ಗುಚ್ಛ ಗಮನ

ಸೊಗಸಾದ ಸಂಜೆಕೂಟಕ್ಕೆ ತಾಜಾತನದ ಮೆರುಗು ಹೂಗೊಂಚಲಿಂದ ಸಾಧ್ಯ. ಹೀಗಾಗಿ ಡೈನಿಂಗ್ ಟೇಬಲ್‌ನ ವಿನ್ಯಾಸ ಮಾಡೋದೂ ಒಂದು ಕಲೆ. ಪ್ರಸ್ತುತಕ್ಕೆ ಇಂಪು ನೀಡಿ ನೆರೆದವರಿಗೆ ಕಂಪು ಒದಗಿಸುತ್ತದೆ. ಮನಸು ಬಿಚ್ಚಿ ಬೆರೆಯುವ, ಮಾತನಾಡುವ ಮುಕ್ತ ವಾತಾವರಣ ಒದಗಿಸುತ್ತದೆ.
ಆಕರ್ಷಕ ಹೂಗುಚ್ಛ
ಸುಂದರ ಹೂಗುಚ್ಚ ಡೈನಿಂಗ್ ಟೇಬಲ್ ಮೇಲೆ ಕಂಗೊಳಿಸುತ್ತಿದ್ದರೆ ಕೂಟಕ್ಕೊಂದು ಕೋಡು. ನೀವೇ ಕೈಯ್ಯಾರೆ ವಿಸ್ಮಿತ ಹೂಗುಚ್ಛ ನಿರ್ಮಿಸಲು ಸಾಧ್ಯ. ಖಾಲಿಯಾದ ನಿಮಗಿಷ್ಟದ ಮದ್ಯಬಾಟಲಿಗಳನ್ನು ಆರಿಸಿ. ಚಿನ್ನದ ಬಣ್ಣ ಲೇಪನ ಮಾಡಿ. ಅದರ ಮೇಲಿರುವ ತೇವ ಆರಲು ಸ್ವಲ್ಪ ಸಮಯ ಬಿಡಿ. ಬಣ್ಣ ಒಣಗಿ ಪೂರ್ತಿ ಬಾಟಲಿ ಬಂಗಾರ ಎಂಬಂತೆ ಭಾಸವಾಗುತ್ತದೆ.
ಸುಂದರ ಪುಷ್ಪಗಳನ್ನಷ್ಟೇ ಆಯ್ಕೆಮಾಡಿ. ಹವಾಮಾನಕ್ಕೆ ತಕ್ಕಂತೆ ಹೂ ತಾಜಾ ಪರಿಮಳ ನೀಡುತ್ತದೆ. ಬಿಳಿ ಅಥವಾ ಕೆಂಪು ಗುಲಾಬಿಗಳು ನೀಡುವ ಅಂದ ಅದ್ಭುತ. ಲಿಲ್ಲಿಗಳು ಸೌಂದರ್ಯಕ್ಕೆ ಲಾಲಿತ್ಯ ಹಾಡುತ್ತವೆ. ಸುವಾಸನೆ ಭರಿತ ಹೂಗಳನ್ನು ಬಳಸಿ. ಚಮತ್ಕಾರಕ್ಕನುಗುಣವಾಗಿ ಸೀಸೆ ಒಳಗೆ ಹೂವಿನ ಕಾಂಡವನ್ನು ಮುಳುಗಿಸಿಡಿ.
ಹೂಗಳಿಂದ ಅಲಂಕೃತವಾದ ಸೀಸೆಗಳ ಸುತ್ತ ಸ್ಫಟಿಕಗಳನ್ನು ಜೋಡಿಸಿಡಿ. ಹೂವಿನ ಜೋಡಣೆಯೊಂದಿಗೆ ಸ್ಫಟಿಕವು ಬೆಳಕಿನ ಪ್ರತಿಫಲನಗಳ ಹೊಳಪು ನೀಡುತ್ತದೆ. ಸುತ್ತಲೂ ಹೂಹಣ್ಣುಗಳ ಮಿಶ್ರಣವನ್ನು ಅಲಂಕೃತವಾಗಿ ಜೋಡಿಸಿ. ಸೌಂದರ್ಯದ ಚಿತ್ತಾರ ಇಮ್ಮಡಿಗೊಳ್ಳುತ್ತದೆ.
ಟೇಬಲ್ ವಿನ್ಯಾಸ
ಸುಖಭರಿತ ಭೋಜನಕ್ಕೆ ಮಜಾ ಎನಿಸುವ ಅಲಂಕಾರ ಡೈನಿಂಗ್ ಟೇಬಲ್ ಮೇಲಿರಬೇಕು. ಇದು ನಿಜಕ್ಕೂ ಸರಳ. ಕೆಲವು ಬಳಕೆಯಾದ ಎಳನೀರ ಕಾಯಿಗಳನ್ನು ಆರಿಸಿ. ಚೆಂಡು ಹೂಗಳು ಬೇಕು. ಈ ಹೂಗಳ ಬಳಕೆ ಸರಳವಾಗಿದ್ದು ಸಂಪ್ರದಾಯದ ಸೂಚ್ಯವಾಗಿವೆ.
ಚೆಂಡು ಹೂಗಳನ್ನು ಸುಂದರ ಕಿರೀಟದಂತೆ ಜೋಡಿಸಿ. ಎಳನೀರ ಮೇಲ್ಭಾಗದಲ್ಲಿ ಅಚ್ಚುಕಟ್ಟಾಗಿ ಅಲಂಕರಿಸಿ. ಸಣ್ಣ ಕಡ್ಡಿಗಳನ್ನು ಬಳಸಿ, ಎಳನೀರು ಕಾಯಿಯ ಸುತ್ತಲೂ ಬಗೆ ಬಗೆಯ ಹೂಗಳನ್ನು ಗುಚ್ಛದಂತೆ ಪೋಣಿಸಿ. ಪುಷ್ಪ ಕಿರೀಟದ ಮೇಲ್ಭಾಗದಲ್ಲೂ ಹೂಗಳನ್ನಿಡಿ.
ರಫಿಯಾ ನಾರಿನಿಂದ ಮಾಡಿದ ಚೆಂಡಿನಾಕೃತಿಯ ಜೋಡಣೆ ಎಂಥವರನ್ನೂ ಆಕರ್ಷಿಸುತ್ತದೆ. ಚೆಂಡಿನ ಮೇಲೆ ಗೋಣಿ ದಾರ ಅಥವಾ ಸೆಣಬಿನ ದಾರವನ್ನು ಸುತ್ತಲೂ ಸುತ್ತಿ. ಮೇಲ್ಭಾಗದಲ್ಲಿ ಹೂಗಳನ್ನು ಜೋಡಿಸಿಡಿ. ಹಳದಿ, ಕಿತ್ತಳೆ ವರ್ಣಗಳ ಚೆಂಡುಹೂಗಳನ್ನು ಅಚ್ಚುಕಟ್ಟಾಗಿ ಆರಿಸಿ ಹೊಂದಿಸಿಡಿ.
ಅರ್ಧಭಾಗ ಮಾಡಿದ ಎಳನೀರ ಕಾಯಿಯ ಒಳಗೆ ಜೇನು ಮೇಣವನ್ನು ತುಂಬಿಸಿಡಿ. ಇದರ ಮಧ್ಯದಲ್ಲಿ ಬೆತ್ತದ ಕಡ್ಡಿಯನ್ನು ನೆಡಿ. ನೀವೇ ಆರಿಸಿದ ಥೀಮ್ ಪ್ರಕಾರವಾಗಿ ಪುಷ್ಪಗಳಿಂದ ಅಲಂಕರಿಸಿ. ಡೈನಿಂಗ್ ಟೇಬಲ್‌ಗಷ್ಟೇ ಇಂಥ ಅಲಂಕಾರ ಸೀಮಿತವೇನಲ್ಲ. ಸ್ಟಡಿ ಟೇಬಲ್, ಬೆಡ್ ಸೈಡ್ ಕ್ಯಾಬಿನೆಟ್‌ಗಳಲ್ಲೂ ಅಲಂಕರಿಸಿಕೊಳ್ಳಬಹುದು. ಬಿಳಿ ಬಣ್ಣದ ಕಾಫಿ ಕಪ್‌ಗಳಲ್ಲಿ ಹೂಗಳನ್ನು ಇರಿಸಿದರೆ, ಅದೂ ಒಂದು ಸೌಂದರ್ಯದ ಸ್ವರ ಹೊಮ್ಮಿಸುತ್ತದೆ. ನಿತ್ಯವೂ ಹೂಗಳನ್ನು ಬದಲಿಸುತ್ತಿರಬೇಕಾದ ಅನಿವಾರ್ಯತೆಯಂತೂ ಇದ್ದೇ ಇರುತ್ತದೆ. ಇಷ್ಟೇ ಅಲ್ಲ... ಡೈನಿಂಗ್ ಟೇಬಲ್, ವರಾಂಡದಲ್ಲಿರುವ ಟೇಬಲ್‌ಗಳ ಮೇಲೆ ನಿಮಗೆ ತಿಳಿದಿರುವ ಸಣ್ಣ ಪ್ರಮಾಣದ ಪುಷ್ಪಾಲಂಕಾರ ಬಗೆ ಗೊತ್ತಿದ್ದರೆ, ಅದನ್ನೂ ರೂಪಿಸಿಡಿ. ಅದರ ಮೆರುಗೂ ವರ್ಣಿಸಲಸದಳ.
- ಮಂಜುನಾಥ್ ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


