ಮಹಿಳೆ-ಮನೆ-ಬದುಕು

ಸವೆದ ಸಂಬಂಧ

ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಒಬ್ಬಳೇ ಹೊರಟಿದ್ದೆ. ತೆಂಗಿನಕಾಯಿ, ಬಾಳೆಕಾಯಿ ಚಿಪ್ಸ್...

ಸವೆದ ಸಂಬಂಧ
Published On :

ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಒಬ್ಬಳೇ ಹೊರಟಿದ್ದೆ. ತೆಂಗಿನಕಾಯಿ, ಬಾಳೆಕಾಯಿ ಚಿಪ್ಸ್, ಹಿತ್ತಿಲಗಿಡದಲ್ಲಿ ಬೆಳೆದ ಪಪ್ಪಾಯಿ ಎಂದೆಲ್ಲಾ ಅಮ್ಮ ಪ್ರೀತಿಯಿಂದ ಕಟ್ಟಿಕೊಟ್ಟಿರುವ ಮಣಭಾರದ ಬ್ಯಾಗ್ ಹೊತ್ತು ಬಸ್ಸ್ಟ್ಯಾಂಡ್ ಹೊಕ್ಕು ಖಾಲಿಯಿದ್ದ ಕುರ್ಚಿಯಲ್ಲಿ ಕುಳಿತೆ.
'ಬಸ್ ಬರುವುದರೊಳಗಾಗಿ ಶೌಚಕ್ಕೆ ಹೋಗಿ ಬರಬೇಕು, ಎ.ಸಿ. ಬಸ್ ಬೇರೆ. ಮಧ್ಯದಲ್ಲಿ ನಿಲ್ಲಿಸಿದರೂ ಹೋಗಲು ಆಗುತ್ತೋ? ಇಲ್ಲವೋ? ನನ್ನ ಈ ಮೂರು ಬ್ಯಾಗನ್ನು ಎಲ್ಲಿ ಇಟ್ಟು ಹೋಗಲಿ?' ಎಂದು ಯೋಚಿಸುತ್ತಾ ಮೊಬೈಲ್ನಲ್ಲಿ ಬಸ್ ನಂಬರ್ನ ಮೆಸೇಜ್ ಬಂತಾ ಎಂದು ಹುಡುಕಾಡುತ್ತಿದ್ದಾಗ ಪಕ್ಕದಿಂದ 'ಹಾಯ್' ಎಂಬ ಧ್ವನಿ ಕೇಳಿಸಿತು. ಅಚ್ಚರಿಯಿಂದ ತಲೆಯೆತ್ತಿ ನೋಡಿದರೆ ಜೀನ್ಸ್ ಪ್ಯಾಂಟ್-ಟೀ ಶರ್ಟ್ ಹಾಕಿ ಸ್ಮಾರ್ಟ್ ಆಗಿ ನಿಂತಿರುವ, ಸುಮಾರು ಹದಿನೈದು ವರ್ಷಗಳ ಹಿಂದಿನ ನನ್ನ ಹೈಸ್ಕೂಲು ಗೆಳತಿ!
ಪರ್ವತಾರೋಹಣಕ್ಕೆ ಹೊರಟಂತೆ ಮಣಭಾರದ ಶಾಲೆ ಚೀಲವನ್ನು ಬೆನ್ನಿಗೇರಿಸಿ ಕಾಲಿಡಲೂ ಅಸಾಧ್ಯವಾಗಿರುವ ಸುಪ್ರಿಯಾ ಬಸ್ಸಿನಲ್ಲಿ ನನ್ನ ಜತೆಗೆ ಒಟ್ಟಗೇ ಶಾಲೆಗೆ ಬರುತ್ತಿದ್ದ ಗೆಳತಿ ಆಕೆನೇ ಎಂದು ನನ್ನ ಮೆಮೊರಿ ಕಾರ್ಡ್ನಿಂದ ಮಾಹಿತಿಯನ್ನು ಹೊರತೆಗೆದೆ. ಹೌದು, ಲೆಕ್ಕ ಮೇಷ್ಟ್ರು ಕೊಟ್ಟಿರುವ ಹೋಮ್ವರ್ಕ್ ಮುಗಿಸಿದೆಯಾ? ಉತ್ತರಗಳೆಲ್ಲಾ ಸಿಕ್ಕಿದವಾ? ಇಲ್ಲವೆಂದರೆ ಅವರ ಹೊಡೆತ, ಕಿವಿ ಹಿಂಡುವ, ಬೆಂಚಿನ ಮೇಲೆ ನಿಲ್ಲಿಸುವ, ಅವರ ಮೇಜಿನ ಕೆಳಗೆ ಕುಳಿತುಕೊಳ್ಳಿಸುವ, ಎಲ್ಲಕ್ಕಿಂತ ಹೆಚ್ಚಾಗಿ ಬೆನ್ನಿಗೆ ಹೊಡೆದು ಎಲ್ಲರ ಮುಂದೆ ಅವಮಾನ ಮಾಡುವ ಮೇಷ್ಟ್ರ ಹೋಮ್ವರ್ಕ್ ಮುಗಿಸಿದರೆ ಸಾಕಪ್ಪಾ ಎಂದು ಮಾತಾಡುತ್ತಾ ಶಾಲೆಗೆ ಹೋಗುತ್ತಿದ್ದ ದಿನಗಳವು.
ಪಕ್ಕದಲ್ಲಿ ಬಂದು ಕುಳಿತ ಅಂಥ ಗೆಳತಿ ಇಷ್ಟು ವರ್ಷಗಳ ಬಳಿಕ ಸಿಕ್ಕಿದ್ದೇ ತಡ ಒಂದಷ್ಟು ಮಾತಾಡಿಬಿಡೋಣ ಎಂಬ ಉತ್ಸಾಹ ನನ್ನಲ್ಲಿ. 'ಬೆಂಗಳೂರಿನಲ್ಲಿದ್ದಿಯಾ? ಏನು ಕೆಲಸ?' ಎಂದು ಮಾತಿಗಾರಂಭಿಸಿದೆ. ಆಕೆ ತನ್ನ ಮೊಬೈಲನ್ನೇ ನೋಡುತ್ತಾ ನನ್ನತ್ತ ತಿರುಗದೆ ಯಾವುದೋ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಅಂದಳು. ಮುಂದಿನ ಪ್ರಶ್ನೆ ಎಸೆಯಬೇಕೆಂದು ಬಾಯಿ ತೆರೆಯುತ್ತಿದ್ದಂತೇ ಆಕೆ ತಡೆದು 'ಒಂದ್ ನಿಮಿಷ' ಅಂದಳು.
ಸರಿ, ಈಕೆ ಮೊಬೈಲ್ನಲ್ಲಿ ಕೆಲಸ ಮುಗಿಸುವಷ್ಟರಲ್ಲಿ ಶೌಚಾಲಯಕ್ಕೆ ಹೋಗಿ ಬರೋಣವೆಂದು ನನ್ನ ಬ್ಯಾಗಿನ ಕಾವಲು ಜವಾಬ್ದಾರಿಯನ್ನು ಆಕೆಗೆ ವಹಿಸಿ ಹೊರಟೆ. ಬರುವಾಗ ಅಲ್ಲೇ ಅಂಗಡಿಗೆ ಹೋಗಿ ಆಕೆಗೊಂದು ನನಗೊಂದು ಕ್ಯಾಡ್ಬರಿ ಚಾಕೊಲೇಟನ್ನು ಖರೀದಿಸಿ ಬಂದು ಆಕೆಯ ಪಕ್ಕದಲ್ಲಿ ಕುಳಿತೆ. ಈಗ ಮೊಬೈಲ್ ಹೋಗಿ ಸ್ಯಾಮ್ಸಂಗ್ ಟ್ಯಾಬ್ಲೆಟ್ ಬಂದಿತ್ತು! ಏನೋ ಗಂಭೀರವಾಗಿ ಅದರಲ್ಲಿ ಕೆಲಸ ಮುಂದುವರಿಸಿದ್ದಳು. ಈಗ ಮುಗಿಯಬಹುದು, ಮತ್ತೆ ಮುಗಿಯಬಹುದು ಎಂದು ಕಾದೆ. ಸುಮಾರು ಹದಿನೈದು ನಿಮಿಷಗಳು ಸರಿದವು. ಆಕೆ ಟ್ಯಾಬ್ಲೆಟ್ ಮೇಲೆ ಬೆರಳಾಡಿಸುವುದರಲ್ಲಿ ನಿರತಳಾಗಿದ್ದಳು. 'ದೊಡ್ ನೌಕರಿಯಲ್ಲಿರಬಹುದು, ಸಿಕ್ಕಾಪಟ್ಟೆ ಕೆಲಸವೋ ಏನೋ' ಅಂದುಕೊಳ್ಳುತ್ತಾ ಅವಳ ಟ್ಯಾಬ್ ನೋಡಬಾರದು ಅಂದುಕೊಂಡರೂ ತಡೆಯದೆ ಓರೆಗಣ್ಣಿನಿಂದ ಇಣುಕಿದೆ.
ಅವಳ ಕೈಯಲ್ಲಿರುವ ಟ್ಯಾಬ್ ಪರದೆಯಲ್ಲಿ ಪಿ.ವಿ.ಆರ್.ನಲ್ಲಿ ಹೃತಿಕ್ನ 'ಕ್ರಿಶ್3' ನಾಲ್ಕನೇ ತಾರೀಖಿಗೆ ಯಾವ ಶೋ ಇದೆ? ಯಾವ ರೋದಲ್ಲಿ ಎರಡು ಸೀಟ್ ಸಿಗಬಹುದು? ಎಂದು ಬಹಳ ಹೊತ್ತಿನಿಂದ ಹುಡುಕಾಡುತ್ತಿದ್ದಳು! ನೋಡಿ ದಂಗಾದೆ! ಅಚ್ಚರಿಯ ಜತೆಗೆ ನಿರಾಸೆ, ದುಃಖ ಒಟ್ಟಿಗೇ ಬಂತು. ಅದೆಷ್ಟೋ ವರ್ಷಗಳ ನಂತರ, ಅದೂ ಬಾಲ್ಯದ ಗೆಳತಿ ಸಿಕ್ಕಿದಾಗ ಆಗೋ ಸಡಗರ, ಸಂತೋಷ ಅಷ್ಟಿಷ್ಟಲ್ಲ. ಎಲ್ಲಿ ಏನು ಕೆಲಸ ಮಾಡುತ್ತಿರುವಳು? ಮದುವೆ ಆಗಿದೆಯಾ? ಆದರೆ ಮಕ್ಕಳು? ಸಂಸಾರ, ಕೆಲಸದ ಹಲವು ಪ್ರಶ್ನೆ, ಮಾತುಕತೆಗಳಿರುತ್ತವೆ. ಹಳೆಯದನ್ನೆಲ್ಲ ಮೆಲುಕು ಹಾಕುವ ತವಕ. ನಾನು ಅದನ್ನು ಅಷ್ಟು ಹೊತ್ತಿನಿಂದ ನಿರೀಕ್ಷಿಸುತ್ತಿದ್ದಾಗ ಈಕೆ ಮಾಡಿದ್ದೇನು?
ಬೆಂಗಳೂರಿನ ಜೀವನವೋ? ಆಧುನಿಕತೆಯ ಭರಾಟೆಯೋ? ಆಧುನಿಕ ತಂತ್ರಜ್ಞಾನದ ಪುಣ್ಯದ ಫಲವೋ? ಫೇಸ್ಬುಕ್, ಟ್ವಿಟರ್, ವಾಟ್ಸ್ ಆಪ್, ಆನ್ಲೈನ್ ಸೈಟ್ಗಳು ಎಲ್ಲವೂ ಸಂಬಂಧಗಳನ್ನು ಮುಕ್ಕಿಹಾಕಿತೋ? ಪಕ್ಕದಲ್ಲಿ ಕುಳಿತಿರುವ ಗೆಳತಿಯ ಫೇಸ್ಗೆ ಫೇಸ್ ಕೊಟ್ಟು ಮಾತಾಡುವುದಕ್ಕಿಂತ ಫೇಸ್ಬುಕ್ನಲ್ಲಿ ಲೈಕ್ ಮಾಡುವುದೇ ಹೆಚ್ಚು ಇಷ್ಟವಾಯಿತೇ? ಪರದೆಯ ಒಳಗೆ ದೂರದಿಂದಲೇ ಹಾಯ್, ಹಲೋ ಎಂದು ಕೃತಕವಾಗಿ ಮಾತಾಡುವ ಫೇಸ್ಗಳೇ ಹೆಚ್ಚು ಆಪ್ತವಾಗುತ್ತವೆಯೇನೋ? ಎಂದೆಲ್ಲಾ ಯೋಚಿಸುತ್ತಿದ್ದಾಗ ನನ್ನ ಬಸ್ ಬಂತು. ಆಕೆಯ ಮುಖ ನೋಡಬೇಕೆಂದೂ ಅನಿಸಲಿಲ್ಲ. ಆದರೆ ನಾನು ಶೌಚಕ್ಕೆ ಹೋದಾಗ ಬ್ಯಾಗ್ ಕಾದ ಕೃತಜ್ಞತೆ ಇದೆಯಲ್ಲವೇ? ಅದಕ್ಕೋಸ್ಕರ 'ಬಾಯ್' ಎಂದು ಹೇಳಿ ಅಮ್ಮನ ಪ್ರೀತಿ ತುಂಬಿದ ಮಣಭಾರದ ಬ್ಯಾಗ್ ಹಿಡಿದು ಬಸ್ನತ್ತ ಹೊರಟೆ.
ಆಕೆಗೆ ಕೊಡಬೇಕೆಂದು ಕೊಂಡು ತಂದಿದ್ದ ಕ್ಯಾಡ್ಬರಿ ಚಾಕೊಲೇಟ್ ನನ್ನ ಹೆಗಲ ಚೀಲದಲ್ಲಿ ಕರಗದೇ ಕುಳಿತಿತ್ತು.

- ಸಿಂಧುಶ್ರೀ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.