ಮಹಿಳೆ-ಮನೆ-ಬದುಕು

ದಾಂಪಥ್ಯ

ದಾಂಪಥ್ಯ
Published On :

ಹೆಂಡತಿಯರ ಕೆಲವೊಂದು ವಿಚಾರ, ನಡವಳಿಕೆಗಳು ಸಂಸಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಸಂಸಾರದ ಕಣ್ಣಾಗಬೇಕಾದ ಆಕೆ ತನ್ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೂ ಬದುಕು ಸುಂದರ, ಸರಾಗವಾಗುತ್ತದೆ.

ಕಿರಿಕ್ ಮಾಡಬೇಡಿ
ಮನೆ ಬಾಗಿಲು ಸರಿಯಾಗಿ ಹಾಕಿದ್ಯಾ? ನಾಡಿದ್ದು ಬಿಲ್ ಪಾವತಿಸಬೇಕಿರುವ ವಿಚಾರ ನೆನಪಿದ್ಯಾ? ತಾನು ಕೊಂಡ ಸೀರೆ ಹಸಿರು ಬಣ್ಣದಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ?- ಇಂಥ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಮಹಿಳೆಯರಿಗುಂಟು. ಮಹಿಳೆಯರು ಸ್ವಾಭಾವಿಕವಾಗಿ ಸಣ್ಣ ಸಣ್ಣ ವಿಷಯದ ಕುರಿತು ಚಿಂತಿಸುವುದೇ ಹೆಚ್ಚು. ಆದರೆ, ಪುರುಷರು ಇಂಥ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ದೊಡ್ಡ ದೊಡ್ಡ ಜವಾಬ್ದಾರಿಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಪದೇಪದೇ ದೂರುತ್ತಿದ್ದರೆ ಅಥವಾ ಚಿಂತಿಸುತ್ತಿದ್ದರೆ ಪುರುಷರು ಒತ್ತಡಕ್ಕೊಳಗಾಗುತ್ತಾರೆ. ಆದಷ್ಟು ಯೋಚಿಸಿ ಮಾತನಾಡಿ.

ಗಂಟು ಮೋರೆ ಬೇಡ

ಮಾತುಮಾತಿಗೂ ಮುಖ ಊದಿಸುತ್ತ ಕುಳಿತರೆ ಕೆಲಸ ಮುಗಿಸಿದ ಗಂಡನಿಗೆ ಮನೆ ಕಡೆ ಹೆಜ್ಜೆ ಹಾಕುವ ಉತ್ಸಾಹವೇ ಇರುವುದಿಲ್ಲ. ಇವಳನ್ನು ಸಮಾಧಾನ ಪಡಿಸುವುದು ಹೇಗೆಂಬ ಯೋಚನೆಯಲ್ಲೇ ಆತ ಹೈರಾಣಾಗುತ್ತಾನೆ. ಆತನ ಓಲೈಸುವಿಕೆ ಒಂದೆರಡು ಬಾರಿ ಚೆಂದವೆನಿಸಬಹುದು. ನಂತರ ಆತನೂ ಅಲಕ್ಷಿಸಲು ಶುರು ಮಾಡುತ್ತಾನೆ. ಇದರಿಂದ ಸಂಬಂಧ ಹಳಸುತ್ತದೆ. ನಿಮ್ಮ ಸಂಗಾತಿಯ ಯಾವುದಾದರೂ ವಿಚಾರ ನಿಮಗೆ ಹಿಡಿಸದಿದ್ದರೆ ಅಥವಾ ಅದು ನಿಮಗೆ ಸಮಸ್ಯೆಯಾಗಿ ಪರಿಣಮಿಸುತ್ತಿದ್ದರೆ ಆತನ ಜತೆಗೆ ಕೂತು ಚರ್ಚಿಸಿ. ಆ ವಿಚಾರ ನಿಮಗೆ ಯಾಕೆ ಕಿರಿಕಿರಿಯೆನಿಸುತ್ತದೆ ಎನ್ನುವುದನ್ನು ವಿವರಿಸಿ. ಸುಲಭ ಪರಿಹಾರ ಸಿಕ್ಕೇ ಸಿಗುತ್ತದೆ.

ಸಕಾರಾತ್ಮಕ ಧೋರಣೆ
ಸಾಮಾನ್ಯವಾಗಿ ಹೆಂಗಸರಿಗೆ ಅದು ಆಗುತ್ತೋ ಇಲ್ಲವೋ, ಸರಿ ಇದೆಯೋ ಇಲ್ಲವೋ, ಛೇ ಹಾಗೆ ಮಾಡಬಾರದಿತ್ತು, ಕೂದಲು ಸರಿಯಿಲ್ಲ, ಮೊಡವೆಯಿಂದ ಅಂದಗೆಟ್ಟಿದೆ- ಇವೇ ಯೋಚನೆಗಳು ಗಿರಕಿ ಹೊಡೆಯುತ್ತಿರುತ್ತವೆ. ಇಂಥ ಉಪಯೋಗಕ್ಕೆ ಬಾರದ ಯೋಚನೆಗಳು ನಿಮ್ಮ ಹಾಗೂ ನಿಮ್ಮೊಂದಿಗೆ ಬದುಕುವವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಒಂದು ತಿಳಿದುಕೊಳ್ಳಿ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಧೋರಣೆಯುಳ್ಳ ಹೆಂಡತಿ ಗಂಡಂದಿರ ಮೆಚ್ಚಿನ ಮಡದಿಯಾಗುತ್ತಾಳೆ.

ಪಕ್ಕದ್ಮನೆ ವಿಚಾರ
ಹೆಂಗಸರಿಗೆ ಪಕ್ಕದ ಮನೆಯವರ ವಿಚಾರದಲ್ಲಿ ಅಸಕ್ತಿ ಜಾಸ್ತಿ. ಸಾಲದೆಂದು ಧಾರಾವಾಹಿ ಚಟ ಬೇರೆ. ಕೆಲಸ ಮುಗಿಸಿ ಗಂಡ ಮನೆಗೆ ಬರುತ್ತಿದ್ದಂತೆ ಅವರಿವರ ವಿಚಾರ ಹೇಳಿ ತಲೆ ತಿನ್ನಬೇಡಿ. ಅವರ ದಿನ ಹೇಗಿತ್ತು ಎಂಬ ಬಗ್ಗೆ ಮೊದಲು ವಿಚಾರಿಸಿ.

ನೇರವಾಗಿರಿ...
ಹೆಚ್ಚಾಗಿ ಪುರುಷರು ನೇರವಂತಿಕೆಯ ಸ್ವಭಾವ ಹೊಂದಿರುತ್ತಾರೆ. ಆದರೆ, ಮಹಿಳೆಯರು ಈ ವಿಚಾರದಲ್ಲಿ ಸ್ವಲ್ಪ ಭಿನ್ನ. ಅವರು ಏನೇ ಹೇಳಬೇಕಿದ್ದರೂ ಸುತ್ತುಬಳಸಿ ಹೇಳುತ್ತಾರೆ. ಕೆಲವೊಮ್ಮೆ ಇದಕ್ಕಾಗಿ ಅವರು ಸಣ್ಣ ಆಟವಾಡುವುದೂ ಉಂಟು. ಕೆಲವೊಮ್ಮೆ ಅದು ಒತ್ತಡ ಮತ್ತು ಗೊಂದಲಕ್ಕೆ ಕಾರಣವಾಗಬಹುದು. ಇದರ ಬದಲು ಸಂಬಂಧದಲ್ಲಿ ಪ್ರಾಮಾಣಿಕವಾಗಿರಲು ಪ್ರಯತ್ನಿಸಿ. ಸಂಗಾತಿಯೊಂದಿಗೆ ನೇರವಾಗಿ ಮಾತನಾಡಿ.

- ಅಜಿತ್ ಮಣಿಪಾಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.