ಸ್ತ್ರೀ ವಿಕ್ರಮ
ಸಂಪದಳ ಸುತ್ತ ಜನವೋ ಜನ. ಸಂದ ಪ್ರಶಸ್ತಿಗಾಗಿ ಎಲ್ಲರೂ ಕೈ ಕುಲುಕುವವರೇ. ಸಮಾರಂಭ ಮುಗಿದರೂ ಸರಿಯಾಗಿ ಉಸಿರಾಡಲಾಗುತ್ತಿಲ್ಲ ಅವಳಿಗೆ.

ಸಂಪದಳ ಸುತ್ತ ಜನವೋ ಜನ. ಸಂದ ಪ್ರಶಸ್ತಿಗಾಗಿ ಎಲ್ಲರೂ ಕೈ ಕುಲುಕುವವರೇ. ಸಮಾರಂಭ ಮುಗಿದರೂ ಸರಿಯಾಗಿ ಉಸಿರಾಡಲಾಗುತ್ತಿಲ್ಲ ಅವಳಿಗೆ. ಅವರನ್ನೆಲ್ಲ ದಾಟಿಕೊಂಡು ನಾನು ಹೋಗಿ 'ಕಂಗ್ರಾಟ್ಸ್' ಹೇಳಿದಾಗ ಹಿಡಿದ ಕೈ ಸಡಿಲಗೊಳಿಸದೆ 'ಓ ರೂಪ! ಕಡೆಗೂ ಇವರು ಬರಲಿಲ್ಲ ನೋಡು' ಅಂದಳು.
'ನಿನಗೇನು ಇದು ಹೊಸದಾ? ಯಾವಾಗ ನಿನ್ನ ಏಳಿಗೆ ಕಂಡು ರೋಹಿತ್ ಸಂತೋಷ ಪಟ್ಟಿದ್ದಿದೆ ಹೇಳು? ಆಮೇಲೆ ಮಾತಾಡೋಣ' ಪಿಸುಗುಟ್ಟಿದೆ. ಸಂಪದ ಎಲ್ಲರಿಗೂ ಕೈ ಬೀಸಿ ಕಾರಿನ ಒಳಗೆ ಬಂದು ಭುಜಕ್ಕೊರಗಿದಳು. ಅವಳು ಭಾವೋದ್ವೇಗಕ್ಕೆ ಬಲಿಯಾದಳು. ಅವಳು ಬಿಕ್ಕುವುದು ನೋಡಿ ಗಾಬರಿಯಾದೆ. 'ಛೆ, ಎಲ್ಲರ ಕೈಲೂ ಸೈ ಅನ್ನಿಸಿಕೊಂಡು ಇದೇನು?' ಸಣ್ಣಗೆ ಗದರಿದೆ. ಯಾರ ಕೈಲಾದ್ರೂ ಸೈ ಅನುಸ್ಕೋಬಹುದು. ಆದರೆ ನನ್ನ ಕೈ ಹಿಡಿದಾತ... ಈ ದಿನ ಸಮಾರಂಭ ಅಂತ ಗೊತ್ತಿದ್ದೂ ಬೆಳಗ್ಗೆ ನಾ ಬರೋವಾಗ ಎದ್ದೇ ಇರಲಿಲ್ಲ. ಒಂದೇ ಒಂದು ನಗು, ಬೇಡ ಕಂಗ್ರಾಟ್ಸ್ ಅನ್ನಲಿಲ್ಲ ಗೊತ್ತಾ?'
'ಬಿಡೆ ನೀನೇನು ಆತನ ಕಂಗ್ರಾಟ್ಸ್‌ಗಾಗಿ ಈ ಮಟ್ಟಕ್ಕೆ ಬೆಳೆದೋಳಲ್ಲ. ಹಾಗಂತ ಹೇಳೋಕೆ ಅವನಿಗೆ ಯೋಗ್ಯತೆ ಇಲ್ಲ ಅನ್ಕೋ' ಅಂದೆ. "ನಿಮ್ಮೆಜಮಾನ್ರು ಬರಲಿಲ್ವಾ? ಅವರನ್ನೂ ಸ್ಟೇಜ್ ಮೇಲೆ ಕರೀತೀವಿ ಹೇಳಿ ಮೇಡಂ ಅಂದವರೆಷ್ಟು ಜನ ಗೊತ್ತಾ? ಜನರು 'ಸಂಪದಳ ಗಂಡ' ಅಂತ ಗುರುತಿಸಿದ್ರೆ ಅವರ ಮೈ ಬೆಂಕಿಯಾಗುತ್ತೆ. ಸದಾ ಕಾಲ ಇದೇ ವಿಚಾರಕ್ಕೆ ಗಲಾಟೆ ರಂಪ. ಯಾಕೆ ಇವರು ಹೀಗೆ? ಗಂಡ ಹೆಸರು ಮಾಡಿದ್ರೆ ಹೆಂಡ್ತಿಯರು ಅದೆಷ್ಟು ಬೀಗ್ತಾರೆ, ತಮಗೇ ಕಿರೀಟ ಬಂದ ಹಾಗೆ. ಆದರೆ ಅದೇ ಹೆಂಡ್ತಿ ಹೆಸರು ಮಾಡಿದ್ರೆ? ಬಹಳಷ್ಟು ಗಂಡಸರು ಕೀಳರಿಮೆಗೊಳಗಾಗಿ ತನಗಿದು ಅಪಮಾನವೆಂದೇ ಭಾವಿಸಿ ಒಳಗೇ ಕುದೀತಾರೆ, ಸಮರಕ್ಕೆ ಬೀಳ್ತಾರೆ... ನಾನವರ ಕೈಗೆಟುಕಲ್ಲ ಅನ್ನೋ ಹೆದರಿಕೇಲೇ ನನ್ನ ಬಯಸಿ 'ಆಕಾಶದೀಪವು ನೀನು, ನಿನ್ನ ಕಂಡಾಗ ಸಂತೋಷವೇನು' ಎಂದು ಹಾಡಿ ಮನ ಸೆಳೆದು ಕೈ ಹಿಡಿದ ವ್ಯಕ್ತಿ ಅವರೇ ಏನು ಅನಿಸುತ್ತೆ ಕಣೇ" ಎನ್ನುವಾಗ ಸಂಪದಳಿಗೆ ಹಿಂದಿನ ನೆನಪು ಒತ್ತೊತ್ತಿ ಬಂದಿತ್ತು.
'ಪ್ಲೀಸ್, ನಾಳೆ ಸಂಜೆ ನಿಮಗಾಗಿ ಕಾಯ್ತೀನಿ. ಸಿಕ್ಲೇಬೇಕು. ನಿಮ್ಮನ್ನ ಇಷ್ಟು ಹತ್ತಿರದಿಂದ ನೋಡ್ತೀನಿ ಅಂತ ನಾನಂದುಕೊಂಡಿರಲಿಲ್ಲ. ಇವತ್ತಿನ ನಿಮ್ಮ ಭಾಷಣ ಚೆನ್ನಾಗಿತ್ತು. ಹಾಗಂತ ನಾನು ಮಾತ್ರ ಹೇಳ್ತಾ ಇಲ್ಲ. ಜನ ಮಾತಾಡಿಕೊಳ್ತಿದ್ರು.' ರೋಹಿತ್‌ನ ಮಾತುಗಳಲ್ಲಿ ಹರ್ಷ ತುಂಬಿತ್ತು. ಸಂಪದಳಿಗಾಗಿ ಅವನು ಹಂಬಲಿಸುವುದು ನೋಡಿದವರು ಹುಚ್ಚನೆಂಬ ತೀರ್ಮಾನಕ್ಕೆ ಬರುವಂತಾಗಿತ್ತು. ಸಂಪದ, ಕಾಲೇಜಿನ ಪ್ರೊಫೆಸರ್ ಆಗಿದ್ದಳು. ಆತ ಅಲ್ಲೇ ಲೆಕ್ಚರರ್ ಆಗಿದ್ದ. ಆಗಾಗ್ಗೆ ಅವನು ಅವಳ ಸ್ಥಾನಕ್ಕೆ ಸರಿದೂಗದವನು ಎಂದು ಯೋಚಿಸುತ್ತಿದ್ದ. ಆದರೂ ಅವನ ಪ್ರೀತಿ ಚಂಡಿ ಹಿಡಿದು ಕೂತು ಅವಳನ್ನೇ ಬಯಸಿತ್ತು. ಸಂಪದ ಅವನು ತೋರಿದ ಆಸಕ್ತಿಗೆ ಬೆರಗಾದಳು. ತನ್ನನ್ನು ಪ್ರೀತಿಸುತ್ತಾನೆಂದು ಆಕರ್ಷಿತಳಾದಳು.
ರೋಹಿತ್ ತಾನಾಗಿ ಬಂದು 'ಇನ್ನು ಮೌನವಾಗಿರುವುದರಲ್ಲಿ ಅರ್ಥವಿಲ್ಲರೀ. ನನ್ನ ಮದುವೆಯಾಗ್ತೀರಾ? ಪ್ರಾಣ ಬೇಕಾದ್ರೂ ಕೊಟ್ಟು ನಿಮ್ಮನ್ನ ಚೆನ್ನಾಗಿ ನೋಡಿಕೊಳ್ತೀನಿ' ಅಂದ. ಒಪ್ಪಿಗೆ ಕೊಟ್ಟಳು. ಅವರ ಪ್ರೇಮದ ಪಯಣ ಸುಖಕರವಾಗಿ ಮದುವೆಯಲ್ಲಿ ಪೂರ್ಣವಾಗಿತ್ತು. ನಂತರವೇ ಅವನಲ್ಲಿ ದ್ವಂದ್ವಗಳು ಕಾಲಿಟ್ಟು ಕಾಡತೊಡಗಿದ್ದು. ಅವಳಿಗೆ ನನಗಿಂತ ಹೆಚ್ಚು ಸಂಪಾದನೆ. ಅವನ್ನೆಲ್ಲ ಕೈಲಿಟ್ಟು ತಗ್ಗಿಬಗ್ಗಿ ನಡೆಯುತ್ತಿಲ್ಲ. ನಾನು ಪ್ರೀತಿಸಿದ್ದಕ್ಕೆ ನನಗೆ ಏನೋ ನಷ್ಟಕಷ್ಟವಾಗುತ್ತಿದೆ ಎಂದೇ ಎಣಿಸಿದ. ಗೆಳೆಯರು 'ಇಂಥ ಹೆಂಡ್ತಿ ನಮಗೇನಾದ್ರೂ ಸಿಕ್ಕಿದ್ರೆ ನಾವು ಸ್ವರ್ಗ ಕಾಣ್ತಾ ಇದ್ವು' ಅಂದ್ರೂ ಅವನ ಅಭಿಪ್ರಾಯ ಬದಲಾಗಲಿಲ್ಲ. ಎಲ್ಲರೂ ಅವಳ ಪರ ವಾದಿಸುವವರೇ. ಇದು ಅವನಿಗೆ ಇನ್ನಷ್ಟು ಹಿಂಸೆಯಾಯ್ತು.
'ಏನು ಮೌನವಾದೆ ಸಂಪದ? ಎಲ್ಲ ಸರಿಯಾಗುತ್ತೆ. ರೋಹಿತ್‌ಗೆ ಬುದ್ಧಿ ಬರುತ್ತೆ ಬಿಡು' ನಾನು ಮಾತನಾಡಿದೆ. 'ಹಿಂದಿನ ದಿನಗಳಿಗೆ ಜಾರಿದ್ದೆ ರೂಪ. ಎಷ್ಟೋ ಸಲ ಈ ಮನುಷ್ಯನಿಂದ ಪಾರಾಗಬೇಕು ಅನ್ಕೋತೀನಿ. ಆದ್ರೆ ಈ ಸಮಾಜ ಅಂತ ತಲೆ ಕೆಡಿಸಿಕೊಳ್ತೀನಿ. ಕೆಲವರಿಗೆ ಮದುವೆಯಾಚೆಗೆ ಕಾಲಿಡುವುದು ಸಾಧ್ಯವೇ ಆಗೋಲ್ಲ ಕಣೇ. ಇಲ್ಲಿಲ್ಲೇ ಸುತ್ತಿಕೊಂಡು ಬದುಕಬೇಕು. ಈ ಕಷ್ಟ ಯಾರಿಗೆ ಅರ್ಥವಾಗುತ್ತೋ ಬಿಡುತ್ತೋ, ಒಟ್ಟಿನಲ್ಲಿ ಈ ಕೋಲ್ಡ್ ವಾರ್‌ನಲ್ಲೂ ಭವಿಷ್ಯದ ಕನಸು ಕಾಣಬೇಕು. ನನ್ನಂಥವರು ಅದೆಷ್ಟು ಜನರೋ?!' ಸಂಪದ ಉಸಿರು ಎಳೆದುಕೊಂಡಳು. 'ಕಾಲ ಎಲ್ಲವನ್ನೂ ಸರಿ ಮಾಡುತ್ತೆ. ಯೋಚ್ನೆ ಮಾಡ್ಬೇಡ. ಇಷ್ಟೆಲ್ಲ ಸಾಧಿಸಿರೋವಾಗ ನೀನು ಸಾಮಾನ್ಯಳಲ್ಲ. ಮುಂದೇನು ಪ್ಲಾನ್ ನಿಂದು?' ಕೇಳಿದಾಗ, 'ಇವರ ದ್ವೇಷ ಅಸೂಯೆಗಳು ನನಗಾವ ಲೆಕ್ಕ ಬಿಡು, ನಾನಿನ್ನೂ ಗಟ್ಟಿಯಾಗ್ತಾ ಇದೀನಿ. ಮೊದಲಿನಷ್ಟು ಅಪ್‌ಸೆಟ್ ಆಗ್ತಿಲ್ಲ. ಈ ಎಲ್ಲವನ್ನೂ ಮೀರಿ ನಾನು ಆಲದಮರವಾಗಿ ಬೆಳೆಯಬೇಕಷ್ಟೇ' ಎನ್ನುವಾಗ ಇಡೀ ಹೆಣ್ಣು ಕುಲಕ್ಕೇ ಸಂಪದ ಗಟ್ಟಿಯಾಗುವ ಬಗ್ಗೆ ಸಂದೇಶ ನೀಡುವಂತೆ ತೋರಿತು. ಅವಳತ್ತ ಗೌರವದಿಂದ ನೋಡಿದೆ.
- ಭಾಗ್ಯ ಕೃಷ್ಣಮೂರ್ತಿ
bhagyakrishnamurthy77@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


