ಮಹಿಳೆ-ಮನೆ-ಬದುಕು

ಆಗಮನ

ಅತಿಥಿಗಳನ್ನು ಚೆನ್ನಾಗಿ ಸತ್ಕರಿಸಬೇಕೆಂಬ ಮನಸ್ಸೇನೋ ಇರಬಹುದು...

ಆಗಮನ
Published On :

ಈ ಹೈಫೈ ಲೈಫ್‌ನಲ್ಲಿ ಮನೆ ಮಂದಿಯೆಲ್ಲ ಒಟ್ಟಾಗಿ ಇರಬೇಕೆಂದರೆ ವೀಕೆಂಡೇ ಬರಬೇಕು. ಮನೆಯಲ್ಲಿರುವ ಎಲ್ಲರೂ ಹೊರಗೆ ಹೋಗಿ ದುಡಿಯುವವರೇ ಆಗಿರುವುದರಿಂದ ಎಲ್ಲರಿಗೂ ತರಾತುರಿಯ ಕೆಲಸ. ಹಾಗಾಗಿ ಮನೆಗೆ ಯಾರಾದರೂ ಅತಿಥಿಗಳು ದಿಢೀರ್ ಎಂದು ಆಗಮಿಸಿಬಿಟ್ಟರೆ ಮನೆಯವರಿಗೆಲ್ಲ ಒಂಥರಾ ಅನ್‌ಕಂಫರ್ಟೆಬಲ್ ಫೀಲ್.
ಅತಿಥಿಗಳನ್ನು ಚೆನ್ನಾಗಿ ಸತ್ಕರಿಸಬೇಕೆಂಬ ಮನಸ್ಸೇನೋ ಇರಬಹುದು. ಆದರೆ ಮೊದಲೇ ತಿಳಿಸದೆ ಅಥವಾ ಅವರ ಬಿಡುವಿನ ಸಮಯ ನೋಡಿಕೊಂಡು ಹೋಗದಿದ್ದರೆ ಅವರಾದರೂ ಏನು ಮಾಡಬೇಕು? ಅವರಿಗೆ ಮನೆಗೆ ಬಂದ ನೆಂಟರನ್ನು ಬೇಕಾಬಿಟ್ಟಿ ಉಪಚರಿಸುವ ಹಾಗೂ ಇಲ್ಲ. ತಮ್ಮ ಕೆಲಸ ಕಾರ್ಯಗಳನ್ನು ಬಿಡುವ ಹಾಗೂ ಇಲ್ಲ ಎಂಬಂತಾಗಬಹುದು.
ಹೀಗಾಗಿ ಅತಿಥಿಗಳಾಗಿ ಇನ್ನೊಬ್ಬರ ಮನೆಗೆ ಹೋಗುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿರಲಿ...

  •     ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ಹೋಗುವಾಗ ಯಾವತ್ತೂ ಸರ್‌ಪ್ರೈಸ್ ವಿಸಿಟ್ ಕೊಡಲು ಹೋಗಬೇಡಿ. ಯಾಕೆಂದರೆ ನೀವು ಕೊಡುವ ಭೇಟಿ ಅವರ ಪ್ರೈವೆಸಿಗೆ ಭಂಗವುಂಟು ಮಾಡಬಹುದು.
  •     ನೀವು ಹೋಗುತ್ತಿರುವ ಮನೆಯವರೆಲ್ಲ ಕೆಲಸಕ್ಕೆ ಹೋಗುವವರಾದರೆ ಅವರಿಗೆ ತಾವು ನಿಮ್ಮ ಮನೆಗೆ ಬರಬೇಕೆಂದಿದ್ದೇವೆ ಎಂದು ಹೇಳಿ ಇಂಥ ದಿನ ಬರುತ್ತೇವೆ ಬಿಡುವಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  •     ನೆಂಟರ ಮನೆಗೆ ಹೋಗುವ ಮುಂಚೆ ನೀವು ಆ ದಿನವೇ ವಾಪಸ್ ಬರುವರೇ ಅಥವಾ ಒಂದೆರಡು ದಿನ ಇದ್ದು ಬರುವವರೇ ಎಂಬುದನ್ನು ಮೊದಲೇ ನಿರ್ಧರಿಸಿ. ಅದನ್ನೂ ಮೊದಲೇ ತಿಳಿಸುವುದು ಉತ್ತಮ. ಯಾಕೆಂದರೆ ಅವರಿಗೂ ರಜೆ ಹಾಕಲು ಅನುಕೂಲವಾಗುತ್ತದೆ.
  •     ನೀವು ಇದೇ ಮೊದಲ ಬಾರಿಗೆ ಅವರ ಮನೆಗೆ ಹೋಗುತ್ತಿರುವುದಾದರೆ ನೆಂಟರ ಮನೆಗೆ ಹೋದಾಗ ಮೊದಲು ಮನೆಯಲ್ಲಿರುವವರೆಲ್ಲರ ಚಟುವಟಿಕೆ ಹೇಗಿದೆ, ಅವರ ದಿನಚರಿ ಯಾವ ರೀತಿ ಇದೆ ಎಂಬುದನ್ನು ಗಮನಸಿಕೊಳ್ಳಿ.
  •     ಈ ಮೊದಲು ಸಾಕಷ್ಟು ಬಾರಿ ಹೋಗಿದ್ದರೆ ಅವರ ದಿನಚರಿಗಳು ನಿಮಗೆ ತಿಳಿದಿರುವುದರಿಂದ ಅದರಂತೆಯೇ ನೀವು ವರ್ತಿಸಬೇಕು. ಅವರಿಗೆ ಯಾವ ರೀತಿ ಇದ್ದರೆ ಇಷ್ಟವಾಗುತ್ತದೆ ಹಾಗೆಯೇ ಇರಲು ಪ್ರಯತ್ನಿಸಿ.
  •     ನಿಮಗೆ ಯಾವುದೇ ವಸ್ತುಗಳು ಬೇಕಿದ್ದರೂ ನೀವೇ ತೆಗೆದುಕೊಳ್ಳಲು ಹೋಗಬೇಡಿ. ಅವರನ್ನು ಕೇಳಿ ತೆಗೆದುಕೊಳ್ಳಿ.
  •     ನಿಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದರೆ ವಾಪಸ್ ಬರುವವರೆಗೂ ಮಕ್ಕಳ ಮೇಲೆ ನಿಗಾ ಇಡಿ. ಯಾವುದೇ ವಸ್ತುಗಳನ್ನು ಮಕ್ಕಳು ಹಾಳು ಮಾಡದಂತೆ ಜಾಗ್ರತೆ ವಹಿಸಿ. ಸೋಫಾ, ಹಾಸಿಗೆ ಮೇಲೆ ಕಾಲು ಇಡಲು ಬಿಡಬೇಡಿ, ಕೆಳಗೆ ಕಾಲು ಬಿಟ್ಟು ಕುಳಿತುಕೊಳ್ಳುವಂತೆ ಹೇಳಿಕೊಡಿ.
  •     ಶೋಕೇಸ್‌ನಲ್ಲಿಟ್ಟುರುವ ವಸ್ತುಗಳನ್ನೆಲ್ಲ ತೆಗೆದು ನೋಡುವುದು ಮಕ್ಕಳ ಅಭ್ಯಾಸ. ಹಾಗಾಗಿ ಮಕ್ಕಳಿಗೆ ಅವುಗಳನ್ನು ಮುಟ್ಟದೆ ದೂರದಿಂದಲೇ ನೋಡುವಂತೆ ತಿಳಿ ಹೇಳಿ. ಅದು ಒಡೆದು ಹೋದರೆ ಮತ್ತೆ ತರಲಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಿ. ಅಕಸ್ಮಾತ್ ಮಕ್ಕಳೇನಾದರೂ ಯಾವುದಾದರೂ ವಸ್ತುಗಳನ್ನು ಒಡೆದು ಹಾಕಿದರೆ ಅದರ ವೆಚ್ಚ ತಾವೇ ಭರಿಸುವುದು ಉತ್ತಮ.
  •     ಚಿಕ್ಕ ಮಕ್ಕಳಿದ್ದರೆ ಬಾತ್‌ರೂಂ, ಟಾಯ್ಲೆಟ್‌ನಲ್ಲಿ ಸುಸ್ಸೂ ಮಾಡುವುದು ಸಹಜ. ಹಾಗಾಗಿ ಅವರು ಹೊರ ಬಂದ ಬಳಿಕ ನೀವು ಮತ್ತೊಮ್ಮೆ ನೀರು ಹಾಕಿ ಬರುವುದು ಉತ್ತಮ.
  •     ನೀವು ಹೋಗುವ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಏನಾದರೂ ತೆಗೆದುಕೊಂಡು ಹೋಗಿ. ಸ್ಕೂಲ್‌ಗೆ ಹೋಗುವಂಥ ಮಕ್ಕಳಿದ್ದರೆ ಪೆನ್, ಬಣ್ಣದ ಪೆನ್ಸಿಲ್ ಬಾಕ್ಸ್, ಸಣ್ಣ ಮಕ್ಕಳಿದ್ದರೆ ಆಟಿಕೆಗಳನ್ನು ಕೊಡುವುದರಿಂದ ಮಕ್ಕಳಿಗೆ ಖುಷಿಯಾಗಬಹುದು.
  •     ನೀವು ಹೋಗುವ ಮನೆಯವರು ಮಿತಭಾಷಿಗಳಾದಿದ್ದರೆ ನೀವು ಹಾಗೇ ಇದ್ದು ಬಿಡಿ. ಸುಮ್ಮನೆ ಅವರಿಗೆ ಸಂಬಂಧಪಡದ ವಿಷಯಗಳನ್ನು ಮಾತನಾಡದೆ ಇರುವುದು ಉತ್ತಮ.
  •     ಎರಡು ಮೂರು ದಿನ ಇರುವುದಾದರೆ ನಿಮಗೆ ಧರಿಸಲು ಬೇಕಾದ ಬಟ್ಟೆ, ಟವೆಲ್, ಬಾಚಣಿಗೆ, ಪೌಡರ್, ಕ್ರೀಂ ಇದನ್ನೆಲ್ಲ ನೀವೇ ಕೊಂಡೊಯ್ಯುವುದು ಒಳ್ಳೆಯದು.
  •     ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವದರೊಂದಿಗೆ ಮನೆಯವರಿಗೂ ಕೆಲಸದಲ್ಲಿ ನೆರವಾಗಿ. ತರಕಾರಿ ಹೆಚ್ಚಿ ಕೊಡುವುದು, ನೀವು ಬಳಸಿದ ಪಾತ್ರೆಗಳನ್ನು ನೀವೇ ತೊಳೆದಿಡುವುದು, ನಿಮ್ಮ ಬಟ್ಟೆಬರೆಗಳನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡದೆ ನಿಮ್ಮ ಬ್ಯಾಗ್ ಅಥವಾ ಬಟ್ಟೆ ಇಡಲು ಇರುವ ಕಪಾಟುಗಳಲ್ಲೇ ಇಡಿ.
- ಚಿತ್ರಾ ಸಿ.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.