ಮಹಿಳೆ-ಮನೆ-ಬದುಕು

ಜನುಮ ಜನುಮದ ಬಂಧ

ಜನುಮ ಜನುಮದ ಬಂಧ
Published On :

ಮದುವೆಯ ಬಂಧ ಜನುಮಜನುಮದ ನಂಟು ಎನ್ನುವಂತೆ ನಿತ್ಯ ಭಾಸವಾಗಲು ಮತ್ತು ಅನುಭವಿಸಲು ಇರುವ ಟಿಪ್ಸ್ ಬಹಳಷ್ಟು ಲೇಖನಗಳನ್ನು ಓದಿರಬಹುದು. ಅದನ್ನು ಅಳವಡಿಸಿಕೊಂಡಿರಲೂಬಹುದು, ಬದುಕಿನ ನಿತ್ಯ ಜಂಜಡಗಳಿಂದ ಮರೆವಿನ ಮನೆಗೆ ಮಾರಿರಲೂಬಹುದು. ಅದನ್ನು ನೆನಪಿಸಿ ಪ್ರೀತಿಯ ತೋರಣವ ನಿಮ್ಮ ಮನದ ಬಾಗಿಲಲ್ಲಿ ಸಿಂಗರಿಸಲು ಈ ಲೇಖನ ಓದಿ...

ಸಂಬಂಧ ಗಟ್ಟಿಯಾಗಲು ಟಿಪ್ಸ್

  • ಯಾವುದೇ ಕಾರಣಕ್ಕೂ ಜಗಳದ ಜತೆ ಸಖ್ಯವ ಬೆಳೆಸಿ ಮಲಗುವ ಕೋಣೆಗೆ ಹೋಗಬೇಡಿ. ಉಂಡು ಮಲಗುವ ಮುನ್ನ ಜಗಳಕ್ಕೆ ಇತಿಶ್ರೀ ಹಾಡಿಯೇ ಮಲಗಿ. 'ಸಾರಿ' ಎನ್ನುವ ಎರಡಕ್ಷರಕ್ಕೆ ನಿಮ್ಮಿಬ್ಬರ ಭಿನ್ನಾಭಿಪ್ರಾಯವನ್ನು ಕ್ಷಣಮಾತ್ರಕ್ಕೆ ಬಗೆಹರಿಸುವ ಶಕ್ತಿ ಇದೆ.
  • ಯಾವಾಗಲೂ ಜಂಟಿಯಾಗಿ ನಿರ್ಣಯಗಳನ್ನು ಕೈಗೊಳ್ಳಿ. ಸಂದರ್ಭಗಳು ಚಿಕ್ಕದಿರಲಿ, ದೊಡ್ಡದಿರಲಿ ಪರಸ್ಪರ ಮಾತನಾಡಿ ನಿರ್ಧರಿಸುವುದು ಒಳಿತು.
  • ನನ್ನದು, ನಿನ್ನದು ಎನ್ನುವ ಪದಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಉದಾಹರಣೆಗೆ, ನನ್ನ ಕಾರು, ನನ್ನ ಮನೆ, ನನ್ನ ಉಪಕರಣಗಳು... ಮೊದಮೊದಲು ಈ ರೀತಿ ಎಚ್ಚರವಹಿಸುವುದು ಕಠಿಣ ಎನಿಸುವುದು. ಆದರೆ ಎರಡು ಮನಸುಗಳು ಎರಡು ದೇಹಗಳು ಒಂದೇ ಆಗಿರುವಾಗ ಚರವಸ್ತುಗಳನ್ನು ನನ್ನದು, ನಿನ್ನದು ಎನ್ನುವುದು ಸರಿಯಲ್ಲ. ಇದರಿಂದ ನೀವು ಅವರನ್ನು ಪ್ರೀತಿಸುವುದಿಲ್ಲ, ಅವರೊಟ್ಟಿಗೆ ಏನನ್ನೂ ಹಂಚಿಕೊಳ್ಳುವುದಿಲ್ಲ ಎನ್ನುವ ಭಾವನೆ ಮೂಡುತ್ತದೆ.
  • ಒಬ್ಬರಿಗೊಬ್ಬರು ಸೌಜನ್ಯದಿಂದ ವಿನಯಶೀಲರಾಗಿರಿ. ಇಬ್ಬರೂ ದಿನದ ಆಗುಹೋಗುಗಳ ಬಗ್ಗೆ ಆಗಾಗ ಮಾತನಾಡುತ್ತ, ಮೆಚ್ಚುಗೆ ಸೂಚಿಸುತ್ತಿರಿ.
  • ದಿನದಲ್ಲಿ ಒಮ್ಮೆಯಾದರೂ 'ಐ ಲವ್ ಯೂ' ಹೇಳಲು ಮರೆಯದಿರಿ. ಈ ನಾಲ್ಕು ಅಕ್ಷರಗಳಿಗೆ ನಿಮ್ಮಿಬ್ಬರನ್ನು ಬಂಧಿಸುವ ಶಕ್ತಿ ಇದೆ.
  • ಇಬ್ಬರನ್ನೂ ನ್ಯೂನತೆಗಳಿರುತ್ತವೆ. ಅವುಗಳನ್ನು ಪರಸ್ಪರ ಒಪ್ಪಿಕೊಂಡು ಮುಂದೆ ಸಾಗುವುದು ಬಹುಮುಖ್ಯ. ದೋಷಾರೋಪದಲ್ಲಿ ಕಾಲಹರಣ ಮಾಡದೆ ಅಭಿನಂದಿಸಲು ಕಾರಣಗಳನ್ನು ಹುಡುಕಿ. ಅಭಿನಂದನೆಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅಲ್ಲವೆ...?
  • ಸಂಗಾತಿಯ ಸಂಬಂಧಿಕರನ್ನು, ಗೆಳೆಯರನ್ನು ನಿಮಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳಿ. ಅವರೊಟ್ಟಿಗೆ ವಿನಯದಿಂದ, ಪ್ರೀತಿಯಿಂದ ಇರುವಂತೆ ನಟಿಸಿ. ವಾದಗಳು, ಜಗಳಗಳು ಶುರುವಾಗುವುದೇ ಅವರ ಕಾರಣದಿಂದ. ಆದ್ದರಿಂದ ಅವರ ಜತೆ ಸೌಜನ್ಯದಿಂದ ನಡೆದುಕೊಂಡರೆ ನೀವೇನನ್ನೂ ಕಳೆದುಕೊಳ್ಳುವುದಿಲ್ಲ, ಬದಲಿಗೆ ನಿಮ್ಮ ಸಂಗಾತಿಯ ಹೃದಯ ಗೆಲ್ಲುವುದಂತೂ ಖಚಿತ.
  • ಎಂತಹ ಕಠಿಣ ಪರಿಸ್ಥಿತಿಯಲ್ಲೂ ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಲ್ಲಿ. ಸಮಸ್ಯೆಗಳ ಸುಳಿಯಲ್ಲಿ ಸಂಗಾತಿ ಸಿಲುಕಿರುವಾಗ ದೂರದಿಂದ ನೋಡುತ್ತಾ ನಿಲ್ಲುವುದರ ಬದಲು 'ನನ್ನಿಂದ ಏನಾದರೂ ಮಾಡಲು ಸಾಧ್ಯವೇ' ಎಂದು ಯೋಚಿಸಿ, ಬಾಯ್ಬಿಟ್ಟು ಕೇಳಿ. ಇದರಿಂದ ನಿಮ್ಮ ಸಂಗಾತಿಗೆ ನನ್ನ ಆಸರೆಗೆ ತುಡಿಯುವ ಜೀವವೊಂದಿದೆ ಎನ್ನುವ ನೆಮ್ಮದಿಯೇ ಆನೆಬಲ ನೀಡುತ್ತದೆ.
  • ಮನೆ ಖರೀದಿ, ಮನೆಗೆ ಬಣ್ಣ ಹಚ್ಚುವುದು, ಕಾರು ಖರೀದಿ, ಬಿಲ್ ಪಾವತಿ ಯಾವುದೇ ಕೆಲಸವಾಗಲಿ ಒಟ್ಟಿಗೇ ಮಾಡಿ. ಒಂದಾಗಿ ಮಾಡುವ ಕೆಲಸಗಳು ನಿಮ್ಮನ್ನು ಮತ್ತಷ್ಟು ಹತ್ತಿರ ತರುತ್ತವೆ.
  • ಮದುವೆಯನ್ನು ಏಳೇಳು ಜನ್ಮದ ಬಂಧವಾಗಿಸಿಕೊಳ್ಳುವ ದಾಳ ನಿಮ್ಮ ಕೈಯಲ್ಲೇ ಇರುತ್ತದೆ. ಅದನ್ನು ನಿಮ್ಮ ಕಾರ್ಯದ ಮೂಲಕ ತೋರಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಅದರ ಬದಲು ಅಹಂನ ಕೈಗೆ ಬುದ್ಧಿ ಕೊಡದೆ, ನಾ ಹೆಚ್ಚು, ನೀ ಕಮ್ಮಿ ಎನ್ನುವ ಭಾವನೆ ಹತ್ತರ ಸುಳಿಯದಂತೆ ಎಚ್ಚರವಹಿಸಿ. ಪ್ರತಿದಿನದ ಬೆಳಗನ್ನು ಹೊಸದೆಂದೇ ಭಾವಿಸಿ ಸಂಬಂಧಕ್ಕೆ ಹೊಸ ಸ್ಪರ್ಶ ನೀಡಿ.
- ಜಮುನಾರಾಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.