ಜೋಲಿಲೈಫ್
ಅಮ್ಮನ ಮಡಿಲು ಕಂದನ ಪಾಲಿಗೆ ಸ್ವರ್ಗ. ಮುದ್ದು ಕಂದ ತಾಯಿಯ ಮಡಿಲಲ್ಲಿ ಮಲಗಿ ಆಟವಾಡುವುದು, ಒದ್ದಾಡುವುದು, ನಿದ್ದೆ ಮಾಡುವುದು,...

ಅಮ್ಮನ ಮಡಿಲು ಕಂದನ ಪಾಲಿಗೆ ಸ್ವರ್ಗ. ಮುದ್ದು ಕಂದ ತಾಯಿಯ ಮಡಿಲಲ್ಲಿ ಮಲಗಿ ಆಟವಾಡುವುದು, ಒದ್ದಾಡುವುದು, ನಿದ್ದೆ ಮಾಡುವುದು, ಪಿಳಿಪಿಳಿ ಕಣ್ಣು ಬಿಡುತ್ತಾ ಅಮ್ಮನನ್ನೇ ನೋಡುತ್ತಾ ಕಾಲ ಕಳೆಯುವುದು ಸಾಮಾನ್ಯ. ಮಡಿಲು ಅನ್ನೋ ಮಮತೆಯ ತೆಕ್ಕೆ ಮಕ್ಕಳ ಪಾಲಿಗೆ ಅಚ್ಚುಮೆಚ್ಚು.
ತಾಯಿ ಮಡಿಲು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ಪಾಲಿಗೆ ಮಡಿಲೇ ಜಗತ್ತು. ಹಾಲುಣಿಸುವ ತಾಯಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಾ ಮಗು ನಿದ್ರೆಗೆ ಜಾರುವಂತೆ ಮಾಡುತ್ತಾಳೆ. ಮಗುವಿನ ನಿದ್ರೆಗೆ ಎಲ್ಲಿ ಭಂಗವಾಗುತ್ತೋ ಎಂಬ ಕಾರಣಕ್ಕೆ ಕಂದನನ್ನು ಅಲುಗಾಡಿಸದೆ ಎಷ್ಟು ಹೊತ್ತಾದರೂ ಹಾಗೆಯೇ ಕುಳಿತು ಮಗುವನ್ನು ನೋಡಿಕೊಳ್ಳುತ್ತಾಳೆ. ಹೀಗೆ ಮಡಿಲು ಅನ್ನೋ ಸುಂದರ ಜಾಗದಲ್ಲಿ ಮಕ್ಕಳು ಅರಳುತ್ತವೆ. ನಿತ್ಯ ಅಮ್ಮನ ಮಡಲಲ್ಲಿ ಮಲಗದಿದ್ದರೆ ಮಕ್ಕಳ ಪಾಲಿಗೆ ಏನೋ ಕಳೆದುಕೊಂಡ ಅನುಭವ. ಮುದ್ದು ಕಂದಮ್ಮಗಳು ಮತ್ತೆ ಮತ್ತೆ ಅಮ್ಮನ ಮಡಿಲು ಹುಡುಕಿಕೊಂಡು ಬರುತ್ತವೆ. ಹಾಗೇ ಅಮ್ಮನ ಮಡಿಲು ಮಕ್ಕಳ ಪಾಲಿಗೆ ಅಕ್ಕರೆಯ ಸ್ಥಾನ.
ಕಾಲ ಬದಲಾದಂತೆ ಮಡಿಲು, ಮಮತೆ ಅನ್ನೋ ಪದ ಅರ್ಥ ಕಳೆದುಕೊಳ್ಳುತ್ತಿದೆ. ಮಡಿಲಲ್ಲಿ ಮಕ್ಕಳನ್ನು ಮಲಗಿಸಿಕೊಂಡು ಪಾಲನೆ, ಪೋಷಣೆ ಮಾಡುವ ತಾಯಂದಿರು ಕಡಿಮೆಯಾಗುತ್ತಿದ್ದಾರೆ. ಕೆಲಸದ ಒತ್ತಡ, ಬದಲಾದ ಈ ಕಾಲಘಟ್ಟದಲ್ಲಿ ಅಮ್ಮನ ಮಡಿಲಿನ ಆನಂದವನ್ನು ಇಂದಿನ ಮಕ್ಕಳು ಕಳೆದುಕೊಳ್ಳುತ್ತಿವೆ. ಹಾಯಾಗಿ ಆಟವಾಡುತ್ತಾ, ಚೆಂದಗೆ ಹೊರಳಾಡುತ್ತಾ ಇರಬೇಕಾದ ಮುದ್ದು ಕಂದಮ್ಮಗಳು ಮಡಲು ಎಂಬ ಮಮತೆಯ ಜಾಗ ಕಟ್ಟಿಕೊಡುವ ಸಂತೋಷದಿಂದ ವಂಚಿತರಾಗುತ್ತಿದ್ದಾರೆ.
ಇದಕ್ಕೆ ಪರ್ಯಾಯ ಎಂಬಂತೆ ತೊಟ್ಟಿಲು, ಜೋಲಿಗಳು ಮಕ್ಕಳ ಪಾಲಿಗೆ ದಕ್ಕಿದೆಯಾದರೂ ಅಮ್ಮನ ಮಡಿಲು ನೀಡುವ ಆನಂದ ಇವುಗಳಿಂದ ಸಿಗುವುದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೂ ತಾಯಿಯ ಮಡಿಲೇ ಸರ್ವಕಾಲಕ್ಕೂ ದಕ್ಕುವುದಿಲ್ಲವಲ್ಲ, ಅದಕ್ಕಾಗಿಯೇ ಜೋಲಿ ಮಕ್ಕಳ ಪಾಲಿನ ಆಶ್ರಯ ತಾಣವಾಗಿದೆ. ಕಂದಮ್ಮಗಳಿಗೆ ಅಕ್ಕರೆಯ ಅಮ್ಮನಾಗಿ ಕಾರ್ಯನಿರ್ವಹಿಸುತ್ತಿದೆ.
ಕಂದಮ್ಮನ ನಿದ್ದೆಗೆ, ಚಿನ್ನಾಟಕ್ಕೆ ಇಂದು ತೊಟ್ಟಿಲು, ಜೋಲಿಗಳೇ ಹಾಸಿಗೆ, ಅಂಗಳವಾಗಿದೆ. ಜೋಲಿಯಲ್ಲಿ ತೂಗುತ್ತಿದರೆ ಮಕ್ಕಳಿಗೆ ನಿದ್ರೆ ತಾನಾಗೇ ಬಂದು ಬಿಡುತ್ತದೆ. ಮಕ್ಕಳು ಮಗ್ಗುಲು ಬದಲಿಸುತ್ತಾ ಅಮ್ಮನ ಮಡಿಲಲ್ಲಿಯೇ ಮಲಗಿದ್ದೇವೆ ಎಂಬ ಅನುಭವದಲ್ಲಿ ಜೋಲಿಯಲ್ಲಿ ಜಾಲಿಯಾಗಿ ನಿದ್ರಿಸುತ್ತವೆ. ಹಿಂದೆ ಪ್ರತಿ ಮನೆಯಲ್ಲೂ ಜೋಲಿ ಅಥವಾ ತೊಟ್ಟಿಲು ಇದ್ದೇ ಇರುತ್ತಿದ್ದವು. ಈಗ ಅದೂ ಕಡಿಮೆಯಾಗಿದೆ. ಮಕ್ಕಳಿಗಾಗಿಯೇ ಹೊಸ ಹೊಸ ರೀತಿಯ ಹಾಸಿಗೆ, ಬಾಕ್ಸ್ ರೂಪದ ತೊಟ್ಟಿಲುಗಳು ಬಂದಿವೆ. ಆದರೆ, ಹಿಂದೆ ಇದ್ದ ಜೋಲಿಗಳು ಕಟ್ಟಿ ಕೊಡುತ್ತಿದ್ದ ಖುಷಿ ಇಂದಿನ ಹಾಸಿಗೆಗಳಲ್ಲಿ ಇಲ್ಲ ಎಂಬುದು ನಿಜವಾದರೂ ಅವು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ನಮ್ಮ ಪೂರ್ವಿಕರ ಕಲ್ಪನೆಯೇ ಅದ್ಭುತ. ಅವರು ತಾಯಿ ಮಡಿಲಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಜೋಲಿಗೂ ನೀಡುತ್ತಿದ್ದರು. ಮಕ್ಕಳನ್ನು ಜೋಲಿಯಲ್ಲಿ ಮಲಗಿಸಿ ಪದ ಹಾಡುತ್ತಾ ಜೀಕುತ್ತಿದ್ದರೆ ಮಗು ಸದ್ದಿಲ್ಲದೆ ನಿದ್ರಾಲೋಕಕ್ಕೆ ಜಾರಿಬಿಡುತ್ತಿತ್ತು. ಅಷ್ಟೊಂದು ಮಹತ್ವ ಮತ್ತು ತಾಕತ್ತು ಜೋಲಿಗಿತ್ತು.
ಆದರೆ, ಇಂದು ಜೋಲಿ ಬಳಕೆಯೇ ನಿಂತುಹೋಗಿದೆ. ಲಾಲಿ ಹಾಡುತ್ತಾ ಮಕ್ಕಳನ್ನು ಮಲಗಿಸಲು ಜೋಲಿ ಜೀಕುವ ಪದ್ಧತಿಯೇ ಕಣ್ಮರೆಯಾಗಿಬಿಟ್ಟಿದೆ. ಆದರೆ ಹಳ್ಳಿಗಳಲ್ಲಿ ಈಗಲೂ ತೊಟ್ಟಿಲು, ಜೋಲಿ ಬಳಕೆ ಚಾಲ್ತಿಯಲ್ಲಿದ್ದು ತನ್ನ ಮಹತ್ವ ಉಳಿಸಿಕೊಂಡಿದೆ.
ಹಿಂದೆ ಇದ್ದ ಜೋಲಿಯನ್ನೊಮ್ಮೆ ನೆನಪಿಸಿಕೊಳ್ಳಿ. ಮಗು ಅತ್ತಾಗ, ನಿದ್ರೆಗೆ ಜಾರುವಾಗ ಜೋಲಿಯೇ ಬೇಕಾಗಿತ್ತು. ಮನೆಯ ಹಾಲ್‌ನಲ್ಲಿ ಕಂಬಿಯೊಂದಕ್ಕೆ ಕಾಟನ್ ಬಟ್ಟೆ (ಅಮ್ಮನ ಹಳೆಯ ಕಾಟನ್ ಸೀರೆ) ಬಿಗಿದು ಅದರಲ್ಲಿ ಮಲಗಿಸುತ್ತಿದ್ದರು. ಆದರೆ, ಈಗ ಆ ಸಂಪ್ರದಾಯವೇ ಮಾಯವಾಗಿ ಬಿಟ್ಟಿದೆ.
ಈಗ ಜೋಲಿಗಳು ಹೈಟೆಕ್ ರೂಪ ಪಡೆದಿವೆ. ಜೋಲಿಗಳಿಗೆ ಬದಲಾಗಿ ಬ್ಯಾಟರಿ ಚಾಲಿತ ಜೋಕಾಲಿಗಳು ಕಾರ್ಯನಿರ್ವಹಿಸುವ ಹಂತ ತಲುಪಿವೆ. ಮಗುವನ್ನು ಜೋಕಾಲಿಯಲ್ಲಿ ಮಲಗಿಸಿ ಬಟನ್ ಒತ್ತಿದರೆ ಅದು ತಾನಾಗೆ ತೂಗಿಕೊಳ್ಳುತ್ತದೆ. ಕೆಲಸ ಕೆಲಸ ಎನ್ನುವ ಮಂದಿ ಇಂಥ ಜೋಕಾಲಿಗಳಿಗೆ ಮೊರೆ ಹೋಗುತ್ತಿದ್ದಾರೆ.
ಹಿಂದೆ ವಿವಿಧ ಬಗೆಯ ಜೋಲಿಗಳನ್ನು ಕಾಣುತ್ತಿದ್ದೆವು. ಹಗ್ಗ ಹಾಕಿ ಮಾಡಲಾಗುತ್ತಿದ್ದ ಜೋಲಿ, ದೊಡ್ಡ ಸೀರೆಯನ್ನೇ ಜೋಲಿಯಾಗಿ ಬಳಸುತ್ತಿದ್ದುದನ್ನು ಕಾಣಬಹುದಾಗಿತ್ತು. ಇಂದು ಇವೆಲ್ಲವೂ ನೇಪಥ್ಯಕ್ಕೆ ಸರಿದು ಬಿಟ್ಟಿದೆ. ಪೂರ್ವಜರು ಕಂಡುಕೊಂಡಿದ್ದ ಜೋಲಿ ಅಳಿವಿನಂಚಿಗೆ ಸಾಗಿರುವುದು ಮಾತ್ರ ದುರಂತವೇ ಸರಿ.
- ಜ್ಯೋತಿ ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


