ಮಹಿಳೆ-ಮನೆ-ಬದುಕು

ಸ್ವಗತದ ಹಕ್ಕಿ

ಸ್ವಗತದ ಹಕ್ಕಿ
Published On :

ನನ್ನದೇ ಗೂಡಲ್ಲಿ ನಾನಿದ್ದೇನೆ. ಸುತ್ತಲೂ ಕತ್ತಲು, ಆದರೆ ಹಿತವಾಗಿದೆ, ಬೆಚ್ಚಗಿದೆ. ಎಷ್ಟಾದರೂ ಅಮ್ಮನ ಮಡಿಲಲ್ಲವೇ? ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ತಾಣ ಅಂದುಕೊಂಡಿದ್ದೆ. ಊಹ್ಞೂಂ, ಪರಿಸ್ಥಿತಿ ಹಾಗಿಲ್ಲ. ನಾನು ಗಂಡಾಗಿದ್ದರೆ ಹೌದು, ಹೆಣ್ಣಾಗಿರುವುದರಿಂದ ಇಲ್ಲೂ ಭಯ ತಪ್ಪಿದ್ದಲ್ಲ. ಯಾವುದೇ ಕ್ಷಣದಲ್ಲಿ ಸ್ಕ್ಯಾನಿಂಗ್ ಮಾಡಿಸಿ ಲಿಂಗ ಪತ್ತೆ ಮಾಡಿ ನಂತರ ನನ್ನನ್ನು ಮುಗಿಸುವ ಎಲ್ಲಾ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ, ಧನದಾಹದ ವೈದ್ಯರು, ಅಸಹಾಯಕ ಅಮ್ಮಂದಿರು, ಶಿಕ್ಷಣದ ಕೊರತೆ, ಬಡತನ, ಹೆಣ್ಣಿನ ಕುರಿತಾದ ಧೋರಣೆ ನನ್ನ ಬದುಕಿನ ಕನಸನ್ನೇ ಕಸಿದಿವೆ.
ಜಗನ್ಮಾತೆ ಎಂದು ಕೈಮುಗಿಯುವ, ಸಂಪತ್ತಿನ ದೇವತೆ ಎಂದು ಪೂಜಿಸುವ, ಭೂಮಿ ತಾಯಿ ಎಂದು ಗೌರವಿಸುವ ಜನ ಹೊಟ್ಟೆಯಲ್ಲಿರುವುದು ಹೆಣ್ಣು ಎಂದೊಡನೆ ಹೌಹಾರುತ್ತಾರೆ.
ಪರಿಸ್ಥಿತಿ ಯಾವ ಮಟ್ಟ ತಲುಪಿದೆ ಎಂದರೆ ಹೆಣ್ಣು ಭ್ರೂಣ ಹತ್ಯೆ ಮಾಡದಿರಲು ನಾನಾ ಕಾರಣ ನೀಡಲಾಗುತ್ತದೆ. ಹೆಣ್ಣಿಲ್ಲದಿದ್ದರೆ ರಾಖಿ ಕಟ್ಟಲು, ಅಡುಗೆ ಮಾಡಲು, ಹೆರಲು- ಹೊರಲು ಯಾರಿಂದ ಸಾಧ್ಯ? ಇತರೆ ಮಾತುಗಳಿಂದ ಮನವೊಲಿಸಬೇಕಾಗುತ್ತದೆ... ಅರೆರೆ! ನನ್ನ ಹುಟ್ಟಿಗೊಂದು ಕಾರಣ- ಸಮರ್ಥನೆ ಬೇಕೇ? ಗಂಡು ಮಗುವಿಗೆ ಯಾವುದೇ ಕಾರಣ ಬೇಕಿಲ್ಲ. ಕುಲದೀಪಕ ಎಂಬ ಲೇಬಲ್ ಸಾಕು. ಅಂದ ಮೇಲೆ ನನ್ನ ಜೀವನದ ಹಕ್ಕು ಚಲಾವಣೆಗೆ ಕಾರಣಗಳ ಹೊರೆ ಏಕೆ? ಸೃಷ್ಟಿಯಲ್ಲಿ ಗಂಡು-ಹೆಣ್ಣು ಎಂಬುದು ನಿಸರ್ಗ ನಿಯಮ. ಆ ಸಮತೋಲನವನ್ನು ಅದೇ ಕಾಪಾಡುತ್ತದೆ. ಹುಲು ಮಾನವರ ಹಸ್ತಕ್ಷೇಪ ಅಲ್ಲಿ ಬೇಕಿಲ್ಲ.
ಗಂಡಿಗೊಂದು ಹೆಣ್ಣು ಇದ್ದರೆ ಈ ಮಟ್ಟಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿತ್ತೇ? ಆ್ಯಸಿಡ್ ದಾಳಿ, ಕೊಲೆ, ವರದಕ್ಷಿಣೆ, ಕೌಟುಂಬಿಕ ಹಿಂಸೆ... ಪಟ್ಟಿ ಇಷ್ಟುದ್ದ ನೀಡುತ್ತಾರೆ ಹೆಣ್ಣನ್ನು ಹೆರಲು ಹೆದರುವವರು. ಆದರೆ ಇವೆಲ್ಲವನ್ನೂ ಎದುರಿಸುವ ಆತ್ಮವಿಶ್ವಾಸ ನೀಡಿ ಬೆಳೆಸಲಾಗದೇ? ಕತ್ತಲಿನ ಗರ್ಭದಿಂದ ಬೆಳಕಿನ ಪ್ರಪಂಚಕ್ಕೆ ಬರಲು ಹಾತೊರೆಯುತ್ತಿದ್ದೇನೆ. ನನ್ನನ್ನು ಶಾಶ್ವತ ಕತ್ತಲೆಯ ಕೂಪಕ್ಕೆ ತಳ್ಳಬೇಡಿ. ಬೆಳಕಿಗೆ ಬರಲು ಬಿಟ್ಟರೆ ನಾನೇ ದೀಪ ಹಚ್ಚುತ್ತೇನೆ ಅಂಧಕಾರ ಓಡಿಸಲು, ಪ್ರೀತಿಯ ಬೆಳಕನ್ನು ಪಸರಿಸಲು.
- ಇಂತಿ ನಿಮ್ಮ ಕಂದಮ್ಮ

- ಡಾ. ಕೆ.ಎಸ್. ಚೈತ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.