ಕಠೋರ ಶಿಲ್ಪಿ
'ನೀನು ಯಾತಕ್ಕಾದರೂ ಬದುಕಿದ್ದೀಯಾ ಅಂತ ನನಗೆ ಗೊತ್ತಿಲ್ಲ, ಥೂ ಯೂಸ್‌ಲೆಸ್ ಫೆಲೋ... ಹೇಳಿದ ಒಂದು ಕೆಲಸಾನೂ ಸರಿಯಾಗಿ ಮಾಡಲ್ಲ...

'ನೀನು ಯಾತಕ್ಕಾದರೂ ಬದುಕಿದ್ದೀಯಾ ಅಂತ ನನಗೆ ಗೊತ್ತಿಲ್ಲ, ಥೂ ಯೂಸ್‌ಲೆಸ್ ಫೆಲೋ... ಹೇಳಿದ ಒಂದು ಕೆಲಸಾನೂ ಸರಿಯಾಗಿ ಮಾಡಲ್ಲ ನೀನು. ನಿನ್ನನ್ನ ನೋಡಿದ್ರೇ ಅಸಹ್ಯ ಅನ್ಸುತ್ತೆ ನಂಗೆ... 'ಫಟ್ ಫಟ್' ಏಟಿನ ಜತೆಗೆ ಇಂಥಾ ವಾಗ್ಝರಿ ನಮ್ಮ ಎದುರು ಮನೆಯಿಂದ ದಿನವೂ ಕೇಳಿ ಬರುತ್ತದೆ. ನಮಗದು ಸುಪ್ರಭಾತ. ಅಷ್ಟಕ್ಕೂ ಈ ಬೈಗುಳ ಏಟು ಯಾರಿಗೆ ಅಂದರೆ ಅವರು ಸಾಕಿದ ಬೆಕ್ಕಿಗಲ್ಲ, ನಾಯಿಗಲ್ಲ, ಬದಲಾಗಿ ಇನ್ನೂ ಕೇವಲ ಏಳರ ಹರೆಯದ ಪುಟ್ಟ ಹುಡುಗಿ ಅನನ್ಯಳಿಗೆ. ಆ ಎಳೆಯ ಮನಸ್ಸನ್ನು ಹೇಗೆ ನೋಡಿಕೊಳ್ಳಬೇಕೆಂಬ ಕನಿಷ್ಠ ಅರಿವೂ ಆ ಹೆತ್ತವರಿಗಿಲ್ಲ. ಮಗುವನ್ನು ಮುದ್ದಿಸುವುದಂತೂ ಅವರಿಗೆ ಗೊತ್ತೇ ಇಲ್ಲ. ಹಾಗೆಂದು ಅವರೇನೂ ಅನಕ್ಷರಸ್ಥರಲ್ಲ. ಈ ಮಗುವಿನ ತಾಯ್ತಂದೆ ಸೋ ಕಾಲ್ಡ್ ವಿದ್ಯಾವಂತರಷ್ಟೇ.
'ಹೊಡೆದು ಸಾಯಿಸಿ ಬಿಡ್ತೀನಿ ನಿನ್ನನ್ನ. ನಾಳೆ ನಿನ್ನ ಫೋಟೋ ಪೇಪರಲ್ಲಿ ಬರಬೇಕು. ನಂಗೆ ಬರ್ತಿರೋ ಕೋಪಕ್ಕೆ ನಿನ್ನನ್ನ ಸ್ಮಶಾನದಲ್ಲಿ ತಗೊಂಡೋಗಿ ಬಿಡಬೇಕು ಅನ್ನಿಸುತ್ತದೆ'. ಇದು ಸ್ವತಃ ಮಗುವಿನ ತಂದೆ ಆಕೆಗಾಡುವ ಮಾತು. ದಿಗ್ಭ್ರಮೆಯಾಗುತ್ತದಲ್ಲವೇ? ನಿಜಕ್ಕೂ ಅಂಥದ್ದೊಂದು ದಿನ ಬಂದರೆ ಇವರು ನಿಜವಾಗಿಯಾದರೂ ಅವಳ ತಾಯ್ತಂದೆ ಹೌದಾದರೆ ಎದೆಯೊಡೆಯಲಿಕ್ಕಿಲ್ಲವೇ? ಎದೆಯೆತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಅನೇಕ ತಾಯ್ತಂದೆಯರನ್ನು ನಾನು ನೋಡಿದ್ದೇನೆ. ಕಳೆದುಕೊಂಡ ಮಕ್ಕಳ ಹೆಸರೆತ್ತಿದರೇ ಅವರು ಕಂಬನಿಯ ಕಡಲಾಗುತ್ತಾರೆ.
ಗರ್ಭದಲ್ಲಿ ಪುಟ್ಟಪಾದಗಳಿಂದ ಹೊಟ್ಟೆಗೆ ಮೃದುವಾಗಿ ಒದೆಯುತ್ತಿದ್ದ, ಎದೆಯಲ್ಲಿ ಹಾಲುಕ್ಕಿ ಹರಿಯುವಾಗಿನ ನೋವನ್ನೆಲ್ಲ ತಾನೇ ಹೀರಿ ಬಿಡುವಂತೆ ಹಾಲುಣ್ಣುತ್ತಿದ್ದ, ತನ್ನ ತೊದಲು ಮಾತು, ಮುದ್ದು ಹೆಜ್ಜೆಗಳಿಂದ ಮನೆಮಂದಿಯನ್ನೆಲ್ಲ ಖುಷಿಯಾಗಿಡುತ್ತಿದ್ದ, ಶಾಲೆಯಲ್ಲಿ ಬಹುಮಾನಗಳ ಬುಟ್ಟಿಯನ್ನೇ ಬಾಚಿ ತರುವಂತೆ ಗೆಲ್ಲುತ್ತಿದ್ದ, 'ಅಮ್ಮಾ, ನನಗೊಂದು ಕೆಲಸ ಸಿಗಲಿ, ನಿಂಗೆ ಈ ಯಾವ ಕಷ್ಟಗಳೂ ಇಲ್ಲದಂತೆ ನೋಡಿಕೊಳ್ಳುತ್ತೇನೆ, ನೀನೇನೂ ಟೆನ್ಷನ್ ಮಾಡ್ಕೋಬೇಡಾ' ಎಂದೆಲ್ಲ ಧೈರ್ಯ ತುಂಬುತ್ತಿದ್ದ ಬೆಳೆದ ಮಕ್ಕಳನ್ನು ಕಳೆದುಕೊಳ್ಳುವ ಕಷ್ಟ, ಆ ಶಾಪ ಯಾರಿಗೂ ಬೇಡ. ಅಂಥದ್ದರಲ್ಲಿ ಇಲ್ಲಿ ಸ್ವತಃ ಆ ಮಗುವಿನ ಹುಟ್ಟಿಗೆ ಕಾರಣನಾದ ತಂದೆ ಮಗುವನ್ನು 'ನಾಳೆ ನಿನ್ನ ಫೋಟೋ ಪೇಪರಲ್ಲಿ ಬರುತ್ತೆ' ಎಂದು ಬೈಯ್ಯುತ್ತಾನಲ್ಲಾ, ಅವನದ್ದು ಅದೆಂಥ ವಿಕೃತ ಮನಸ್ಸು? ಅಥವಾ ಇವರ ಮಗು ಸತ್ತ ತಕ್ಷಣ ಪೇಪರಲ್ಲಿ ಫೋಟೋ ಹಾಕಿಸುವವರಾದರೂ ಯಾರು? ಮನೆಯಲ್ಲಿನ ದೌರ್ಜನ್ಯದಿಂದ ಮಗು ಅಸುನೀಗಿದರೆ ನಾಳೆ ಈತನ ಫೋಟೋವೂ ಪ್ರಕಟವಾಗಬಹುದಲ್ಲ?
ಅನನ್ಯಳ ತಾಯಿ ಅಪ್ಪಟ ಗೃಹಿಣಿ. ಹಾಗೆಂದು ಆಕೆಯನ್ನು ಗೃಹಿಣಿಯೆಂದು ಕರೆದರೆ ಆ ಹೆಸರಿಗೇ ಅವಮಾನ. ಅವಳ ತಂದೆ ಬೆಳಗ್ಗೆ 5.30ಕ್ಕೆ ಮನೆ ಬಿಟ್ಟರೆ ಹಿಂದಿರುಗುವುದು ರಾತ್ರಿಗೆ. ಆಕೆಗೆ ಅದೇನು ಹತಾಶೆಯೋ ಗೊತ್ತಿಲ್ಲ. ಆದರೆ, ಅದನ್ನೆಲ್ಲ ತೀರಿಸುವುದು ಮಗಳ ಮೇಲೆ. ಅವಳು ಶಾಲೆಯಲ್ಲಿರುವ ಹೊತ್ತಿನ ಹೊರತಾಗಿ ಉಳಿದ ಸಮಯ ಮಗಳನ್ನು ಬೈಯ್ಯುತ್ತಿರುತ್ತಾಳೆ. ಜತೆಗೆ ಹೊಡೆತ. ಅವರು ಯಾವತ್ತೂ ನಗುನಗುತ್ತಾ ಮಾತಾಡುವುದನ್ನು ಕಂಡವರೇ ಇಲ್ಲ. ಮಾತೆತ್ತಿದರೆ ಹೋಂ ವರ್ಕ್, ಸಂಗೀತ ಪಾಠ ಅಷ್ಟೇ. ಆಯಾ ತರಗತಿಗಳಿಗೆ ಅವಳನ್ನು ಕಳಿಸಿಬಿಟ್ಟು ಒಂಟಿಯಾಗಿರುತ್ತಾಳೆ ಆ ತಾಯಿ.
ಹಾಗೆಂದು ತಂದೆಯ ಸಮಸ್ಯೆ ಅರ್ಥವಾಗದ್ದು. ಸಿಗುವ ಅಲ್ಪ ಸಮಯದಲ್ಲಿ ಮಗಳಿಗೆ ತಂದೆಯ ಬಗ್ಗೆ ಪ್ರೀತಿ, ಗೌರವ ಮೂಡುವಂತೆ ಆತ ಎಂದೂ ನಡೆದುಕೊಳ್ಳುವುದಿಲ್ಲ. 'ಆ ಮಗು ಅವರದ್ದು ಹೌದೋ ಅಲ್ಲವೋ ಅಂತ ನಂಗೆ ಅನುಮಾನ ಕಣೇ. ಸ್ವಂತದ ಮಗುವಾದ್ರೆ ಯಾರಾದರೂ ಅಷ್ಟು ಕೆಟ್ಟ ಭಾಷೆಯಲ್ಲಿ ಬೈತಾರಾ? ಒಂದೋ ಆ ಮಗುವನ್ನು ದತ್ತು ತಗೊಂಡಿದ್ದಾರೆ ಅಥವಾ ಸವತಿ ಮಗು ಇರಬಹುದು. ಅದೂ ಅಲ್ಲ ಅಂದರೆ ಹೆಣ್ಣುಮಗು ಅನ್ನುವ ತಿರಸ್ಕಾರ ಇರಬಹುದು' ಅಂತ ಪಕ್ಕದ ಮನೆಯ ಹಿರಿಯರು ಹೇಳುತ್ತಿದ್ದರು. ಅದರಲ್ಲಿ ಮೂರನೇ ಕಾರಣವೇ ನಿಜವಿರಬಹುದು.
ಕೈಯ್ಯಲ್ಲಿ ಹಿಡಿದುಕೊಂಡಿದ್ದ ತಿಂಡಿಯ ತಟ್ಟೆ ಕೈಜಾರಿದ್ದಕ್ಕೆ ಪುಟ್ಟ ಮಗುವಿಗೆ ಹಿಗ್ಗಾಮುಗ್ಗಾ ಥಳಿಸುತ್ತಾಳೆ ಒಬ್ಬಳು ಚಿಕ್ಕವಯಸ್ಸಿನ ತಾಯಿ. ಆಕೆಯೋ ಬಹಳ ಮುದ್ದಿನಿಂದ ಬೆಳೆದವಳು. ಗಂಡನ ಮನೆಯವರ ಒತ್ತಾಯಕ್ಕೆಂಬಂತೆ ಎರಡು ಮಕ್ಕಳನ್ನು ಹೆತ್ತ ಅವಳಿಗೆ ಅವರಿಂದಾಗಿ ತನ್ನ ಶರೀರ ಸೌಂದರ್ಯ ಹಾಳಾಯಿತು ಎನ್ನುವ ಕೋಪ. ಅದನ್ನೆಲ್ಲ ತೀರಿಸುವುದು ತನ್ನ ನಾಲ್ಕು ವರ್ಷದ ಮಗ, ಒಂದೂವರೆ ವರ್ಷದ ಮಗಳ ಮೇಲೆ. ತಾಯಿ ಸಹನಾಮಯಿ, ಹೆಣ್ಣು ಕ್ಷಮಯಾಧರಿತ್ರಿ ಎನ್ನುವುದೆಲ್ಲ ಎಲ್ಲಿ ಮರೆಯಾಗಿ ಹೋಗುತ್ತಿದೆ?
ಬಾಲ್ಯದುದ್ದಕ್ಕೂ ಬರಿಯ ಬಯ್ಗುಳ ಕೇಳಿಕೊಂಡು ದೊಡ್ಡವಳಾಗುವ ಅನನ್ಯ ಭಿನ್ನವಾದ ವಾತಾವರಣವನ್ನಂತೂ ತನ್ನ ಮಗಳಿಗೆ ಕಲ್ಪಿಸಿಕೊಡಲಾರಳು. ಹಾಗೆಂದು ನಮ್ಮ ತಾಯಂದಿರಿಗೆ ಪಾಠ ಹೇಳುವುದೂ ಸಾಧ್ಯವಿಲ್ಲ. ಈ ಅಹಂ, ಬಿಗುಮಾನಗಳ ನಡುವೆ ಮುರುಟಿ ಹೋಗುವುದು ಮಾತ್ರ ಪುಟಾಣಿ ಹೃದಯಗಳು, ಅವುಗಳೊಳಗೆ ಅಡಗಿರುವ ವಿಶಾಲ ಮನಸ್ಸುಗಳು.
- ಆರತಿ ಪಟ್ರಮೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


