ಅಭದ್ರತೆ ಭೂತ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ... ಪ್ರೀತಿಯಲ್ಲಿ ಬೀಳುವುದು, ಜೀವನದ ಮಿಕ್ಕೆಲ್ಲ ಅನುಭವಗಳಿಗಿಂತ ವಿಶೇಷ. ನೀವು ಒಬ್ಬರಿಗೆ ಪ್ರೀತಿಯನ್ನು ನೀಡುತ್ತಿರುವಿರಾದಲ್ಲಿ, ಆ ವ್ಯಕ್ತಿಯಿಂದ ಅಷ್ಟೇ ಪ್ರೀತಿಯನ್ನು ಪಡೆಯಲು ಬಯಸುತ್ತೀರಿ. ಯಾವಾಗ ನೀವು ತೋರಿಸುತ್ತಿರುವಷ್ಟು ಪ್ರೀತಿಯನ್ನು ಅವರು ನಿಮಗೆ ತೋರಿಸುತ್ತಿಲ್ಲ ಎಂಬ ಅನುಮಾನ ಪ್ರಾರಂಭವಾಗುತ್ತದೋ, ಆಗಲೇ ಅಭದ್ರತಾ ಭಾವನೆ ಕಾಡತೊಡಗುವುದು.
ಸಂಬಂಧಗಳು ಸಲೀಸಾಗಿ ಮುಂದುವರಿಯಲು ಮನಸ್ಸಿನಲ್ಲಿ ಭದ್ರತಾ ಭಾವದ ಅವಶ್ಯಕತೆಯಿದೆ. ಆತ ಏನೇ ಮಾಡಿದರೂ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂಬ ನಂಬಿಕೆ ನಮ್ಮನ್ನು ಹೆಚ್ಚು ನೆಮ್ಮದಿಯಿಂದಿಡುತ್ತದೆ. ಅಧ್ಯಯನಗಳ ಪ್ರಕಾರ, ಗಂಡಸರಿಗಿಂತ ಹೆಂಗಸರು ಹೆಚ್ಚು ಅಭದ್ರತೆ ಅನುಭವಿಸುತ್ತಾರೆ. ನೀನು ಒಂಟಿ ಅಲ್ಲ, ನಿನ್ನೊಂದಿಗೆ ನಾನಿದ್ದೇನೆ ಎಂಬ ಮಾತನ್ನು ಸದಾ ಕೇಳಲು ಹೆಣ್ಣು ಇಷ್ಟಪಡುತ್ತಾಳೆ.
ಹೆಣ್ಣು ತಾನು ತಾನಾಗಿರಲು ಅಭದ್ರತೆ ಭಾವದಿಂದ ಹೊರಬರುವುದು ಅತ್ಯವಶ್ಯ. ಕೇವಲ ಸಂಬಂಧಗಳಲ್ಲಷ್ಟೇ ಅಲ್ಲ, ಕಚೇರಿಯಲ್ಲಿ ತನ್ನ ಸ್ಥಾನ, ಸಾರ್ವಜನಿಕ ವರ್ಚಸ್ಸು ಇತ್ಯಾದಿ ವಿಷಯಗಳಲ್ಲೂ ಅಭದ್ರತೆ ಕಾಡುತ್ತದೆ. ಅಭದ್ರತೆ ವ್ಯಕ್ತಿಯ ಆತ್ಮಸ್ಥೈರ್ಯವನ್ನು ಕೊಲ್ಲುತ್ತದೆ. ಇದರಿಂದ ಸರಣಿ ಅಪಘಾತದಂತೆ ಎಲ್ಲೆಡೆ ಸೋಲುಗಳೇ ಬೆನ್ನತ್ತಿಬರುತ್ತವೆ.
ಅಭದ್ರತೆ ಓಡಿಸುವುದು ಹೇಗೆ?
- ಮೊದಲು ನಿಮ್ಮ ಮೇಲೆ ನಂಬಿಕೆ ಇರಲಿ. ಇತರರಿಗಿಂತ ನೀವು ಯಾವುದೇ ವಿಷಯದಲ್ಲಿ ಅಲ್ಪರಲ್ಲ ಎಂಬುದನ್ನು ಮನಗಾಣಿಕೊಳ್ಳಿ.
- ಸಂಬಂಧಗಳನ್ನು ಹಸಿರಾಗಿಟ್ಟುಕೊಳ್ಳಲು ನಂಬಿಕೆಯದು ಬಹುದೊಡ್ಡ ಪಾತ್ರ. ನೀವು ಸದಾ ಆತನ ಮೇಲೊಂದು ಕಣ್ಣಿಟ್ಟುಕೊಂಡು ಕುಳಿತರೆ, ಆತ ಸಿಟ್ಟಾಗಬಹುದು. ನಿಮ್ಮ ಮನಸ್ಸಿನಲ್ಲೇಳುವ ಅನುಮಾನಗಳನ್ನು ನೇರವಾಗಿ ಕೇಳಿ ಪರಿಹರಿಸಿಕೊಳ್ಳಿ. ಸಂದಿಗ್ಧ ಪರಿಸ್ಥಿತಿಗಳಲ್ಲಿ ಮೌನ ವಹಿಸದೆ, ಪರಸ್ಪರ ಆಲೋಚನೆಗಳನ್ನು ಹಂಚಿಕೊಳ್ಳಿ. ಮಾತು ಪ್ರತಿ ಸಂಬಂಧದಲ್ಲೂ ಹೇರಳವಾಗಿರಬೇಕು. ಅಭದ್ರತೆಯ ಬೆಳವಣಿಗೆಗೆ ಮೌನ ಕೂಡಾ ಕಾರಣ.
- ವ್ಯಾಯಾಮದಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಬಹುದೆಂಬುದು ಈಗಾಗಲೇ ಸಾಬೀತಾಗಿದೆ. ಅಭದ್ರತೆಯಿಂದ ಬಳಲುವವರು ಜಿಮ್, ನೃತ್ಯ ಕಲಿಕೆ, ಕೈತೋಟ ಅಥವಾ ದೇಹಕ್ಕೆ ಶ್ರಮ ಕೊಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.
- ಎಂದೋ ಬದಲಾದ ಯಾವುದೋ ವಿಷಯಕ್ಕೆ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಂಡು ಕೊರಗುತ್ತಾರೆ. ಯಾವುದನ್ನು ಬದಲಾಯಿಸಲು ಸಾಧ್ಯವೇ ಇಲ್ಲವೋ, ಅಂಥದ್ದನ್ನು ಅದರ ಪಾಡಿಗೆ ಬಿಟ್ಟು ನಿಮ್ಮ ಪಾಡಿಗೆ ನೀವಿದ್ದು ಬಿಡಬೇಕು.
- ಆತನೊಂದಿಗಿರುವ ಸಂಬಂಧ ನಿಮ್ಮ ಜೀವನದ ಪರಮ ಉದ್ದೇಶವಲ್ಲ. ನಿಮ್ಮ ಜೀವಿತಾವಧಿ ಮುಗಿಯುವುದರೊಳಗಾಗಿ ಇಂಥದ್ದೊಂದನ್ನು ಸಾಧಿಸಲೇಬೇಕೆನ್ನುವ ಗುರಿ ಇಟ್ಟುಕೊಳ್ಳಿ.
- ನಿಮ್ಮನ್ನು ನೀವು ಸದಾ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸ್ನೇಹಿತರೊಂದಿಗೆ ಬೆರೆಯಿರಿ ಹಾಗೂ ಹೊಸ ವ್ಯಕ್ತಿಗಳೊಡನೆ ಒಡನಾಡಿ.
- ನಿಮ್ಮ ಸಂಗಾತಿ ಮತ್ತು ಸಂಬಂಧದ ಬಗ್ಗೆ ವಿಶ್ವಾಸವಿರಲಿ. ನಿಮ್ಮ ಸಂಗಾತಿಯೊಡನೆ ನೀವು ಧನಾತ್ಮಕವಾಗಿ ವರ್ತಿಸದಿದ್ದರೆ ಆತನಿಗೂ ನಿಮ್ಮ ಮೇಲೆ ಆಸಕ್ತಿ ಕಡಿಮೆಯಾಗಬಹುದು. ಆತ ನನ್ನನ್ನ ಬಿಡಬಹುದೇ, ಬಿಟ್ಟರೆ ನಾನೇನು ಮಾಡಲಿ, ಆತ ನನ್ನನ್ನು ನಿಜವಾಗಿ ಪ್ರೀತಿಸುತ್ತಾನಾ... ಇಂಥ ಪ್ರಶ್ನೆಗಳನ್ನು ಮೊದಲು ಕಿತ್ತು ಬಿಸಾಡಿ.
- ನಿಮ್ಮನ್ನು ನೀವು ಪ್ರೀತಿಸಲು ಪ್ರಾರಂಭಿಸಿ. ಆಗಲೇ ಇನ್ನೊಬ್ಬರು ನಿಮ್ಮನ್ನು ಪ್ರೀತಿಸಲು ಸಾಧ್ಯ. ನಿಮ್ಮತನವನ್ನು ಗೌರವಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


