ಸ್ಮಾಲ್‌ಗುಡಿ ಡೇಸ್

ಮನೆ ಅಂದಗಾಣಿಸಲು ಸಾಕಷ್ಟು ತಲೆಕೆಡಿಸಿಕೊಳ್ಳುತ್ತೇವೆ. ನಮ್ಮ ತೃಪ್ತಿಗಿಂತ ಬೇರೆಯವರು ಮನೆ ಅಂದವನ್ನು ನೋಡಿ ಖುಷಿಪಡಬೇಕು. ಆ ರೀತಿಯಲ್ಲಿ ಮನೆಗೆ ಅಂದದ ಅಲಂಕಾರಿಕ ವಸ್ತುಗಳನ್ನು ಹಾಕುತ್ತೇವೆ. ಆದರೆ, ಎಷ್ಟೇ ದೊಡ್ಡ ಪ್ರಮಾಣದ ಆಂತರಿಕ ವಿನ್ಯಾಸದ ವಸ್ತುಗಳನ್ನು ಹಾಕಿದರೂ ಕೆಲವೊಮ್ಮೆ ಎಡವಟ್ಟುಗಳಾಗುತ್ತವೆ.
ಕಾರಣ, ಮನೆ ಒಳಗೆ ಬರೀ ಅಲಂಕಾರಿಕ ವಸ್ತುಗಳೇ ತುಂಬಿದರೂ ಅದು ಶೋಭೆಯಲ್ಲ.
ಅಷ್ಟಕ್ಕೂ ಮನೆಯೊಳಗಿನ ಸೌಂದರ್ಯಕ್ಕೆ ದೊಡ್ಡ ಪ್ರಮಾಣದ ಅಲಂಕಾರಿಕ ವಸ್ತುಗಳೇ ಬೇಕೆಂದೇನಿಲ್ಲ. ಮನೆಯೇ ಚಿಕ್ಕದಾಗಿದ್ದಾಗ ಅಂಥ ದೊಡ್ಡ ವಸ್ತುಗಳನ್ನು ತಂದೇನು ಪ್ರಯೋಜನ? ಸಿಂಪಲ್ಲಾಗಿ, ಸಣ್ಣದಾಗಿರುವ ಕೆಲವು ವಸ್ತುಗಳು ನಿರೀಕ್ಷೆಗಿಂತ ಹೆಚ್ಚು ಅಂದ ಕೊಡುತ್ತವೆ. ದೊಡ್ಡ ಇಟ್ಟಿಗೆಗೆ ಸಣ್ಣ ಕಲ್ಲು ಕೂಡ ಆಸರೆ ಎಂಬಂತೆ ಸೂರಿನ ಅಂದದಲ್ಲಿ ಇಂಥ ಸಣ್ಣ ವಸ್ತುಗಳೂ ಪ್ರಮುಖ ಪಾತ್ರವಹಿಸುತ್ತವೆ. ಕೇವಲ ಹಾಲ್ ಮಾತ್ರವಲ್ಲದೆ, ನಿಮ್ಮ ಬೆಡ್‌ರೂಂ, ಖಾಸಗಿ ಕೋಣೆ, ಬಾತ್‌ರೂಂ, ಖಾಸಗಿ ಗ್ರಂಥಾಲಯ, ಮನೆಯಲ್ಲಿರುವ ಸ್ವಂತ ಕಚೇರಿ, ವರಾಂಡದಲ್ಲಿ ಇಂಥ ವಸ್ತುಗಳು ನಿಮಗೆ ಮನಸೂರೆಗೊಳ್ಳುತ್ತವೆ. ಮನೆಗೆ ಬಂದ ಅತಿಥಿಗಳ ಮನಸ್ಸನ್ನು ಕದಿಯುತ್ತವೆ. ಇದಲ್ಲದೆ, ಇನ್ನೂ ಕೆಲವು ಅಂಶಗಳಿವೆ...
ಆಮೆಯಂತಿರುವ ಆಯಸ್ಕಾಂತ
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸಣ್ಣ ವಸ್ತುಗಳು ಬೇಗನೆ ಕೈಗೆ ಸಿಗುವುದಿಲ್ಲ. ಅವುಗಳನ್ನು ಹುಡುಕುವುದೇ ಒಂದು ದೊಡ್ಡ ಕೆಲಸವಾಗಿರುತ್ತೆ. ಅದರಲ್ಲಿ ಪೇಪರ್‌ಗಳಿಗೆ ಚುಚ್ಚುವ ಪಿನ್‌ಗಳು, ಸಣ್ಣ ಗುಂಡು ಸೂಜಿಗಳನ್ನು ಒಂದೆಡೆ ಇಡಬಹುದು. ಇದಕ್ಕಾಗಿ ಆಮೆಯಂತಿರುವ ಈ ಆಯಸ್ಕಾಂತ ಉತ್ತಮ. ಇದರ ಮೇಲೆ ಪಿನ್, ಗುಂಡು ಸೂಜಿಗಳನ್ನಿಟ್ಟರೆ ಸಲೀಸಾಗಿ ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಬೇಕೆಂದಾಗ ಅವುಗಳು ನಮ್ಮ ಕೈಗೆ ಸಿಗುತ್ತವೆ.
ಅಡುಗೆಮನೆ ಕಪ್
ಅಡುಗೆಮನೆಯಲ್ಲಿ ಕೆಲವು ಸಣ್ಣ ವಸ್ತುಗಳನ್ನು ತೆಗೆದಿಡಲು ಜಾಗ ಇರುತ್ತೆ. ಆದರೆ, ಅವೂ ಒಮ್ಮೊಮ್ಮೆ ಬೇಗ ಕೈಗೆ ಸಿಕ್ಕಲ್ಲ. ಇದಕ್ಕಾಗಿ ಕಪ್ ಆಕಾರದಲ್ಲಿರುವ ಈ ಬಟ್ಟಲು ತುಂಬಾ ಸಹಾಯಕ. ಅಡುಗೆಮನೆಯ ಅಂದವನ್ನು ಇದು ಹೆಚ್ಚಿಸುತ್ತದೆ.
ದ್ವಿದಳ ಸೌಂದರ್ಯ
ಶೇಂಗಾದಂಥ ದ್ವಿದಳ ಧಾನ್ಯಗಳ ಸಿಪ್ಪೆ ಸುಲಿಯುವುದಕ್ಕೆಂದೇ ಈ ಇಲಿ ಇರುವುದು. ನೋಡಲೂ ಅಂದವಾಗಿರುವುದರಿಂದ ಮನಸ್ಸು ಧನಾತ್ಮಕತೆಯತ್ತ ಹೊರಳುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ, ಇದರಲ್ಲಿ ಧಾನ್ಯಗಳನ್ನು ಇಡುವುದರಿಂದ ಬೆಳಗ್ಗೆ ಎದ್ದು ತಿನ್ನಲು ಮನಸ್ಸೂ ಬರುತ್ತದೆ.
ಇಲಿ ಮಣೆ
ಅಡುಗೆಮನೆಯಲ್ಲಿ ಎಷ್ಟು ವಸ್ತುಗಳಿದ್ದರೂ ಸಾಲದು. ಇದ್ದರೂ ಸಿಂಪಲ್ಲಾಗಿರುವುದು ಕಷ್ಟ. ಹಾಗಾಗಿ ಕೊಬ್ಬರಿ, ಗಜ್ಜರಿ, ಸೌತೆಕಾಯಿಯಂಥ ಪದಾರ್ಥಗಳನ್ನು ಹೆಚ್ಚಲು ಇಲಿಯಂತಿರುವ ಈ ಮುಳ್ಳಿನ ಮಣೆ ನೋಡಲೂ ಚೆಂದ. ಇದು ಅಡುಗೆಮನೆಗೆ ಮಾತ್ರವಲ್ಲ. ಕೆಲಸದ ಅಂದವನ್ನೂ ಹೆಚ್ಚಿಸುತ್ತದೆ.
ಮೊಲದ ಕಮಾಲ್
ನೋಡಲು ಇದು ಕ್ಯಾರೆಟ್ ಹಿಡಿದ ಮೊಲದಂತೆ ಕಾಣಿಸುತ್ತದೆ. ನೋಡಲಷ್ಟೇ ಇದು ಕ್ಯಾರೆಟ್. ಅಂದಹಾಗೆ, ಅದು ಆಯಸ್ಕಾಂತದ ಕ್ಯಾರೆಟ್. ಇದರಲ್ಲಿ ಗುಂಡುಸೂಜಿಯಂಥ ಸಣ್ಣ ವಸ್ತುಗಳನ್ನು ಇಡಬಹುದು. ಇಲ್ಲಿನ ಕಿವಿಯ ಜಾಗದಲ್ಲಿ ಕತ್ತರಿಯನ್ನೂ ಇಡಬಹುದು.
ಗೋಡೆ ಏರಿದ ಮೀನು
ಮನೆ ಗೋಡೆಗಳಿಗೆ ದೊಡ್ಡ ದೊಡ್ಡ ವಸ್ತುಗಳಂತೆಯೇ ಸಣ್ಣ ಪ್ರಮಾಣದ ವಸ್ತುಗಳೂ ಆಕರ್ಷಣೆ ನೀಡುತ್ತವೆ. ಅಂಥದ್ದರಲ್ಲಿ ಮೀನಿನಂತಿರುವ ಈ ಲೈಟುಗಳೂ ಒಂದು. ಎದುರು ಬದುರಾದ ಮೀನಿನಂತಿರುವ ಈ ಸಾಫ್ಟ್‌ಲೈಟ್‌ಗಳು ಗೋಡೆಗಳಿಗೆ ಅಂದ ನೀಡುತ್ತವೆ. ಇದು ಜಪಾನ್ ಶೈಲಿಯದ್ದು. ಜಪಾನಿನ ಮನೆಗಳಲ್ಲಿ ಇವುಗಳ ಬಳಕೆ ಸಾಮಾನ್ಯ.
ಬಟ್ಟೆ ಹಿಡಿಯುವ ಪಕ್ಷಿಗಳು!
ಶರ್ಟ್, ಫ್ಯಾಂಟ್, ಕರವಸ್ತ್ರಗಳಂಥ ಹಗುರವಾದ ವಸ್ತುಗಳನ್ನು ನೇತು ಹಾಕಲು ಮನೆಯಲ್ಲಿ ಜಾಗವೇ ಇರುವುದಿಲ್ಲ. ಅದಕ್ಕಾಗಿ ರೂಪುಗೊಂಡಂಥವು ಈ ಹಕ್ಕಿ ಆಕಾರದ ಹ್ಯಾಂಗರ್‌ಗಳು. ಬೆಡ್ ರೂಂ, ಹಾಲ್, ಕಿಚನ್ ಸೇರಿದಂತೆ ಎಲ್ಲಿ ಬೇಕಾದರೂ ಇದನ್ನು ನೇತು ಹಾಕಬಹುದು.
- ಬ್ರಹ್ಮಾನಂದ ಹಡಗಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


