ಮಹಿಳೆ-ಮನೆ-ಬದುಕು

ವಸ್ತ್ರ ಪ್ರಯೋಗ

ವಸ್ತ್ರ ಪ್ರಯೋಗ
Published On :

ಮನೆ ಎಂದರೆ ಕೇಳಬೇಕೇ... ನೂರಾರು ಬಗೆಯ, ಹತ್ತಾರು ಶೈಲಿಯ ಸೂರುಗಳನ್ನು ನೋಡಿಕೊಂಡ ಮೇಲೆಯೇ ಕಟ್ಟಲು ಕೈಹಾಕುತ್ತೇವೆ. ಏಕೆಂದರೆ, ಆ ಮನೆ ಎಲ್ಲರಿಗಿಂತಲೂ ವಿಭಿನ್ನವಾಗಿರಬೇಕು. ಅಷ್ಟೇ ಅಲ್ಲ, ಆ ಮನೆ ಪೂರ್ಣಗೊಂಡ ಮೇಲೆ ಎಲ್ಲರನ್ನೂ ಮನಸೂರೆಗೊಳ್ಳುವಂತಿರಬೇಕು. ಇದು ಎಲ್ಲರೂ ವಿಶೇಷವಾಗಿ ಇಷ್ಟಪಡುವ ಸಂಗತಿ.
ಅಡುಗೆ ಮನೆ, ಬಾತ್‌ರೂಂ, ದೇವರ ಮನೆ, ಅತಿಥಿ ಕೋಣೆ, ಅಭ್ಯಾಸ ಕೋಣೆ, ವರಾಂಡ... ಹೀಗೆ ಮನೆಯ ಪ್ರತಿಯೊಂದು ಭಾಗವೂ ಆಕರ್ಷಣೆಯಾಗಿರಬೇಕು ಎಂದು ಬಯಸುತ್ತಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಒಂದು ಮುಖ್ಯವಾದ ವಿಚಾರವೇ ಮರೆಯಾಗುತ್ತಿದೆ. ಅದುವೇ ಬಟ್ಟೆ ಹಾಕಲು ಹಾಗೂ ಪಾದರಕ್ಷೆಗಳನ್ನು ಬಿಡಬೇಕಾದ ಜಾಗದ ಬಗ್ಗೆ.
ವೈಯಕ್ತಿಕ ಕೋಣೆಯಲ್ಲಿ ನಮ್ಮ ಡ್ರೆಸ್‌ಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಜಾಗ ಬೇಕೇ ಬೇಕು. ಆದರೆ, ಬಟ್ಟೆಗಳನ್ನು ತೆಗೆದಿಡಲು ಎಂಥ ವಿನ್ಯಾಸದ ಡೋರ್‌ಗಳು ಬೇಕು ಎನ್ನುವುದೇ ಇಲ್ಲಿ ಮುಖ್ಯ ಅಂಶ. ಇದರೊಟ್ಟಿಗೆ ಮನೆಯ ಹಾಲ್‌ನಲ್ಲಿ ಚಪ್ಪಲಿ, ಶೂಗಳನ್ನು ಹೇಗೆ ಬೇಕೋ ಹಾಗೆ ಎಸೆದಾಡಿದರೆ ಮನೆಯ ಅಂದಕ್ಕೆ ಅದು ಕೊಂಕು ನೀಡಿದಂತೆ. ಹೀಗಾಗಿ ಈ ಎರಡೂ ಬಗೆಯ ಸ್ಟೋರೇಜ್‌ಗಳು ಮನೆಗೆ ಅತ್ಯಗತ್ಯವಾಗಿ ಬೇಕು.
ಸಾಮಾನ್ಯವಾಗಿ ಎರಡೂ ಬಗೆಯ ಸ್ಟ್ಯಾಂಡ್‌ಗಳನ್ನು ಮನೆ ಕಟ್ಟುವಾಗ ಅಥವಾ ಕಟ್ಟಿದ ನಂತರ ಅಳವಡಿಸಬಹುದು. ಆದರೆ, ಇದಕ್ಕೆ ಮಾಮೂಲಿ ಜಾಗಕ್ಕಿಂತ ತುಸು ಹೆಚ್ಚೇ ಸ್ಥಳಾವಕಾಶ ಬೇಕಾಗುತ್ತದೆ. ಸಣ್ಣ ಮನೆ ಕಟ್ಟಿಸುವವರಿಗೆ ಇದು ಸೂಕ್ತವಲ್ಲ. ಆದರೆ, ಇರುವ ಜಾಗದಲ್ಲಿಯೇ ಫ್ಲೈವುಡ್‌ನಿಂದ ಬಟ್ಟೆ ಇಡಲು ಕಪಾಟು ಮಾಡಿಸಿಕೊಳ್ಳಬಹುದು.
ಬೆಡ್‌ರೂಂನಲ್ಲಿ ಬಟ್ಟೆಗಳನ್ನು ನೇತು ಹಾಕಲು ಗೋಡೆಯ ಜಾಗವೇ ಸೂಕ್ತ. ಇದನ್ನು ಮರದಿಂದ ಬೀರುವಿನಂತೆ ರೂಪಿಸಲಾಗುತ್ತದೆ. ಅದಕ್ಕೆ ಲಾಕರ್ ವ್ಯವಸ್ಥೆ ಜತೆಗೆ ಬಟ್ಟೆಗಳನ್ನು ಮಡಚಿಡಲು ಸಣ್ಣ ಡ್ರಾಗಳನ್ನೂ ರೂಪಿಸಲಾಗಿರುತ್ತದೆ. ಹೆಚ್ಚಾಗಿ ಇಂಥ ಫ್ಲೈವುಡ್ ಬೀರುಗಳನ್ನು ಗೋಡೆಯ ಹತ್ತಿರ ಹಾಗೂ ಚಾವಣಿಗೆ ಅಂಟಿಕೊಂಡಂತೆ ಲಂಬವಾಗಿ ತಯಾರಿಸಲಾಗಿರುತ್ತದೆ. ಕೇವಲ ಬಟ್ಟೆ ಮಾತ್ರವಲ್ಲ, ಶೂ ಸ್ಟ್ಯಾಂಡ್‌ಗಳನ್ನೂ ಕೆಲವರು ಬೆಡ್‌ರೂಮಿನಲ್ಲೇ ಬಟ್ಟೆ ಸ್ಟ್ಯಾಂಡ್‌ಗಳೊಂದಿಗೆ  ಮಾಡಿಸಿಕೊಂಡಿರುತ್ತಾರೆ. ಬಟ್ಟೆಗೆ ತಕ್ಕಹಾಗೆ ಶೂ, ಚಪ್ಪಲಿಗಳನ್ನು ಧರಿಸಲು ಇದು ಉಪಯೋಗವಾಗುತ್ತದೆ.
ಇವಿಷ್ಟೇ ಅಲ್ಲ, ನಿತ್ಯ ಉಪಯೋಗಿಸುವ ವ್ಯಾನಿಟಿ ಬ್ಯಾಗ್‌ಗಳನ್ನೂ ಈ ಡ್ರೆಸ್ ಸ್ಟ್ಯಾಂಡಿನಲ್ಲಿ ಇಡಬಹುದು. ಡ್ರೆಸ್‌ಗಳನ್ನು ಶೇಖರಿಸಿಡಲು ಹಿಂದಿನಿಂದಲೂ ಕಬ್ಬಿಣ ಮತ್ತು ಮರದ ಬೀರುಗಳನ್ನೇ ಬಳಸಲಾಗುತ್ತಿದೆ. ಆದರೆ, ಮನೆಗೆ ತಕ್ಕದಾದ ಶೂ ಹಾಗೂ ಬಟ್ಟೆ ಸ್ಟ್ಯಾಂಡ್‌ಗಳನ್ನು ತಯಾರಿಸುವ ಪದ್ಧತಿ ರೂಢಿಗೆ ಬಂದು ಕೆಲವೇ ವರ್ಷಗಳಾಗಿವೆ.
ಈ ಸ್ಟ್ಯಾಂಡ್‌ಗಳಲ್ಲೂ ನಾನಾ ನಮೂನೆಗಳುಂಟು. ಕೆಲವು ಕಂಪನಿಗಳು ಇವುಗಳನ್ನು ಸಿದ್ಧಪಡಿಸುತ್ತವೆ. ಬೇಡವೆಂದರೆ ಕಾರ್ಪೆಂಟರ್‌ಗಳೇ ನಿಮ್ಮ ವೈಶಿಷ್ಟ್ಯಕ್ಕೆ ತಕ್ಕಹಾಗೆ ತಯಾರಿಸಿಕೊಡುತ್ತಾರೆ. ಈ ಸ್ಟ್ಯಾಂಡ್‌ಗಳನ್ನು ಅಳವಡಿಸಿದ ಮೇಲೆ ಅದಕ್ಕೊಂದು ಎಲ್‌ಇಡಿ ಬಲ್ಬ್ ಅನ್ನೂ ಜೋಡಿಸಿ. ಇದು ಸ್ಟ್ಯಾಂಡ್‌ಗೆ ಮಾತ್ರವಲ್ಲ, ಕೋಣೆಗೂ ಅತ್ಯಾಕರ್ಷಕವಾಗುತ್ತದೆ.
ಶೂ ಸ್ಟ್ಯಾಂಡ್‌ಗಳಂತೂ ನಿತ್ಯ ಧೂಳಿನಿಂದ ಕೂಡಿರುತ್ತವೆ. ಹೀಗಾಗಿ, ಒಣ ಬಟ್ಟೆಯಿಂದ ಸ್ವಚ್ಛಗೊಳಿಸುತ್ತಿರಬೇಕು. ವಾಸನೆ ಬಾರದಂತೆ ಎಚ್ಚರ ವಹಿಸಬೇಕು. ಜತೆಗೆ ಕೊಳೆ ಆದ ಮೇಲೆ ತಕ್ಷಣ ಬಟ್ಟೆಯನ್ನು ಶುಚಿಗೊಳಿಸಿ. ಒಬ್ಬರು ಹಾಕಿದ ಬಟ್ಟೆಯ ಜಾಗದಲ್ಲೇ ಮತ್ತೊಬ್ಬರ ಬಟ್ಟೆ ಹಾಕುವುದು ಬೇಡ. ಇದರಿಂದ ಚರ್ಮ ವ್ಯಾಧಿ ತಡೆಯಬಹುದು.

- ಬ್ರಹ್ಮಾನಂದ ಎನ್. ಹಡಗಲಿ
hnbrahmanand@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.