ಸ್ನೇಹಾ ಸೌಂಡ್
ಪ್ರಾದೇಶಿಕ ಸಂಗೀತದ ಅಬ್ಬರದಲ್ಲಿನ ಲಯವನ್ನು ಗ್ರಹಿಸಿ, ಒಂದು ಧ್ವನಿಯನ್ನು ಗೀತೆಗೆ ಸಜ್ಜುಗೊಳಿಸಿ ಸಂಗೀತ ಪ್ರಿಯರಿಗೆ ಉಣಬಡಿಸುವ...

ಪ್ರಾದೇಶಿಕ ಸಂಗೀತದ ಅಬ್ಬರದಲ್ಲಿನ ಲಯವನ್ನು ಗ್ರಹಿಸಿ, ಒಂದು ಧ್ವನಿಯನ್ನು ಗೀತೆಗೆ ಸಜ್ಜುಗೊಳಿಸಿ ಸಂಗೀತ ಪ್ರಿಯರಿಗೆ ಉಣಬಡಿಸುವ ಯುವ ಜನರ ಫೇವರಿಟ್ ಶೋ ಎಂಟಿವಿಯ "sound trippin'. ಎಚ್ಟಿಸಿ ಮತ್ತು ಆಲ್ಟೋ ಕೆ-10 ಪ್ರಾಯೋಜಕತ್ವದಲ್ಲಿ ಬ್ಯಾಬರ್ ಫಿಶ್ ಪ್ರೊಡಕ್ಷನ್ರಿಂದ ನಿರ್ಮಿಸಲಾಗುತ್ತಿರುವ ಸೌಂಡ್ ಟ್ರಿಪ್ಪಿನ್ ಕಾರ್ಯಕ್ರಮದ ಎರಡನೇ ಸೀಸನ್ ಶುರುವಾಗಿದೆ. ಈ ಕಾರ್ಯಕ್ರಮವನ್ನು ನಿರೂಪಿಸಿ, ಜನರ ಮೆಚ್ಚುಗೆಗೆ ಪಾತ್ರರಾದ ಉದಯೋನ್ಮುಖ ಸಂಗೀತ ನಿರ್ದೇಶಕಿ 28 ವರ್ಷದ ಸ್ನೇಹಾ ಕನ್ವಾಳಕರ್.
ಮಧ್ಯ ಪ್ರದೇಶದ ಇಂದೋರ್ನಲ್ಲಿ ಜನಿಸಿದ ಸ್ನೇಹಾ, ಭಾರತೀಯ ಸಂಗೀತ ಲೋಕದ ಉದಯೋನ್ಮುಖ ಪ್ರತಿಭೆ. ತಾಯಿಯ ಕುಟುಂಬದವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗ್ವಾಲಿಯರ್ ಘರಾಣಾ ಆಸಕ್ತಿಯುಳ್ಳವರಾಗಿದ್ದರು. ಈ ಕಾರಣದಿಂದ ಬಾಲ್ಯದಿಂದಲೇ ಸಂಗೀತದತ್ತ ಆಸಕ್ತಿ ಮೂಡಿದ್ದು ಸಹಜ. 2001ರಲ್ಲಿ ಕುಟುಂಬ ಸಮೇತರಾಗಿ ಮುಂಬೈಗೆ ಬಂದರು. ಆ್ಯನಿಮೇಷನ್ನಲ್ಲಿ ತೊಡಗಿಕೊಂಡರು. ಚಿತ್ರ ನಿರ್ದೇಶಕಿಯಾಗಬೇಕೆಂದು ಬಯಸಿದ್ದ ಸ್ನೇಹಾಗೆ ಬರಬರುತ್ತ ಸಂಗೀತದತ್ತ ಒಲವು ಹೆಚ್ಚಾಯ್ತು.
ಸಾಧನೆ
ಒಯ್ ಲಕ್ಕಿ- ಲಕ್ಕಿ ಓಯ್ ಮತ್ತು ಗ್ಯಾಂಗ್ಸ್ ಆಫ್ ವಾಸೇಪುರ ಚಲನಚಿತ್ರಕ್ಕೆ 'ಉತ್ತಮ ಸಂಗೀತ' ಪ್ರಶಸ್ತಿಗೆ ಭಾಜನರಾದರು. ಈ ಸಿನಿಮಾ 58ನೇ ಫೀಲಂ ಫೇರ್ ಅವಾರ್ಡ್ಗೆ ನಾಮನಿರ್ದೇಶನಗೊಂಡಿತ್ತು. 28 ವರ್ಷಗಳ ತರುವಾಯ ಉತ್ತಮ ಸಂಗೀತ ನಿರ್ದೇಶಕಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಹಿಳಾ ಸಂಗೀತ ನಿರ್ದೇಶಕರಲ್ಲಿ ಇವರು ಎರಡನೆಯವರು.
ವಿಭಿನ್ನ ಶೈಲಿಯಲ್ಲಿ ಸಂಗೀತ ಸಂಯೋಜಿಸುವ ಮಾಂತ್ರಿಕತೆ ಅವರ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ. ಯಾರನ್ನೂ ಅನುಕರಿಸದೆ, ತನ್ನದೇ ಶೈಲಿಯಲ್ಲಿ ಸಮಕಾಲೀನತೆಗೆ ಒಗ್ಗುವಂಥ ಸಂಗೀತ ಸೃಷ್ಟಿಸಿ, ತಮ್ಮ ಹೆಸರನ್ನು ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ. ಇತ್ತೀಚೆಗೆ 'ಬೊಂಬೆಗಳ ನಗರಿ' ಚನ್ನಪಟ್ಟಣಕ್ಕೂ ಭೇಟಿ ನೀಡಿ, ಗೊಂಬೆಗಳ ಸಹಿತ ಗೀತೆಯನ್ನು ರಚಿಸಿ, ಸಂಗೀತ ಸಂಯೋಜಿಸಿ ಅದನ್ನು ಪ್ರಸ್ತುತ ಪಡಿಸಿದ ರೀತಿ ನಿಜಕ್ಕೂ ಅನನ್ಯ.
ಅವಳು ಮೊದಲ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶನವು ರಾಮ್ಗೋಪಾಲ್ ವರ್ಮಾ ಅವರ 'ಗೋ' ಚಿತ್ರದ ಮೂಲಕ ಆರಂಭವಾಯಿತು. ಇಲ್ಲಿಂದಲೇ ಅವರು ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕಿಯಾಗಿ ಬೆಳಕಿಗೆ ಬಂದರು. ಪ್ರಸ್ತುತ ಭಾರತೀಯ ಸಂಗೀತ ಕ್ಷೇತ್ರದಲ್ಲಿ 'ಅತ್ಯಂತ ಕಿರಿಯ ಸಂಗೀತ ನಿರ್ದೇಶಕಿ' ಇವರು. 2010ರಲ್ಲಿ ತೆರೆ ಕಂಡ 'ಲವ್ ಸೆಕ್ಸ್ ಧೋಕಾ' ಚಿತ್ರಕ್ಕೆ ನೀಡಿದ ಸಂಗೀತವೂ ಒಂದು ಮೈಲುಗಲ್ಲಾಗಿದೆ.
ಎಂಟಿವಿ ಸೌಂಡ್ ಟ್ರಿಪ್ಪಿನ್
ಈ ಕಾರ್ಯಕ್ರಮ ಸಮಕಾಲೀನ ಸಂಗೀತಾಸಕ್ತರಲ್ಲಿ ಅವರ ಆತ್ಮದ ಉನ್ನತೀಕರಣವನ್ನು ಸ್ನೇಹಾ ಸಂಗೀತದ ಮೂಲಕ ಸಾಧಿಸಿದ್ದಾರೆ. ಸಂಗೀತದಲ್ಲಿ ಹಲವು ಪ್ರಯೋಗಳನ್ನು ಮಾಡುತ್ತಲೇ ಸಂಗೀತದ ವೈಶಿಷ್ಟ್ಯ, ಲಯಗಾರಿಕೆಯನ್ನು ಕಂಡುಕೊಳ್ಳುವಲ್ಲಿ, ಆ ಮೂಲಕ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ಪ್ರವೀಣರಾಜು ಎಸ್. ಸೊನ್ನದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


