ಮನೆಗೆ ಮೇಕಪ್
ಮನೆಗೆ ಚೆಂದ ಕಾಣಬೇಕು ನಿಜ. ಎಡವಟ್ಟು ಮಾಡಿಕೊಳ್ಳದೆ ಮನೆಯನ್ನು ಅಲಂಕರಿಸುವುದು ಹೇಗೆ? ಇಲ್ಲಿವೆ ಕೆಲವು ಸುಲಭ ಮಾಹಿತಿಗಳು.

ಮನೆ ಸರಿಹೊಂದಿಸುವುದು ಕಷ್ಟಕರ ಕೆಲಸ. ಹೀಗಾಗಿ ಮನೆ ಅಣಿಗೊಳಿಸುವ ಮೊದಲು ಸಾಕಷ್ಟು ವಿಷಯ ಅರಿತುಕೊಂಡಿರಬೇಕು. ಜೋಡಣೆ, ಬಣ್ಣ, ಪೀಠೋಪಕರಣಗಳು, ಕಲಾತ್ಮಕ ವಸ್ತುಗಳು, ಬೆಳಕು ಸೇರಿದಂತೆ ಹಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಯಾಕೆಂದರೆ ಮನೆಯ ಅಂದ ಕೆಡದಂತೆ, ಅತಿಥಿಗಳಿಗೆ ಮುದ ನೀಡುವಂತೆ ಚೆಂದ ಮಾಡುವುದು ಎಲ್ಲರಿಗೂ ಇಷ್ಟ. ಆದ್ದರಿಂದ ಮನೆಯ ಅಲಂಕಾರ ಮಾಡುವುದು ಕಷ್ಟವೇನಿಸಿದರೂ, ಮಾಡಿದ ನಂತರ ಅದರ ಅಂದ ನೀಡುವ ಮಜವೇ ಬೇರೆ.
ಮನೆಗೆ ಮೇಕಪ್ ಮಾಡಲು ಹೋಗಿ ಕೆಲವು ಎಡವಟ್ಟು ಮಾಡಿಕೊಳ್ಳುವವರೇನು ಕಡಿಮೆ ಇಲ್ಲ. ಹಾಗಾದರೆ ಅಂದದ ಮನೆಗೆ ನೀವೇನು ಮಾಡಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳು.
ಅನಗತ್ಯ ಖರೀದಿ ಬೇಡ
ಪೀಠೋಪಕರಣ ಅಂಗಡಿಯೊಳಗೆ ಹೊಕ್ಕಾಗ, ಅಲ್ಲಿನ ಉಪಕರಣಗಳನ್ನು ಗ್ರಾಹಕರು ಬಿಟ್ಟು ಹೋಗಬಾರದು. ಹಾಗೆ ಖರೀದಿಗೆ ಪ್ರೇರೇಪಿಸುವಂತೆ ಜೋಡಿಸಿರುತ್ತಾರೆ. ಆದರೆ ಅಂಗಡಿಯಲ್ಲಿನ ನೋಟದ ಜೋಡಣೆ ಮನೆಯೊಳಗೆ ಎಲ್ಲವೂ ಶೋಭಿಸುವುದಿಲ್ಲ. ನೀವು ಅನಗತ್ಯ ಪೀಠೋಪಕರಣ ಖರೀದಿಸಿ ಹೋಗುವಂತೆ ಟೆಂಪ್ಟ್ ಮಾಡಲು ಗ್ರಾಹಕರ ಮುಂದೆ ಗಿಮಿಕ್ ಮಾಡಿರುತ್ತಾರೆ. ನಿಮ್ಮ ಮನೆಗೆ ಅತ್ಯುತ್ತಮವಾಗಿ ಹೊಂದುವಂಥದ್ದು ಯಾವುದು ಎಂದು ನಿರ್ಧರಿಸಲು ಇಲ್ಲಿ ಕೆಲವು ಮಾರ್ಗೋಪಾಯಗಳಿವೆ.
ನಿಮ್ಮ ಕೋಣೆಯ ಅಳತೆ ತಿಳಿದುಕೊಳ್ಳಿ
ಕೋಣೆಯಲ್ಲಿ ಪೀಠೋಪಕರಣಕ್ಕೆ ಎಷ್ಟು ಜಾಗವಿರಬೇಕು ಎಂಬುದನ್ನು ಲೆಕ್ಕಹಾಕಿ. ಒಂದು ವೇಳೆ ಜಾಗದ ಸಮಸ್ಯೆ ಇದ್ದರೆ ಮನೆಯ ಹಾಲ್ ಗೆ ಪೀಠೋಪಕರಣ ತನ್ನಿ. ಆದರೆ, ಅನಗತ್ಯವಾದ ರಾಕಿಂಗ್ ಚೇರ್, ಡೈನಿಂಗ್ ಟೇಬಲ್ ಇನ್ನಿತರ ವಸ್ತುಗಳು ಬೇಡ.
ಗೊಂದಲ ಬೇಡ
ನೀವು ಮೇಕ್ ಓವರ್ ಮಾಡುವಾಗಲೇ ಸಾಕಷ್ಟು ಹಣ ಉಳಿತಾಯ ಮಾಡುವ ಕನಸು ಕಂಡಿರುತ್ತೀರಿ. ಇದರರ್ಥ ನೀವು ಹೊರಗೆ ಹೋಗಿ ಕಣ್ಣಿಗೆ ಮುದ ನೀಡುವ ಶೋ ಪೀಸ್, ಓಬಿರಾಯನ ಕಾಲದ ಗೋಡೆ ಗಡಿಯಾರ, ನಾಲ್ಕಾರು ರೀತಿಯ ಕಿಚನ್ ಡೈನಿಂಗ್ ಸೆಟ್ ಇತ್ಯಾದಿ ಮನೆಯಲ್ಲಿ ಇರಿಸಬೇಕೆಂದಲ್ಲ. ಅದರ ಇಚ್ಛೆ ನಿಮಗಿದ್ದರೆ, ಅದಕ್ಕೆಂದು ಮತ್ತೆ ಅನಗತ್ಯ ಶೆಲ್ಫ್ ರಚಿಸಬೇಕಾಗುತ್ತದೆ. ಗೊಂದಲಗಳನ್ನು ಕಿತ್ತು ಹಾಕಿ ಆಯ್ಕೆ ಮಾಡಿ. ನೀವು ಆಯ್ಕೆ ಮಾಡುವ ಯಾವುದೇ ವಸ್ತುಗಳು ಸರಳವಾಗಿದ್ದರೂ, ಸ್ಟೈಲಿಶ್ ಆಗಿರಲಿ. ಎಲ್ಲಕ್ಕಿಂತ ಮುಖ್ಯವಾಗಿ ಇತರೆ ಎಲ್ಲ ಅಲಂಕಾರಿಕ ವಸ್ತುಗಳೊಂದಿಗೆ ಪೀಠೋಪಕರಣ ಚೆನ್ನಾಗಿ ಹೊಂದುತ್ತದೆಯೇ ಎಂದು ಪರೀಕ್ಷಿಸಿ. ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬೇಡಿ.
ಮಿತಿ ಮುಖ್ಯ
ಹೆಚ್ಚಿನ ಜನರು ಕಲಾತ್ಮಕ ವಸ್ತು, ಪೇಂಟಿಂಗ್ಸ್, ಶಿಲ್ಪಗಳು ಎತ್ತರದ ಸ್ಥಳಗಳಲ್ಲಿ ಇರಬೇಕೆಂದು ಯೋಚಿಸುತ್ತಾರೆ. ಆದರೆ ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಇರಿಸುವುದು ಸೂಕ್ತ. ಇಂಟೀರಿಯರ್ ಡಿಸೈನರ್ ಹೇಳುವ ಪ್ರಕಾರ 65 ರಿಂದ 72 ಇಂಚುಗಳು ನೆಲದಿಂದ ಮೇಲ್ಭಾಗದಲ್ಲಿ ಯಾವುದೇ ರೀತಿಯ ಕಲಾತ್ಮಕ ವಸ್ತುಗಳನ್ನು ಜೋಡಿಸುವುದು ಸೂಕ್ತ. ಉದಾಹರಣೆ ಗೋಡೆಯ ಮೇಲೆ ತೂಗು ಹಾಕುವ, ಫೋಟೋಗ್ರಾಫ್ಸ್ ಇತ್ಯಾದಿ. ಈ ರೀತಿ ತೂಕುಹಾಕಿದ ವಿಶೇಷ ವಸ್ತುಗಳು ಬೇಗನೇ ಅತಿಥಿಗಳ ಮನ ಸೆಳೆಯುತ್ತವೆ ಮತ್ತು ಹೆಚ್ಚು ಪ್ರಭಾವ ಬೀರುತ್ತವೆ.
ವಿಪರೀತ ವೈರ್ ಯಾಕೆ?
ಮನೆಯನ್ನು ಬೆಳಕಿನಿಂದ ಅಂದಗಾಣಿಸಲು ಹೋಗುವವರಿಗೆ ವೈರ್ನ ಸಮಸ್ಯೆ ಎದುರಾಗುತ್ತದೆ. ಈಗ ಟಿವಿ ಕೇಬಲ್ ಸಮಸ್ಯೆಯೂ ಇಲ್ಲವಾಗುತ್ತಿದೆ. ಅನಗತ್ಯ ದಾರಗಳು, ಕರೆಂಟ್ ವೈರ್ ಯಾವುದೂ ಸಹ ಮುಂದೆ ಕಾಣದಂತೆ ಇರಬೇಕು. ಅದನ್ನು ಅಚ್ಚುಕಟ್ಟಾಗಿ ಪೀಠೋಪಕರಣದ ಹಿಂದೆ ಜೋಡಿಸಿ. ಶಾರ್ಟ್ ಸರ್ಕಿಟ್ ಸಮಸ್ಯೆ ಇಲ್ಲದಂತೆ ಎಚ್ಚರವಹಿಸಿ. ಗೋಡೆಯ ಬಣ್ಣವನ್ನೇ ಹೊದ್ದ ವೈರ್ ಕವರಿಂಗ್ ಬಾಕ್ಸ್ಗಳನ್ನು ಹಾಕಬಹುದು.
ಅಧಿಕ ಬಣ್ಣ ಬೇಡ
ಪಿಂಕ್ ಬೆಡ್ ಕವರ್, ಪಿಂಕ್ ವೆಲ್ಟ್, ಪಿಂಕ್ ಕರ್ಟೈನ್ಸ್ ಮತ್ತು ಗೋಡೆಯ ಮೇಲೂ ಪಿಂಕ್ ಬಣ್ಣದ ಪೇಂಟಿಂಗ್ ಇದೆ. ಅತಿ ರಂಜನೀಯವಾಗುವಂತೆ ಮ್ಯಾಚಿಂಗ್ ಮಾಡಲು ಹೋದರೆ ಬಣ್ಣ ಕೋಣೆಯ ಅಂದಗೆಡಿಸುತ್ತದೆ. ಚೆನ್ನಾಗಿ ಹೊಂದುವ ಎರಡು ಅಥವಾ ಮೂರು ಬಣ್ಣಗಳೊಂದಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳಬಹುದು. ಗಾಢ ಬಣ್ಣಗಳ ಅಧಿಕ ಉಪಯೋಗ ಮತ್ತು ದಟ್ಟ ಮುದ್ರಿತ ಚಿತ್ರಗಳು ಕೋಣೆಯ ಅಂದಗೆಡಿಸುತ್ತವೆ.
ಕುಶನ್ ಮೇನಿಯಾ
ಒಂದು ಆಕರ್ಷಕ ಕುಶನ್ ಮನೆಗೆ ಕಲಾತ್ಮಕ ಮೆರುಗು ತಂದು ಕೊಡುವುದರಲ್ಲಿ ಎರಡು ಮಾತಿಲ್ಲ. ಆದರೆ ಮನೆಯನ್ನೇ ಒಂದು ಕುಶನ್ ಸ್ಟೋರ್ ಮಾಡಬೇಡಿ. ಕೋಚ್ನ ಕುಳಿತುಕೊಳ್ಳುವ ಸ್ಥಳದಲ್ಲಿ ಅಧಿಕ ಕುಶನ್ ನೋಡಿದರೆ ಕೋಣೆಯೇ ವಿಚಿತ್ರವಾಗಿ ಅಚ್ಚುಕಟ್ಟುತನವನ್ನು ಕೊನೆಗಾಣಿಸುತ್ತದೆ. ವೈವಿಧ್ಯಮಯ ಪಿಲ್ಲೋಗಳಿಂದ ಜೋಡಿಸಿ.
-ನಳಿನ ಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


