ನೆಟ್ ರಾಣಿ
ರಾತ್ರಿ ಎರಡು ಗಂಟೆಗೆ ಫೇಸ್‌ಬುಕ್ ಓಪನ್ ಮಾಡಿ ನೋಡುತ್ತಿದ್ದಾಗ 'ಫೇಸ್' ಫ್ರೆಂಡೊಬ್ಬರು ಮೆಸೇಜಿಸಿದರು. ಅದಕ್ಕೆ ಉತ್ತರ...

ರಾತ್ರಿ ಎರಡು ಗಂಟೆಗೆ ಫೇಸ್‌ಬುಕ್ ಓಪನ್ ಮಾಡಿ ನೋಡುತ್ತಿದ್ದಾಗ 'ಫೇಸ್' ಫ್ರೆಂಡೊಬ್ಬರು ಮೆಸೇಜಿಸಿದರು. ಅದಕ್ಕೆ ಉತ್ತರ ನೀಡದೇ ಇದ್ದರೂ ಆ ಕಡೆಯಿಂದ ಒಂದರ ನಂತರ ಒಂದು ಸಂದೇಶಗಳು ಬರುತ್ತಲೇ ಇದ್ದವು. ಫೇಸ್‌ಬುಕ್ ಎಂದ ಮೇಲೆ ಕೇಳಬೇಕೆ? ಚಾಟ್ ಲಿಸ್ಟ್‌ನಲ್ಲಿ ಗ್ರೀನ್ ಸಿಗ್ನಲ್ ಕಂಡೊಡನೆಯೇ 'ಹಾಯ್', 'ಹಲೋ'ದಿಂದ ಹಿಡಿದು ಊಟ ತಿಂಡಿ ಬಗ್ಗೆ ದೊಡ್ಡ ವಿಚಾರಣೆಯೇ ನಡೆಯುತ್ತದೆ. ಅದೂ ರಾತ್ರಿ ಹೊತ್ತು ಹೆಣ್ಮಗಳೊಬ್ಬಳು ಆನ್‌ಲೈನ್‌ನಲ್ಲಿ ಚಾಟ್ ಆನ್ ಮೂಡ್‌ನಲ್ಲಿದ್ದರಂತೂ, ಆಕೆ ಈ ಹೊತ್ತಲ್ಲಿ ಏನು ಮಾಡುತ್ತಿದ್ದಾಳೆ? ಎಂಬ ಕುತೂಹಲದಿಂದ ಪ್ರಶ್ನೆ ಕೇಳುವ ನೆಟಿಜನ್‌ಗಳ ಸಂಖ್ಯೆಯೇನೂ ಕಮ್ಮಿ ಇಲ್ಲ. ಅದಕ್ಕಾಗಿಯೇ ಹೆಚ್ಚಿನ ಹುಡುಗಿಯರು ಆಫ್‌ಲೈನ್ ಅಥವಾ ಇನ್‌ವಿಸಿಬಲ್ ಆಗಿರಲು ಬಯಸುತ್ತಾರೆ.
ಹಾಗಾದರೆ ಹೆಣ್ಮಕ್ಕಳು ರಾತ್ರಿ ಹೊತ್ತು ಬ್ರೌಸ್ ಮಾಡಲೇಬಾರದಾ? ಖಂಡಿತಾ ಮಾಡಬಹುದು. ಆದರೆ, ಇದರೊಂದಿಗೆ ಆಕೆ ಅದೇನು ಬ್ರೌಸ್ ಮಾಡ್ತಾಳೆ? ಎಂಬ ಪ್ರಶ್ನೆಯೂ ಎದ್ದೇಳುತ್ತದೆ. ರಾತ್ರಿ ಪಾಳಿ ಮಾಡುವವರೋ ಅಥವಾ ಇನ್ನ್ಯಾವುದೇ ಕೆಲಸದಿಂದ ರಾತ್ರಿ ಆನ್‌ಲೈನ್‌ನಲ್ಲಿರುವುದು ಸಹಜವಾಗಿದ್ದರೂ ಮನೆಯಲ್ಲೇ ಕುಳಿತಿರುವ ಹುಡುಗಿ ಮಧ್ಯರಾತ್ರಿ ಆನ್‌ಲೈನ್‌ನಲ್ಲಿದ್ದರೆ ಹಲವರು ಅನುಮಾನ ಸೃಷ್ಟಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮಧ್ಯರಾತ್ರಿ ಬ್ರೌಸ್ ಮಾಡುವ ಹುಡುಗಿಯರು ಸರಿಯಿರಲ್ಲ ಎಂಬ ನಿಲುವಿನವರಾಗಿದ್ದರೆ, ಮತ್ತೆ ಕೆಲವರಿಗೆ ಆಕೆ ನೆಟ್‌ನಲ್ಲಿ ಏನು ನೋಡ್ತಾ ಇರ್ತಾಳೆ ಎಂಬ ಕುತೂಹಲ.
ಅಂತರ್ಜಾಲದಲ್ಲಿ ನಿಮಿಷಾರ್ಧದಲ್ಲಿ ಎಲ್ಲವೂ ಜಾಹೀರಾಗುತ್ತದೆ. ಹುಡುಗಿಯರು ಮಾಹಿತಿಗಾಗಿಯೂ ಇದರ ಸಖ್ಯ ಬೆಳೆಸಿಕೊಂಡಿರಬಹುದು. ಆದರೆ, ಕೆಲವರು ಅಂದುಕೊಳ್ಳುವುದೇ ಬೇರೆ; ಇಂಥ ಹುಡುಗಿಯರು ಒಂಟಿಯಾಗಿರುತ್ತಾರೆ. 'ನಿನ್ಗೆ ಗೊತ್ತಾ ಆ ಹುಡ್ಗಿ ಯಾವಾಗ್ಲೂ ಆನ್‌ಲೈನ್‌ನಲ್ಲೇ ಇರ್ತಾಳೆ. ಅದೂ ನೈಟ್ ಟೈಮು...! ಅವಳು ಸರಿಯಿಲ್ಲ ಬಿಡು' ಎಂದು ಕ್ಯಾರೆಕ್ಟರ್ ಸರ್ಟಿಫಿಕೇಟನ್ನೂ ಅವರು ಕೊಡುತ್ತಾರೆ. ಹೆಣ್ಮಕ್ಕಳು ರಾತ್ರಿ ಚಾಟ್ ಮಾಡುತ್ತಿದ್ದರೆ ಅವರು ಫ್ಲರ್ಟಿಂಗ್ ಮಾಡ್ತಿದ್ದಾರೆ ಎಂದು ಅನುಮಾನಿಸುವವರಲ್ಲಿ ಗಂಡಸರು ಮಾತ್ರ ಅಲ್ಲ, ಹೆಂಗಸರೂ ಇದ್ದಾರೆ.
ಇಂದು ಫೇಸ್‌ಬುಕ್, ಟ್ವೀಟರ್‌ಗಳೆಂಬ ಸಾಮಾಜಿಕ ತಾಣಗಳು ನಮ್ಮ ಅಭಿಪ್ರಾಯವನ್ನು ನಿರ್ಭಿಡೆಯಾಗಿ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಕಲ್ಪಿಸಿವೆ. ಕ್ಷಣ ಮಾತ್ರದಲ್ಲಿ ಎಲ್ಲರನ್ನೂ ಗೆಳೆಯರನ್ನಾಗಿಸಿ ವಿಶಾಲವಾದ ಭ್ರಮಾಲೋಕವನ್ನೇ ಸೃಷ್ಟಿಸುವ ಇಲ್ಲಿ ಗಂಡು ಹೆಣ್ಣೆಂಬ ತಾರತಮ್ಯವಿಲ್ಲ. ಆದರೆ, ಅದನ್ನು ಬಳಸುವಾಗ ಹೆಣ್ಣು ಗಂಡೆಂಬ ತಾರತಮ್ಯವೇಕೆ? ಆದಾಗ್ಯೂ, ಸಂಜೆಯಾದ ನಂತರ ಮನೆಯಿಂದ ಹೊರಗೆ ಕಾಲಿಡಲು ಅಸಾಧ್ಯವಾಗಿರುವ ಮಹಿಳೆಯರಿಗೆ ಕಟ್ಟುಪಾಡುಗಳಿಂದ ಮುಕ್ತವಾದ ಲೋಕವನ್ನೇ ಅಂತರ್ಜಾಲ ಸೃಷ್ಟಿಸಿದೆ. ಎಲ್ಲೂ ಹೇಳಲಾಗದೆ ಇರುವುದನ್ನು ಬ್ಲಾಗ್‌ಗಳ ಮೂಲಕವೋ, ಇನ್ನಿತರ ಬರಹಗಳ ಮೂಲಕವೋ ಹೇಳಿಕೊಳ್ಳಬಹುದು. ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು, ಆಶಯ ವಿನಿಮಯ ನಡೆಸಲು ಅಂತರ್ಜಾಲ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಆದರೆ ಇಲ್ಲಿಯೂ ಹೆಣ್ಣು ಸುರಕ್ಷಿತಳಾಗಿಲ್ಲ. ಆಕೆ ಹಾಗಂತೆ ಹೀಗಂತೆ ಎಂಬ ಸುದ್ದಿ ಹರಡಿಸಲು ಅಥವಾ ಆಕೆಯ ತೇಜೋವಧೆ ಮಾಡಲು ಇಲ್ಲಿ ಕ್ಷಣ ಮಾತ್ರ ಸಾಕು. ಈ ಕಾರಣದಿಂದಲೇ ಸಾಮಾಜಿಕ ತಾಣದಿಂದ ವಿಮುಖರಾಗುವ ಹೆಣ್ಮಕ್ಕಳು ಒಂದೆಡೆಯಾದರೆ, ಅಂತರ್ಜಾಲದ ದುರುಪಯೋಗಕ್ಕೊಳಗಾಗಿ ಮಾನಹಾನಿಗೀಡಾದ ಮಹಿಳೆಯರೆಷ್ಟೋ. ಇತ್ತೀಚೆಗೆ ಅಂತರ್ಜಾಲದಲ್ಲಿ ಗೋಮುಖ ವ್ಯಾಘ್ರರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ಯಾರೇ ಆಗಲಿ ಮುಖ ಪರಿಚಯ ಇಲ್ಲದೇ ಇರುವ ಆನ್‌ಲೈನ್ ಫ್ರೆಂಡ್‌ಗಳೊಂದಿಗೆ ವ್ಯವಹರಿಸುವಾಗ ಎಚ್ಚರ ಅಗತ್ಯ.
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


