ಮಹಿಳೆ-ಮನೆ-ಬದುಕು

ರೆಡೀನಾ..?

ಮಕ್ಕಳು ಮುಂದೆ ಬರಬೇಕು. ಅವರಿಗೆ ಉತ್ತಮ ಕೆಲಸ ಸಿಗಬೇಕು. ಅದಕ್ಕಾಗಿ ಅವರು ಓದುತ್ತಲೇ ಇರಬೇಕು ಎಂಬ ಭಾವನೆ ಇಂದಿನ ಪ್ರತಿ ತಂದೆತಾಯಿಗೆ.

ರೆಡೀನಾ..?
Published On :

ಮಕ್ಕಳು ಮುಂದೆ ಬರಬೇಕು. ಅವರಿಗೆ ಉತ್ತಮ ಕೆಲಸ ಸಿಗಬೇಕು. ಅದಕ್ಕಾಗಿ ಅವರು ಓದುತ್ತಲೇ ಇರಬೇಕು ಎಂಬ ಭಾವನೆ ಇಂದಿನ ಪ್ರತಿ ತಂದೆತಾಯಿಗೆ. ಹಾಗಾಗಿಯೇ ಮಕ್ಕಳು ಟ್ಯೂಷನ್, ಕೋಚಿಂಗ್, ಓದು, ನಾನಾ ಕಲೆಗಳ ಕಲಿಕೆ ಎಂದು ಯಂತ್ರಗಳಾಗಿದ್ದಾರೆ.
ಬೇಸಿಗೆ ರಜೆ ಬಂದರೂ ಶಿಬಿರ, ಅದೂ ಇದೂ ಎಂದು ಮಕ್ಕಳನ್ನು ಚೌಕಟ್ಟಿನೊಳಗೆ ಬಂಧಿಸಿಡುತ್ತೇವೆ. ಹಿಂದೆಲ್ಲ ಬೇಸಿಗೆ ರಜೆ ಬಂತೆಂದರೆ ಸಾಕು, ತುಂಬು ಕುಟುಂಬದ ಅಜ್ಜನ ಮನೆಗೆ ಓಡುತ್ತಿದ್ದರು. ಹಳ್ಳಿ ಪರಿಸರದೊಂದಿಗೆ ಬೆರೆತು, ಇತರೆ ಮಕ್ಕಳೊಂದಿಗೆ ಕಲೆತು ಹತ್ತು ಹಲವು ಆಟಗಳು, ಮೈಬೆವರಿಳಿಸುವ ಸಾಹಸ ಕ್ರೀಡೆಗಳಲ್ಲಿ ತೊಡಗುತ್ತಿದ್ದರು. ಇಂದಿನ ಪೀಳಿಗೆಗೆ ಅರಿವಿಲ್ಲದ ಸಮೂಹದಲ್ಲಿ ಆಡುವ ಕೆಲವು ಆಟಗಳ ಪರಿಚಯ ಇಲ್ಲಿದೆ...

ಕುಂಟೆಬಿಲ್ಲೆ
ಅಂಗಳದಲ್ಲಿ ಎಂಟು ಸಮನಾದ ಚೌಕಗಳನ್ನು ಹಾಕಿ, ಒಂದು ಚಪ್ಪಟೆ ಕಲ್ಲನ್ನು ತೆಗೆದುಕೊಂಡು, ಒಂದೊಂದೇ ಮನೆಗೆ ಒಂಟಿಕಾಲಿನಲ್ಲಿ ನೂಕಿಕೊಂಡು ಹೋಗಬೇಕು. ಹೀಗೆ ನೂಕುವಾಗ ಬಚ್ಚೆ (ಚಪ್ಪಟೆ ಕಲ್ಲು) ಗೆರೆಗಳಲ್ಲಿ ನಿಲ್ಲಬಾರದು. ಹಾಗೆ ನಿಂತರೆ ಆಡಲು ಮತ್ತೊಬ್ಬರಿಗೆ ಅವಕಾಶ. ಇದರಲ್ಲಿ ನಾಲ್ಕೈದು ಬಗೆಗಳಿದ್ದು ಕೊನೆಯಲ್ಲಿ ಕಣ್ಣು ಮುಚ್ಚಿಕೊಂಡು ಎಂಟು ಮನೆಗಳ ಗೆರೆಗಳನ್ನು ತುಳಿಯದೇ ಹೊರಬರಬೇಕು. ಇದರಿಂದ ಕಾಲುಗಳಿಗೆ ಸುಲಭ ವ್ಯಾಯಾಮ ಸಿಗುತ್ತದೆ.

ಕಣ್ಣಾಮುಚ್ಚಾಲೆ
ಈ ಆಟಕ್ಕೆ ಒಬ್ಬರು ಕಣ್ಣು ಮುಚ್ಚಲು ಬೇಕು. ಅವರೇ ಅಜ್ಜಿ. 'ಕಣ್ಣಾಮುಚ್ಚೇ ಕಾಡೇ ಗೂಡೇ, ಉದ್ದಿನಮೂಟೆ ಉರುಳೇ ಹೋಯ್ತು, ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ, ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ, ಕೂಕೂ' ಎನ್ನುತ್ತಾ ಒಬ್ಬರ ಕಣ್ಣನ್ನು ಅಜ್ಜಿ ಮುಚ್ಚುತ್ತಾರೆ. ಉಳಿದವರೆಲ್ಲರೂ ಬೇರೆಬೇರೆ ಸ್ಥಳಗಳಲ್ಲಿ ಅಡಗಿಕೊಳ್ಳುತ್ತಾರೆ. ಕಣ್ಣು ಮುಚ್ಚಿಸಿಕೊಂಡಿದ್ದ ಕಳ್ಳ ಉಳಿದವರನ್ನು ಹುಡುಕಬೇಕು.

ಮರಕೋತಿಯಾಟ
ಈ ಆಟದಲ್ಲಿ ಒಬ್ಬರು ಹಿಡಿಯುವವರಿದ್ದರೆ ಉಳಿದವರೆಲ್ಲ ಮರದ ಮೇಲಿರುತ್ತಾರೆ. ಮರದಿಂದ ಮರಕ್ಕೆ ಜಿಗಿಯುವ ಈ ಆಟದಲ್ಲಿ ಬಹಳಷ್ಟು ಧೈರ್ಯ ಹಾಗೂ ಚಾಣಾಕ್ಷತನ ಬೇಕು. ಅಕ್ಕಪಕ್ಕದ ಮರಗಳಿಗೆ ಜಿಗಿಯುವಾಗ ಆಯ ತಪ್ಪದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಮ್ನಾಸ್ಟಿಕ್ ಕರಗತ ಮಾಡಿಕೊಳ್ಳಲು ಸಹಾಯಕ.

ಚಿನ್ನಿದಾಂಡು
ಒಂದು ಕೋಲನ್ನು ಸಣ್ಣದಾಗಿ ಕತ್ತರಿಸಿ ಅದರ ಎರಡೂ ಬದಿಯನ್ನು ಚೂಪಾಗಿಸಬೇಕು. ಇದು ಚಿನ್ನಿ, ಇದನ್ನು ಹೊಡೆಯಲು ಬಳಸುವ ಕೋಲಿಗೆ ದಾಂಡು ಎಂದು ಹೆಸರು. ನೆಲದಲ್ಲಿ ಅರ್ಧ ಇಂಚು ಗುಂಡಿ ತೋಡಿ ಅಲ್ಲಿ ಚಿನ್ನಿಯನ್ನು ಇಡಬೇಕು. ಎದುರು ಪಾರ್ಟಿಯವರು ರೆಡಿ ಎಂದ ಕೂಡಲೇ ದಾಂಡಿನಿಂದ ಚಿನ್ನಿಯನ್ನು ಹೊಡೆಯಬೇಕು. ಅದು ಎಷ್ಟು ದೂರ ಹೋಗುತ್ತದೆ ಎಂದು ಅಂದಾಜಿಸಿ ಅಲ್ಲಿಂದ ಗುಳಿಗೆ ಇರುವ ಅಳತೆ ಹೇಳಬೇಕು. ಎದುರು ಪಾರ್ಟಿಗೆ ಅನುಮಾನವಾದಲ್ಲಿ ಅದನ್ನು ಗಿಲ್ಲಿಯ ರೂಪದಲ್ಲಿ ಅಳೆಯುತ್ತಾರೆ. ಈ ಆಟದಿಂದ ಮಕ್ಕಳಿಗೆ ಗುರಿ ಹೆಚ್ಚುತ್ತದೆ. ದೂರದ ಅಂತರವನ್ನು ಅಂದಾಜಿನಲ್ಲಿ ಅಳೆಯುವ ಕೌಶಲ ವೃದ್ಧಿಯಾಗುತ್ತದೆ.

ಅವರ್ನ ಬಿಟ್ ಇವರ್ಯಾರು
ಈ ಆಟಕ್ಕಂತೂ ಎಷ್ಟು ಜನರಿದ್ದರೂ ನಡೆಯುತ್ತದೆ. ಕನಿಷ್ಠ 5 ಜನರಿದ್ದರೆ ಚೆನ್ನ. ಒಬ್ಬರು ಇನ್ನೊಬ್ಬರ ಕಣ್ಣು ಮುಚ್ಚಿ ಎದುರಿನಲ್ಲಿರುವವರು ಯಾರೆಂದು ಬೆರಳು ತೋರಿಸಿ ಕೇಳುತ್ತಾರೆ. ಆಗ ಮುಂಚೆಯೇ ನಿಂತಿದ್ದ ಮಕ್ಕಳು ಅದಲು ಬದಲಾಗುತ್ತಾರೆ. ಅವರನ್ನು ಸರಿಯಾಗಿ ಗುರುತಿಸಿದರೆ ಮತ್ತೆ ಅವರು ಕಳ್ಳರಾಗುತ್ತಾರೆ.
ಹೀಗೆ ಹತ್ತು ಹಲವು ಆಟಗಳು ಯಾವುದೇ ಖರ್ಚಿಲ್ಲದೆ ಮಕ್ಕಳಿಗೆ ಮನರಂಜನೆ ಒದಗಿಸಬಲ್ಲವು. ಇಂಥ ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಕೀಳರಿಮೆ, ಖಿನ್ನತೆ, ಶೀಘ್ರ ಕೋಪಗೊಳ್ಳುವಿಕೆ ಶಮನವಾಗುತ್ತದೆ. ಗೆಳೆತನ ವೃದ್ಧಿಯಾಗುತ್ತದೆ. ಈ ಆಟಗಳನ್ನು ಆಡಿಸಲು ದೊಡ್ಡವರ ಅವಶ್ಯ ಕೂಡ ಇಲ್ಲ.

ಲಗೋರಿ
ಈ ಆಟಕ್ಕೆ ಕನಿಷ್ಠ ಆರು ಜನ ಬೇಕು. ಇದಕ್ಕೆ ಹಣ ವ್ಯಯಿಸಬೇಕಾಗಿಲ್ಲ. ಆರರಿಂದ ಏಳು ಹೆಂಚಿನ ತುಂಡು, ಕಲ್ಲು ಯಾವುದಾದರೂ ಆಯ್ಕೆಮಾಡಿಕೊಂಡು ಒಂದು ಪಾರ್ಟಿಯವರು ಒಂದರ ಮೇಲೊಂದರಂತೆ ಜೋಡಿಸಬೇಕು. ಎದುರು ಪಾರ್ಟಿಯವರು ಪ್ಲಾಸ್ಟಿಕ್ ಚೆಂಡಿನಿಂದ ಜೋಡಿಸಿಟ್ಟ ಚೂರುಗಳಿಗೆ ಹೊಡೆಯಬೇಕು. ಇದನ್ನು ಎದುರು ಪಾರ್ಟಿಯವರು ಜೋಡಿಸಲು ಬಂದಾಗ ಅವರಿಗೆ ಚೆಂಡಿನಿಂದ ಹೊಡೆಯಬೇಕು. ಚೆಂಡು ಮೈಗೆ ತಾಗಿದರೆ ಹೊಡೆದ ಪಾರ್ಟಿಗೆ ಒಂದು ಅಂಕ ಸಿಗುತ್ತದೆ. ಹೀಗೆ ಗರಿಷ್ಠ ಅಂಕ ನಿಗದಿಪಡಿಸಿಕೊಂಡು ಯಾರು ಗೆಲ್ಲುತ್ತಾರೆ ಎಂದು ಆಡುವುದು. ಇಂಥ ಆಟದಿಂದ ಮಕ್ಕಳಿಗೆ ದೈಹಿಕ ಶ್ರಮ ದೊರೆಯುತ್ತದೆ. ಜೊತೆಗೆ ಸಮೂಹದಲ್ಲಿ ಆಡುವ ಮನೋಭಾವ ಮೂಡುತ್ತದೆ.

- ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.