ಮಹಿಳೆ-ಮನೆ-ಬದುಕು

ತಾಪಕ್ಕೆ ತೇಪೆ

ತಾಪಕ್ಕೆ ತೇಪೆ
Published On :

ಜಾಗತಿಕ ತಾಪದಲ್ಲಿ ಭಾರಿ ಏರುಪೇರಾಗುತ್ತಿದೆ. ತಾಪ ತಹಬದಿಗೆ ತರಲು ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ. ಸಮುದ್ರದ ತಳದಲ್ಲಿ ಕುಳಿತು ಪರಿಹಾರಕ್ಕೆ ಯೋಚಿಸಿದರೂ ಫಲ ಸಿಕ್ಕಿಲ್ಲ. ಆದರೂ ಚರ್ಚೆಗಳಿಗೇನು ಕೊರತೆ ಇಲ್ಲ. ಪರಿಸರವಾದಿಗಳ ಹೋರಾಟ, ಪ್ರತಿಭಟನೆಗೆ ಕಿಮ್ಮತ್ತೂ ಸಿಕ್ಕಿಲ್ಲ. ಪರಿಸರ ಮೇಲಾಗುವ ದುಷ್ಪರಿಣಾಮ ತಡೆಗೆ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಕಾಲಕ್ರಮೇಣ ಸಕಾರಾತ್ಮಕ ಉತ್ತರವೂ ಸಿಗಬಹುದು. ಅದಕ್ಕಾಗಿ ಈಗ ಹುಟ್ಟಿಕೊಂಡಿರುವುದು ಹಸಿರು ವಾಸ್ತುಶಿಲ್ಪ!

ಮನೆಯೆಂಬುದು ಮುಂದಿನ ತಲೆಮಾರಿಗೂ ಬಳುವಳಿ. ಹೀಗಾಗಿ, ನಮ್ಮ ಮನೆಯಿಂದಾಗಿ ಪರಿಸರ ಮೇಲಾಗುವ ಪರಿಣಾಮಗಳನ್ನೂ ನಾವು ಗಮನಿಸಬೇಕು. ಸಾಮಾನ್ಯವಾಗಿ ಮನೆ ಕಟ್ಟುವಾಗ ಇಟ್ಟಿಗೆ, ಸಿಮೆಂಟ್, ಎಷ್ಟು ಅಂತಸ್ತು ಏರಿಸಬೇಕು, ಅಡಿಪಾಯ ಎಷ್ಟಿರಬೇಕು, ದುಡ್ಡು ಎಷ್ಟು ವೆಚ್ಚವಾದೀತು ಎಂಬುದು ಸೇರಿದಂತೆ ಇತ್ಯಾದಿ ಅಂಶಗಳ ಬಗ್ಗೆ ಯೋಚಿಸುತ್ತಾರೆ. ಆದರೆ, ಪರಿಸರಕ್ಕೆ ಪೂರಕವಾಗುವ ಅಂಶಗಳ ಬಗ್ಗೆ ಗಮನ ಹರಿಸುವುದಿಲ್ಲ. ಅದೆಲ್ಲಕ್ಕೂ ಹಸಿರು ವಾಸ್ತುಶಿಲ್ಪ ಉತ್ತರವಾಗಿದೆ.

ಏನಿದು ಹಸಿರು ವಾಸ್ತುಶಿಲ್ಪ?
ಪುಟ್ಟ ಜಾಗದಲ್ಲಿ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸುವುದು ಅಷ್ಟು ಸುಲಭವೇನಲ್ಲ. ಹೀಗಾಗಿ ವಾಸ್ತುಶಿಲ್ಪಿಗಳ ಬಳಿ ಹೋಗುವುದು ಅನಿವಾರ್ಯ. ಇವರು ಗ್ರಾಹಕರ ಕನಸಿಗೆ ಸರಿಹೊಂದುವ ಮನೆಗಳ ಚಿತ್ರಣ ರೂಪಿಸಿಕೊಡುತ್ತಾರೆ. ಅದರಂತೆಯೇ ಮನೆ ರೂಪುಗೊಳ್ಳುತ್ತದೆ. ಹಸಿರು ವಾಸ್ತುಶಿಲ್ಪದ ಪರಿಕಲ್ಪನೆ ಕೂಡ ಇದಕ್ಕೆ ಪೂರಕ. ಪುಟ್ಟ ಜಾಗದಲ್ಲಿ ತಲೆ ಎತ್ತುವ ಮನೆಯ ಜತೆಗೆ ಪರಿಸರಕ್ಕೂ ಹಾನಿಯಾಗದಂತೆ ಚಿತ್ರಣ ರೂಪಿಸುವುದು. ಮನೆಯ ಸುತ್ತಮುತ್ತ ಹಚ್ಚ ಹಸಿರಿನಿಂದ ಕಂಗೊಳಿಸುವ, ಗಾಳಿ, ಬೆಳಕು ಸುಲಭವಾಗಿ ಲಭಿಸುವಂತೆ ಹಾಗೂ ಪರಿಸರ ಸ್ನೇಹಿ ಇಟ್ಟಿಗೆ ಬಳಿ ಮನೆ ನಿರ್ಮಿಸಲು ಹೊಸ ಯೋಜನೆ ರೂಪಿಸಿಕೊಡುವುದು ಹಸಿರು ವಾಸ್ತುಶಿಲ್ಪಿಯ ಬಹುದೊಡ್ಡ ಹೊಣೆಗಾರಿಕೆ. ಇದು ಇತ್ತೀಚೆಗಷ್ಟೇ ಪರಿಚಯಗೊಂಡ ಪರಿಕಲ್ಪನೆ. ಆದರೆ, ಆಸ್ಟ್ರೇಲಿಯಾದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ.

ಬರ್ಹಂ ಕಾನ್ಸೆಫ್ಟ್
ಹಸಿರು ವಾಸ್ತುಶಿಲ್ಪದ ರೂವಾರಿ ಆಸ್ಟ್ರೇಲಿಯಾ ಮೂಲದ ಮ್ಯಾಕ್ಸ್ ಬರ್ಹಂ. ವಾಸ್ತುಶಿಲ್ಪ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿ. ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ಈ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ. 30 ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾದಲ್ಲಿ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಲು ಚಿತ್ರಣ ರೂಪಿಸಿಕೊಟ್ಟಿದ್ದಲ್ಲದೇ ಇತರರನ್ನೂ ಪ್ರೇರೇಪಿಸಿದ್ದಾರೆ. ಈಗ ವಿಶ್ವದಾದ್ಯಂತ ತಮ್ಮ ಕಲ್ಪನೆಗೆ ಬಣ್ಣ ತುಂಬುತ್ತಿದ್ದಾರೆ.

ಆರಂಭದಲ್ಲಿ ಇವರ ಶೋಧನೆಗೆ ಪೂರಕ ಪ್ರತಿಕ್ರಿಯೆ ಇರಲಿಲ್ಲ. ಕಾಲಕ್ರಮೇಣ ಜನತೆಗೆ ತಿಳಿವಳಿಕೆ ಮೂಡಿತು. ಈಗ ಸಾವಿರಾರು ಮನೆಗಳು ಪರಿಸರಕ್ಕೆ ಹಾನಿಯಾಗದಂತೆ ನೆಲೆ ಹಿಡಿದಿವೆ. ಗಾಳಿ, ಬೆಳಕಿಗೆ ಯಾವುದೇ ಕೊರತೆ ಇರುವುದಿಲ್ಲ. ಪರಿಸರ ಸ್ನೇಹಿ ಇಟ್ಟಿಗೆಗಳನ್ನೇ ಬಳಸಲಾಗಿದೆ.

ಏನು ವಿಶೇಷ?
ಹೆಸರೇ ಸೂಚಿಸುವಂತೆ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವುದು. ನಿಸರ್ಗಕ್ಕೆ ಹಾನಿಯಾಗದಂಥ ಇಟ್ಟಿಗೆಗಳನ್ನು ಬಳಸುವುದು. ಪುಟ್ಟ ಜಾಗವಿದ್ದರೂ ಪರ್ವಾಗಿಲ್ಲ, ಮನೆಯ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ವಾತಾವರಣ ಸೃಷ್ಟಿಸುವುದು. ದೊಡ್ಡ ಕಿಟಕಿಗಳನ್ನು ನಿರ್ಮಿಸುವುದು. ಮನೆಯ ಒಳ ವಿನ್ಯಾಸದಲ್ಲಿ ವುಡನ್ ಫ್ಲೋರಿಂಗ್ ಬಳಸುವುದರಿಂದ ಮರು ಬಳಕೆಗೆ ಅಗತ್ಯವಾಗುತ್ತದೆ ಎನ್ನುತ್ತಾರೆ ಮ್ಯಾಕ್ಸ್. ಬೆಂಗಳೂರಿನಲ್ಲೂ ಸಾಕಷ್ಟು ಮನೆಗಳ ನಿರ್ಮಾಣಕ್ಕೆ ಮಾದರಿ ರೂಪಿಸಿಕೊಟ್ಟಿದ್ದಾರೆ.

- ಚನ್ನು ಮೂಲಿಮನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.