ಮಗು ಸಿಪಾಯಿ ಆಗಬೇಕೆ

ಚಿಕ್ಕ ಪಾಪುವಿನ ಊಟದ ತಟ್ಟೆಯಿಂದಲೇ ಶಿಸ್ತು ಶುರುವಾಗಬೇಕು. ಹೇಗೆಂದರೆ ಪೂರ್ತಿಯಾಗಿ ಉಣಿಸುವುದು, ಬೇಕಾದಷ್ಟೇ ಬಡಿಸಿ ತಿನಿಸುವುದು, ಪುನಃ ಬೇಕೆಂದಾದರೆ ಮಾತ್ರ ಬಡಿಸುವುದು, ಅನ್ನವನ್ನು ಜಾಗರೂಕತೆಯಿಂದ ತಿನ್ನುವುದು ರೂಢಿಯಾಗಲಿ. ಚೆಲ್ಲಿಕೊಂಡು ಊಟ ಮಾಡಿದಲ್ಲಿ ಪಾಪುವಿಗೂ ಅನ್ನದ ಮಹತ್ವ ತಿಳಿಸಬೇಕು (ಅದಕ್ಕೆ ಅರ್ಥ ಆಗದಿದ್ದರೂ!). ಪ್ರತಿ ಆಹಾರವೂ ಏನು ಪೋಷಕಾಂಶಗಳಿಂದ ಕೂಡಿದೆ, ಬೆಲೆಯೇನು ಎಂದು ತಿಳಿಸುತ್ತಿರಿ.
ಮಗುವಿಗೆ ಆಟದ ಸಾಮಾನು ಕೊಡುವಾಗಲೇ ಅದನ್ನು ಮತ್ತೆ ಬುಟ್ಟಿಗೆ ತುಂಬಿಡಲೂ ಹೇಳಬೇಕು. ಆಟದ ಸಾಮಾನು ಮುರಿಯದಂತೆ, ಜಾಗರೂಕತೆಯಿಂದ ಆಟವಾಡಿದರೆ ಪ್ರೋತ್ಸಾಹಿಸಿ ಹೊಗಳಬೇಕು. ಹಳೆಯ ಆಟದ ಸಾಮಾನು ಮುರಿದರೆ ಕೆಲಕಾಲ ಹೊಸತನ್ನು ಕೊಡಿಸಬಾರದು. ಆಗ ಮುಂದಿನ ಬಾರಿ ಮಗು ಹೆಚ್ಚು ಎಚ್ಚರಿಕೆ ವಹಿಸುತ್ತದೆ. ಆಟದ ಸಾಮಾನುಗಳನ್ನಿಡಲು ಒಂದು ಜಾಗವನ್ನು ಗುರುತಿಸಿ ಅಲ್ಲಿಯೇ ಇಡುವಂತೆ ಹೇಳಬೇಕು.
ಹಣ ಉಳಿಸಲು ನಿಮ್ಮ ಪುಟ್ಟ ಕಂದನಿಗೊಂದು ಡಬ್ಬಿ ಇಲ್ಲವೇ ಪರ್ಸ್ ನೀಡಿ. ದಕ್ಷಿಣೆ, ಐಸ್‌ಕ್ಯಾಂಡಿ ತೆಗೆದುಕೊಳ್ಳಲು ನೀಡಿದ ಹಣದಲ್ಲಿ ಉಳಿದ ಚಿಲ್ಲರೆಯನ್ನು ಅದರಲ್ಲಿ ಹಾಕಿ ಅವರದೇ ದುಡ್ಡೆಂದು ಜೋಪಾನ ಮಾಡಲು ಹೇಳಿ. ಮಗು ಏನಾದರೂ ಬೇಕೆಂದು ಹಟ ಹಿಡಿದಾಗ ಅದರ ಪರ್ಸಿನಲ್ಲಿ ಇಂತಿಷ್ಟು ದುಡ್ಡು ಒಟ್ಟಾದಾಗ ಅದರಿಂದಲೇ ತೆಗೆಸಿಕೊಡುವುದಾಗಿ ಹೇಳಿ. ಪೆನ್ಸಿಲ್, ಎರೇಸರ್, ಪೆನ್ ಇಂಥ ವಸ್ತುಗಳು ಪದೇ ಪದೇ ಕಾಣೆಯಾದಾಗ ಮಗು ಶೇಖರಿಸಿದ ದುಡ್ಡಿನಿಂದಲೇ ತೆಗೆದುಕೊಳ್ಳಲು ಹೇಳಿ. ಇದರಿಂದ ವಸ್ತುಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಲು ಕಲಿಯುತ್ತಾರೆ. ಜೊತೆಗೆ ಮಗುವಿಗೆ ಹಣದ ಮಹತ್ವವೂ ತಿಳಿಯುತ್ತದೆ.
ನೆಂಟರ ಮನೆಗೆ ಹೋದಾಗ ಅಲ್ಲೊಂದು ಆಟದ ಸಾಮಾನು ನೋಡಿ ಅದೇ ಬೇಕೆಂದು ಮಗು ರಚ್ಚೆ ಹಿಡಿಯಬಹುದು. ಆ ಮನೆಯೊಡತಿಯೂ ಅದನ್ನು ಕೊಡಬರಬಹುದು. ಆದರೆ ಅದನ್ನು ತೆಗೆದುಕೊಳ್ಳದೇ ಮಗುವಿಗೆ ಸಮಾಧಾನ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದಾಗ ಅದೇ ರೀತಿಯ ಗೊಂಬೆ ನೀಡಿದರೆ ಅದರ ಮೌಲ್ಯವೇ ಬೇರೆಯಾಗಿರುತ್ತದೆ.
- ಕೃಷ್ಣವೇಣಿ ಮುಳಿಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


