ಆಸ್ಟ್ಟ್ರೇಲಿಯನ್ ಲಿವಿಂಗ್
ತಾಂತ್ರಿಕತೆ ಬೆಳೆದಂತೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪ್ರತಿ ಹಂತದಲ್ಲೂ ಮಾಲಿನ್ಯ ವೃದ್ಧಿಸುವ ಪ್ರಕ್ರಿಯೆಗಳು ಹೆಚ್ಚುತ್ತಿವೆ.

ತಾಂತ್ರಿಕತೆ ಬೆಳೆದಂತೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪ್ರತಿ ಹಂತದಲ್ಲೂ ಮಾಲಿನ್ಯ ವೃದ್ಧಿಸುವ ಪ್ರಕ್ರಿಯೆಗಳು ಹೆಚ್ಚುತ್ತಿವೆ. ನಗರೀಕರಣದ ಪ್ರಭಾವದಿಂದ ಬೆಂಗಳೂರಿನಂಥ ಮಹಾನಗರದಲ್ಲಿ ಪರಿಶುದ್ಧ ವಾತಾವರಣ ಸಿಗದ ಸ್ಥಿತಿ. ಜನಸಂಖ್ಯೆ ಹೆಚ್ಚಳ ಹಾಗೂ ಸೂಕ್ತ ಸ್ಥಳದ ಅಭಾವದಿಂದ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಇಕ್ಕಟ್ಟಾದ ಪ್ರದೇಶದಲ್ಲಿ ಒಂದರ ಮೇಲೆ ಮತ್ತೊಂದು ಮನೆ ಕಟ್ಟುತ್ತಿರುವುದರಿಂದ ಗಾಳಿ, ಬೆಳಕು ಕಾಣದಾಗಿದೆ.
ಇಂಥ ದುಸ್ಥಿತಿಯಲ್ಲಿ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಪರಿಸರದಲ್ಲಿ ಮನೆಗಳು ಇರುವುದು ಅಪರೂಪ. ಆದರೆ, ಬೆಂಗಳೂರಿನ ಕೆ.ಆರ್.ಪುರ ಬಳಿ 'ಆಸ್ಟ್ರೇಲಿಯನ್ ಲಿವಿಂಗ್' ಮಾದರಿಯಲ್ಲಿ ಪರಿಸರ ಸ್ನೇಹಿ ಮನೆಗಳು ತಲೆ ಎತ್ತಿವೆ.
ಏನಿದು 'ಆಸ್ಟ್ರೇಲಿಯನ್ ಲಿವಿಂಗ್'?
ಹೆಸರೇ ಸೂಚಿಸುವಂತೆ ಆಸ್ಟ್ರೇಲಿಯಾ ದೇಶದಲ್ಲಿ ನಿರ್ಮಿಸುವ ಮಾದರಿಯಲ್ಲೇ ಮನೆಗಳನ್ನು ಕಟ್ಟುವುದು. ವಿಶಾಲವಾದ ಜಾಗ, ಮನೆಯ ಸುತ್ತಲೂ ಕಂಗೊಳಿಸುವ ಹಸಿರು, ಒಳಾಂಗಣ ವಿನ್ಯಾಸದಲ್ಲಿ ಕಟ್ಟಿಗೆಯಲ್ಲಿಯೇ ಅಲಂಕಾರ, ಗಾಳಿ, ಬೆಳಕು ಬರಲು ದೊಡ್ಡದಾದ ಕಿಟಕಿಗಳುಳ್ಳ ಮನೆಗಳನ್ನು ನಿರ್ಮಿಸುವುದು.
ಭಾರತದಲ್ಲಿ ಮನೆಗಳನ್ನು ನಿರ್ಮಿಸುವಾಗ ಮಾಮೂಲಿಯಾಗಿ ಪುಟ್ಟದಾದ ಕಿಟಕಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಆದರೆ, ಆಸ್ಟ್ರೇಲಿಯಾದಲ್ಲಿ ಮಳೆಗಾಲ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬಿಸಿಲು ಹೆಚ್ಚಿರುವುದರಿಂದ ಗಾಳಿ, ಬೆಳಕು ಸುಲಭವಾಗಿ ಮನೆಯಲ್ಲಿ ದೊರಕುವಂತೆ ನಾವು ಅಳವಡಿಸುವ ಕಿಟಿಕಿ ಮಾದರಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಾರೆ. ಸುತ್ತಲೂ ಜಾಗ ಸುಲಭವಾಗಿ ದೊರೆಯುವುದರಿಂದ ಹಸಿರು ಕಂಗೊಳಿಸುವಂತೆ ಗಾರ್ಡನ್ ನಿರ್ಮಿಸಿರುತ್ತಾರೆ. ಅದೇ ಮಾದರಿಯಲ್ಲೇ ಇಲ್ಲೂ ಮನೆಗಳು ತಲೆ ಎತ್ತಿವೆ. ಮನೆಯ ಅಂಗಳದಲ್ಲೇ ವಾಕಿಂಗ್‌ಗೆ ವ್ಯವಸ್ಥೆ. ಜತೆಗೆ ಐಷಾರಾಮಿ ಬದುಕಿನ ಸೌಲಭ್ಯಗಳು.
ಪರಿಸರ ಸ್ನೇಹಿ ಇಟ್ಟಿಗೆ
ಮನೆ ನಿರ್ಮಾಣಕ್ಕೆ ಪರಿಸರಸ್ನೇಹಿ ಇಟ್ಟಿಗೆ ಬಳಸಲಾಗಿದೆ. ಒಳಾಂಗಣದಲ್ಲಿ ಕಟ್ಟಿಗೆಯಿಂದ ವಿನ್ಯಾಸ ಮಾಡಲಾಗಿದೆ. ಎಲ್ಲಿಯೂ ಸ್ವಲ್ಪ ಜಾಗೆ ಕೂಡ ವಿನಾಕಾರಣ ಹಾಳಾಗದಂತೆ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಅಡುಗೆ ಮನೆ ಮಾತ್ರ ಸ್ವಲ್ಪ ಚಿಕ್ಕದು. ಆದರೂ ಅಚ್ಚುಕಟ್ಟಿನಲ್ಲಿ ಮೋಸವಿಲ್ಲ. ಗೋಡೆಗೆ ಲೇಪನಕ್ಕೆ ಪರಿಸರಕ್ಕೆ ಹಾನಿಯಾಗದ ಹಾಗೂ ಬಿಸಿಲು ತಡೆಯುವ ಶಕ್ತಿಯುಳ್ಳ 'ಪರಿಸರ ಸ್ನೇಹಿ ಸಿಮೆಂಟ್' ಬಳಕೆ ಮಾಡಿದ್ದು ವಿಶೇಷ.
ಇಂಗು ಗುಂಡಿ ನಿರ್ಮಾಣ
ಪ್ರತಿ ಮನೆಯ ಅಂಗಳದಲ್ಲೂ ಇಂಗು ಗುಂಡಿ ನಿರ್ಮಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಿಸುವ ಹಾಗೂ ನೀರು ಪೋಲಾಗದಂತೆ ಎಚ್ಚರಿಕೆ ವಹಿಸುವ ಕ್ರಮ ಕೈಗೊಳ್ಳಲಾಗಿದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಉದ್ಯಾನಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗಿದೆ. 11 ಎಕರೆ ಪ್ರದೇಶದಲ್ಲಿ ಒಟ್ಟು 71 ಮನೆಗಳನ್ನು ನಿರ್ಮಿಸುವ ಹೊಣೆ ಹೊತ್ತಿರುವ 'ಹೆಬ್ರೋನ್' ಕಂಪನಿ ಈಗಾಗಲೇ ಅರ್ಧದಷ್ಟು ಕೆಲಸವನ್ನು ಪೂರ್ಣಗೊಳಿಸಿದೆ.
ನದಿ ಹರಿಯುತ್ತದೆ!
ಮನೆಗಳ ಮಗ್ಗುಲಲ್ಲೇ ನದಿ ರೀತಿ ನೀರು ಹರಿದು ಹೋಗುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ಹರಿದು ಹೋಗುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸುತ್ತಲೂ ದಟ್ಟವಾದ ಅರಣ್ಯ ರೀತಿಯಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ವರ್ಷಪೂರ್ತಿ ಹಸಿರಿನಿಂದ ಕಂಗೊಳಿಸುವ ಹಾಗೂ ಹೂವು ಬಿಡುವ ಗಿಡಗಳನ್ನು ನೆಡಲಾಗಿದೆ.
ಭಾರತದಂಥ ದೇಶದಲ್ಲಿ ಪರಿಸರ ಸ್ನೇಹಿ ಮನೆಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಮಾದರಿಯಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಪರಿಸರ ಸ್ನೇಹಿಯಾಗಿ ರೂಪಿಸುತ್ತಿರುವುದರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
- ಪ್ರೀನಂದ್ ಪ್ರೇಮ ಚಂದ್ರನ್, ಸಿಇಒ, ಹೆಬ್ರೋನ್
- ಚನ್ನು ಮೂಲಿಮನಿ
KP.channu@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


