ಗೋಡೆ ಬರಹ

ನದಿಮೂಲ, ಋಷಿಮೂಲ, ಪಾಕಮೂಲ ಹೀಗೆ ಕೆಲವುಗಳ ಮೂಲವನ್ನು ಹುಡುಕಬಾರದಂತೆ ಹಾಗೆಯೇ ಅದಕ್ಕೆ ಈ ಬರಹದ ಮೂಲವನ್ನೂ ಸೇರಿಸಬಹುದೇನೋ..?
ಎಷ್ಟೇ ದೊಡ್ಡ ಬರಹಗಾರನಾದರೂ, ಬರವಣಿಗೆಯ ಪ್ರಾರಂಭದಲ್ಲಿ ಗೋಡೆ, ಕುರ್ಚಿ, ಮೇಜುಗಳ ಮೇಲೆ ಗೀಚಿಯೇ ಗೀಚಿರುತ್ತಾನೆ. ಮನೆಯ ಹಿರಿಯರು ಆಡುವ ಮಾತುಗಳು ಮಕ್ಕಳ ತೊದಲು ನುಡಿಗೆ ಬುನಾದಿಯಾಗಿದ್ದರೆ, ಗೋಡೆ, ಕಬೋರ್ಡ್, ಮರದ ಪೀಠೋಪಕರಣಗಳೆಲ್ಲಾ ಆ ಪುಟ್ಟ ಕೈಗಳ ಮೊದಲ ಬರಹಕ್ಕೆ ಪ್ರೇರಣೆಯಾಗಿರುತ್ತದೆ. ಹೀಗೆ ಮಕ್ಕಳಲ್ಲಿ ಅಕ್ಷರ ಹುಟ್ಟುವ ಹೊತ್ತಲ್ಲಿ ಪೋಷಕರು ಅತಿ ಜಾಗೃತರಾಗಿ, ಪೂರಕವಾಗಿ ಸ್ಪಂದಿಸಿದಲ್ಲಿ ಆ ಮಗುವನ್ನು ಒಬ್ಬ ಉತ್ತಮ ಬರಹಗಾರನನ್ನಾಗಿ ರೂಪಿಸಬಹುದು. ಈ ನಿಟ್ಟಿನಲ್ಲಿ ಪೋಷಕರಿಗೆ ಟಿಪ್ಸ್ ಇಲ್ಲಿವೆ.
ಬರೆಯಲಿ ಬಿಡಿ...
ಅದಿನ್ನೂ ತನ್ನ ಸುತ್ತಮುತ್ತಲಿನ ಪ್ರಪಂಚದ ಆಗುಹೋಗುಗಳನ್ನು ತಿಳಿಯುವ ಹೊತ್ತು. ಅಮ್ಮನ ಅಡುಗೆಮನೆ, ಅಪ್ಪನ ಬೈಕು ಸವಾರಿ, ಎದುರಿಗೆ ಕಾಣುವ ದೊಡ್ಡ ದೊಡ್ಡ ಕಟ್ಟಡ, ಹಾರುವ ಹಕ್ಕಿ ಇಂಥ ಸಣ್ಣ ಸಣ್ಣ ವಿಚಾರಗಳೇ ತಲೆಯೊಳಗೆ ದೊಡ್ಡದಾಗಿ ಕಾಣುವ ಸಮಯ. ಈ ಸಮಯದಲ್ಲಿ ಮಕ್ಕಳಿಗೆ ತಾವು ಕಂಡಿದ್ದನ್ನು ಹೊರಹಾಕಲು ಚಿತ್ರ ಸುಲಭ ಮತ್ತು ಆಸಕ್ತಿದಾಯಕ ದಾರಿ. ಮಕ್ಕಳು ತಾವು ಮನದೊಳಗೆ ಕಂಡದ್ದನ್ನು ಬರೆಯಲು ಸುಲಭವಾಗಿ ಸಿಗುವ ಗೋಡೆಗಳನ್ನೇ ಬಳಸಿಕೊಳ್ಳುತ್ತಾರೆ. ದೊಡ್ಡವರು ಮರೆತು ಕೆಳಗೆ ಇಟ್ಟು ಹೋದ ಚಾಕ್‌ಪೀಸ್, ಪೆನ್ನು, ಪೆನ್ಸಿಲ್, ಸ್ಕೆಚ್‌ಪೆನ್ನುಗಳು ಮಕ್ಕಳಿಂದ ಯಥೇಚ್ಛವಾಗಿ ಬಳಕೆಯಾಗಿರುತ್ತದೆ. ಹಾಗೆ ಸಿಕ್ಕಸಿಕ್ಕಲ್ಲಿ ಗೀಚಿದಾಗ ಮಕ್ಕಳಿಗೆ ಬಯ್ಯದೆ ಮಕ್ಕಳ ಬಾಲ್ಯದ ಕುರುಹಾಗಿ ಒಂದು ಗೋಡೆಯನ್ನು ಮೀಸಲಿಟ್ಟು ತೋಚಿದ್ದು ಗೀಚಲು ಪ್ರೋತ್ಸಾಹಿಸಿ. ಇದರಿಂದ ಸೃಜನಶೀಲ ಮನಸ್ಸಿನ ಬೆಳವಣಿಗೆಗೂ ಬುನಾದಿ ದೊರೆಯುತ್ತದೆ.
ರೇಡಿಯಂ ಸ್ಲೇಟ್
ಹಳ್ಳಿಗಳಲ್ಲಿ ಹೆಚ್ಚಾಗಿ ಬರವಣಿಗೆ ಕಲಿಯುವುದೇ ವಿವಿಧ ನಮೂನೆಯ ಸ್ಲೇಟು, ಬಳಪದಿಂದ. ಅಕ್ಕಿಯ ಮೇಲೆ ಅಕ್ಷರಾಭ್ಯಾಸ ಶುರುವಾದಂದಿನಿಂದ ಮಕ್ಕಳಿಗೆ ಬರೆಯುವ ಹುರುಪು. ಈ ಸಮಯದಲ್ಲಿ ಅವರಿಗೆ ವಿವಿಧ ಬಗೆಯ ಸ್ಲೇಟು, ಬಳಪಗಳನ್ನು ನೀಡಿ. ಮಾಮೂಲಿಯಾಗಿ ಬಳಸುವ ಕಪ್ಪು ಸ್ಲೇಟುಗಳೊಂದಿಗೆ, ಎಣಿಸಲು ಅನುಕೂಲವಾಗುವ ಮಣಿ ಸ್ಲೇಟುಗಳು, ಬರೆದುದನ್ನು ಸುಲಭವಾಗಿ ಅಳಿಸಬಹುದಾದ ರೇಡಿಯಂ ಸ್ಲೇಟು... ಮೊದಲಾದವುಗಳನ್ನು ಕೊಡಿ. ಬರೆಯುವ ಉತ್ಸಾಹ ಇಮ್ಮಡಿಯಾಗುತ್ತದೆ.
ಪೆನ್ನು, ಪೆನ್ಸಿಲು
ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಬರೆಯಲು ಪೆನ್ನು, ಪೆನ್ಸಿಲು, ಪುಸ್ತಕ ನೀಡಿ. ಕೆಲವು ಅಂಗಡಿಗಳಲ್ಲಿ ತ್ಯಾಜ್ಯವೆಂದು ಗುರುತಿಸುವ ಒಂದು ಬದಿ ಖಾಲಿ ಇರುವ ಹಾಳೆಗಳನ್ನು ಸಂಗ್ರಹಿಸಿ ಬರೆಯಲು ನೀಡಿ. ತಮ್ಮ ಕಲ್ಪನೆಯಲ್ಲಿ ಬರೆದ ಚಿತ್ರಕ್ಕೊಂದು ವಿಶೇಷ ಅರ್ಥ ನೀಡಿ ಹೊಗಳಲು ಪ್ರಯತ್ನಿಸಿ.
ಪೂರಕ ಸಾಮಗ್ರಿ
ಇದೀಗ ಅಂಗಡಿಗಳಲ್ಲಿ ಮಕ್ಕಳು ಬಳಸುವ ವಸ್ತುಗಳು ಸಾಕಷ್ಟು ಸಿಗುತ್ತಿವೆ. ಪ್ಲಾಸ್ಟಿಕ್, ಮರಗಳಲ್ಲಿ ತಯಾರಿಸಿದ ಬೇರೆ ಬೇರೆ ಭಾಷೆಯ ಅಕ್ಷರಮಾಲೆ ಅಚ್ಚುಗಳೂ ಲಭ್ಯವಿರುತ್ತವೆ. ಅದನ್ನು ತಂದು ಮಕ್ಕಳ ಮುಂದಿಡಿ. ಸರಿಯಾಗಿ ಜೋಡಿಸುವಂತೆ ಹೇಳಿ, ಕಲಿಸಿ.
ತಿದ್ದಿ ತೀಡಿ
ಮಕ್ಕಳು ಮತ್ತಷ್ಟು ದೊಡ್ಡವರಾಗುತ್ತಿರುವಂತೆ ಅವರಿಗೆ ಅಕ್ಷರಮಾಲೆಯ ಸ್ಪಷ್ಟ ರೂಪ ತಿಳಿಸಿ. ತಪ್ಪಾಗಿ ಬರೆಯುತ್ತಿದ್ದರೆ, ಅದನ್ನು ಸರಿಯಾಗಿ ತಿದ್ದಿ, ತೀಡಿ ಬರೆಸಿರಿ. ದಿನದಲ್ಲಿ ಸ್ವಲ್ಪ ಸಮಯವನ್ನು ಮಕ್ಕಳೊಂದಿಗೆ ಅಕ್ಷರಭ್ಯಾಸಕ್ಕೆ ಮೀಸಲಿಡಿ.
- ಸುಧೀಂದ್ರ ಜಮ್ಮಟಿಗೆ
sudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


