ಮಹಿಳೆ-ಮನೆ-ಬದುಕು

ಖಾಕಿ ಟಾಕ್

ಖಾಕಿ ಟಾಕ್
Published On :

'ನಮಸ್ಕಾರ,
ನಾವು ಮಹಿಳಾ ಪೊಲೀಸ್ ಸಿಬ್ಬಂದಿ. ಜನಸೇವೆ ಮಾಡುವುದು, ಅವರ ಸಮಸ್ಯೆ ಆಲಿಸುವ ಉದ್ದೇಶದಿಂದ ಇಲಾಖೆಗೆ ಸೇರಿ ವರ್ಷಗಳೇ ಕಳೆದಿವೆ. ಇಲಾಖೆಗೆ ಬಂದಾಗಿಂದ ನಮ್ಗೆ ಬೇರೆಯವರಂತೆ ಸ್ವಚ್ಛಂದವಾಗಿ ಹಾರಾಡಲು ಆಗವುದಿಲ್ಲ. ಅದನ್ನು ನಾವು ಕಳ್ಕೊಂಡಿದ್ದೇವೆ. ಮತ್ತು ಒಪ್ಪಿಕೊಂಡಿದ್ದೇವೆ.

ಕೆಲವೊಮ್ಮೆ ಮನೆ, ಸಂಸಾರ ಎಲ್ಲ ಬಿಟ್ಟು 24 ಗಂಟೆಯೂ ಕೆಲ್ಸ ಮಾಡ್ಬೇಕು. ಪೇದೆ, ಮುಖ್ಯಪೇದೆಗಳದ್ದು ಒಂದ್ ರೀತಿಯಾದರೆ ಅವರಿಗಿಂತ ಹಿರಿಯ ಅಧಿಕಾರಿಗಳದ್ದು ಮತ್ತೊಂದು ಸಮಸ್ಯೆ. ಜವಾಬ್ದಾರಿ ಹೆಚ್ಚಿರುತ್ತೆ. ಮಹಿಳೆಯರಿಗೆ ಅವರದ್ದೇ ಸಮಸ್ಯೆ ಇರ್ತವೆ. ಹಾಗಂತ ಐದತ್ ನಿಮಿಷ ಬೇಗ ಹೋಗಂಗಿಲ್ಲ, ತಡವಾಗಿ ಬರಂಗಿಲ್ಲ. ಹಾಗೆ ಮಾಡಿದ್ರೆ ನಮ್ ಮೇಲೆ ಪುರುಷ ಸಿಬ್ಬಂದಿಯ ಕಣ್ ಬೀಳುತ್ತೆ. ತಡವಾಗಿ ಬಂದು ಬೇಗ ಹೋಗಿ ಹಾಗೆ ಸಂಬಳ ತೆಗೆದುಕೊಳ್ಳಲು ನಮ್ಗೂ ಇಷ್ಟವಿಲ್ಲ. ಹಾಗಾಗಿ ಕೊನೇಪಕ್ಷ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ರೆ ಕುಟುಂಬ, ಕರ್ತವ್ಯ ಎರಡನ್ನೂ ನಿಭಾಯಿಸಬಹುದು.

ಮನೆಯವರ ಸಹಕಾರ ಇದ್ರೆ ಸಂಸಾರ ಹೇಗೋ ನಿಭಾಯಿಸಬಹುದು. ಆದ್ರೆ, ಸಾಕಷ್ಟು ಮಹಿಳಾ ಸಿಬ್ಬಂದಿ ಮನೇಲಿ ಇದ್ರಿಂದ ಸಾಕಷ್ಟು ಗಲಾಟೆಗಳಾಗಿ ಸಂಸಾರದ ಗುಟ್ಟು ರಟ್ಟಾಗುತ್ತಿವೆ. ಠಾಣೆಗಳಲ್ಲಿ ಮೇಲಧಿಕಾರಿಗಳು ಮಹಿಳೆಯರು ಆಗಿದ್ದಲ್ಲಿ ನಮ್ಮ ಸಮಸ್ಯೆ ಹೇಳುವುದು ಸುಲಭ. ಆದರೆ, ಸಾಕಷ್ಟು ಠಾಣೆಗಳಲ್ಲಿ ಮಹಿಳಾಪೇದೆ ಬಿಟ್ಟರೆ ಹಿರಿಯ ಅಧಿಕಾರಿಗಳೇ ಇಲ್ಲ. ಇದ್ದವರು ಕೇಳುವುದಿಲ್ಲ. ಕೆಲಸ ಮುಗಿಸಿ ತಡವಾಗಿ ಹಿಂದಿರುಗುವುದರ ಜತೆಗೆ ರಾತ್ರಿ ಗಸ್ತು ಕಡ್ಡಾಯವಾಗಿ ಮಾಡ್ಬೇಕು. ಮಹಿಳಾ ಆರೋಪಿಗಳು ಇದ್ದಲ್ಲಿ ಅವರನ್ನು ಮಹಿಳಾ ನಿಲಯಕ್ಕೆ ಬಿಡೋದು, ಬೆಳಗ್ಗೆ ಕರ್ಕೊಂಡು ಬರೋದು, ಅವರ ಬಗ್ಗೆ ಗಮನ ಹರಿಸೋದು ಎಲ್ಲವನ್ನೂ ಮಾಡ್ಬೇಕು.

ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ಮಾಡಿದಾಗ, ಅತ್ಯಾಚಾರದಂಥ ಪ್ರಕರಣಗಳಲ್ಲಿ ಪಾಳಿ ಮಾತ್ರವಲ್ಲ, 24 ಗಂಟೆ ಕರ್ತವ್ಯ ನಿರ್ವಹಿಸಿರುವ ಉದಾಹರಣೆಗಳಿವೆ. ಆಗ ದೇಹ ಹೊರಗಿದ್ದರೂ ಮನಸ್ಸು ಮನೆಯಲ್ಲಿರುತ್ತದೆ.

ಕೆಲವು ಠಾಣೆಗಳಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರುತ್ತದೆ. ಹಿರಿಯ ಅಧಿಕಾರಿಗಳಿಂದ ಸಣ್ಣ ವಿಷಯಕ್ಕೂ ಸುಖಾಸುಮ್ಮನೆ ಬೈಗುಳ. ಈ ನಡುವೆ ಸರಿಯಾಗಿ ವಾರದ ರಜೆ ಸಿಗಲ್ಲ. ರಜೆ ಬೇಕು ಅಂದ್ರೆ ವಾರದ ರಜೆ ಬಿಟ್ಟು ಬೇರೆ ರಜೆ ತಗೋಬೇಕು. ಸಮಸ್ಯೆ ಸಾಕಷ್ಟಿರುತ್ತೆ ರೀ... ಏನ್ ಮಾಡೋದು ಹೊಟ್ಟೆಪಾಡು ನೋಡ್ಬೇಕಲ್ಲಾ..'

ಯೋಚನೆಗಳ ಗಿರಕಿ
ಪೊಲೀಸ್ ಇಲಾಖೆ ಬೇರೆ ಇಲಾಖೆಗಿಂತ ವಿಭಿನ್ನ. ಎಲ್ಲಿ ಯಾವ ಅನಾಹುತ ಸಂಭವಿಸಿತೋ, ಅಪರಾಧವಾಯಿತೋ ಎಂಬ ಯೋಚನೆ ಸದಾ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ಮಹಿಳಾ ಸಿಬ್ಬಂದಿಗೆ ಇದೆಲ್ಲ ನಿಭಾಯಿಸುವುದು ಮತ್ತೂ ಕಷ್ಟ. ಹಾಗಾಗಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟಕೊಳ್ಳಲು ಯೋಗ, ಧ್ಯಾನ, ಉತ್ತಮ ಪುಸ್ತಕ ಓದುವಂಥ ಹವ್ಯಾಸ ಅಗತ್ಯ.
- ತಿರುಮಲೇಶ್, ಮನೋವೈದ್ಯ

- ಶಾಂತಾ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.