ಮಹಿಳೆ-ಮನೆ-ಬದುಕು

ಸೀಕ್ರೆಟ್ ಏಂಜೆಲ್ಸ್

ಸೀಕ್ರೆಟ್ ಏಂಜೆಲ್ಸ್
Published On :

ಆಗಿನ್ನೂ ಒಳಉಡುಪುಗಳ ಜಾಹೀರಾತು ಬರಲು ಪ್ರಾರಂಭವಾದ ದಿನಗಳು. ಎಲ್ಲರೆದುರು ಅವುಗಳ ಬಗ್ಗೆ ಮಾತನಾಡಿದರೆ, ಜಾಹೀರಾತು ಬಂದರೆ ಅಮ್ಮಂದಿರು ಮುಜುಗರದಿಂದ ಮುಖ ಸಿಂಡರಿಸಿಕೊಳ್ಳುತ್ತಿದ್ದರು. ನಮ್ಮದು ಮುಂದುವರಿದ, ಮುಕ್ತ ಸಮಾಜ ಎಂದು ಹೇಳುವ ಇವತ್ತಿಗೂ ಆ ವಿಷಯದಲ್ಲಿ ಅದೇ ಮುಜುಗರ, ಸಂಕೋಚ ಇದೆ!
ನಗರದ ಎಲ್ಲ ಉಡುಪಿನ ಅಂಗಡಿಗಳಲ್ಲಿ ಮಹಿಳಾ ಸಹಾಯಕಿಯರಿರುವುದಿಲ್ಲ. ಅಂಥ ಅಂಗಡಿಗಳನ್ನು ಹುಡುಕಿಕೊಂಡು ಹೋಗಲು ಪುರುಸೊತ್ತೂ ಇರುವುದಿಲ್ಲ. ಒಂದುವೇಳೆ ಪುರುಷ ಸಹಾಯಕರಿರುವ ಅಂಗಡಿಗೆ ಹೋದರೂ ಅವರ ಮುಂದೆ ನಿಂತು ವಿವರಿಸಲು ಮುಜುಗರವೆನಿಸುತ್ತದೆ. ಉಡುಪಿನ ಬ್ರಾಂಡ್ ಯಾವುದು? ಯಾವ ಬಣ್ಣ? ಅದು ನಮ್ಮ ಆಯ್ಕೆಗೆ ಸರಿಯಾದುದಾ? ಬೆಲೆ ಎಷ್ಟು?... ಇತ್ಯಾದಿಗಳನ್ನು ನೋಡದೆ ಗಡಿಬಿಡಿಯಿಂದ ಪ್ಯಾಕ್ ಮಾಡಿಸಿ, ಬಿಲ್ ಕೊಟ್ಟು ಅಂಗಡಿಯಿಂದ ಹೊರಬಂದರೆ ಸಾಕಾಗಿರುತ್ತದೆ. ಏಕೆಂದರೆ, ಕೆಲವು ಅಂಗಡಿಗಳಲ್ಲಿ ಅಲ್ಲಿನ ಪುರುಷ ಸಹಾಯಕನ 'ಒಂಥರಾ' ಮುಖಭಾವ, ಆತನ ಅತಿಯಾದ ವಿವರಣೆ ಮುಜುಗರ ಹುಟ್ಟಿಸುತ್ತದೆ. ಇನ್ನು ಬ್ರಾಂಡ್‌ಗಳ ಬಗ್ಗೆ ವಿಚಾರಿಸಿದರಂತೂ ಮುಗಿದೇ ಹೋಯಿತು... ಆತನ ವಿವರಣೆಗೆ ಕಡಿವಾಣವೇ ಇರುವುದಿಲ್ಲ. ಈ ಎಲ್ಲ ಮುಜುಗರ ತಪ್ಪಿಸಲೆಂದೇ ಹುಟ್ಟಿಕೊಂಡಿದೆ 'ಸೀಕ್ರೆಟ್ ಏಂಜೆಲ್ಸ್‌'.
ಸಾಫ್ಟ್‌ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದ ಪೂರ್ಣಿಮಾ ವಿನಯ್‌ಕುಮಾರ್ ಅವರು ಅವೇಕ್‌ನಲ್ಲಿ ಅಧ್ಯಕ್ಷರಾಗಿ ಅನುಭವ ಪಡೆದವರು. ಅಷ್ಟೇ ಅಲ್ಲ ಐಐಎಂನಿಂದ ಪದವಿ ಕೂಡ ಪಡೆದಿದ್ದಾರೆ. ಈ ಮೊದಲು ಉದ್ಯಮ ಪ್ರಾರಂಭಿಸುವ ಮಹಿಳೆಯರಿಗೆ ಆಪ್ತ ಸಲಹೆಯನ್ನು ನೀಡುತ್ತಿದ್ದ ಇವರು, ಈಗ ತಮ್ಮದೇ ಆದ ವಿಭಿನ್ನ ಶೈಲಿಯ ಉದ್ಯಮ 'ಸೀಕ್ರೆಟ್ ಏಂಜೆಲ್ಸ್‌' ಅನ್ನು ಮೇ ತಿಂಗಳಿನಲ್ಲಿ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಅವರಲ್ಲಿ ಮಾತನಾಡಿದಾಗ...

'ಸೀಕ್ರೆಟ್ ಏಂಜೆಲ್ಸ್‌' ಹುಟ್ಟಿದ್ದು ಹೇಗೆ?
ನಾನು 'ಅವೇಕ್‌'ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ ಮಹಿಳೆಯರು ಒಳಉಡುಪಿನ ಖರೀದಿಯ ವಿಷಯದಲ್ಲಿ ತಮ್ಮ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ಅವರೆಲ್ಲ ಉಡುಪು ಖರೀದಿಸಬೇಕಾದಾಗ ಒಂದು ಚೀಟಿಯಲ್ಲಿ ಬರೆದು ಅಣ್ಣ ಅಥವಾ ಅಪ್ಪನ ಕೈಗೆ ಕೊಡುತ್ತಿದ್ದರು. ಅದರಲ್ಲಿ ಅವರ ಆಯ್ಕೆಯ ಬ್ರಾಂಡ್, ಬಣ್ಣ ನಮೂದಿಸಿರುತ್ತಿರಲಿಲ್ಲ. ತಂದುಕೊಟ್ಟ ಉಡುಪಿನಲ್ಲಿ ಏನೇ ವ್ಯತ್ಯಾಸವಾದರೂ ಅಡ್ಜೆಸ್ಟ್ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇಂಥದೇ ಪರಿಸ್ಥಿತಿ ನಮ್ಮ ಮನೆಯಲ್ಲಿ ಕೂಡ ಇತ್ತು. ಆಗ ನನ್ನ ಮನಸ್ಸಿನಲ್ಲಿ ಹುಟ್ಟಿದ್ದು 'ಸೀಕ್ರೆಟ್ ಏಂಜೆಲ್ಸ್‌'. ಇದನ್ನು ಪ್ರಾರಂಭಿಸುವುದಕ್ಕೂ ಮುಂಚೆ 8-9 ತಿಂಗಳು ಸರ್ವೆ ಮಾಡಿ, ಸಾಕಷ್ಟು ಮಹಿಳೆಯರ ಅಭಿಪ್ರಾಯ, ಸಲಹೆಗಳನ್ನು ಪಡೆದು, ಚರ್ಚಿಸಿ ಉದ್ದಿಮೆ ಪ್ರಾರಂಭಿಸಲು ಮುಂದಾದೆ. ಇವುಗಳನ್ನು ಆನ್‌ಲೈನ್‌ನಲ್ಲಿ ಮೊದಲು ಪರಿಚಯಿಸಿದೆ. ಹಾಗಂತ ಇದು ಆನ್‌ಲೈನ್ ಮಾರುಕಟ್ಟೆ ಖಂಡಿತ ಅಲ್ಲ.

ಉದ್ದೇಶ?
ನಾನು ನನ್ನ ಬಿಸಿನೆಸ್ ಬೆಳೆಸುವುದರ ಜತೆ ಇದರಲ್ಲಿ ಭಾಗಿಯಾಗುವ, ತೊಡಗಿಸಿಕೊಳ್ಳುವ ಮಹಿಳೆಯರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈಗ ನಾನು ಅವರಿಗೆ ನೀಡುತ್ತಿರುವ ಕಮೀಷನ್ ತುಂಬಾ ಕಡಿಮೆಯೆನಿಸುತ್ತಿದೆ. ಅವರ ದುಡಿಮೆ ಅವರ ಮನೆಯ ತಿಂಗಳ ದಿನಸಿ ಖರ್ಚನ್ನು ಭರಿಸುವಷ್ಟಾದರೂ ಆಗಬೇಕು ಎಂಬುದು ನನ್ನ ಉದ್ದೇಶ.

ನಿಮ್ಮ ಗ್ರಾಹಕರು?
ನಾವು ಗ್ರಾಹಕರನ್ನು 'ಏಂಜೆಲ್ಸ್‌' ಎಂದು ಕರೆಯುತ್ತೇವೆ. ಎಲ್ಲ ವರ್ಗದ ಮಹಿಳೆಯರೂ ನಮ್ಮ 'ಏಂಜೆಲ್ಸ್‌'ಗಳಾಗಿದ್ದಾರೆ. ಇಲ್ಲಿ ನಮ್ಮದೇ ಆದ ಉಡುಪು ತಯಾರಿಕಾ ಘಟಕವಿಲ್ಲದಿರುವುದರಿಂದ ನಾವು ವಿಶ್ವದರ್ಜೆಯ ಐದು ಟಾಪ್ ಬ್ರಾಂಡೆಡ್ ಉಡುಪುಗಳನ್ನು ಮಾರುತ್ತಿದ್ದೇವೆ- ಎನಾಮರ್, ಅಮಾಂಟೆ, ಇನಯಾ, ಟ್ರಿಂಪ್, ಲವೆಬಲ್ ಬ್ರಾಂಡ್‌ಗಳು ಈಗ ಲಭ್ಯ. ಸದ್ಯದಲ್ಲೇ ಇನ್ನೂ ಎರಡು ಹೆಸರಾಂತ ಬ್ರಾಂಡ್‌ಗಳು ಸೇರ್ಪಡೆಗೊಳ್ಳಲಿವೆ. ಬ್ರಾಂಡೆಡ್ ಅಂದಾಕ್ಷಣ ನೀವೇನೂ ಬೆಲೆ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ. ಬೆಲೆ 199ರಿಂದ ಪ್ರಾರಂಭವಾಗುತ್ತದೆ. ಇದಲ್ಲದೇ ಲಿಂಗರಿ, ಪ್ಯಾಂಟೀಸ್, ನೈಟ್‌ವೇರ್‌ಗಳೂ ದೊರೆಯುತ್ತವೆ.

ನೀವು ಮಾಡಬೇಕಾದ್ದಿಷ್ಟೆ...
'ಸೀಕ್ರೆಟ್ ಏಂಜೆಲ್ಸ್‌'ಗೆ ಒಂದು ಕರೆ ಮಾಡಿ ಸಾಕು. ಉಳಿದದ್ದನ್ನೆಲ್ಲ ಅವರೇ ನಿಮಗೆ ವಿವರವಾಗಿ ತಿಳಿಸಿಕೊಡುತ್ತಾರೆ. ಸೀಕ್ರೆಟ್ ಏಂಜೆಲ್ಸ್‌ನ ವಿಶೇಷತೆಯೆಂದರೆ ಇಲ್ಲಿ ಕೆಲಸ ಮಾಡುವವರೆಲ್ಲರೂ ಮಹಿಳೆಯರೇ ಆಗಿರುವುದರಿಂದ ಮುಜುಗರಕ್ಕೆ ಆಸ್ಪದವೇ ಇಲ್ಲ. ಆರ್ಡರ್ ಮಾಡುವಾಗಲೇ ನಿಮ್ಮ ಅವಶ್ಯಕತೆಗಳನ್ನು ಸರಿಯಾದ ರೀತಿಯಲ್ಲಿ ವಿವರಿಸಿ. ಅಷ್ಟೇ ಅಲ್ಲ, ಒಳಉಡುಪಿನ ಅಳತೆ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಗೊಂದಲವಿದ್ದರೆ ಅದನ್ನೂ 'ಸೀಕ್ರೆಟ್ ಏಂಜೆಲ್ಸ್‌' ನಿಮಗೆ ತಿಳಿಸಿಕೊಡುತ್ತದೆ. ಖರೀದಿಸುವ ಉಡುಪಿನ ಮೇಲೆ ರಿಯಾಯಿತಿ ಕೂಡ ಇದೆ. ಬೇರೆ ಗ್ರಾಹಕರನ್ನು ಪರಿಚಯಿಸಿದವರಿಗೂ ಹಣ ಪಾವತಿಸಲಾಗುತ್ತದೆ. ಇನ್ನು ಮಾರಾಟ ಮಾಡುವ ಕೌಶಲ, ಆಸಕ್ತಿಯುಳ್ಳವರು ಮಾರಾಟದಲ್ಲೂ ತೊಡಗಿಕೊಳ್ಳಬಹುದು. ಬೆಂಗಳೂರಿನಲ್ಲಾದರೆ ಕ್ಯಾಶ್ ಆನ್ ಡೆಲಿವರಿ ಸೇವೆಯನ್ನು ನೀಡುತ್ತಿದ್ದೇವೆ. ಹೊರವಲಯದವರು ಐವಿಆರ್, ಬ್ಯಾಂಕ್ ಮೂಲಕ ಮುಂಗಡ ಹಣ ಪಾವತಿಸಿ ಪಡೆದುಕೊಳ್ಳಬೇಕಾಗುತ್ತದೆ. ಕರೆ ಮಾಡಬೇಕಾದ ಕಚೇರಿ ಸಂಖ್ಯೆ: 080- 26690736, 9964240333, www.secretangel.in, info@secretangel.in ಸಂಪರ್ಕಿಸಬಹುದು.

ಪ್ರತಿಕ್ರಿಯೆ ಹೇಗಿದೆ?
ನಾವು ಗ್ರಾಹಕರ ಭಾವನೆಗಳನ್ನು ಗೌರವಿಸುತ್ತೇವೆ. ಅವರಿಗೆ ಮುಜುಗರವಾಗದ ರೀತಿಯಲ್ಲಿ ನಮ್ಮ ಸೇವೆ ಒದಗಿಸುತ್ತೇವೆ. ಸೀಕ್ರೆಟ್ ಏಂಜೆಲ್ಸ್‌ನಲ್ಲಿ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಹಾಗಾಗಿ 'ಏಂಜೆಲ್ಸ್‌' ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಾಜ್ಯದಾದ್ಯಂತ ಮಾರುಕಟ್ಟೆ ವಿಸ್ತರಿಸಿ ಮುಂದಿನ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಸೇವೆ ಪ್ರಾರಂಭಿಸುವ ಯೋಜನೆಯಿದೆ.

- ಶಶಿರೇಖಾ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.