ವೈಫ್ ಆಫ್ ಪೈ

ಬೋರ್ಡೇ ಇಲ್ಲದ ಹೋಟೆಲ್ ಇದು. ಒಳಗೆ ಕಾಲಿರಿಸಿದರೆ ಅಲ್ಲಿರುವ ಅಚ್ಚುಕಟ್ಟುತನ ಮನೆಯ ವಾತಾವರಣವನ್ನು ನೆನಪಿಸುತ್ತದೆ. ಇಲ್ಲಿ ತಿಂಡಿ ತಯಾರಿಸುವುದು, ತಂದುಕೊಡುವುದು, ಹಣ ತೆಗೆದುಕೊಳ್ಳುವುದು, ತಿಂದ ಬಳಿಕ ಶುಚಿಗೊಳಿಸುವುದು ಎಲ್ಲವೂ ಒಬ್ಬರೇ. ಆದರೂ ಗ್ರಾಹಕರು ಇಲ್ಲಿಗೇ ಬರುತ್ತಾರೆ. ರುಚಿಕಟ್ಟಾದ ತಿಂಡಿತೀರ್ಥಗಳು ಅಲ್ಲಿವೆ. ನಗುಮುಖದ ಸೇವೆಯೇ ಮಾಲೀಕರ ಧ್ಯೇಯವೂ ಆಗಿದೆ.
ಹದಿನೆಂಟು ವರ್ಷಗಳಿಂದ ಈ ಪುಟ್ಟ ಹೋಟೆಲನ್ನು ಒಬ್ಬರೇ ನಿರ್ವಹಿಸುತ್ತ ಬದುಕಿನ ರಥವನ್ನು ಯಶಸ್ವಿಯಾಗಿ ಎಳೆಯುತ್ತ ಬರುವುದರ ಜತೆಗೆ, ಮಹಿಳೆ ಸಮರ್ಥವಾಗಿ ಜೀವನದ ಪಯಣದಲ್ಲಿ ಗೆಲ್ಲಬಹುದು ಎಂಬುದಕ್ಕೆ ಉದಾಹರಣೆಯಾಗುತ್ತಾರೆ ಬೆಳ್ತಂಗಡಿಯ ಬಸ್‌ನಿಲ್ದಾಣಕ್ಕೆ ಸನಿಹದಲ್ಲಿರುವ ಅರುಣಾ ಪೈ. ಇಲ್ಲಿ ರಾಜಿತಾ(ಎಲ್ಲರೂ ಕರೆಯುವ ಹೆಸರು) ಅವರ ಹೋಟೆಲು ಯಾವುದು ಎಂದು ಕೇಳಿದರೆ ಯಾರಾದರೂ ಉತ್ತರಿಸುತ್ತಾರೆ.
ಅರುಣಾ ಪೈ ಮೂಲತಃ ಬಂಟ್ವಾಳದವರು. ಅವರ ತಂದೆ ಮಾಧವ ಭಟ್ಟರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರು. ಪದವಿ ತರಗತಿಯ ಮೊದಲ ವರ್ಷದಲ್ಲಿ ಅರುಣಾ ಬೆಳ್ತಂಗಡಿಯ ರಾಧಾಕೃಷ್ಣ ಪೈ ಅವರನ್ನು ವಿವಾಹವಾದರು. ಕಲಿಕೆ ಅರ್ಧಕ್ಕೆ ಕೊನೆಗೊಂಡಿತು. ಬದುಕು ತಾನೆಣಿಸಿದಂತೆ ಸಾಗಲಿಲ್ಲ. ಪತಿ ನಡೆಸುತ್ತಿದ್ದ ಅಂಗಡಿ ವ್ಯಾಪಾರದಲ್ಲಿ ನಷ್ಟವುಂಟಾಯಿತು. ಆಗ ಬಾಲ್ಯದಲ್ಲಿ ತಂದೆ ಹೇಳುತ್ತಿದ್ದ ಕಥೆಗಳು, ನೀತಿವಾಕ್ಯಗಳು ಸೋಲು ಗೆಲುವಿನ ಮೊದಲ ಮೆಟ್ಟಲು ಎಂದು ಧೈರ್ಯ ಹೇಳಿತು. ಅಪ್ಪನ ಬದುಕಿನ ಆದರ್ಶ ಯಶಸ್ಸಿನ ದಾರಿ ಹುಡುಕಲು ಪ್ರೇರೇಪಿಸಿತು ಎಂದು ಸ್ಮರಿಸುತ್ತಾರೆ ಅರುಣಾ. ಆಗ ಅರುಣಾ ಸ್ವತಃ ಹಾಲಿನ ವ್ಯಾಪಾರ ಆರಂಭಿಸಿದರು. ಅದರಿಂದ ಬಲು ದೊಡ್ಡ ಲಾಭ ಬರಲಿಲ್ಲ. ಆಗ ಅಲ್ಲಿಯೇ ಬಿಸಿಬಿಸಿ ಚಹಾ ಕಾಫಿಯ ಕ್ಯಾಂಟೀನ್ ಆರಂಭಿಸುವ ಯೋಚನೆ ಬಂತು. ಶುಚಿ ಮತ್ತು ರುಚಿಗೆ ಆದ್ಯತೆ ನೀಡಿದ ಫಲವಾಗಿ ಆರಂಭದ ಹೆಜ್ಜೆಯೇ ದೃಢವಾಯಿತು. ಅವರ ಪುಟ್ಟ ಹೋಟೆಲಿನ ಶುಭಾರಂಭವೂ ನಡೆಯಿತು.
18 ವರ್ಷದಿಂದ ತಾನೊಬ್ಬಳೇ ಇಡೀ ಹೋಟೆಲಿನ ನಿರ್ವಾಹಕಿಯಾಗಿ ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದಿದ್ದಾರೆ. ದೋಸೆ, ನೀರ್‌ದೋಸೆ ಎಂಬ ಎರಡು ವಿಧದ ದೋಸೆಗಳು. ಇಡ್ಲಿ-ಗಸಿ ಕಡ್ಲೆ ಬನ್ಸ್‌ಪೋಡಿ ಮುಂತಾದ ಎಣ್ಣೆ ತಿಂಡಿಗಳು. ಸೀಮಿತ ಬಗೆಯ ತಿಂಡಿಗಳಾದರೂ ಕಡಿಮೆ ಬೆಲೆಗೆ ಹೆಚ್ಚು ಕೊಡುತ್ತಾರೆ. ಮನೆಯ ಆದರಾತಿಥ್ಯದ ವಾತಾವರಣವಿದೆ. ಶುಚಿತ್ವ ಪಾಲನೆ ವ್ಯಾಪಾರದ ವೃದ್ಧಿಗೆ ಕಾರಣವಾಗಿದೆ. ಚಹಾ ಕಾಫಿಗಳಲ್ಲದೆ ಬೇಸಗೆಯಲ್ಲಿ ತಂಪಾದ ಎಳ್ಳಿನ ಜ್ಯೂಸ್, ಬರಿಂಡ ಶರಬತ್ ಕೂಡ ಅಲ್ಲಿ ದೊರೆಯುತ್ತದೆ. ಎಲ್ಲ ಕೆಲಸಗಳನ್ನೂ ತಾವೊಬ್ಬರೇ ನಿರ್ವಹಿಸುವಾಗಲೂ ಅವರಲ್ಲಿರುವ ಜೀವನೋತ್ಸಾಹದ ಫಲವಾಗಿ ಗ್ರಾಹಕರಲ್ಲಿ ಸಿಡುಕು ಮೂಡುವುದಿಲ್ಲ.
ಪುಟ್ಟ ಹೋಟೆಲಿಗೆ ತಿಂಗಳಿಗೆ ಒಂದೂಕಾಲು ಸಾವಿರ ಬಾಡಿಗೆ ಕೊಡಬೇಕು. ಯಾರಿಗೂ ಸಂಬಳ ಕೊಡುವ ಹಂಗಿಲ್ಲವಾದ ಕಾರಣ ಶ್ರಮದ ಫಲ ಅಂತ ದಿನಕ್ಕೆ ರು. 400 ಉಳಿತಾಯವಾಗುತ್ತದೆಂದು ಅರುಣಾ ಹೇಳುತ್ತಾರೆ. ಇದೇ ದುಡಿಮೆಯ ಮೂಲಕ ಇಬ್ಬರು ಪುತ್ರಿಯರನ್ನು ಪದವಿ ತನಕ ಓದಿಸಿ ಮದುವೆ ಮಾಡಿಕೊಟ್ಟ ಸಂತೃಪ್ತಿ ಅವರಲ್ಲಿದೆ. ಉಳಿತಾಯದ ಹಣದಿಂದ ಸ್ವಂತ ಮನೆಯ ಕನಸೂ ನನಸಾಗಿದೆ. ಸೋಲು ಬಂದಾಗ ಬದುಕೇ ಇಲ್ಲ ಅಂತ ಹತಾಶೆಗೊಳ್ಳುವವರಿಗೆ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಂಡ ಅರುಣಾ ಪೈ(8277260729) ಅವರ ಪ್ರಾಮಾಣಿಕ ಯಶೋಗಾಥೆ ಮಾರ್ಗದರ್ಶಕವಾಗುತ್ತದೆ.
- ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


