ಜಾಗತಿಕ ಸಮಸ್ಯೆ!
'ಚಿಕ್ಕ ಕುಟುಂಬ ಚೊಕ್ಕ ಕುಟುಂಬ' ಇದ್ದರೂ ಬೆಂಗಳೂರಿನಂಥ ನಗರಗಳಲ್ಲಿ ವಾಸಿಸುವುದು ಸುಲಭದ ಮಾತಲ್ಲ. ದಿನಬಳಕೆಯ ವಸ್ತುಗಳ ಜತೆಗೆ...

ಜಗತ್ತಿನಲ್ಲಿ ಇಂದು ಪ್ರಗತಿಯ ಜತೆಗೆ ಸಮಸ್ಯೆಗಳೂ ಬೆಟ್ಟದಷ್ಟಾಗಿವೆ. ದಿನದಿಂದ ದಿನಕ್ಕೆ ಜನಸಂಖ್ಯೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಇದ್ದ ಜಾಗದಲ್ಲೇ 'ಅಡ್ಜಸ್ಟ್' ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸಾಯುವ ಮೊದಲು ಆರಡಿ ಮೂರಡಿ ಜಾಗ ಗುರುತಿಸಿಕೊಳ್ಳುವ ದುಃಸ್ಥಿತಿ ಇದೆ!
'ಚಿಕ್ಕ ಕುಟುಂಬ ಚೊಕ್ಕ ಕುಟುಂಬ' ಇದ್ದರೂ ಬೆಂಗಳೂರಿನಂಥ ನಗರಗಳಲ್ಲಿ ವಾಸಿಸುವುದು ಸುಲಭದ ಮಾತಲ್ಲ. ದಿನಬಳಕೆಯ ವಸ್ತುಗಳ ಜತೆಗೆ ಐಷಾರಾಮಿ ಬದುಕಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ತಲೆನೋವಿನ ಸಂಗತಿ. ಲಭ್ಯವಿರುವ ಪುಟ್ಟ ಜಾಗದಲ್ಲೇ ಎಲ್ಲವನ್ನೂ ಹೊಂದಿಸುವುದು ಸವಾಲಿನ ಮಾತು. ಅದಕ್ಕಾಗಿಯೇ ಪುಟ್ಟ ಮನೆಯ ಅಂದ ಹೆಚ್ಚಿಸುವುದರ ಜತೆಗೆ ಇರುವ ಜಾಗದಲ್ಲೇ ಎಲ್ಲವನ್ನೂ ನೀಟಾಗಿ ಹೊಂದಿಸಿಡಲು 'ಜಾಗ ಉಳಿಸುವ ತಂತ್ರ'ಗಾರಿಕೆ ಹೆಚ್ಚಾಗಿದೆ.
ಏನಿದು ಹೊಸ ತಂತ್ರ?
ಮನೆಗೆ ಕುರ್ಚಿ, ಮೇಜು, ಸೋಫಾ, ಮಂಚ ಸೇರಿದಂತೆ ಇನ್ನಿತರ ವಸ್ತುಗಳು ಅವಶ್ಯಕ. ಇವುಗಳಿಗೆ ಸಾಕಷ್ಟು ಜಾಗ ಬೇಕಾಗುತ್ತದೆ. ಮನೆ ಚಿಕ್ಕದಿದೆಯೆಂದು ಈ ವಸ್ತುಗಳನ್ನು ಕೊಳ್ಳದೇ ಇರಲು ಸಾಧ್ಯವಿಲ್ಲ. ಅದಕ್ಕಾಗಿ ಇದೇ ವಸ್ತುಗಳಲ್ಲೇ ಇನ್ನಿತರೆ ವಸ್ತುಗಳನ್ನು ಜೋಡಿಸಿಡಲು ವ್ಯವಸ್ಥೆ ಮಾಡಲಾಗುತ್ತದೆ.
ಸೋಫಾ ಕೇವಲ ಕುಳಿತುಕೊಳ್ಳಲು ಬಳಸಲಾಗುತ್ತದೆ. ಮೇಲ್ಗಡೆ ಕುಷನ್ ಹಾಕಿ ಅಂದವಾಗಿಸಿದ್ದರೆ ಅದರ ಕೆಳ ಭಾಗದಲ್ಲಿ ಖಾಲಿ ದೊರೆಯುವ ಖಾಲಿ ಸ್ಥಳದಲ್ಲಿ ಪ್ಲೈವುಡ್‌ನಿಂದ ರ್ಯಾಕ್ ರೀತಿ ವಿನ್ಯಾಸ ಮಾಡಲಾಗುತ್ತದೆ. ಈ ಜಾಗದಲ್ಲಿ ಮನೆಯಲ್ಲಿರುವ ಪುಸ್ತಕ, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಜೋಡಿಸಬಹುದು.
ಮಂಚದಲ್ಲೂ ಅಷ್ಟೇ. ರೂಮ್‌ನಲ್ಲಿ ದೊಡ್ಡದಾದ ಮಂಚ ಹಾಕಿದರೆ ಅದರ ಕೆಳಭಾಗವೆಲ್ಲಾ ಖಾಲಿ ಬಿದ್ದಿರುತ್ತದೆ. ಆದರೆ, ಪ್ಲೈವುಡ್‌ನಿಂದ ಸಣ್ಣ ಸಣ್ಣ ರ್ಯಾಕ್‌ಗಳನ್ನು ಮಾಡಿಕೊಂಡರೆ ಅಲ್ಲಿ ಬಟ್ಟೆ, ವಿವಿಧ ದಾಖಲೆ ಪತ್ರಗಳು, ಕಚೇರಿಗೆ ಸಂಬಂಧಿಸಿದ ಫೈಲ್‌ಗಳು, ಮಕ್ಕಳ ವಸ್ತುಗಳನ್ನು ನೀಟಾಗಿ ಜೋಡಿಸಿಡಬಹುದು. ಇದರಿಂದ ಜಾಗವೂ ವಿನಾಕಾರಣ ಹಾಳು ಬೀಳುವುದಿಲ್ಲ ಜತೆಗೆ ರೂಮ್ ಕೂಡ ಅಂದವಾಗಿರುತ್ತದೆ. ಜಿರಳೆಗಳು ಸೇರದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮನೆಯ ಹಾಲ್‌ಗಳಲ್ಲಿ ಇಟ್ಟಿರುವ ದಿವಾನ್ ಕಾಟಗಳ ಅಡಿಯಲ್ಲೂ ಇದೇ ರೀತಿ ಮಾಡಿದರೆ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬಹುದು.
ಅಡುಗೆಮನೆಗೆ ಎಷ್ಟು ಜಾಗವಿದ್ದರೂ ಸಾಲದು. ಅದಕ್ಕಾಗಿ ಮನೆ ನಿರ್ಮಿಸುವಾಗ ಸಬ್ಜಾ ಹಾಕುವ ಬದಲು ಪ್ಲೈವುಡ್ ಮೂಲಕ ಸಣ್ಣ ಸಣ್ಣ ಕಬೋರ್ಡ್‌ಗಳನ್ನು ನಿರ್ಮಿಸಿ. ಗೋಡೆಯ ನಾಲ್ಕೂ ದಿಕ್ಕುಗಳಲ್ಲಿ ಈ ರೀತಿಯ ರ್ಯಾಕ್‌ಗಳಲ್ಲಿ ಅಡುಗೆಮನೆಯಲ್ಲಿರುವ ಸಣ್ಣಪುಟ್ಟ ಸಾಮಗ್ರಿ, ಡಬ್ಬಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ಜೋಡಿಸಿಡಬಹುದು.
ಮನೆಯ ಒಳಗಡೆ ಪ್ರವೇಶಿಸುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಾದರಕ್ಷೆಗಳನ್ನು ಕಂಡರೆ ಎಲ್ಲರಿಗೂ ಕಸಿವಿಸಿಯಾಗುತ್ತದೆ. ಅದಕ್ಕಾಗಿ ಮನೆಯ ಹೊರಗಡೆ ಪ್ಲೈವುಡ್‌ನಿಂದ ಪುಟ್ಟದಾದ ಪೆಟ್ಟಿಗೆಯನ್ನು ಇಟ್ಟುಕೊಳ್ಳಿ. ಅದರ ಕೆಳಭಾಗದಲ್ಲಿ ಪಾದರಕ್ಷೆಗಳನ್ನು ಬಿಡಲು ರ್ಯಾಕ್ ಮಾಡಿಕೊಳ್ಳಿ. ಇದರಿಂದ ಪಾದರಕ್ಷೆ ಬಿಡಲು ಜಾಗವೂ ಸಿಗುತ್ತದೆ ಜತೆಗೆ ಕುಳಿತುಕೊಳ್ಳಲು ಆಸನವೂ ಲಭ್ಯವಾಗುತ್ತದೆ. ಮಹಡಿ ಮನೆ ಇದ್ದರೆ ಅದರ ಮೆಟ್ಟಿಲುಗಳಲ್ಲಿ ದೊರೆಯುವ ಜಾಗದಲ್ಲೂ ಇದೇ ರೀತಿಯಾಗಿ ರ್ಯಾಕ್ ನಿರ್ಮಿಸಿಕೊಳ್ಳಬಹುದು. ಇದಕ್ಕೇನೂ ಲಕ್ಷಾಂತರ ರುಪಾಯಿ ಖರ್ಚಾಗುವುದಿಲ್ಲ.
ಸಮಸ್ಯೆ ಎಲ್ಲೆಲ್ಲಿದೆ?
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಮಾತ್ರ ಈ ಸಮಸ್ಯೆ ಇಲ್ಲ. ದ್ವಿತೀಯ ದರ್ಜೆ ನಗರಗಳಾದ ಮೈಸೂರು, ಬೆಳಗಾವಿ, ಹುಬ್ಬಳ್ಳಿ- ಧಾರವಾಡದಂಥ ಮಹಾನಗರಗಲ್ಲೂ ಇಂಥ ಸಮಸ್ಯೆ ಇದೆ. ನಗರ ಪ್ರದೇಶಗಳಿಗೆ ಸುತ್ತಮುತ್ತಲಿನ ಪ್ರದೇಶದಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ವಾಸಿಸಲು ಬೇಕಾದ ಜಾಗ ಮಾತ್ರ ಇದ್ದಷ್ಟೇ ಇದೆ. ಹೀಗಾಗಿ ಲಭ್ಯವಿರುವ ಪ್ರದೇಶದಲ್ಲೇ ಬಂದವರಿಗೆಲ್ಲಾ ಜಾಗ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಈ ಸಮಸ್ಯೆ ಅಷ್ಟೊಂದಾಗಿಲ್ಲ.
- ಚನ್ನು ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


