ಸೋಗೆ ಶೋ

ಧಾರಾಳವಾಗಿ ಅಡಕೆ ಬೆಳೆಯುವ ಮಲೆನಾಡಿಗೋ ಅಥವಾ ದಕ್ಷಿಣ ಕನ್ನಡಕ್ಕೋ ಹೋದರೆ ಅಲ್ಲಿನ್ನೂ ಸೋಗೆಮನೆಗಳ ಸೊಬಗನ್ನು ಕಾಣುತ್ತೇವೆ. ಇತ್ತೀಚೆಗೆ ಸ್ವಂತ ವಾಸಕ್ಕೆ ಅಡಕೆ ಕೃಷಿಕರು ತಾರಸಿಯ ಹೆಂಚಿನ ಮನೆ ಕಟ್ಟಿಕೊಂಡಿದ್ದರೂ ಜಾನುವಾರುಗಳ ಕೊಟ್ಟಿಗೆ ಸ್ನಾನದ ಮನೆಗಳಿನ್ನೂ ಸೋಗೆಯದೇ ಆಗಿರುವುದು ಅಪರೂಪವಲ್ಲ.
ಇಲ್ಲಿರುವುದು ವಿಶಾಲವಾದ ಜಾನುವಾರುಗಳ ಮನೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಅನಿಲಕುಮಾರ ಭಟ್ಟರಿಗೆ ಇಪ್ಪತ್ತು ಎಕರೆ ಕೃಷಿ ಜಮೀನಿದ್ದರೂ ಕೊಟ್ಟಿಗೆಗೆ ಆಧುನಿಕ ಸ್ಪರ್ಶ ನೀಡಿಲ್ಲ. ಅದಕ್ಕೆ ಅವರು ಕೊಡುವ ಕಾರಣವೇ ಬೇರೆ.
ಅದೇನೆಂದರೆ, ನಮ್ಮಂತೆ ಕೊಟ್ಟಿಗೆಯೊಳಗೆ ಜಾನುವಾರುಗಳನ್ನು ಮನಬಂದಂತೆ ತಿರುಗಲು ಬಿಡದೆ ಕಟ್ಟಿಹಾಕುತ್ತೇವೆ. ಕೊಟ್ಟಿಗೆಗೆ ತಾರಸಿ ಮಾಡಿದರೆ ಬೇಸಿಗೆಯಲ್ಲಿ ಅವುಗಳಿಗೆ ಸೆಕೆಯಾಗುತ್ತದೆ. ಇನ್ನು ಹೆಂಚಿನ ಚಾವಣಿಯಿದ್ದರೆ ಮಳೆಗಾಲದಲ್ಲಿ ಜಾನುವಾರುಗಳಿಗೆ ತೀವ್ರ ಚಳಿ. ಆದರೆ, ಚಾವಣಿಗೆ ಅಡಕೆಮರದ ಸೋಗೆ ಹೊದಿಸಿದರೆ ಮಳೆಗಾಲದಲ್ಲಿ ತುಂಬಾ ಬೆಚ್ಚಗೆ ಇರುತ್ತದೆ.
ಅಷ್ಟೇ ಅಲ್ಲ, ಬೇಸಿಗೆಯಲ್ಲೂ ತೀರಾ ತಂಪಿರುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಚಾವಣಿಗೆ ಮಾಡುವ ವೆಚ್ಚವೂ ಬಹಳ ಕಡಿಮೆ. ಮಳೆ ಬರುವ ಮೊದಲು ಸೋಗೆಗಳನ್ನು ಒಪ್ಪವಾಗಿ ಪದರ ಪದರವಾಗಿ ಜೋಡಿಸುವುದೂ ಒಂದು ಕಲೆ. ಹೀಗೆ ಪ್ರತಿವರ್ಷ ಮೇಲಿಂದ ಮೇಲೆ ಜೋಡಿಸುತ್ತಿದ್ದರೆ ಹವಾನಿಯಂತ್ರಿತ ಕೋಣೆಯಂತೆ ತಂಪಾಗಿರುತ್ತದೆ. ಇನ್ನು ಸೆಕೆಯಾದರೆ ಫ್ಯಾನೂ ಬೇಡ. ಚಳಿಗೆ ಬೆಚ್ಚಗಿನ ಹೊದಿಕೆಯೂ ಅನಗತ್ಯ. ಹನ್ನೆರಡು ವರ್ಷ ಹಳೆಯದರ ಮೇಲೆ ಹೊಸ ಸೋಗೆಗಳನ್ನು ಹೊಚ್ಚುತ್ತ ಬರಬಹುದಂತೆ.
ಹಿಂದಿನವರು ಸಾಧಿಸಿದ ಹವಾನಿಯಂತ್ರಣದ ಮನೆಗಳು ಆಧುನಿಕತೆಯ ಕಸರತ್ತಿಗೆ ಒಲಿಯುತ್ತಿಲ್ಲ. ಅನಿಲ್‌ಕುಮಾರ್ ಆ ಸೊಗಸನ್ನು ಅದಕ್ಕಾಗಿ ಉಳಿಸಿಕೊಂಡಿದ್ದಾರೆ. ಆದರೆ, ಮಳೆಗಾಲದಲ್ಲಿ ಹಳೇ ಸೋಗೆಯನ್ನು ಹೊಸದಾಗಿ ಹಾಕುತ್ತ ಹೋಗಬೇಕು. ಇದರಿಂದ ಮಳೆಗಾಲದಲ್ಲಿ ಸೋರುವುದನ್ನು ತಡೆಯಬಹುದು. ಇದೊಂದನ್ನು ಮಾಡಿದರೆ ಎಸಿ ರೂಮ್‌ಗೂ ಸೋಗೆ ಮನೆಗೂ ಇನ್ನುಳಿದಂತೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಂಥ ಭಾಗಗಳಲ್ಲಿ ಸೋಗೆ ಮನೆಗಳು ಕಾಣುವುದಿಲ್ಲ. ಅಲ್ಲಿ ಹೆಚ್ಚಾಗಿರುವುದು ತಗಡಿನಂಥ ಮನೆಗಳು. ಇವುಗಳನ್ನು ಮನೆಗಳಿಗೆ ಮಾತ್ರವಲ್ಲ, ಜಾನುವಾರುಗಳು ಇರುವ ಕೊಟ್ಟಿಗೆಗೂ ಬಳಸುತ್ತಾರೆ. ಆದರೆ, ತೀರಾ ಇತ್ತೀಚೆಗೆ ಬೇಸಿಗೆ ವೇಳೆ ತಂಪಾಗಲಿ ಎಂದು ತಗಡಿನ ಮೇಲೆ ತೆಂಗಿನಗರಿಗಳನ್ನು ಹಾಸುತ್ತಾರೆ. ಇದು ಆಯಾಯಾ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಸೋಗೆಮನೆಯ ಸೊಬಗು ತಿಳಿಯಲು ಅನಿಲ್‌ಕುಮಾರರ ಮೊಬೈಲ್ ಸಂಖ್ಯೆ 9743678466.
- ಪ.ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


