ನೀವೆಲ್ಲಿ ಕಳೆದುಹೋದಿರಿ?
ಬೆಳ್ಳಂಬೆಳಗ್ಗೆ... ಮನೆಯವರೆಲ್ರಿಗೂ ಹೊರಡೋ ಅವಸರ. ನೀವು ಐದು ಗಂಟೆಗೇ ಎದ್ದು ಕೆಲಸಕ್ಕೆ ಅಣಿಯಾಗುತ್ತೀರಿ. ಗಂಡ, ಮಕ್ಳಿಗೆ ತಿಂಡಿ...

ಬೆಳ್ಳಂಬೆಳಗ್ಗೆ... ಮನೆಯವರೆಲ್ರಿಗೂ ಹೊರಡೋ ಅವಸರ. ನೀವು ಐದು ಗಂಟೆಗೇ ಎದ್ದು ಕೆಲಸಕ್ಕೆ ಅಣಿಯಾಗುತ್ತೀರಿ. ಗಂಡ, ಮಕ್ಳಿಗೆ ತಿಂಡಿ, ಮಧ್ಯಾಹ್ನದ ಡಬ್ಬ ರೆಡಿ ಮಾಡುವಷ್ಟರಲ್ಲಿ ನಿಮಗೂ ಲೇಟಾಗಿರುತ್ತೆ. ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಆಫೀಸಿಗೆ ರೆಡಿಯಾಗುತ್ತೀರಿ... ಆಫೀಸ್ ಕೆಲಸ... ದಣಿವು... ಮತ್ತೆ ಸಂಜೆ ಅಡುಗೆ.. ಮಕ್ಕಳ ಪ್ರಾಜೆಕ್ಟ್, ಅವರ ಬೇಕು-ಬೇಡಗಳು. ಮತ್ತೆ ನಾಳೆಗೆ ತರಕಾರಿ ಹೆಚ್ಚಿಡಬೇಕು.. ಇದರ ನಡುನಡುವೆ ಫ್ರೆಂಡ್ಸ್, ಬಂಧುಗಳ ಫೋನ್.. ಅಗತ್ಯ ಸಾಮಾನುಗಳ ಖರೀದಿ.. ಇಷ್ಟು ಮಾಡುವಷ್ಟರಲ್ಲಿ ದಿನ ಮುಗಿದೇಹೋಗಿರುತ್ತೆ. ಈ ಎಲ್ಲ ಜವಾಬ್ದಾರಿಗಳ ನಡುವೆ ನೀವೆಲ್ಲಿ ಕಳೆದುಹೊಗಿದ್ದೀರಿ? ನಿಮ್ಮ ಊಟ, ತಿಂಡಿಯ ಬಗ್ಗೆ ಗಮನಹರಿಸಿಲ್ಲ, ಸುಸ್ತಾದರೂ ಕ್ಯಾರೇ ಅಂದಿಲ್ಲ. ಉದ್ಯೋಗಸ್ಥೆಯಾದರೂ ಅಷ್ಟೆ, ಮನೆಯಲ್ಲಿರುವ ಗೃಹಿಣಿಯಾದರೂ ಅಷ್ಟೆ. ಓದೋ ಮಕ್ಕಳು ಚೆನ್ನಾಗಿ ತಿನ್ಬೇಕು.., ಗಂಡ ದಣಿದು ಬಂದಿದ್ದಾನೆ ಬಿಸಿಬಿಸಿಯಾಗಿ ಅಡುಗೆ ಮಾಡಿ ಬಡಿಸ್ಬೇಕು, ಅತ್ತೆ-ಮಾವರಿಗೆ ಹಣ್ಣು-ಹಂಪಲು ಕೊಡ್ಬೇಕು.. ಆದ್ರೆ ನೀವು? ಅಯ್ಯೋ ತಿಂದ್ರಾಯ್ತು.. ಅನ್ನೋ ಉದಾಸಭಾವ!
ಇನ್ನು ನೆಂಟರಿಷ್ಟರ ಮನೆ, ಫಂಕ್ಷನ್‌ಗಳಿಗೆ 'ನನಗೆ ಬರೋಕಾಗಲ್ಲ, ರಜಾ ಇಲ್ಲ' ಅನ್ನಕ್ಕಾಗಲ್ಲ, ಹಾಜರಿ ಹಾಕದಿದ್ರೆ ಬಂಧುಮಿತ್ರರು ಸಿಟ್ಟಾಗೋದು ಗ್ಯಾರಂಟಿ. ಇವೆಲ್ಲದರ ನಡುವೆ ಎಲ್ಲಿದೆ ಪುರುಸೊತ್ತು, ಎಲ್ಲಿದೆ ವಿಶ್ರಾಂತಿ?
ನೀವು ಓಡ್ತಾನೇ ಇರ್ತೀರಿ. ವರ್ಷಾನುಗಟ್ಲೆ ಸತತವಾಗಿ ಕೆಲಸ ಮಾಡುವ ಮಶಿನ್ ಕೂಡ ಕೆಟ್ಟುಹೋಗುತ್ತೆ, ಇನ್ನು ಈ ದೇಹ ಯಾವ ಲೆಕ್ಕ? ವಯಸ್ಸೇನು ಸುಮ್ನೆ ಕೂರುತ್ತಾ? ದಾಪುಗಾಲು ಹಾಕ್ಕೊಂಡು ನಿಮ್ಮ ಹಿಂದೇನೇ ಬರುತ್ತೆ. ಕಾಲುನೋವು, ಕೀಲುನೋವು, ಸೊಂಟ ನೋವು... ಹೀಗೆ ಒಂದೊಂದೇ ವಕ್ಕರಿಸಿಬಿಡುತ್ವೆ. 'ಅಯ್ಯೋ, ಸಾಕಾಗಿಹೋಯ್ತಪ್ಪಾ ಈ ಜನ್ಮ... ಯಾಕಾಗಿ ಈ ಬದುಕು?' ಎಂದೂ ಹಲುಬುವಂತಾಗುತ್ತದೆ. ಹತಾಶೆ, ಚಿಂತೆ, ಖಿನ್ನತೆ ಆವರಿಸುತ್ತದೆ. ಹಾಗಾಗಲು ಬಿಡಬೇಡಿ. ಕುಟುಂಬ ಸದಸ್ಯರಿಗೆ ಆಹಾರ ನೀಡುವುದು ಮಾತ್ರವಲ್ಲ, ನೀವು ಕೂಡ ಆರೋಗ್ಯಪೂರ್ಣ ಆಹಾರ ಸೇವಿಸುವುದನ್ನು ಮರೆಯಬೇಡಿ. ದೈನಂದಿನ ಕೆಲಸ ವಿಪರೀತವೆನಿಸಿದರೆ ಸಣ್ಣಪುಟ್ಟ ಕೆಲಸಗಳನ್ನು ಮನೆಮಂದಿಗೆ ವಹಿಸಿಬಿಡಿ ಅಥವಾ ಹಂಚಿಕೊಂಡು ಕೆಲಸ ಮಾಡಿ. ಸಕಾರಾತ್ಮಕ ಚಿಂತನೆಯಿಂದ ಇದು ಸಾಧ್ಯ. ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಆರೋಗ್ಯವನ್ನು ಅಲಕ್ಷಿಸಿ ನಿಮ್ಮ ವ್ಯಕ್ತಿತ್ವವನ್ನು ಮೂಲೆಗುಂಪು ಮಾಡಿ, ಬಳಲಬೇಡಿ.
- ರಾಜೇಶ್ವರಿ ಜಯಕೃಷ್ಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


