ದೊಡ್ಡವಳಾದಳು!
'ಟೂ ಟೂ...' ಬೆರಳುಗಳೆರಡನ್ನೂ ಮುಂದೆ ಮಾಡಿ, ನಾಲಗೆ ಚಾಚಿ ಅಣಕಿಸಿ ಮುನಿಸಿನಿಂದ ಓಡಿಹೋಗುತ್ತಿದ್ದ ನನ್ನ 'ಗೊಂಬೆ' ಇಂದು...

'ಟೂ ಟೂ...' ಬೆರಳುಗಳೆರಡನ್ನೂ ಮುಂದೆ ಮಾಡಿ, ನಾಲಗೆ ಚಾಚಿ ಅಣಕಿಸಿ ಮುನಿಸಿನಿಂದ ಓಡಿಹೋಗುತ್ತಿದ್ದ ನನ್ನ 'ಗೊಂಬೆ' ಇಂದು ದೊಡ್ಡವಳಾಗಿಬಿಟ್ಟಿದ್ದಾಳೆ. ಅಂದೆಲ್ಲ 'ಟೂ' ಮಾಡಿ ಹೋದ ಕ್ಷಣದಲ್ಲಿ ಓಡಿಬಂದು ಮಡಿಲು ಸೇರುತ್ತಿದ್ದವಳು ಇಂದು ಕೋಪ ಮಾಡಿಕೊಂಡ್ರೆ ದಬಾರೆಂದು ರೂಮಿನ ಬಾಗಿಲು ಹಾಕ್ಕೊಂಡುಬಿಡ್ತಾಳೆ.
'ಬಾಗಿಲು ತೆಗಿಯೇ...' ಅಂದ್ರೆ ಜಪ್ಪಯ್ಯ ಅಂದ್ರೂ ತೆಗಿಯೋದಿಲ್ಲ. ಆಗೆಲ್ಲ ರೂಮಿಗೆ ಚಿಲಕ ಇರ್ಲೇಬಾರ್ದಿತ್ತು ಅಂತ ಅನ್ಸುತ್ತೆ. ಜತೆಗೆ ಭಯಾನೂ... ಹದಿಹರೆಯದ ಹುಡುಗಿ... ಕೋಪದಲ್ಲಿ ಏನಾದ್ರೂ ಮಾಡ್ಕೊಂಡ್ಬಿಟ್ರೆ...?! ಮೊಬೈಲ್ ಕೊಡ್ಸಿಲ್ಲ ಅಂತಾನೋ, ಟಿವಿ ಚಾನೆಲ್ ಚೇಂಜ್ ಮಾಡಿದ್ದಕ್ಕೋ ಸಿಟ್ಟಿನಿಂದ ಆತ್ಮಹತ್ಯೆ ಮಾಡ್ಕೊಂಡ್ರಂತೆ ಅಂತ ಕೇಳಿದ್ದೀನಲ್ಲಾ.... ಅದ್ಕೇ ಎದೆ ಪುಕಪುಕ ಅನ್ನುತ್ತೆ.
ಅದೇನು ಮಾತು... ಮೊಬೈಲ್ನಲ್ಲಿ ಗಂಟೆಗಟ್ಲೆ ಮಾತು! ಯಾರು ಅಂತ ಕೇಳಿದ್ರೆ 'ಅದೆಲ್ಲ ನಿಂಗ್ಯಾಕೆ' ಅಂತ ಸಿಟ್ಟಾಗ್ತಾಳೆ. ಅವ್ಳು ಬಾತ್ರೂಂಗೆ ಹೋದಾಗ ಅವಳ ಮೊಬೈಲ್ ನೋಡ್ತೀನಿ. ಅವ್ಳು ಒಳ್ಳೆ ಮೂಡ್ನಲ್ಲಿದ್ದಾಗ ಮೆಲ್ಲನೆ ಮೈದಡವಿ ಕೇಳ್ತೀನಿ, 'ಮೋನಿಕಾ ಯಾರೆ? ನಿನ್ನ ಹೊಸ ಫ್ರೆಂಡಾ? ಯಾವ ಬೀದೀಲಿರೋದು ಅವ್ಳು? ಪ್ರವೀಣ್ ನಿನ್ನ ಕ್ಲಾಸ್ಮೇಟ್ ಅಲ್ವಾ? ಪ್ರಾಜೆಕ್ಟನ್ನ ನೀನೂ- ಅವ್ನೂ ಜತೆಗೇ ತಾನೆ ಮಾಡಿದ್ದು...?'
ಹಾಗೆ ಕೇಳಿದರೆ, ಸ್ಪೈ ಮಾಡೋಕೆ ಶುರುಮಾಡಿಬಿಟ್ಯಾ ಅಂತ ಬೊಬ್ಬೆ ಹೊಡೀತಾಳೆ. ಆದ್ರೂ ಕೆಲವೊಮ್ಮೆ 'ಹೌದಮ್ಮ. ಅವ್ರೆಲ್ಲ ನನ್ನ ಹೊಸ ಫ್ರೆಂಡ್ಸ್...' ಅಂತಾಳೆ. ಅವರ ಊರುಕೇರಿ ಕೇಳುವಂತಿಲ್ಲ. ಕೆಲವೊಮ್ಮೆ ಗರಂ ಆಗಿಬಿಡ್ತಾಳೆ. 'ಬರೀ ಅನುಮಾನವಮ್ಮಾ ನಿಂಗೆ. ಯಾವ ಕಾಲದಲ್ಲಿದ್ದೀಯಾ ನೀನು? ನಾನು ಎಲ್ಲಾದ್ರೂ ಓಡಿಹೋಗ್ತೀನಾ? ಹಳೇ ಕಾಲದ ಅಜ್ಜಿ ಥರ ಆಡ್ತೀಯಾ...' ಅಂತ ಕೂಗಾಡ್ತಾಳೆ. ಅವ್ಳಿಗೆ ಹೇಗೆ ಅರ್ಥ ಆಗ್ಬೇಕು ನನ್ನ ಸಂಕ್ಟ? ಈಗಷ್ಟೇ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದ್ದಾಳೆ. ಒಳ್ಳೇದು ಯಾವ್ದು, ಕೆಟ್ಟದ್ದು ಯಾವ್ದು ಅಂತ ತಿಳಿಯೋ ವಯಸ್ಸಾ ಇದು?
ಮೊನ್ನೆ ಮೊನ್ನೆ ಕಾಡಿಸಿ ಪೀಡಿಸಿ ಗಾಡಿ ತೆಗೆಸ್ಕೊಂಡ್ಲು. ಅವ್ಳು ಗಾಡಿ ಬಿಡೋದು ನೋಡಿದ್ರೆ 'ಇವ್ಳಿಗೇನು ಭಯಾನೇ ಇಲ್ವಾ?' ಅಂತ ಅನ್ಸಿಬಿಟ್ಟಿತ್ತು. ಹೇಳಿದ್ರೆ 'ಎಂಥ ಪುಕ್ಕಲು ನೀನು' ಅಂತ ನನ್ನೇ ಗೇಲಿ ಮಾಡ್ತಾಳೆ. ಆದ್ರೆ ನನ್ನನ್ನ ಎಲ್ಲಿ ಬೇಕೋ ಅಲ್ಲಿಗೆ ಕರ್ಕೊಂಡು ಹೋಗ್ತಾಳೆ. ನಂಗೆ ಏನು ಬೇಕೋ ಅದನ್ನ ಹತ್ತು ನಿಮಿಷದಲ್ಲಿ ತಂದ್ಕೊಡ್ತಾಳೆ.
ಟಚ್ಸ್ಕ್ರೀನ್ ಮೊಬೈಲ್ ಬೇಕೇಬೇಕು ಅಂತ ಹಠಹಿಡಿದು ತೆಗೆಸ್ಕೊಂಡ್ಲು. ಅದೊಂದು ದಿನ ಟೆರೇಸ್ ಕಟ್ಟೆ ಮೇಲೆ ಕೂತ್ಕೊಂಡು ಮೊಬೈಲಲ್ಲಿ ಹರಟೆ ಹೊಡೀತಿರ್ಬೇಕಾದ್ರೆ ಕೈಯಿಂದ ಜಾರಿ ಕೆಳಗೆ ಬಿದ್ದುಹೋಯ್ತು. ಮೊಬೈಲೂ ಹೋಯ್ತು, ಹದಿನೈದು ಸಾವಿರಾನೂ ಢಮಾರ್! 'ದುಡ್ಡಿನ ಬೆಲೆ ಗೊತ್ತಿಲ್ಲ ನಿಂಗೆ...' ಇವ್ರು ಒಂದೇ ಮಾತಲ್ಲಿ ಬೈದುಬಿಟ್ರು. ಹಾಗಂದಿದ್ದೇ ಸಾಕಾಯ್ತು, ರಾತ್ರಿ ಊಟ ಬಿಟ್ಬಿಟ್ಲು. ಯಾಕೆ ಅಂತ ಕೇಳಿದ್ದಕ್ಕೆ 'ಪಪ್ಪಾನ ಹಣ ಉಳಿತಾಯ ಮಾಡ್ತಿದೀನಿ' ಅಂದ್ಲು! ದಿನವಿಡೀ ಮನೆಯಿಂದ ಹೊರಗೇ ಇರ್ತಾಳೆ. ಬೆಳಗ್ಗೇನೂ ಸರಿಯಾಗಿ ತಿನ್ನಲ್ಲ, ಮಧ್ಯಾಹ್ನ ಡಬ್ಬೀಲಿರೋ ಒಂದೆರಡು ಚಪಾತಿ ತಿಂದ್ರೆ ಊಟ ಆಗಿಹೋಯ್ತು. ಎಲ್ರೂ ಕೂತ್ಕೊಂಡು ಸರಿಯಾಗಿ ಊಟ ಮಾಡೋದು ಅಂದ್ರೆ ರಾತ್ರೀನೇ. ಅದೂ ಬೇಡ ಅಂದ್ರೆ ಅಪ್ಪ ಅಮ್ಮನ ಕರುಳು ಚುರುಕ್ ಅನ್ನಲ್ವಾ? ಅವ್ಳನ್ನು ಓಲೈಸಿ ಊಟ ಮಾಡಿಸುವಷ್ಟರಲ್ಲಿ ಸಾಕೋ ಸಾಕಾಗುತ್ತೆ. ಇನ್ನೊಂದು ಮೊಬೈಲ್ ಕೈಗೆ ಬಂದ್ಮೇಲೇನೇ ಅವ್ಳು ಊಟಕ್ಕೆ ಕೂತ್ಕೊಂಡಿದ್ದು!
ಆದ್ರೆ ಓದಿನ ವಿಷಯದಲ್ಲಿ ಮಾತ್ರ ನಾನು ಒಂದಿನಾನೂ ಗಟ್ಟಿ ದನಿ ಎತ್ತಿದ್ದೇ ಇಲ್ಲ. ರಾತ್ರಿಯಿಡೀ ಓದ್ತಾಳೆ. ಈವರೆಗೂ ಡಿಸ್ಟಿಂಕ್ಷನ್ ಕೆಳಗೆ ಬಂದಿದ್ದೇ ಇಲ್ಲ. ಓದಿನ ನಡುವೆ ಟುಕು ಟುಕು ಅಂತ ಫ್ರೆಂಡ್ಸ್ಗೆ ಮೆಸೇಜ್ ಮಾಡೋದು... ಏನ್ ಮೊಬೈಲ್ ಹುಚ್ಚೋ..! ಸಿಟ್ಟು ಸದಾ ಮೂಗಿನ ಮೇಲೇ. ಮಗುವನ್ನು ಮುದ್ದಿಸಿದ್ದು ಹೆಚ್ಚಾಯ್ತಾ? ಮುದ್ದಿನ ಗೊಂಬೆಯಂತೆ ಬೆಳೆಸಿದ್ದು ತಪ್ಪಾಯ್ತಾ? ಒಂದೂ ಅರ್ಥವಾಗದೆ ಮೌನದ ಮೊರೆ ಹೋಗ್ತೀನಿ, ಕೆಲವೊಮ್ಮೆ ಕಂಬನಿಯಾಗ್ತೀನಿ...ಹೇಳಿ, ನಿಮ್ಮ ಮಕ್ಕಳೂ ಹೀಗೇ ಮಾಡ್ತಾರಾ?
- ರಾಜೇಶ್ವರಿ ಜಯಕೃಷ್ಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


