ಗರ್ವಲಕ್ಷ್ಮಿ
ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಮಹಿಳಾ ವಿಮೋಚನೆ... ಇವೆಲ್ಲವೂ ನಮಗೆ...

ಹಾರ್ನ್‌ಬಿಲ್ ಹಕ್ಕಿಗಳು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು, ಕೊನೆಯ ಉಸಿರು ಇರುವವರೆಗೂ ಅದೇ ಸಂಗಾತಿಯೊಂದಿಗೆ ಜೀವನ ಸಾಗಿಸುತ್ತವಂತೆ. ಆದರೆ, ನಾವು..?
'ನಾನು ಹೋದರೆ ಹೋದೇನು' ಎಂಬುದು ದಾಸರ ನುಡಿ. ಮನುಷ್ಯ ಅಹಂಕಾರವನ್ನು ಬಿಡಬೇಕೆಂದು ಸರಳವಾದ ಮೂರು ಪದಗಳಲ್ಲಿ ದಾಸರು ಕೇವಲ ಹೇಳಿ ಮುಗಿಸಲಿಲ್ಲ. ಅಂತೆಯೇ ಬಾಳಿ ತೋರಿಸಿದರು. ಇವರ ಕೀರ್ತನೆಗಳನ್ನು ಕೇಳಿ, ದೇವರನಾಮಗಳನ್ನು ಹಾಡಿ ಸಂತೋಷಪಡುವ ನಾವು ಇವರು ಬದುಕಿದ ರೀತಿಯನ್ನು ಮಾತ್ರ ನೋಡಿ ಕಲಿಯದಿರುವುದು ವಿಷಾದನೀಯ.
ವಾಣಿಯಳದ್ದು ಸುಂದರ ಸಂಸಾರ. ಗಂಡ- ಹೆಂಡತಿ ಇಬ್ಬರಿಗೂ ಕೈತುಂಬಾ ಸಂಬಳ. ಅತ್ತೆ- ಮಾವನ ಆರೈಕೆಯ ಹೊಣೆಯಿಲ್ಲದೆ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದರು. ವಾಣಿಗೆ ಕಚೇರಿಯಲ್ಲಿ ಬಡ್ತಿಯಾಯಿತು; ಸಂಬಳವೂ ಹೆಚ್ಚಿತು. ಅವಳಿಗೆ ತಾನು ಬುದ್ಧಿವಂತೆ, ತಾನು ಶ್ರೇಷ್ಠ ಎನ್ನುವ ಭಾವನೆ ಚಿಗುರಿತು. ಗಂಡನ ಬಗ್ಗೆ ಅಸಡ್ಡೆ, ಉದಾಸೀನ. ಪರಿಣಾಮ ಇಬ್ಬರ ನಡುವೆ ಬಿರುಕು. ನಂತರ ಆಗಿದ್ದು ವಿಚ್ಛೇದನ.
ಇಂದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದೆ. ಅವಳ ಬುದ್ಧಿವಂತಿಕೆಗೆ, ಪ್ರಯತ್ನಕ್ಕೆ ಈಗ ಎಲ್ಲೆಡೆ ಫಲ ದೊರೆಯುತ್ತಿದೆ. ಇದಕ್ಕಾಗಿ ಸಂತೋಷಪಡಬೇಕೇ ಹೊರತು ಅಹಂಕಾರಪಡುವುದಲ್ಲ. ಹೆಣ್ಣುಮಕ್ಕಳು ಕೆಲಸಕ್ಕೆ ಹೋಗಿ ಸಂಬಳ ತರುವುದು ಈಗಿನ ಕಾಲದಲ್ಲಿ ಅಗತ್ಯ. ಒಬ್ಬರಿಗೆ ಹೆಚ್ಚು ಸಂಬಳ, ಮತ್ತೊಬ್ಬರಿಗೆ ಕಡಿಮೆ ಬರಬಹುದು. ಗಂಡ- ಹೆಂಡತಿ ಇಬ್ಬರೂ ಒಂದು ಕುಟುಂಬ ನಡೆಸುವ ಸಾರಥಿಗಳಾಗಿರುವಾಗ 'ಹೆಚ್ಚು-ಕಡಿಮೆ' ಅನ್ನುವ ಭಾವನೆ ಬರಬಾರದು.
ಕುಟುಂಬದಲ್ಲಿ ಹೆಣ್ಣಿನ ಜವಾಬ್ದಾರಿ ಜಾಸ್ತಿ. ಗಂಡ, ಮನೆ, ಮಕ್ಕಳು, ಮನೆಯಲ್ಲಿನ ಹಿರಿಯರನ್ನು ನೋಡಿಕೊಂಡು, ಬರುವ ಸಂಬಳದಲ್ಲಿ ಸಂಸಾರ ನಿಭಾಯಿಸುವ ದಕ್ಷತೆ ಅವಳಿಗಿರಬೇಕು. ದುರದೃಷ್ಟವಶಾತ್, ಇಂದಿನ ಹೆಚ್ಚಿನ ಮಹಿಳೆಯರಿಗೆ ಕೆಲಸಕ್ಕೆ ಹೋಗಿ ಸಂಬಳ ತರುವುದೊಂದೇ ಜೀವನದ ಪರಮಗುರಿ. ಕಚೇರಿ, ಉದ್ಯೋಗ, ಬಡ್ತಿಯೇ ಪ್ರಮುಖವಾಗುತ್ತಿದೆ. 'ನಾನೇನೂ ಕಡಿಮೆ ಇಲ್ಲ' ಎನ್ನುವ 'ಅಹಂ' ಅಧಿಕವಾಗುತ್ತಿದೆ.
ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಮಹಿಳಾ ವಿಮೋಚನೆ... ಇವೆಲ್ಲವೂ ನಮಗೆ ಪಾಶ್ಚಾತ್ಯರಿಂದ ಬಂದ ಕೊಡುಗೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೂ ಸಮಾನತೆ ಇದೆ. ವೇದಗಳ ಕಾಲದಲ್ಲಿಯೂ ಮಹಿಳೆಗೆ ಸ್ವಾತಂತ್ರ್ಯವಿತ್ತು. ಶಿಕ್ಷಣದ ಹಕ್ಕು ಇತ್ತು. ಗಾಯತ್ರೀ ಮಂತ್ರದ ಉಪದೇಶವನ್ನು ಆಕೆಗೂ ಮಾಡುತ್ತಿದ್ದರು. ಗಾರ್ಗಿ, ಮೈತ್ರೇಯಿ, ಸುಲಭಾ ಮುಂತಾದ ಬ್ರಹ್ಮವಾದಿನಿಯರಿದ್ದರು. ಜನಕ ಮಹಾರಾಜನ ಸಭೆಯಲ್ಲಿ ಗಾರ್ಗಿ ವಿದ್ವಜ್ಜನರ ಸಮ್ಮುಖದಲ್ಲಿ ಮಹಾ ಪ್ರಜ್ಞಾವಂತ ಋಷಿಯಾದ ಯಾಜ್ಞವಲ್ಕ್ಯರೊಡನೆ ಬ್ರಹ್ಮಲೋಕ, ಪಂಚಭೂತಗಳ ಬಗ್ಗೆ ಚರ್ಚಿಸುತ್ತಿದ್ದಳು. ಇವರಿಬ್ಬರ ಈ ಚರ್ಚೆಯ ಭಾಗವನ್ನು 'ಗಾರ್ಗಿ ಬ್ರಾಹ್ಮಣ' ಎಂದೇ ಕರೆಯುತ್ತಾರೆ.
ಇನ್ನು ಚರಿತ್ರೆಯ ಪುಟಗಳನ್ನು ತಿರುವಿದರೆ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಝಾನ್ಸೀರಾಣಿ ಲಕ್ಷ್ಮೀಬಾಯಿ ಇವರೆಲ್ಲ ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ನಾಡಿಗೋಸ್ಕರ ಹೋರಾಡಿದವರು. ಇವರ್ಯಾರೂ ಸಂಸಾರದಿಂದ ದೂರವಾಗಲಿಲ್ಲ. ಆದರೆ ವಿದ್ಯೆ ಕಲಿತು, ಉದ್ಯೋಗಕ್ಕೆ ಹೋಗಿ ಆರ್ಥಿಕವಾಗಿ ಸ್ವತಂತ್ರಳಾದ ತಕ್ಷಣ ಬದಲಾವಣೆ ಏಕೆ? ಮಹಿಳೆಗಿರುವ ಆರ್ಥಿಕ ಸ್ವಾತಂತ್ರ್ಯವೇ ವಿಚ್ಛೇದನಕ್ಕೆ ದಾರಿಯಾಗಬಾರದು.
ಹಾರ್ನ್‌ಬಿಲ್ ಹಕ್ಕಿಗಳು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು, ತನ್ನ ಕೊನೆಯ ಉಸಿರು ಇರುವವರೆಗೂ ಅದೇ ಸಂಗಾತಿಯೊಂದಿಗೆ ಜೀವನ ಸಾಗಿಸುತ್ತವಂತೆ. ಒಂದು ವೇಳೆ ಸಂಗಾತಿ ಮೃತಪಟ್ಟರೆ ಬೇರೆ ಹಕ್ಕಿಯೊಂದಿಗೆ ಸರಸ ಬೆಳೆಸದೆ, ಒಂಟಿಯಾಗಿಯೇ ಜೀವನಪೂರ್ತಿ ಬದುಕುತ್ತವಂತೆ. ಇದು ಸಂಶೋಧನೆಯಿಂದ ಸಾಬೀತಾದ ಸಂಗತಿ. ಮೂಕ ಪಕ್ಷಿಗಳೇ ಹೀಗೆ ಒಟ್ಟಾಗಿ ಸಂಸಾರ ಮಾಡುವಾಗ, ವಿದ್ಯಾವಂತರಾದ ನಾವು 'ನನ್ನ ದಾರಿ ನನ್ನದು' ಎಂದು ದೂರ ಹೋಗುವುದು ಅವಮಾನವಲ್ಲವೆ?
- ಶ್ರೀದೇವಿ ರಾಜನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


