ಮಹಿಳೆ-ಮನೆ-ಬದುಕು

ಸಂಶಯ ಪಿಶಾಚಿ

ಸಂಶಯ ಪಿಶಾಚಿ
Published On :

ಮಗಳು ತಡವಾಗಿ ಮನೆಗೆ ಬಂದರೆ ಅಮ್ಮನಿಗೆ ಅನುಮಾನ. ಮಗ ಹೇಳದೆ ಎಲ್ಲಾದರೂ ಹೋದರೆ ತಂದೆಗೆ ಸಂಶಯ. ಮನೆಯ ಬೆಕ್ಕಿಗೆ ಅತ್ತೆ ಬಯ್ದರೆ ತನ್ನನ್ನೇ ಬಯ್ಯುತ್ತಿರಬಹುದೇ ಎಂಬುದು ಸೊಸೆಗೆ. ಆ ಸೊಸೆ ಗಂಡನೊಡನೆ ಪಿಸುಗುಟ್ಟಿದರೆ ಮನೆಯಿಂದ ನಮ್ಮನ್ನು ಹೊರಗಟ್ಟಲು ಸಂಚು ರೂಪಿಸುತ್ತಿದ್ದಾಳೆಂಬ ಡೌಟು ಅತ್ತೆ ಮಾವನಿಗೆ. ತಡವಾಗಿ ರಿಪ್ಲೈ ಮಾಡಿದ ಪ್ರೇಮಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವುದು ಲೋಕ ರೂಢಿ. ಮುಸುಕಿನ ಗುದ್ದಾಟ ಶುರು.

ನೋಡಲು ಹುಡುಗನಂತಿದ್ದು ಹುಡುಗಿಯ ಸ್ವರದಲ್ಲಿ ಮಾತಾಡಿದರೆ ಹುಡುಗನಾ ಹುಡುಗಿಯಾ ಅಥವಾ... ಆತ ಯಾರದರೂ ಈ ವ್ಯಕ್ತಿಗೇನು? ಆದರೂ ಸಂಶಯ ಮನಸ್ಸನ್ನು ಹೊಕ್ಕಿಬಿಡುತ್ತದೆ. ಶೀಲ ಶಂಕಿಸಿ ಕೊಲೆ. ತನ್ನನ್ನು ಯಾಮಾರಿಸುತ್ತಿದ್ದಾನೆಂದು ಬಗೆದು ಕೊಲೆ. ಇವುಗಳು ಸಂಶಯದ ಪರಮಾವಧಿ ತಲುಪಿದಾಗ ಘಟಿಸುವ ಅನಾಹುತಗಳು.
ಸಂಶೋಧನೆಗಳ ಪ್ರಕಾರ, ಹೆಣ್ಣು ಅನುಮಾನ ಜೀವಿಯಂತೆ. ಆದರೆ, ಹೆಣ್ಣಿನ ಮೇಲೆ ಅನುಮಾನಗಳ ಅಲೆಯೇಳುವುದು ಹಿಂದಿನಿಂದ ಬಂದ ಬಳುವಳಿ. ಸೀರೆ ಉಟ್ಟರೂ ಅನುಮಾನ. ಜೀನ್ಸ್, ಟೀ ಶರ್ಟ್ ಹಾಕಿದರಂತೂ ಪರಮಾನುಮಾನ. ಯಾರೊಂದಿಗೆ ಮಾತಾಡಿದರೂ ಅನುಮಾನ. ಹುಡುಗನಿಗೆ ಶೇಕ್‌ಹ್ಯಾಂಡ್ ಮಾಡಿದ್ದನ್ನೂ ಅಪರಾಧ ಎನ್ನುವ ಮಂದಿ ಇದ್ದಾರೆ. ಹೆಣ್ಣನ್ನು ಹದ್ದಿನ ಕಣ್ಣಿಂದ ವೀಕ್ಷಿಸುವ ಮಂದಿ ಆಕೆಗೆ ನೆಮ್ಮದಿಯಾಗಿ ವಾಮಿಟ್ ಮಾಡಲೂ ಬಿಡುವುದಿಲ್ಲ!

ಹೀಗೇಕೆ ಆಗುತ್ತದೆ?
ನಕಾರಾತ್ಮಕ ಯೋಚನೆ
ಯಾವುದೇ ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸದಿರುವುದು. ಅದರಿಂದ ಯಶಸ್ವಿ ಸಾಧ್ಯವಿಲ್ಲವೆಂದು ಊಹಿಸಿಕೊಳ್ಳುವುದು.

ಅತಿಯಾದ ಸ್ವಾರ್ಥ
ಅವಳು ನನ್ನವಳು, ನನ್ನನ್ನು ಮಾತ್ರ ಮಾತಾಡಿಸಬೇಕು, ನನ್ನನ್ನು ಮಾತ್ರ ಪ್ರೀತಿಸಬೇಕು ಎಂಬ ಸ್ವಾರ್ಥವಿದ್ದಾಗ ಆ ವ್ಯಕ್ತಿಯಲ್ಲಿ ಹೆಚ್ಚಾಗಿ ಅನುಮಾನ ಕಾಡುತ್ತದೆ. ಈಕೆಗೆ ನನ್ನ ಮೇಲೆ ಪ್ರೀತಿ ಕಡಿಮೆ ಆಗಿರಬಹುದೇ ಎಂಬ ಭಯ ಕಾಡುವುದರಿಂದ ಸಂಶಯವನ್ನು ಪರಿಹರಿಸಲು ಒದ್ದಾಡುತ್ತಾನೆ. ಇದರಿಂದ ಮನಸ್ತಾಪವೇ ಹೆಚ್ಚು.

ಗೊಂದಲಮಯ ವ್ಯಕ್ತಿತ್ವ
ನಿರ್ದಿಷ್ಟ ಗುರಿ ಇಲ್ಲದಿರುವುದು. ಬೇರೆಯವರ ಮಾತನ್ನೇ ಹೆಚ್ಚು ಬಲವಾಗಿ ನಂಬುವವರು. ಒಬ್ಬ ಒಂದು ದಾರಿಯನ್ನು ಸರಿ ಎನ್ನುತ್ತಾನೆ. ಮತ್ತೊಬ್ಬ ಆ ದಾರಿ ಸರಿಯಿಲ್ಲ ಎನ್ನುತ್ತಾನೆ. ಅವರೇಕೆ ಹಾಗೆ ಹೇಳಿದರು? ಅನುಮಾನ ಶುರು.

ವಿಶ್ವಾಸವಿಲ್ಲದಿರುವುದು...
ಈತ ಹೇಳುತ್ತಿರುವುದು ನನಗೆ ಮೋಸ ಮಾಡಲು ಎಂದುಕೊಂಡರೆ ಹೀಗಾಗುತ್ತದೆ. ತನಗೆ ಉಪದೇಶ ಮಾಡುವುದರಿಂದ ಆತನಿಗೇನು ಲಾಭ ಎಂಬ ಅನುಮಾನ ಬಂದರೆ ಉಪದೇಶ ಮಣ್ಣು ಪಾಲಾಗುತ್ತದೆ.

ಕೀಳರಿಮೆ ಇದ್ದಾಗ
ತಾನು ಶಕ್ತನೇ, ತನ್ನಿಂದ ಸಾಧ್ಯವೇ? ತನ್ನ ಮೇಲೆ ನಂಬಿಕೆ ಇಲ್ಲದಿದ್ದಾಗ, ದೌರ್ಬಲ್ಯಗಳು ಹೆಚ್ಚಿದ್ದಾಗ ಕೀಳರಿಮೆ ಹುಟ್ಟುತ್ತದೆ. ಕೀಳರಿಮೆ ಶಂಕೆಗೆ ಬುನಾದಿ ಹಾಕುತ್ತದೆ. ವಿಶ್ವಾಸದ್ರೋಹಕ್ಕೆ ಒಳಪಟ್ಟಿದ್ದರೂ ಸಹಜವಾಗಿಯೇ ಹೆಜ್ಜೆ ಹೆಜ್ಜೆಗೂ ಶಂಕೆ ಕಾಡುತ್ತದೆ.

ಭಯ
ಹೆದರುವ ಸ್ವಭಾವ ಇದ್ದಾಗ ಸಂಶಯ ಸಹಜ. ಪುಕ್ಕಲು ಮನೋಭಾವವನ್ನು ಕಡಿತಗೊಳಿಸದೆ ವಿಧಿ ಇಲ್ಲ. ಒಟ್ಟಾರೆ, ಈ ಸಂಶಯ ಮನುಷ್ಯನ ದೌರ್ಬಲ್ಯವೇ ಸರಿ. ಸುಂದರ ಸಂಬಂಧಗಳ ಹಾಳುಗೆಡಹುವ ಮೊದಲ ಸೂಚನೆ. ಪ್ರೀತಿಪಾತ್ರರ ಬಗೆಗೆ ವೃಥಾ ಅನುಮಾನ ಬೆಳೆಸಿಕೊಂಡು ಸುಂದರ ಸಂಬಂಧಕ್ಕೆ ಹುಳಿ ಹಿಂಡಬೇಡಿ. ಅತಿಯಾದರೆ ಅಮೃತವೂ ವಿಷ ಎಂಬುದನ್ನು ಮನಸಿನಲ್ಲಿಟ್ಟುಕೊಂಡಿರಿ. ಹಾಗೆಂದು ಅಪರಿಚಿತರನ್ನು ಅತಿಯಾಗಿ ನಂಬಬೇಕಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಇನ್ನೊಬ್ಬರ ಮೇಲೂ ನಂಬಿಕೆ ಹುಟ್ಟುತ್ತದೆ. ಹಾಗಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನೀವು ಸರಿಯಾದ ದಾರಿಯಲ್ಲಿ ನಡೆಯಿರಿ. ಹೆಚ್ಚಿನ ಬಾರಿ 'ತಾನು ಕಳ್ಳ, ಪರರನ್ನು ನಂಬ' ಎಂಬಂತೆ ಆಗಿರುತ್ತದೆ. ಜಗತ್ತೇ ಸರಿಯಿಲ್ಲ ಎಂಬ ಮಟ್ಟಿಗೆ ಅನುಮಾನದ ಹುಳ ತಿಂದುಬಿಟ್ಟರೆ ಮನೋವ್ಯೆದ್ಯರನ್ನು ಕಾಣುವುದು ಒಳಿತು.

ಅರೆಬರೆ ಸೈಕಾಲಜಿ
ಕಾಲ ಮೇಲೆ ಕಾಲು ಹಾಕಿ ಕೂರುವುದು ಆತನ ಅಭ್ಯಾಸವಿರಬಹುದು. ದೇಹಭಾಷೆಗನುಗುಣವಾಗಿ ಆತನಿಗೆ ಅಹಂಕಾರ ಎಂದು ಬಗೆದರೆ ಎಚ್ಚರ ಅಗತ್ಯ. ಅರ್ಧಂಬರ್ಧ ಸೈಕಾಲಜಿ ಓದಿಕೊಂಡು ಅದರ ಆಧಾರದ ಮೇಲೆ ವ್ಯಕ್ತಿಯನ್ನು ಅಳೆಯುವುದು ಸಮಂಜಸವಲ್ಲ.

- ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.