ಸೂಲಗಿತ್ತಿ

ಮರದೊಳಗೆ ಮರ ಹುಟ್ಟಿ, ಮರ ಚಿತ್ರ ಕಾಯಾಗಿ, ತಿನ್ನಲಾರದ ಹಣ್ಣು ಬಲು ರುಚಿ- ಅದು ಯಾವುದು ಎಂಬ ಜಾನಪದ ಒಗಟಿಗೆ ಜಾಣರು ನೀಡುವ ಉತ್ತರ ಮಗು.
ಈ ಒಗಟಿನ ಸತ್ವವೇ ಹೇಳುವಂತೆ ಮಗುವೆಂಬ ಪುಟ್ಟ ಜೀವವನ್ನು ಹೊರಜಗತ್ತಿಗೆ ತರುವ ಆಕೆ. ಆ ಜೀವದಾತೆಗೆ ಮರುಜನ್ಮ ನೀಡುವ ಕೆಲಸಕ್ಕಾಗಿ ಜೀವನವನ್ನೇ ಮುಡಿಪಿಟ್ಟವರು ಹಳ್ಳಿಗಾಡಿನ ಸೂಲಗಿತ್ತಿಯರು. ವೈದ್ಯಕೀಯ ಸೌಲಭ್ಯವಿಲ್ಲದ ದಿನಗಳಲ್ಲಿ ಹತ್ತು ಹಡೆದ ಅನುಭವದಿ ನೂರು ತಾಯಿಯರು ಹಡೆಯಲು ನೆರವಾದ ಇವರು ನಿಜಕ್ಕೂ ಮಹಾಮಾತೆಯರು.
ಕೆಲ ದಶಕಗಳ ಹಿಂದೆ, ತಾಯ್ತನವೆಂದರೆ ಹೆಣ್ಣಿಗೆ ಪುನರ್ಜನ್ಮವೇ ಸರಿ ಎನ್ನುವಂಥ ಆತಂಕ. ಆಗ ಅಕ್ಕಯ್ಯ, ಸೀತಮ್ಮನೋ, ಸಾವಿತ್ರಕ್ಕ ಅಥವಾ ಫಣಿಯಮ್ಮನೋ ಹೆರಿಗೆ ಮನೆಯ ಕತ್ತಲೆ ಕೋಣೆಯೊಳಗೆ ಬೇವಿನಸೊಪ್ಪು, ಅರಿಶಿನ, ಬಿಸಿನೀರು, ಕೊಬ್ಬರಿ ಎಣ್ಣೆ, ಕಡಿ (ಮಡಕೆಯ ಮೊದಲ ಅರ್ಧ ಭಾಗದಿಂದ ಮಾಡಿದ ಕೆಂಡದ ಒಲೆ) ಹರಡಿ ಕುಳಿತು, ಹೆರಿಗೆ ನೋವಿನಲ್ಲಿ ಒದ್ದಾಡುತ್ತಿದ್ದ ಬಾಲಗರ್ಭಿಣಿಗೆ ಧೈರ್ಯ ಹೇಳುತ್ತಿದ್ದಳು. ನೋವು ಕೊಡಲು ಹೇಳಿ, ಮುದ್ದಾದ ಮಗು ಹುಟ್ಟುವ ಬಗ್ಗೆ ಮಾತಾಡುತ್ತಾ ಆಕೆಯಲ್ಲಿ ಕನಸು ಹುಟ್ಟು ಹಾಕಿ ನೋವು ಕೊಡಲು ಪ್ರೇರಣೆ ನೀಡುತ್ತಿದ್ದಳು. ಮಗು ಹುಟ್ಟಿದೊಡನೆ ಸ್ವಚ್ಛಗೊಳಿಸಿ ತಾಯ್ತಂದೆಯರಿಗೆ ಸ್ವಚ್ಛತೆಯ ಪಾಠ ಹೇಳಿ ಬಾಯ್ತುಂಬಾ ಹರಸಿ ಬರುತ್ತಿದ್ದಳು.
ಹೆರಿಗೆ ನೋವೆಂದು ಸುದ್ದಿ ಕೇಳಿದರೆ ಸಾಕು, ರಾತ್ರಿಯಾಗಲೀ, ಹಗಲಾಗಲೀ, ಗೌರಮ್ಮನ ಮನೆಯೋ, ನಿಂಗಿಯ ಮನೆಯೋ, ಬೂಬಮ್ಮನ ಮನೆಯೋ ನೋಡದೆ ಓಡುತ್ತಿದ್ದಳಲ್ಲಾ, ಆಕೆಯ ಕಾಳಜಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಸಮಾಜದಲ್ಲಿ ಜಾತಿಪದ್ಧತಿ ಪ್ರಬಲವಾಗಿದ್ದ ಕಾಲವದು. ಧಾರ್ಮಿಕ ನಂಬಿಕೆಗಳನ್ನು ಶ್ರದ್ಧೆಯಿಂದ ಪಾಲಿಸುವ ಮನಸ್ಥಿತಿ ಇತ್ತು. ಆದರೆ ಸೂಲಗಿತ್ತಿ ವ್ಯವಸ್ಥೆ ಮಾತ್ರ ಜಾತಿ ಎಲ್ಲೆ ಮೀರಿದ್ದು ವಿಶೇಷ.
ಮಗು ಹುಟ್ಟಿದ ಮೇಲೆ ಎಳೆಕೂಸುಗಳಿಗೆ ಸರಳ ವ್ಯಾಯಾಮ ನೀಡುವ, ಅವುಗಳ ಸ್ನಾಯು, ಅಂಗಾಂಗ ಬೆಳವಣಿಗೆಗೆ ನೆರವಾಗುವ ಎಣ್ಣೆಸ್ನಾನ ಮಾಡಿಸುವುದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಿನ ಮೂಲಕ ಚಿಕಿತ್ಸೆ ನೀಡುವ ಸೂಲಗಿತ್ತಿಯರು ಒಂದರ್ಥದಲ್ಲಿ ಮನೆವೈದ್ಯರೇ ಆಗಿದ್ದರು. ಆದರೂ ಪ್ರತಿಫಲವಾಗಿ ಏನನ್ನೂ ಬಯಸುತ್ತಿರಲಿಲ್ಲ. ಆಗಿನ ದಿನಮಾನಕ್ಕೆ ಪ್ರೀತಿಗೆಂದು ಒತ್ತಾಯದಿ ನೀಡಿದ ಬಟ್ಟೆಬರೆ, ದವಸಧಾನ್ಯ, ಪುಡಿಗಾಸು, ಎಲ್ಲಕ್ಕೂ ಹೆಚ್ಚಾಗಿ ಜನರ ನಂಬಿಕೆ ಮತ್ತು ಅಭಿಮಾನಗಳೇ ಅವಳ ವರಮಾನ ಮತ್ತು ಬಹುಮಾನ!
ಕಾಲ ಬದಲಾಗಿದೆ, ಅಂದಿನ ಕತ್ತಲ ಜಗತ್ತಿನ ಗೋಜಲುಗಳಿಲ್ಲದೆ ಸುರಕ್ಷಿತ ತಾಯ್ತನವನ್ನು ಅನುಭವಿಸುವ ಅವಕಾಶಗಳು, ಸೌಲಭ್ಯಗಳಿವೆ. ಸಾಕಷ್ಟು ಅನುಭವಿ ವೈದ್ಯರು, ಶುಶ್ರೂಶಕಿಯರು ಇಂದು ಸೂಲಗಿತ್ತಿಯರ ಸ್ಥಾನದಲ್ಲಿ ನಿಂತು ಸೇವೆ ಮಾಡುತ್ತಿದ್ದಾರೆ. ದೊಡ್ಡ ಆಸ್ಪತ್ರೆಗಳಲ್ಲಿ ಮಗುವೊಂದಕ್ಕೆ ಜನ್ಮ ನೀಡಲು 1 ಲಕ್ಷದವರೆಗೂ ತೆಗೆದುಕೊಂಡು ಆಧುನಿಕ ಚಿಕಿತ್ಸೆ, ಔಷಧೋಪಚಾರಗಳು ಒದಗುತ್ತಿವೆ. ಅದಾಗ್ಯೂ ಸೂಲಗಿತ್ತಿಯರ ಸೇವೆ, ಅನಿವಾರ್ಯತೆ ಮತ್ತು ಸಂದರ್ಭಗಳನ್ನು ಅನುಸರಿಸಿ ಸಾಂಪ್ರದಾಯಿಕವಾಗಿ ಬಂದ ಮಹಿಳೆಯರ ಅಂಥ ಕಾಯಕದಲ್ಲಿನ ಶ್ರಮಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಿದೆ.
- ಎಚ್.ಎಂ. ಉಮಾ ಶ್ರೀಧರಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


