ಕೆಲ್ಸ ಕೆಲ್ಸ ಕೆಲ್ಸ
'ಯಾಕ್ರೀ... ಶಮ್ಮಿ ಹಾಗಾಗಿದಾರೆ? ಎಷ್ಟು ಆರೋಗ್ಯವಾಗಿ ಇದ್ರು?' ಕ್ಷಮಾ ಕೇಳುತ್ತಲೇ ನಾನೂ ಬೆಳಗ್ಗೆ ಇದೇ ವಿಚಾರವಾಗಿ ತಲೆಕೆಡಿಸಿಕೊಂಡಿದ್ದು ನೆನಪಾಯ್ತು.

'ಯಾಕ್ರೀ... ಶಮ್ಮಿ ಹಾಗಾಗಿದಾರೆ? ಎಷ್ಟು ಆರೋಗ್ಯವಾಗಿ ಇದ್ರು?' ಕ್ಷಮಾ ಕೇಳುತ್ತಲೇ ನಾನೂ ಬೆಳಗ್ಗೆ ಇದೇ ವಿಚಾರವಾಗಿ ತಲೆಕೆಡಿಸಿಕೊಂಡಿದ್ದು ನೆನಪಾಯ್ತು.
ಶಮ್ಮಿ ಮನೆಯಿಂದ ಹೊರಬಂದರೆ ಸಾಕು, ಜಿಂಕೆಮರಿಯಂತೆ ನಡೆಯುತ್ತಿದ್ದಳು. ಅವಳ ಜೊತೆ ಹೆಜ್ಜೆ ಹಾಕುವುದೆಂದರೆ ಯಾರಾದರೂ ಓಡುತ್ತಾ ನಡೆಯಬೇಕಿತ್ತು. ಅಂಥವಳು ಇತ್ತೀಚೆಗೆ ಉತ್ಸಾಹವೇ ಇಲ್ಲದಂತೆ ಓಡಾಡುತ್ತಾಳೆ. ಆಕೆಗೆ ನಲವತ್ತೈದು ದಾಟಿರಬೇಕಷ್ಟೆ.
ನಾನು ಅವಳ ದಿನಚರಿ ಕಂಡಿದ್ದೆ. ಆಕೆ ಬೆಳಗ್ಗೆ ಎದ್ದಳೆಂದರೆ ಹಾಲು, ಪೇಪರ್, ತರಕಾರಿ, ನೀರು ಅಂತೆಲ್ಲ ಮಹಡಿ ಮೇಲೆ ಹೊತ್ತು ಸಂಸಾರ ನಡೆಸುತ್ತಾ ಬಂದವಳು. ಮಕ್ಕಳ ಓದಿಗೆ ತೊಂದರೆ ಆಗಬಾರದೆಂದು ಯಾರಿಗೂ ಯಾವ ಕೆಲಸವನ್ನೂ ಹೇಳಿದವಳಲ್ಲ. ಗಂಡನಿಗೂ ಸಾಕಷ್ಟು ರೆಸ್ಟ್ ಕೊಡುತ್ತಿದ್ದಳು. ಮನೆಯಲ್ಲೇ ಇರೋ ಗೃಹಿಣಿಯರಿಗೆ ಯಾರು ತಾನೇ ರೆಸ್ಟ್ ತಗೋ ಅಂತಾರೆ? ಇಡಿ ದಿನ ದುಡಿದ್ರೂ ಕೆಲಸ ಮುಗೀತು ಅಂತ ಆಗಲ್ಲ. ಮನೆಯ ಎಲ್ಲರನ್ನೂ ಸಂಭಾಳಿಸುವುದೇನು ಸುಲಭದ ಕೆಲಸವೇ? ಹೊರಗೆ ದುಡಿದು ಬರೋದೇ ಎಷ್ಟೋ ಸುಲಭ. ಮನೆಯ ಚಾಕರಿ ಅಷ್ಟಿರುತ್ತದೆ. ಇದರೊಂದಿಗೆ ಉಳಿದಷ್ಟೇ ತಿಂದು ಮತ್ತೆ ಮಾಡಲು ಬೇಜಾರು ಅಂದುಕೊಂಡು ಮಲಗುತ್ತಾ ಬಂದರೆ ಆರೋಗ್ಯದ ಗತಿ ಏನಾಗಬೇಕು?
ಎಷ್ಟೋ ಸತಿ ನನ್ನ ಹತ್ತಿರವೇ ಆಕೆ ಹೇಳಿದ್ದಿದೆ, 'ಅನ್ಯಾಯವಾಗಿ ಎಸೆಯಬೇಕು. ತಂಗಳಾದರೇನು? ಬೆಲೆ ಏನು ಕಮ್ಮಿ ಇದ್ಯಾ? ಅದಕ್ಕೇ ನಾನೇ ತಿಂದ್‌ಬಿಟ್ಟೆ' ಅಂತ. 'ಇವತ್ತು ನನಗೆ ತಿಂಡಿ ಉಳೀಲಿಲ್ಲ. ನನ್ನ ಗಂಡ ತಿಂಡಿ ಚೆನ್ನಾಗಿದೆ ಅಂತ 4 ಪೂರಿ ಜಾಸ್ತಿ ಹಾಕಿಸಿಕೊಂಡಿದ್ದು ನೋಡಿ ಖುಷಿಯೋ ಖುಷಿಯಾಯ್ತು' ಅಂತ ಸಂಭ್ರಮಿಸುತ್ತಿದ್ದಳು.
ಶಮ್ಮಿಯಂಥ ಹೆಣ್ಣುಮಕ್ಕಳು ಅದೆಷ್ಟು ಜನರೋ? ಮನೆಯಲ್ಲೇ ಇರ್ತೀನಿ, ನನಗೇನು, ಅವರಾದರೆ ಹೊರಗ್ಹೋಗಿ ದುಡೀತಾರೆ ಅಂತ ತಾವೇ ನಿರ್ಧರಿಸಿಕೊಂಡರೆ ಅವರ ಗತಿ? ಮನೆಯ ಅಷ್ಟೂ ಜನರನ್ನು ನೋಡಿಕೊಳ್ಳಬೇಕು. ಹೊರಗೆ ದುಡಿವವರಿಗಿಂತ 2 ಪಟ್ಟು ಹೆಚ್ಚು ಒತ್ತಡದ ಕೆಲಸವನ್ನು ಗೃಹಿಣಿ ನಿಭಾಯಿಸಬೇಕಾಗುತ್ತದೆ. ಅಂದ ಮೇಲೆ ಆಕೆ ಗಟ್ಟಿಯಾಗಿರಬೇಕು. ಒಂದು ವಯಸ್ಸಿನ ಮಿತಿಯೊಳಗೆ ದೇಹ ನಾವು ಹೊರೆಸುವ ಭಾರಕ್ಕೆ ಸಹಕರಿಸುತ್ತದೆ. ನಂತರ 'ನನಗೂ ಸಾಧ್ಯವಿಲ್ಲ' ಅಂತ ಮುಷ್ಕರ ಹೂಡುತ್ತೆ. ಇಷ್ಟು ಯೋಚಿಸುವಷ್ಟರಲ್ಲಿ ಶಮ್ಮಿಯ ಅಕ್ಕ ಬಂದರು. 'ಬನ್ನಿ, ಬನ್ನಿ, ಶಮ್ಮಿ ಈಗ ಹೇಗಿದಾಳೆ' ಕೇಳಿದೆ. 'ಎಲ್ಲ ಅವಳೇ ಮಾಡಿಕೊಂಡಿರುವುದು, ಹೊತ್ತಿಗೆ ಸರಿಯಾಗಿ ಊಟ ತಿಂಡಿ ಮಾಡಿದ್ದರೆ ಹೀಗಾಗ್ತಿರಲಿಲ್ಲ. ಅವಳ ಕಡೆ ಗಮನವೇ ಅವಳಿಗಿಲ್ಲ. ಈಗ ನೀವೆಲ್ಲ ಆರೋಗ್ಯ ನೋಡಿಕೊಂಡೂ ಮನೆ ನೋಡಿಕೊಳ್ತಿಲ್ವಾ? ಮನೇಲಿ ನಾಲ್ಕು ಜನ ಇರೋವಾಗ ಒಂದಷ್ಟು ಹಂಚಿಕೊಂಡು ಕೆಲಸ ಮಾಡಿದರೆ ಆಗದೇ? ನಿಲ್ಲಕ್ಕೂ ಆಗದೆ ಒದ್ದಾಡುತ್ತಿದ್ದಾಳೆ.' ಶಮ್ಮಿಯ ಅಕ್ಕ ಬೇಸರಿಸಿಕೊಂಡರು.
'ಎದುರು ಮನೆ ಗೌರಮ್ಮನವರೂ ಹೀಗೇ ಮಾಡಿಕೊಂಡ್ರು. ದೇವರ ಪೂಜೆ ಆಗಿಲ್ಲ ಅಂತ ಮಧ್ಯಾಹ್ನ ಎರಡು ಗಂಟೆಯಾದ್ರೂ ಒಂದು ತೊಟ್ಟು ನೀರೂ ಕುಡೀದೆ ಇದ್ದು, ಕೊನೆಗೆ ದೀಪಾವಳಿ ದಿನ ನೆಲಕ್ಕೆ ಬಿದ್ದವರು 3 ವರ್ಷ ಆಯ್ತು ನೋಡಿ... ದೇವರೇನು ಉಪವಾಸ, ದಂಡನೆಗಳನ್ನು ಕೇಳ್ತಾನಾ?', ನಾನು ದನಿಗೂಡಿಸಿದೆ.
ಅವರು ಮುಂದುವರಿಸಿದರು, 'ನಮ್ಮನೆ ಹತ್ರ ಶಶಿ ಅಂತ ಇದಾರೆ. ಆಕೆಗೆ 20 ವರ್ಷದಿಂದ ಶುಗರ್ ಇದೆ ಇವ್ರೆ, ನೀವು ಆಕೇನ ನೋಡಿದ್ರೆ ಆಶ್ಚರ್ಯಪಡ್ತೀರಿ. 50 ವರ್ಷ ಅಂದ್ರೆ ಯಾರೂ ನಂಬಲ್ಲ. ಹಾಗಂತ ಆಕೆಗೇನು ಕೆಲಸ ಕಡಿಮೆ ಇಲ್ಲ. ದೊಡ್ಡ ಮನೆ, 3 ಮಕ್ಕಳು, ಅತ್ತೆ ಮಾವ ಬೇರೆ ಮನೇಲಿ. ಒಂದ್ಸತಿ ಅವ್ರ ಆರೋಗ್ಯದ ಗುಟ್ಟು ಕೇಳೇ ಬಿಟ್ಟೆ. 'ಕೆಲಸ ಮಾಡಿದ್ರೆ ಆರೋಗ್ಯ ಹಾಳಾಗಲ್ಲ. ಆದರೆ ನಲವತ್ತರ ನಂತರ ಒಳ್ಳೆ ಡಾಕ್ಟರ್ ಹತ್ತಿರ ಹೋಗಿ 3 ತಿಂಗಳಿಗೊಮ್ಮೆ ಚೆಕಪ್ ಮಾಡಿಸಿಕೊಂಡ್ರೆ ಒಳ್ಳೇದು. ನಮಗೆ ಬೇಕಾದ ವಿಟಮಿನ್, ಪ್ರೊಟೀನ್‌ಗಳ ಬಗ್ಗೆ ಡಾಕ್ಟರ್ ಹೇಳಿದ ಹಾಗೆ ಕೇಳಬೇಕು. ವ್ಯಾಯಾಮ, ವಾಕಿಂಗ್ ಮಸ್ಟ್ ಆ್ಯಂಡ್ ಶುಡ್. ಹಾಲಂತೂ ಕುಡೀಲೇಬೇಕು' ಅಂದ್ರು.
'ಈಗ ಶಮ್ಮಿಗೆ ಡಾಕ್ಟರ್ ಏನು ಹೇಳಿದಾರೆ?' ಕೇಳಿದೆ.
'ಒಂದು ತಿಂಗಳು ಬೆಡ್‌ರೆಸ್ಟ್ ಹೇಳಿ ಇಂತಿಂಥ ತರಕಾರಿ, ಹಾಲು, ಹಣ್ಣು, ಟಾನಿಕ್, ಟ್ಯಾಬ್ಲೆಟ್ ಅಂತೆಲ್ಲ ಬರ್ಕೊಟ್ಟಿದಾರೆ. ಅವಳ ಗಂಡನನ್ನೂ ಕರೆದು ಸರಿಯಾಗಿ ಬುದ್ಧಿ ಹೇಳಿದಾರೆ. ಹೆಂಡತಿ ಅಂದ್ರೆ ಬಿಟ್ಟಿ ಚಾಕರಿ ಮಾಡ್ಕೊಂಡ್ ಬಿದ್ದಿರೋ ಯಂತ್ರವಲ್ಲ ಅಂತ. ಅವ್ರೂ ಅಷ್ಟೆ, ಮಾಡ್‌ಹಾಕ್ತಾಳೆ ಅಂತ ಯಾವಾಗ್ ನೋಡಿದ್ರೂ ಇದಾಗಲ್ಲ, ಅದ್ ಮಾಡು ಅಂತ ರಗಳೆ. ಮಕ್ಕಳು ಮತ್ತೊಂದ್ ಮಾಡು ಅಂತ ರಾಗ ಎಳೆಯೋರು. ಎಲ್ಲನ್ನೂ ಮಾಡ್‌ಹಾಕ್ತಿದ್ಲು ಖುಷೀಲೇ. ಅಷ್ಟಾದ್ರೂ ಉಪ್ಪಿಲ್ಲ, ಬಟ್ಟೆ ಇಸ್ತ್ರಿ ಮಾಡಿದ್ ಸರಿಯಾಗಿಲ್ಲ, ಶೂ ತೊಳೆದಿಲ್ಲ ಅಂತ ಕಂಪ್ಲೇಂಟ್ ತಪ್ತಿರಲಿಲ್ಲ. ಈಗ ನೋಡ್ಬೇಕು, ಇನ್ನೊಂದ್ ತಿಂಗ್ಳು ಅದ್ಹೆಂಗ್ ನಿಭಾಯಿಸ್ತಾರೆ ಅವ್ಳಿಲ್ದೆ ಅಂತ' ಅಂದು ಹೊರ ನಡೆದರು.
- ಭಾಗ್ಯ ಕೃಷ್ಣಮೂರ್ತಿ
bhagyakrishnamurthy77@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


