ಮಹಿಳೆ-ಮನೆ-ಬದುಕು

ಸುಮಧುರ ಶ್ಯಾಮಲಾ

ಸುಮಧುರ ಶ್ಯಾಮಲಾ
Published On :

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಚಿರಪರಿಚಿತ ಹೆಸರು ಶ್ಯಾಮಲಾ ನಾಗರಾಜ್. ಪುತ್ತೂರು ತಾಲೂಕಿನ ಬೇರಿಕೆಯಲ್ಲಿ ನೆಲೆಸಿರುವ ಅವರು ಸುಮಧುರ ಕಂಠ ಸಿರಿಯಿಂದ ಭಾವಪೂರ್ಣರಾಗಿ ಕೀರ್ತನೆಗಳನ್ನು ಹಾಡತೊಡಗಿದರೆ ಶ್ರೋತೃವರ್ಗ ಗಾನರಸಾಮೃತ ಶರಧಿಯಲ್ಲಿ ತನ್ಮಯಗೊಳ್ಳುತ್ತದೆ.
1985ರಿಂದ ಇಂದಿನವರೆಗೆ ನಿರಂತರವಾಗಿ ಸಂಗೀತ ಶಿಕ್ಷಣ ತರಗತಿಗಳನ್ನು ನಡೆಸಿಕೊಂಡು ಬಂದಿದ್ದಾರೆ ಶ್ಯಾಮಲಾ ನಾಗರಾಜ್. ಅವರಿಂದ ಸಂಗೀತ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಆರು ಸಾವಿರಕ್ಕಿಂತ ಅಧಿಕ. ಖ್ಯಾತಿಯ ತುತ್ತ ತುದಿಯಲ್ಲಿರುವ ಇಂದಿನ ಸಾವಿರಕ್ಕೂ ಮೇಲ್ಪಟ್ಟ ಗಾಯಕರಿಗೆ ಇವರು ಗುರುಗಳು. ಪ್ರತಿವರ್ಷ 40 ವಿದ್ಯಾರ್ಥಿಗಳನ್ನು ಶ್ಯಾಮಲಾ ಪರೀಕ್ಷೆಗೆ ಸಿದ್ಧಗೊಳಿಸುತ್ತಾರೆ. ಸಂಗೀತದ ಆಡೊಂಬಲವೆನಿಸಿದ ಕಾಂಚನದ ಪೆರ್ಲದಲ್ಲಿ ಜನಿಸಿದ ಶ್ಯಾಮಲಾ ವೆಂಕಟರಮಣ ಬಡಕಿಲ್ಲಾಯ- ಪದ್ಮಾವತಿ ದಂಪತಿಯ ಪುತ್ರಿ. ಸಂಸಾರದಲ್ಲಿ ಎಲ್ಲರೂ ಸಂಗೀತ ಪರಿಣತರು. ತಮ್ಮ 6ನೇ ವಯಸ್ಸಿನಿಂದಲೇ ಕಾಂಚನದ ಸಂಗೀತ ಶಾಲೆಯಲ್ಲಿ ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಅವರ ಬಳಿ 12 ವರ್ಷಗಳ ಸಂಗೀತದ ಪಾಠ ಹೇಳಿಸಿಕೊಂಡು ವಿದ್ವತ್ ಪರೀಕ್ಷೆಯ ಗರಿಯೇರಿಸಿಕೊಂಡರು. ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯಾಗುವ ಅವಕಾಶ ತಾನಾಗಿ ಅರಸಿ ಬಂದಾಗ ಶ್ಯಾಮಲಾ ಸಂಗೀತ ಸಾಧನೆಯನ್ನೇ ಬದುಕಿನ ಪರಮ ಗುರಿಯಾಗಿ ಸ್ವೀಕರಿಸಿ ಆ ಕ್ಷೇತ್ರದಲ್ಲೇ ಮುನ್ನಡೆದರು. ಹಾರ್ಮೋನಿಯಂ, ತಂಬೂರಿ, ಪಿಟೀಲು ವಾದನದಲ್ಲೂ ಅವರು ಪರಿಣತರಾದರು.
ಶ್ಯಾಮಲಾ ಅವರು ಜಿಲ್ಲೆಯ ಎಲ್ಲೆಡೆ ಹಾಗೂ ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ ಮೊದಲಾಗಿ ರಾಜ್ಯದ ಎಲ್ಲ ಊರುಗಳಲ್ಲಿ ಕಚೇರಿ ನಡೆಸಿದ್ದಾರೆ. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಸ್ವಾತಿ ತಿರುನಾಳರ ಕೀರ್ತನೆಗಳೆಂದರೆ ತನಗೆ ಪಂಚಪ್ರಾಣವೆನ್ನುವ ಈ ವಿದುಷಿ, ದಾಸರ ಕೀರ್ತನೆಗಳನ್ನು ಅತ್ಯಂತ ಭಾವಪೂರ್ಣವಾಗಿ ಹಾಡುತ್ತಾರೆ. ಇತ್ತೀಚೆಗೆ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳ ಶಿಬಿರವನ್ನು ಬೆಳ್ತಂಗಡಿಯಲ್ಲಿ ಏರ್ಪಡಿಸಿದ ಹೆಗ್ಗಳಿಕೆ ಅವರದು.
ತಮ್ಮ ಸಾಧನೆಗೆ ಖ್ಯಾತ ಸಂಗೀತ ವಿದ್ವಾಂಸರಾದ ಡಿ.ಕೆ. ಪಟ್ಟಮ್ಮಾಳ್, ಎಂ.ಎಸ್.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತಕುಮಾರಿ ಮೊದಲಾದವರು ದಾರಿದೀಪವೆನ್ನುವ ಶ್ಯಾಮಲಾ ತನ್ನ ಕಚೇರಿಗಳಲ್ಲಿ ಈ ವಿದ್ವಾಂಸರ ಒಂದು ಕೀರ್ತನೆಯನ್ನು ತಪ್ಪದೇ ಹಾಡುತ್ತಾರೆ. ಶ್ಯಾಮಲಾ ಅವರ (ಮೊ. 9448988907) ಸಾಧನೆ ಗುರುತಿಸಿ ಹಲವು ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

- . ರಾಮಕೃಷ್ಣಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.