ಉತ್ತರಕುಮಾರಿ

'ಅಮ್ಮ ಪ್ಲೀಸ್ ಈಗಲೇ ಮದುವೆ ಬೇಡಮ್ಮ. ನಾನಿನ್ನೂ 2-3 ವರ್ಷ ಮದುವೆ ಆಗಬಾರ್ದು ಅಂದ್ಕೊಂಡಿದ್ದೀನಿ'.
'ನೋಡು ವಾಣಿ ಸುಮ್ನೆ ಹಟ ಮಾಡಬೇಡ್ವೆ. ಹುಡ್ಗ ಒಳ್ಳೆ ನೌಕರಿಲಿ ಇದಾನಂತೆ, ಮನೆಕಡೆನೂ ಚೆನ್ನಾಗಿದ್ದಾರೆ. ಬೇಗ ಹೋಗಿ ರೆಡಿಯಾಗು, ಮೊನ್ನೆ ನಿಂಗೋಸ್ಕರ ಹೊಸ ಸೀರೆ ತಗೊಂಡಿದ್ದೆ. ಅದನ್ನೇ ಉಟ್ಕೊಂಡು ಬೇಗ ಬಾ.'
'ಅಮ್ಮ ಸೀರೆ ಉಟ್ಕೋಬೇಕಾ..?'
'ಹ್ಞುಂ ಕೇಳಿದ್ನೇ ಕೇಳಬೇಡ, ಬೇಗ ಬಾ. ನಾನ್ ಅವರ್ಗೆ ತಿಂಡಿ, ಕಾಫಿ ರೆಡಿ ಮಾಡ್ತೀನಿ.'
ಇದು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿ ತಾಯಿ-ಮಗಳ ನಡುವೆ ನಡೆಯುವ ಸಂಭಾಷಣೆ. ಬೆಳೆದ ಮಗಳು ಮನೆಯಲ್ಲಿದ್ದರೆ ತಂದೆ- ತಾಯಿಗೆ ಮದುವೆಯ ಚಿಂತೆ. ಶ್ರಾವಣ ಮಾಸ ಬಂತೆಂದರೆ ಸಾಕು, ನನ್ನಂಥವರಿಗೆ ಮುಜುಗರವೋ ಮುಜುಗರ. ಯಾರಿಗೆ ಬೇಕಪ್ಪ ಈ ಪ್ರದರ್ಶನ ಎನಿಸುತ್ತದೆ. ಬಂದ ಗಂಡು ಒಪ್ಪಿಗೆಯಾಗಲೀ, ಬಿಡಲಿ, ಕೈಯಲ್ಲಿ ಕಾಫಿ, ತಿಂಡಿ ಹಿಡಿದು ನಾಚಿ ನಿಲ್ಲುವುದು ಮಾತ್ರ ನಮಗೆ ಕಡ್ಡಾಯ ಬಂದವನೆದುರಿಗೆ ನಮಗೆ ಇಷ್ಟವಾಗಲೀ, ಇಲ್ಲದೇ ಇರಲೀ ನಯ, ವಿನಯ, ಪ್ರದರ್ಶಿಸಬೇಕು, ಮುಖದಲ್ಲಿ ಗಾಂಭೀರ್ಯ ತುಂಬಿ ತುಳುಕುತ್ತಿರಬೇಕು.
ಹುಡುಗಿಯು ನೋಡಲು ಬೆಳ್ಳಗಿದ್ದು, ಸುಂದರವಾಗಿರಬೇಕು. ಕೈಗೆ ಬಳೆ ತೊಟ್ಟಿರಬೇಕು, ಅದರಲ್ಲೂ ಗಾಜಿನ ಬಳೆಯೇ ಆಗಿರಬೇಕು. ಹೂವನ್ನು ಮುಡಿದಿರಲೇಬೇಕು. ಕೂದಲು ಅಲುಗಾಡದ ಹಾಗೆ ತಲೆಯನ್ನು ಬಾಚಿರಬೇಕು. ತಲೆ ತಗ್ಗಿಸಿ ನಡೆಯಬೇಕು. ಓಡಾಡುವಾಗ ಇರುವೆ ಸಾಯದಂತೆ ಕಾಲಿಟ್ಟು ಅವರ ಎದುರಿಗೆ ತಾನು ಮುಗ್ಧೆ, ತನಗೇನೂ ತಿಳಿಯದು ಎಂಬ ಸಂದೇಶ ಸಾರಬೇಕು. ಒಂದೊಮ್ಮೆ ಹುಡುಗನ ಮನೆಯವರಿಗೆ ಒಪ್ಪಿಗೆಯಾದರೆ ಹುಡುಗಿಯನ್ನು 'ಏನಮ್ಮಾ ಹುಡುಗಾ ಇಷ್ಟವಾದನಾ?' ಎಂದು ಕೇಳುವ ಸೌಜನ್ಯವನ್ನಾದರೂ ತೋರಿಸುತ್ತಾರೆ. ಆದರೆ, ಅಪ್ಪ ಅಮ್ಮ ಬಿಡಬೇಕಲ್ಲಾ ಆ ಪ್ರಶ್ನೆಗೆ ಏನು ಉತ್ತರ ನೀಡಬೇಕೆಂದು ತರಬೇತಿ ನೀಡಿರುತ್ತಾರೆ. 'ನನ್ನದೇನೂ ಇಲ್ಲಾ, ನಮ್ಮ ಅಪ್ಪ ಅಮ್ಮ ಹೇಗೆ ಹೇಳುತ್ತಾರೆಯೋ ಹಾಗೆ' ಎಂದು ಅಡುಗೆ ಮನೆಗೆ ಕಾಲು ಕೀಳಬೇಕು. ಹೆಣ್ಣಿಗೂ ಅಡುಗೆ ಮನೆಗೂ ನಾಚಿಕೆಗೂ ಅದೆಂಥ ಸಂಬಂಧ ಮಾಮರಕ್ಕೂ ಮಲ್ಲಿಗೆ ಬಳ್ಳಿಗೂ ಇದ್ದ ಹಾಗೆ. ಅಬ್ಬಾ ಇದೆಂಥ ಕಟ್ಟುನಿಟ್ಟು!
ಕೆಲವೊಮ್ಮೆ ಮದುವೆಯಾಗುವವರು ನಾವೋ, ನಮ್ಮ ತಂದೆ- ತಾಯಿಯೋ ಅನ್ನುವ ಗೊಂದಲ ಕಾಡುತ್ತದೆ. ಸಿದ್ಧ ಉತ್ತರಗಳೊಂದಿಗೆ ಬರುವ ಹತ್ತಾರು ಸಂಬಂಧಗಳಿಗೆ ತೆರೆದುಕೊಂಡಿರಬೇಕಾಗುತ್ತದೆ. ಹಾಗೆಂದು ನಾವೇ ನೋಡಲು ಬಂದ ಹುಡುಗನನ್ನು ನೋಡುವ ಹಾಗಿಲ್ಲ. ಹುಡುಗಿ ಗಂಡುಬೀರಿ ಎಂದುಕೊಳ್ಳುತ್ತಾರೆ ಎಂಬ ಆತಂಕ ನಮ್ಮ ಹೆತ್ತವರಿಗೆ. ಅವರ ಕಾಲಕ್ಕೂ ನಮ್ಮ ಕಾಲಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಸುತಾರಾಂ ಒಪ್ಪಿಕೊಳ್ಳಲಾರರು. ಹೇಳಹೊರಟರೆ 'ನಮ್ಮೆದುರು ನಿಂತು ವಾದಿಸಲಿ ಅಂತಾನಾ ನಿನ್ನನ್ನು ಕಷ್ಟಪಟ್ಟು, ಉಪವಾಸ ಬಿದ್ದು ಓದಿಸಿದ್ದು?' ಎಂಬ ಬ್ರಹ್ಮಾಸ್ತ್ರ ಪ್ರಯೋಗ.
ಹೆಣ್ಣು ನೋಡುವ ತಯಾರಿಯೇ ನಮಗೆ ವಿಚಿತ್ರವೆನಿಸುತ್ತದೆ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಮಗೂ ಹೊಸ ದಾರಿ ಕಂಡುಕೊಳ್ಳಬೇಕು ಅನ್ನಿಸುತ್ತದೆ. ಏನು ಅಂತಿರಾ, ಲವ್ ಮ್ಯಾರೇಜ್. ಲವ್ವಲ್ಲಿ ಇಂಥ ತಲೆನೋವೇ ಇರಲ್ಲ. (ಹಾರ್ಟ್ ನೋವಿರುತ್ತೆ ಬಿಡಿ, ಅದು ಬೇರೆ ವಿಚಾರ.) ಆದ್ರೂ ನಮ್ಮತನವನ್ನ ಬಿಟ್ಟು ಯಾರನ್ನೋ ಒಪ್ಪಿಸೋ, ಮೆಚ್ಚಿಸೋ ಪ್ರಯತ್ನ ಇರಲ್ಲ. ನಮ್ಮ ಅಪ್ಪಾಮ್ಮನ್ನ ಒಪ್ಪಿಸೋದು, ಹುಡುಗ ಅವನ ಅಪ್ಪಾಮ್ಮನ್ನ ಒಪ್ಪಿಸೋದು ಸಾಧ್ಯವಾದರೆ ಸಾಕು ಲವ್ ಮಾಡೋದು ಎಷ್ಟು ಫಾಸ್ಟ್ ಅಂದ್ರೆ ಡುಂಡಿರಾಜರ 'ಅವಳು ಸಿಕ್ಕಳು, ನನ್ನ ನೋಡಿ ನಕ್ಕಳು, ನಮಗೀಗ ಇಬ್ಬರು ಮಕ್ಕಳು' ಅನ್ನೋ ಹನಿಯಂತೆ. ಈಗ ಮಾಡರ್ನ್ ಆಗಿ 'ಲವ್ ಅಟ್ ಫಸ್ಟ್ ಸೈಟ್' ಆಗಿಬಿಟ್ಟಿದೆ. ಸಿನಿಮೀಯ ಸ್ಟೈಲ್‌ನಲ್ಲಿ ಒಂದು ಸ್ಮೈಲ್. ಅರೇಂಜ್ ಮ್ಯಾರೇಜ್‌ನಲ್ಲಿ ಹುಡುಗಿಗೆ ಇರಬೇಕಾದ ಗುಣಗಳಲ್ಲಿ ಯಾವ ಗುಣಗಳೂ ಇಲ್ಲಿ ಲೆಕ್ಕಕ್ಕೆ ಬರೋದಿಲ್ಲ. ಹಾಗಂತ ನಾವ್ ಹೇಳ್ತಿರೋದಂತೂ ಖಂಡಿತಾ ಅಲ್ಲ, ಅವರೇ ಒಪ್ಪಿಕೊಂಡಿರೋ ಸತ್ಯ ಇದು. ಅರೇಂಜ್ ಅಥವಾ ಲವ್ ಮ್ಯಾರೇಜ್ ಯಾವುದೇ ಆಗಲಿ ಆದರೆ ಮದುವೆ ಆಗುವವರು ಮಾತ್ರ ಹುಡುಗಾ, ಹುಡುಗಿಯೇ ತಾನೆ? ಜೀವನದಲ್ಲಿ ಸೋತು, ಗೆದ್ದರೆ ಸ್ವರ್ಗಸುಖ.
- ರಮ್ಯಶ್ರೀ .ಜಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


