ಮಹಿಳೆ-ಮನೆ-ಬದುಕು

ನಾರಿಯ ಉಪಾಯ

ನಾರಿಯ ಉಪಾಯ
Published On :

ನಾರಿ ಇಂದು ಏರದಿರುವ ಎತ್ತರ ಇಲ್ಲ. ತುಳಿಯದಿರುವ ಅಂಗಳವಿಲ್ಲ. ಆಕೆ ಈಗ ಪರಿಪೂರ್ಣ ಸ್ವಾವಲಂಬಿ. ಹಿಂದೆಲ್ಲಾ ಮಹಿಳೆಯರೆಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯ ಇರುವ ಸಾಕುಪ್ರಾಣಿಗಳಂತೆ, ಮಕ್ಕಳನ್ನು ಹೆರುವ ಯಂತ್ರದಂತೆ ಎಂದು ತಿಳಿದಿದ್ದರು. ಒಂಟಿಯಾಗಿ ಹೊರಹೋಗುವುದನ್ನು ಮನೆಯ ಹಿರಿಯರು ವಿರೋಧಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ಪ್ರತಿಯೊಂದು ಹುದ್ದೆಯೂ ಸವಾಲನ್ನು ಸ್ವೀಕರಿಸುವ ವ್ಯಕ್ತಿಗಳನ್ನು ಬಯಸುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಕಾರ್ಯನಿರ್ವಹಿಸುವ ಅನಿವಾರ್ಯತೆಯನ್ನು ಕುಟುಂಬಗಳು ಅರಿತುಕೊಂಡಿವೆ. ಇದರ ಅನುಕೂಲ ಪಡೆಯುವ ಸಮಾಜಘಾತುಕರು ಹೆಣ್ಣು ಜೀವವ ಹಿಂಡಿ ಹಿಪ್ಪೆ ಮಾಡುವತ್ತ ತಮ್ಮ ಹೀನ ಬುದ್ಧಿ ಹರಿಸುತ್ತಿದ್ದಾರೆ. ಆದರೆ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದ್ದರೆ ಆಕಸ್ಮಿಕ ಘಟನೆಗಳು ನಡೆಯದಂತೆ ಅಂದುಕೊಂಡ ಸಾಧನೆಯನ್ನು ಮಾಡಬಹುದು.  
ಇತ್ತೀಚಿನ ದಾಮಿನಿ ಪ್ರಕರಣವನ್ನು ನೆನಪಿಸಿಕೊಂಡರೇ ಮೈಯೆಲ್ಲಾ ನಡುಗುತ್ತದೆ. ಪ್ರತಿದಿನ ಇಂಥ ಕಾಮುಕರಿಗೆ ಬಲಿಯಾಗುತ್ತಿರುವ ದಾಮಿನಿಯರು ಅದೆಷ್ಟೋ. ಇದಕ್ಕೆಲ್ಲಾ ಹೆದರದೆ ಈ ಕೆಲವು ಸಂಗತಿಗಳು ಯಾವಾಗಲೂ ನಿಮ್ಮ ಗಮನದಲ್ಲಿದ್ದರೆ ನೀವು ಆದಷ್ಟು ಸುರಕ್ಷಿತವಾಗಿರಬಹುದು.

* ಮೊದಲ ಬಾರಿಗೆ ಸಂದರ್ಶನಕ್ಕಾಗಲಿ, ವಿದ್ಯಾಭ್ಯಾಸಕ್ಕಾಗಲಿ ಪ್ರಯಾಣ ಬೆಳೆಸುತ್ತಿರುವಿರಾದರೆ ತಂದೆ, ತಾಯಿ, ಸಹೋದರ ಅಥವಾ ಗಂಡನನ್ನು ಜತೆಯಲ್ಲಿ ಕರೆದೊಯ್ಯಿರಿ.
* ಯಾರೊಂದಿಗೂ ನಿಮ್ಮ ಗುಪ್ತ ಮಾಹಿತಿಗಳ ಬಗ್ಗೆ, ಎಟಿಎಂ ಮತ್ತು ಕ್ರೆಡಿಟ್‌ಕಾರ್ಡ್ ಬಗ್ಗೆ ಚರ್ಚಿಸಬೇಡಿ. ನೀವು ಉಳಿದುಕೊಳ್ಳುವ ಹೋಟೆಲ್ ಅಥವಾ ಪಿಜಿಯ ವಿಶ್ವಾಸಾರ್ಹತೆ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿ.
* ಹೋಟೆಲ್‌ನ ರಿಜಿಸ್ಟರ್‌ನಲ್ಲಿ ನಿಮ್ಮ ಪೂರ್ಣ ಮಾಹಿತಿಯನ್ನು ನಮೂದಿಸಿ ಚೆಕ್ ಇನ್ ಅಗಿ. ನಿಮ್ಮ ಮಾಹಿತಿ ಪಡೆಯದೆಯೇ ನೆಲೆಸಲು ಹೇಳುವ ಹೋಟೆಲ್‌ಗಳಲ್ಲಿ ತಂಗಬೇಡಿ.
* ನೀವು ಇಳಿದುಕೊಂಡ ಪಿಜಿ ಅಥವಾ ಹೋಟೆಲ್ ಅಥವಾ ಹಾಸ್ಟೆಲ್ ವಿಳಾಸ, ಪೋನ್ ನಂಬರನ್ನು ತಕ್ಷಣವೇ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ, ಆತ್ಮೀಯರಿಗೆ ತಿಳಿಸಿಬಿಡಿ.
* ರೂಮ್‌ನಲ್ಲಿ ಬಟ್ಟೆ ಬದಲಿಸುವಾಗ, ಸ್ನಾನ ಮಾಡುವುದಕ್ಕೆ ಮುಂಚೆ ಎಲ್ಲಿಯೂ ಕ್ಯಾಮೆರಾ ಅಡಗಿಸಿಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಖಚಿತ ಪಡಿಸಿಕೊಳ್ಳದೆ ಹೋಟೆಲ್ ಸಿಬ್ಬಂದಿ ಅಥವಾ ಯಾರನ್ನೇ ಆದರೂ ರೂಮ್ ಒಳಗೆ ಬರಲು ಬಿಡಬೇಡಿ.
* ದುಡ್ಡನ್ನು ಬೇರೆಬೇರೆ ಕಡೆ ಇಟ್ಟು ಕೊಂಡರೆ ಕಳ್ಳತನದ ಭಯ ಕಡಿಮೆ. ಜತೆಗೆ ಎಚ್ಚರಿಕೆಯಿಂದ ಖರ್ಚು ಮಾಡುವಿರಿ. ಸಾಧ್ಯವಾದಷ್ಟೂ ರಾತ್ರಿ ಹೊತ್ತು ಹೊರಗೆ ಹೋಗಬೇಡಿ. ಅಪರಿಚಿತರಿಂದ ಪಾನೀಯ ಅಥವಾ ತಿನ್ನುವ ವಸ್ತುಗಳನ್ನು ಸ್ವೀಕರಿಸಬೇಡಿ.
* ಹೊಸದಾಗಿ ಭೇಟಿಯಾದ ವ್ಯಕ್ತಿಗಳೊಡನೆ ಆಲಿಂಗನ, ಹಸ್ತಲಾಘವ ಬೇಡ. ಪದೇಪದೆ ಮುಗುಳ್ನಗುವುದು, ನೇರ ಕಣ್ಣಿನ ಸಂಪರ್ಕ ಹೊಂದುವುದು ಬೇಡ.
* ಯಾವುದೇ ಕಾರಣಕ್ಕೂ ಒಬ್ಬರಿಗಿಂತ ಹೆಚ್ಚು ಜನ ಗಂಡಸರಿದ್ದರೆ ಅಂಥ ಟ್ಯಾಕ್ಸಿ, ಆಟೊ ಅಥವಾ ಕ್ಯಾಬ್‌ನಲ್ಲಿ ಪಯಣಿಸಬೇಡಿ. ನಿಮಗೆ ಗೊತ್ತಿರುವ ವ್ಯಕ್ತಿಯಿಂದಲೇ ಆದರೂ ಮನೆಯಲ್ಲಾಗಲಿ ಅಥವಾ ಹೋಟೆಲ್‌ನಲ್ಲಾಗಲಿ ಭೇಟಿಯಾಗಲು ಆಮಂತ್ರಣ ಸಿಕ್ಕರೆ ನಯವಾಗಿ ನಿರಾಕರಿಸಿ.
* ನಿಮ್ಮ ದೇಹ ಭಾಷೆಗೆ ನಿಮ್ಮದೇ ಆದ ಕಡಿವಾಣ ಇರಲಿ. ಸಾಮಾನ್ಯವಾಗಿ ಪುರುಷರು ಅಸಡ್ಡೆಯ ಲಾಭ ಪಡೆಯುವುದರಲ್ಲಿ ಉತ್ಸುಕರಾಗಿರುತ್ತಾರೆ. ಉದಾ: ತುಂಬಾ ಹತ್ತಿರಕ್ಕೆ ಬಂದು ಕುಳಿತುಕೊಳ್ಳುವುದು, ಕೈ ಹಿಡಿದುಕೊಳ್ಳುವುದು.

- ಜಮುನಾರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.