ವೀಕೆಂಡ್ ದಂಪತಿ
ಗೀತಾ ಮತ್ತು ಅಭಿಷೇಕ್ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಸ್ಥರು. ಗೀತಾಳಿಗೆ ಬೆಳಗ್ಗೆ ಪಾಳಿಯಲ್ಲಿ ಕೆಲಸ. ಅಭಿಷೇಕ್ ರಾತ್ರಿ ಪಾಳಿ ಕೆಲಸಕ್ಕೆ...

ಗೀತಾ ಮತ್ತು ಅಭಿಷೇಕ್ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಸ್ಥರು. ಗೀತಾಳಿಗೆ ಬೆಳಗ್ಗೆ ಪಾಳಿಯಲ್ಲಿ ಕೆಲಸ. ಅಭಿಷೇಕ್ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಾರೆ. ಬೆಲೆ ಏರಿಕೆ, ರಿಸೆಷನ್ ನಡುವೆ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ ಇವರಿಗೆ. ಈ ದಂಪತಿ ವೀಕೆಂಡ್ನ ಶನಿವಾರ- ಭಾನುವಾರ ಇತರೆ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಸೋಮವಾರದಿಂದ ಮತ್ತದೇ ಪಾಳಿ ಕೆಲಸ ಶುರು.
ಈ ಬೆಲೆ ಏರಿಕೆ ಎಲ್ಲರ ಬದುಕಿಗೂ ಬರೆ ಎಳೆಯುತ್ತದೆ. ಇದರ ಜತೆಗೆ ಕೆಲಸದ ಒತ್ತಡ. ಪತಿ- ಪತ್ನಿ ತಮ್ಮ ಅಮೂಲ್ಯ ಜೀವನವನ್ನು ಒತ್ತಡದಲ್ಲೇ ಕಳೆಯುವಂತಾಗಿದೆ. ದಾಂಪತ್ಯ ಅನ್ನೋದು ಇಂದು ಹಲವು ಸಮಸ್ಯೆಗಳ ಗೂಡಾಗಿದೆ. ಈ ಅನಿವಾರ್ಯತೆ ಬದುಕಿನ ಹಲವು ಸಂತೋಷಗಳನ್ನು ಕಿತ್ತುಕೊಳ್ಳುತ್ತಿದೆ.
ಕೆಲಸ ಮಾಡಲೇಬೇಕು, ದುಡಿಯಲೇ ಬೇಕು ಎಂಬ ಹಪಹಪಿಗೆ ಬಿದ್ದಿರುವ ಜನ ಸುಖ, ಸಂತೋಷವನ್ನು ತ್ಯಾಗ ಮಾಡಿ ಹಣದ ಹಿಂದೆ ಬಿದ್ದಿದ್ದಾರೆ. ಹಣ ಇದ್ದರೆ ಜಗತ್ತು ಎಂಬ ಪಾಲಿಸಿಯಿಂದಾಗಿ ಗಂಡ-ಹೆಂಡತಿ ಕೆಲಸದ ನೆಪದಲ್ಲಿ ವೀಕೆಂಡ್ ದಂಪತಿಯಾಗಿಬಿಟ್ಟಿದ್ದಾರೆ.
ನಗರ, ಪ್ರದೇಶಗಳಲ್ಲಿ ಇಂದು ಶಿಫ್ಟ್ಗಳಲ್ಲಿ ಕೆಲಸ ಮಾಡಬೇಕಿದೆ. ಬೆಳಗ್ಗಿನಿಂದ ಸಂಜೆವರೆಗೂ ಪತ್ನಿಯ ಕೆಲಸವಾದರೆ, ಸಂಜೆಯಿಂದ ಮಾರನೇ ದಿನ ಬೆಳಗ್ಗೆವರೆಗೂ ಗಂಡನ ಕೆಲಸ. ಇಲ್ಲಿ ಗಂಡ ಹೆಂಡತಿಯರದ್ದು ಏಕಾಂಗಿ ಜೀವನ. ಗಂಡ ಮನೆಯಲ್ಲಿ ಇದ್ದಾಗ ಹೆಂಡತಿ ಜತೆಗಿರಲ್ಲ, ಹೆಂಡತಿ ಮನೆಯಲ್ಲಿದ್ದಾಗ ಗಂಡ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ. ಇಂಥ ಪರಿಸ್ಥಿತಿಗೆ ಸಿಲುಕಿ ಎಷ್ಟೋ ದಂಪತಿ ನರಕದ ಜೀವನ ಅನುಭವಿಸುತ್ತಿದ್ದಾರೆ.
ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ದಂಪತಿಗೆ ವೀಕೆಂಡ್ ಹೆಸರಲ್ಲಿ ಬರುವ ಶನಿವಾರ-ಭಾನುವಾರ ಮಾತ್ರ ನೆಚ್ಚಿನ ದಿನಗಳಾಗಿಬಿಟ್ಟಿವೆ. ಈ ಎರಡು ದಿನ ಗಂಡ ಹೆಂಡತಿ ಪಾಲಿಗೆ ಆಸೆ, ಆಕಾಂಕ್ಷೆಯನ್ನು ನನಸಾಗಿಸಿಕೊಳ್ಳುವ ಸಮಯ. ಒಟ್ಟಾಗಿ ಸೇರೋದು, ಬೇಕಾದ್ದನ್ನು ಮಾಡಿಕೊಂಡು ತಿನ್ನೋದು, ಒಂದು ಟ್ರಿಪ್ ಹೋಗಿ ಬರೋದು, ಮನೆ ಮಂದಿಯೊಟ್ಟಿಗೆ ಸೇರಿ ಕಾಲ ಕಳೆಯೋದು, ಒಂದಷ್ಟು ರೆಸ್ಟ್, ಶಾಪಿಂಗ್... ಇಷ್ಟಕ್ಕೇ ಮೀಸಲು. ಸೋಮವಾರ ಬಂತೆಂದರೆ ಮತ್ತದೇ ಶಿಫ್ಟ್ ಕೆಲಸ. ಇವರ ಸಂಬಂಧ ಏನಿದ್ದರೂ ಮೊಬೈಲ್ ಸಂವಹನಕ್ಕೆ ಮೀಸಲು. ಏನಾದರೂ ಬೇಕು ಎಂದಾಗ ಮೊಬೈಲ್ ಮೂಲಕವೇ ಕೇಳಬೇಕಾದ ಅನಿವಾರ್ಯತೆ. ಮೊಬೈಲ್ ಇವರಿಗೆ ಸಂಪರ್ಕ ಸೇತುವೆ.
ಹಿಂದೆ ಹೀಗಿರಲಿಲ್ಲ. ಅಲ್ಲಿ ಸಂಸಾರ, ಮಕ್ಕಳು, ಬಂಧುಗಳು ಪ್ರಮುಖ ಪಾತ್ರ ವಹಿಸುತ್ತಿದ್ದರು. ಪತಿ ಮಾತ್ರ ದುಡಿಮೆಗೆ ಹೋಗುತ್ತಿದ್ದ ಕಾಲವದು. ಗಂಡನಿಗೆ ಬೇಕಾದ ಅಡುಗೆ ಮಾಡುತ್ತಾ, ತಿಂಡಿಯನ್ನು ಬಾಕ್ಸ್ಗೆ ಹಾಕಿ ಕಳುಹಿಸಿಕೊಡುವವರೆಗೂ ಹೆಂಡತಿಯು ಪತಿಯ ಬಗ್ಗೆ ಮುತುವರ್ಜಿ ವಹಿಸುತ್ತಿದ್ದಳು. ಆದರೆ, ಈಗ ಕೆಲಸದ ಒತ್ತಡ ಅನ್ನೋದು ಹಲವು ಬದಲಾವಣೆಗಳನ್ನು ತಂದಿದೆ. ವೀಕೆಂಡ್ ಸಂಸ್ಕೃತಿ ವ್ಯಾಪಕವಾಗಿ ಆವರಿಸಿದೆ. ಇದರಿಂದ ಸಂಸಾರದ ಸುಂದರ ಕ್ಷಣಗಳು ಕಳೆದು ಹೋಗಿವೆ.
- ಜ್ಯೋತಿ ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


