ಹಸಿರ ಸೂರು

ಪರಿಸರದ ಮಧ್ಯ ಸುಂದರ ಸೂರು ಕಟ್ಟಿ ನೆಲೆಸುವುದಕ್ಕೆ ಎಲ್ಲರಿಗೂ ಇಷ್ಟ. ಆದರೆ, ಹಾಗೆ ಮನೆ ಕಟ್ಟಿಸುವುದು ಕಷ್ಟ. ಕಷ್ಟಪಟ್ಟರೆ ಯಾವುದೂ ದೊಡ್ಡದಲ್ಲ. ಪ್ರಕೃತಿ ಮಧ್ಯದಲ್ಲಿ ಅಲ್ಲದಿದ್ದರೂ ಪ್ರಕೃತಿದತ್ತ ಗಾಳಿ, ಬೆಳಕು, ಸುಂದರ ಗಿಡ ಮರಗಳನ್ನಾದರೂ ಕಟ್ಟಿಸಿದ ಮನೆಯ ಸುತ್ತಲು ನೆಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ.
ಇಂಥ ಒಂದು ಸೂರು ಇಲ್ಲಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಿಂದ ಮೂರು ಕಿ.ಮೀ. ಪಯಣಿಸಿದರೆ ಬೆಜ್ಜವಳ್ಳಿ ಹತ್ತಿರ ಈ ಸೂರನ್ನು ಸೃಷ್ಟಿಸಲಾಗಿದೆ. ಇದರ ಯಜಮಾನರು ಪಿ.ಯು. ರಘುನಾಥ್.
ಈ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಹಾಲ್‌ನಲ್ಲಿ ಎಲ್ಲೆಂದರಲ್ಲಿ ಬೆಳಕು ಚೆಲ್ಲಾಡಿರುವುದು ಕಾಣಸಿಗುತ್ತದೆ. ತಂಪಾಗಿ ಸೂಸುವ ಗಾಳಿ ಮನಕ್ಕೆ ಮುದ ನೀಡುತ್ತದೆ. ಕಾರಣ, ಸುತ್ತಲೂ ಇರುವ ಬೃಹತ್ ಕಿಟಕಿಗಳು. ಈ ಕಿಟಕಿಗಳಿಗೆ ಬಿದಿರಿನ ಕರ್ಟೈನ್‌ಗಳು ಮುತ್ತಿಕೊಂಡಿದ್ದು, ಪ್ರಕೃತಿ ವೈಭವ ತೋರಿಸುತ್ತವೆ. ಅಷ್ಟೇ ಅಲ್ಲ, ರಘು ಮನೆಯ ಸುತ್ತಲೂ ಗಿಡ ಮರಗಳನ್ನು ಬೆಳೆಸಿದ್ದಾರೆ. ಮನೆ ನೋಡಲು ಹಳೆಯ ಕಾಲದಂತೆ ಇದ್ದರೂ, ಆಧುನಿಕ ಶೈಲಿಯಲ್ಲಿ ಏನಿರಬೇಕು ಎಲ್ಲವೂ ಇಲ್ಲಿದೆ. 'ಮನೆ ಕಟ್ಟುವಾಗ ಹೆಚ್ಚು ಮರ ಬಳಸಬಾರದು' ಎಂಬ ನಿಯಮವನ್ನು ಇಲ್ಲಿ ಪಾಲಿಸಲಾಗಿದೆ.
ಫ್ಯಾನ್ ಇಲ್ಲ, ಗಾಳಿ ಇದೆ!
ಮನೆ ಎಂದಮೇಲೆ ಫ್ಯಾನ್‌ಗಳು ಅದರ ಚಾವಣಿಗೆ ಅಂಟಿಕೊಂಡೇ ಇರುತ್ತವೆ. ಆದರೆ, ಈ ಮನೆಗೆ ಫ್ಯಾನ್‌ಗಳೇ ಇಲ್ಲ. ಹಾಗಂತ ಗಾಳಿಯ ಕೊರತೆಯೇನಿಲ್ಲ. ಈ ಮನೆಗೆ ನುಗ್ಗುವ ಗಾಳಿ ಎಸಿಯಷ್ಟೇ ತಂಪು. ಅದರ ಜೊತೆಗೆ ಚಾವಣಿ ಬಿಟ್ಟು ಉಳಿದ ಕಡೆ ಕಬ್ಬಿಣದ ಪಕ್ಕಾಸು ಮತ್ತು ರೀಪು ಬಳಸಿ ಹೆಂಚು ಹೊದಿಸಲಾಗಿದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಅಡುಗೆ ಮನೆ, ಊಟದ ಹಾಲ್, ಮಧ್ಯದ ಕೊಠಡಿಗಳ ನಡುವೆ ಯಾವುದೇ ಗೋಡೆಗಳಿಲ್ಲ.
ಮೇಲುಗಡೆ ಎರಡು ಬೆಡ್‌ರೂಮ್‌ಗಳಿವೆ. ಇಲ್ಲಿಯೂ ಫ್ಯಾನ್‌ಗಳಿಲ್ಲ. ದೊಡ್ಡ ಕಿಟಕಿಗಳಿವೆ. ಹೀಗಾಗಿ ನೈಸರ್ಗಿಕ ಗಾಳಿ ಈ ಮನೆಯಲ್ಲಿ ವಿರಾಜಮಾನ.
ವಿಶಿಷ್ಟ ಕಲಾಕೃತಿ
ಮಹಡಿಯ ಮೆಟ್ಟಿಲುಗಳ ಬಳಿ ಮರದ ಸಣ್ಣ ತುಂಡುಗಳಿಂದ ವಿಶಿಷ್ಟ ಕಲಾಕೃತಿಗಳನ್ನು ರಚಿಸಲಾಗಿದೆ. ಜೊತೆಗೆ ಕುಂಡಗಳಲ್ಲಿ ಕುಬ್ಜ ಗಿಡಗಳನ್ನಿರಿಸಿ ಅಲಂಕರಿಸಲಾಗಿದೆ. ಬಾತ್‌ರೂಮ್‌ನಲ್ಲೂ ಮರದ ಬೇರುಗಳನ್ನು ಕಲಾತ್ಮಕವಾಗಿರಿಸಿ, ಬಟ್ಟೆಯ ಸ್ಟ್ಯಾಂಡ್ ಮಾಡಲಾಗಿದೆ. ಬಾತ್‌ರೂಮ್‌ನ ಇನ್ನೊಂದು ಬದಿಯ ಮರದ ಕಪಾಟಿನಲ್ಲಿ ಗನ್‌ಸ್ಟ್ಯಾಂಡ್ ಕೂಡ ರೂಪಿಸಲಾಗಿದೆ.
ಒಟ್ಟು ಎರಡು ಅಡುಗೆಮನೆಗಳು. ಮೊದಲನೆಯದ್ದು ಮಾಡ್ಯುಲರ್ ರೀತಿಯದ್ದು. ಅದಕ್ಕೆ ತಾಗಿಕೊಂಡಂತೆ ಎರಡನೆಯ ಅಡುಗೆ ಕೋಣೆ ನಿರ್ಮಿಸಲಾಗಿದೆ. ಇಲ್ಲಿಯೇ ಹೆಚ್ಚಾಗಿ ಅಡುಗೆ ತಯಾರಿಸಲಾಗುತ್ತದೆ. ಅಡುಗೆ ಮನೆಯಲ್ಲಿಯೇ ಊಟದ ಹಾಲ್. ನೆಂಟರು ಬಂದರೆ, ಅವರೊಟ್ಟಿಗೆ ಊಟ ಸವಿಯಲು ಮತ್ತೊಂದು ದೊಡ್ಡ ಹಾಲ್ ಇದೆ.
ಇಂಥ ವಿಶಿಷ್ಟ ಮನೆಯನ್ನು ಕಟ್ಟಿಸಿರುವ ಗುರುನಾಥ್ ಅವರಿಂದ ನೀವೂ ಮಾಹಿತಿ ಪಡೆಯಬಹುದು. ಹಾಗಾದರೆ ಅವರಿಗೊಂದು ಹಲೋ ಹೇಳಿ... 08181-293877 ಅಥವಾ 9448790101.
- ಬಾಲಕೃಷ್ಣ ಶಿರ್ವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


