಿಯ ಸಂಭಾಷಣೆಗಳು ಎಲ್ಲೆಡೆ ಕೇಳಿಬರುತ್ತದೆ. ಯಾಕೆ ಈ ಗುಟ್ಟು? ಏನು ಸಿಗುತ್ತದೆ ಜನರಿಗೆ ಗುಟ್ಟು ಮಾಡುವುದರಿಂದ? ಇತ್ತೀಚಿಗೆ ನಡೆದ ಸಂಶೋಧನೆಯ ಪ್ರಕಾರ ಗುಟ್ಟು ಮಾಡುವುದು, ಗುಟ್ಟನ್ನು ಕಾಪಾಡುವುದು ಒಂದು ತ್ರಾಸದಾಯಕ ವಿಷಯ. ಹೇಳಲೂ ಆಗದೆ, ಮುಚ್ಚಿಡಲೂ ಆಗದೆ ಒದ್ದಾಡುವುದು ಸುಲಭವೇನಲ್ಲ. ಮನಸ್ಸಿಲ್ಲಿನ ವಿಷಯ ಒಂದು ಬಾಂಬ್ ಇದ್ದ ಹಾಗೆ. ಗುಟ್ಟು ಮಾಡುವ ಹಿಗ್ಗಿಗಿಂತ ಅದನ್ನು ಮುಚ್ಚಿಡುವ ಕಷ್ಟವೇ ದೊಡ್ಡದಾಗಿ ಬಿಡುತ್ತದೆ. ಆದರೆ, ಕೆಲವೊಂದು ಗುಟ್ಟುಗಳು ಹೊರಬೀಳುತ್ತವಂತೆ.
ಗುಟ್ಟು ಮಾಡುವುದು ಕೆಲವರ ಹುಟ್ಟುಗುಣ. ನಮ್ಮಜ್ಜಿ ಅವರ ನೆಂಟರ ಮಕ್ಕಳ ಬಗ್ಗೆ ಹೇಳುತ್ತಿದ್ದರು. 'ಅಯ್ಯೋ ಏನು ಕೇಳಿದರೂ ಆ ಮಕ್ಕಳಿಗೆ ಗೊತ್ತಿಲ್ಲ ಅಂತ ಹೇಳಿ ಅಭ್ಯಾಸವಾಗಿದೆ. ಅಮ್ಮ ಮನೇಲಿದ್ದಾರ ಎಂದರೂ ಗೊತ್ತಿಲ್ಲ ಎನ್ನುತ್ತಾರೆ'. ನನ್ನ ಕಿಡಿಗೇಡಿ ತಮ್ಮ ಒಮ್ಮೆ ಆ ಮಗುವಿಗೆ 'ಏನೋ ನೀನು ಇವತ್ತು ಚಡ್ಡಿ ಹಾಕಿಕೊಂಡಿದೆಯಾ?' ಎಂದು ಕೇಳಿದಾಗ, ತುಸುವೂ ತಡವರಿಸದೆ ಆ ಮಗು ಹೇಳಿತು 'ನನಗೆ ಗೊತ್ತಿಲ್ಲ'.
ಸಾಧಾರಣವಾಗಿ ಗುಟ್ಟು ಮಾಡುವ ಇನ್ನೊಂದು ಕಾರಣ, ಜನರ ಕಣ್ಣು ಬೀಳಬಾರದೆಂದು. 'ನನ್ನ ಸೊಸೆಗೀಗ ನಾಲ್ಕು ತಿಂಗಳು. ಆ ನೀಲವೇಣಿಗೆ ಮಾತ್ರ ಹೇಳಬೇಡ. ಐದು ವರುಷವಾದರೂ ಅವಳ ಸೊಸೆಗೆ ಮಕ್ಕಳಾಗಿಲ್ಲ.' ತನ್ನ ಸೊಸೆಗೆ ಮಕ್ಕಳಾಗಿಲ್ಲವಲ್ಲ ಎಂಬ ಚಿಂತೆಯಲ್ಲಿ ಇರುವ ನೀಲವೇಣಿಗೆ ನಿಮ್ಮ ಮನೆಯ ವಿಷಯ ತಿಳಿದು ಒಂದು ಕ್ಷಣ ಪಿಚ್ಚೆನಿಸಬಹುದು. ಆದರೆ ಕಣ್ಣು ಹಾಕಲು ಅವಳೇನು ರಾಕ್ಷಸಿಯೇ ಅಥವಾ ದೇವಿಯೇ? ನಿಮ್ಮಂತೆ ಮನುಷ್ಯಳು. ಯಾರು ನಿಮಗೆ ಕೇಡು ಬಯಸಿದರೂ ದೇವರ ಆಶೀರ್ವಾದವಿದ್ದರೆ ಯಾರ ಕಣ್ಣು ಅಥವಾ ದೃಷ್ಟಿಯೂ ಬೀಳುವುದಿಲ್ಲ. ಅವನನ್ನು ನಂಬಿ ಆರಾಮವಾಗಿರಿ.
ಮನೆಯ ಗುಟ್ಟು ಕಾಪಾಡುವುದು ಹೆಂಗಸರ ಲಕ್ಷಣ. ಗಂಡನ ಮನೆಯವರು ಹಿಂಸೆ ಕೊಡುತ್ತಿದ್ದರೂ ತುಟಿ ಕಚ್ಚಿ ಸಹಿಸುವುದು ಅವಳ ಗುಣ. ಇದರಿಂದ ಬಹಳ ಸಮಯದ ತನಕ ಅವಳ ನೋವು ಯಾರಿಗೂ ತಿಳಿಯುವುದೇ ಇಲ್ಲ. ಪರಿಸ್ಥಿತಿ ಕೈಮೀರಿದಾಗ, ಕೈ ಕೈ ಹಿಸುಕಿಕೊಳ್ಳುವುದೇ ಲಾಭ. ಗಂಡನ ಮನೆಯಲ್ಲಿ ಹಿಂಸೆ ಅನುಭವಿಸುತ್ತಿರುವ ಹೆಂಗಸರು ತಂದೆ ತಾಯಿಯ ಬಳಿ ಗುಟ್ಟು ಮಾಡದಿರುವುದೇ ಲೇಸು. ಅದೇ ರೀತಿ ಗಂಡನ ಅಥವಾ ಮಕ್ಕಳ ದುಶ್ಚಟಗಳನ್ನು ಮುಚ್ಚಿಡುವುದು ಖಂಡಿತಾ ಸರಿಯಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಆತ್ಮೀಯರ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದೇ ಜಾಣತನದ ಲಕ್ಷಣ.

ಇನ್ನು ವೈದ್ಯರು, ವಕೀಲರ ಬಳಿ ಗುಟ್ಟು ಮಾಡುವುದು ಶುದ್ಧ ತಪ್ಪು. ಮುಚ್ಚಿಟ್ಟ ವ್ಯಾಧಿ, ವಿಷಯ ನಿಮ್ಮ ಪ್ರಾಣಕ್ಕೆ ಹಾನಿ ತರಬಹುದು. ಹಾಗೆಯೇ ಮಕ್ಕಳಿಗೆ ಗುಟ್ಟು ಮಾಡದೆ ಸತ್ಯವನ್ನು ಧೈರ್ಯವಾಗಿ ಹೇಳುವಂತೆ ಮಾಡುವುದು ಪೋಷಕರ ಕರ್ತವ್ಯ. ತಲೆ ಎತ್ತಿ ಬಾಳಿ, ಯಾರಿಗೂ, ಯಾವುದಕ್ಕೂ ಅಂಜಿ ನಡೆಯಬೇಡಿ. ಸತ್ಯದ, ನ್ಯಾಯದ ಹಾದಿಯಲ್ಲಿ ಗುಟ್ಟಿಗೆ ಪ್ರವೇಶವಿಲ್ಲ.

- ಸಹನಾ ಪ್ರಸಾದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.