ಮನೇಲೇ ಇದೆ ಮಂತ್ರ!
ಶಾಪಿಂಗ್ ಎಂದರೆ ಯಾರಿಗೆ ತಾನೆ ಸಂಚಲನವಿಲ್ಲ? ಗುಂಡು ಸೂಜಿಯಿಂದ ಹಿಡಿದು ಡೈನಿಂಗ್ ಟೇಬಲ್, ವಾಷಿಂಗ್‌ಮೆಶಿನ್ ವಗೈರೆ ಅಂಗಡಿಯಿಂದ ಕೊಂಡು ಮನೆ ತುಂಬಿಸಿಕೊಳ್ಳುವುದೆಂದರೆ ಏನೋ ಪುಳಕ. ನೆರೆಹೊರೆ ಮನೆಗಳಲ್ಲಿ ಅಂಥವು ಉಂಟು ಎನ್ನುವುದೇ ಕೊಂಡು ತರಲು ಸಮರ್ಥನೆಯಾಗಿರುತ್ತದೆ ಹಲವರಿಗೆ. ಶಾಪಿಂಗ್ ಒಂದು ಘನತೆಯ ಪ್ರಶ್ನೆಯೆನ್ನುವುದನ್ನು ಅಲ್ಲಗಳೆಯಲಾಗದು ಬಿಡಿ. ನಮ್ಮ ಬೇಕು-ಬೇಡಗಳನ್ನು, ಅನಿವಾರ್ಯಗಳನ್ನು ಆಸುಪಾಸಿನವರು ಪರೋಕ್ಷವಾಗಿ ನಿರ್ಧರಿಸುವುದು ವಿಪರ್ಯಾಸ.
ಇದು ಹೇಗೂ ಇರಲಿ, ಶಾಪಿಂಗ್‌ಗೆ ಹೊರಡುವ ಮುನ್ನ ಇಡೀ ಮನೆಯನ್ನು ಒಮ್ಮೆ ಅವಲೋಕಿಸುವುದು ಯುಕ್ತ. ಅಟ್ಟ, ಉಗ್ರಾಣ, ಶೆಡ್, ಹಿತ್ತಿಲು, ಶೆಲ್ಫ್ ಮಾತ್ರವಲ್ಲ ಮನೆಯ ಮೂಲೆಮೂಲೆಗಳನ್ನೂ ದಿಟ್ಟಿಸಿ. ಅಲ್ಲಿ ಎಲ್ಲಾದರೂ ನೀವು ಖರೀದಿಸಬೇಕೆಂದಿರುವ ಪದಾರ್ಥ, ಪರಿಕರ ಬಚ್ಚಿಟ್ಟುಕೊಂಡಿರಬಹುದು! ನೀವೇ ಹಿಂದೊಮ್ಮೆ ಅವನ್ನು ನಿರುಪಯೋಗಿ ಎಂದೋ, ಕೆಟ್ಟಿದೆ, ಹಳೆಯದು ಎಂದೋ ಒಗೆದಿರುತ್ತೀರಿ. ಸದ್ಯಕ್ಕೆ ಅಂಥವು ಕಣ್ಣಿಗೆ ಕಾಣಿಸದಿದ್ದರಾಯಿತು ಎಂಬ ಇರಾದೆಯಿಂದ ರದ್ದಿ ಎಂದೇ ಬಿಸಾಡಿರುತ್ತೀರಿ. ಸಮಯಕ್ಕೆ ಒಂದು ಸಣ್ಣ ಮೊಳೆ ಇಲ್ಲವೇ ಮೊಗಚುವ ಕೈಯೂ ಅತ್ಯುಪಯುಕ್ತ. ಹಾಗಾಗಿ ಬೇಕಾದ್ದು ದೊರೆತು ನಿಮ್ಮ ಶಾಪಿಂಗ್ ಧಾವಂತ ತಪ್ಪಬಹುದು. ಅಂತೆಯೇ ಅಲ್ಪಸ್ವಲ್ಪ ದುರಸ್ತಿಪಡಿಸಿದರೆ ಅದೆಷ್ಟೋ ಸಲಕರಣೆಗಳನ್ನು ಪುನರ್ಬಳಸಬಹುದು. ರದ್ದಿ ಸಿದ್ಧಿಯಾಗುವ ಸಾಧ್ಯತೆ ನಮ್ಮ ಪರಿಕಲ್ಪನೆಯಾದರೆ ವಿಲೇವಾರಿ ಸಮಸ್ಯೆ, ಕಾಸು ವ್ಯಯಿಸುವ, ಹೊಸತಿಗೆ ಮೊರೆಹೋಗುವ ಸಂಕಷ್ಟ ಇರದು.
ಮತ್ತೆಮತ್ತೆ ಆ ಜಾಹೀರಾತಿನ ಒಕ್ಕಣೆ ಲವಲವಿಕೆ ಹುಟ್ಟಿಸುತ್ತದೆ. ಪೆಟ್ರೋಲ್, ಡೀಸೆಲ್ ಮಿತವಾಗಿ ಎಚ್ಚರದಿಂದ ಬಳಸಿ ಎನ್ನಲು 'ತೈಲವನ್ನು ದುಡಿಸಿಕೊಳ್ಳಿ ಯಂತ್ರವನ್ನಲ್ಲ' ಎನ್ನುವ ಹಿತೋಕ್ತಿ. ಮನೆಗೆ ಹೊಸತನ್ನು ಕೊಂಡು ತರುವುದು ಮುಖ್ಯವಲ್ಲ. ಅದನ್ನು ಎಷ್ಟರಮಟ್ಟಿಗೆ ಉಪಯೋಗಿಸುತ್ತೇವೆ ಎನ್ನುವುದೇ ಮುಖ್ಯ. ನಮ್ಮ ಬೀದಿಯಲ್ಲಿ ಎಪ್ಪತ್ತರ ವೃದ್ಧರೊಬ್ಬರಿದ್ದಾರೆ. ಪ್ರತಿದಿನ ತಪ್ಪದೇ ತಮ್ಮ ಮೊಪೆಡ್ ಸ್ವಚ್ಛಗೊಳಿಸುತ್ತಾರೆ. ಆಗಿಂದಾಗ್ಗೆ ಹೊಗೆ ಪರೀಕ್ಷೆ, ಮೈಲೇಜ್ ತಪಾಸಣೆಗೊಳಪಡಿಸುತ್ತಾರೆ. ಅಕ್ಕಪಕ್ಕದವರೆಲ್ಲ ಅವರನ್ನು, ನಿಮ್ಮ ವಾಹನ ಈಗ ತಾನೇ ಶೋರೂಂನಿಂದ ತಂದಂತೆ ಫಳಫಳ ಎನ್ನುತ್ತಿದೆ ಎಂದೆಲ್ಲ ಪ್ರಶಂಸೆಗಿಳಿಯುತ್ತಾರೆ.
ಮನೆಯಲ್ಲಿ ಮೂಲೆ ಸೇರಿದ್ದು ಪ್ರಯೋಜನಕ್ಕೆ ಬಂದರೆ ಹೊಸದನ್ನು ಖರೀದಿಸಿದ್ದಕ್ಕಿಂತಲೂ ಖುಷಿ. ಅದಕ್ಕೇ ಹೇಳುವುದು, ''If you make use of what you have you will have you dont have'. ವೃಥಾ ಶಾಪಿಂಗ್ ಮಾಡುವ ಪ್ರವೃತ್ತಿಯನ್ನು ಮಾರ್ಮಿಕವಾಗಿ ಗೇಲಿ ಮಾಡುವ ಉಕ್ತಿಯೊಂದು ಬೋಧಪ್ರದವಾಗಿದೆ. ಶಾಪಿಂಗ್ ಎಂದರೆ ಬೇಡದ ವಸ್ತುಗಳನ್ನು ಕೊಂಡು ತಂದು ಅಟ್ಟ ಸೇರಿಸುವುದು!
ಗೂಡು, ಪೆಟ್ಟಿಗೆಗಳ ಆಳದಲ್ಲಿ ಸಿಕ್ಕಿಯಾವು ಅದೆಷ್ಟೋ ಬಳಸುವ, ಪುನರ್ಬಳಸಬಹುದಾದ ಪದಾರ್ಥಗಳು. ಮನೆ ಇನ್ನಷ್ಟು ಅಂದವಾಗಿ ಕಾಣಲು ಇರುವ ಮೇಜು, ಕುರ್ಚಿ, ಮಂಚ, ಸ್ಟೂಲು ಮುಂತಾದವುಗಳನ್ನೇ ಮರುಓರಣಗೊಳಿಸಬಹುದು. ನೀವು ಕಡೆಗಣಿಸಿದವುಗಳನ್ನೇ ನಿಮ್ಮ ಮೆಚ್ಚುವ ವಸ್ತುವನ್ನಾಗಿ ರೂಪಾಂತರಿಸುವುದರಲ್ಲಿ ದಿಟಕ್ಕೂ ಆನಂದವಿದೆ. ಹಣದ ಉಳಿತಾಯ ಮಾತ್ರವಲ್ಲ ಇದರಿಂದ ಅಷ್ಟರಮಟ್ಟಿಗೆ ಪರಿಸರ ಸಂರಕ್ಷಣೆಯೂ ಆಗುತ್ತದೆ. ಒಂದು ಸರಳ ಉಪಾಯವೆಂದರೆ ಯಾವುದೇ ಪದಾರ್ಥ ಪರಿಕರಗಳನ್ನು ಮುಚ್ಚಿಡುವ ಬದಲು ಕಣ್ಣಿಗೆ ಕಾಣುವಂತೆ ನಾಜೂಕಾಗಿ ಇಡುವುದು. ಇದರಿಂದ ಇರುವುದೆಲ್ಲವನ್ನೂ ಬಳಸಲು ಪ್ರೇರಣೆಯಾದೀತು. ನನ್ನ ಹಳೆ ವಿದ್ಯಾರ್ಥಿಯೊಬ್ಬ, ಯಾರೂ ಚಕಿತಗೊಳ್ಳುವಷ್ಟು ಸಾಧ್ಯತೆಯನ್ನು ದಕ್ಕಿಸಿಕೊಂಡಿದ್ದಾನೆ. ಹಳೆಯ ಬೂಟುಗಳನ್ನು ಬಿಸಾಡದೆ ಅವನ್ನು ಚೊಕ್ಕವಾಗಿಸಿ ಕಲಾತ್ಮಕವಾಗಿ ಸಿಂಗರಿಸಿ ಮೊಂಬತ್ತಿಯನ್ನಿಡಲು ಬಳಸುತ್ತಾನೆ! ನಮ್ಮ ಮನೆ ಬಳಿಯೇ ಒಬ್ಬ ಪ್ರಗತಿಶೀಲ ಕವಿಯಿದ್ದಾರೆ. ದಂಪತಿ ಹಳೆಯ ಸೀರೆ ಕೊಟ್ಟರೆ ಅಂದವಾದ ಕರ್ಟನ್, ಬ್ಲಾಂಕೆಟ್ ತಯಾರಿಸಿಕೊಡುತ್ತಾರೆ. 'ತೆಗೆ, ತ್ಯಾಜ್ಯವೆಂಬುದೇ ಬರಿಯ ಸುಳ್ಳು' ಎಂಬುದು ಅವರ ಮಂತ್ರ. ಮತ್ತೊಬ್ಬರು ಪ್ರತಿವರ್ಷ ದೀಪಾವಳಿ, ಯುಗಾದಿಗೆ ಗೆಳೆಯರು, ಆಪ್ತರು ನೀಡುವ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಸೋಪು, ಟೂತ್‌ಬ್ರಶ್, ಪೇಸ್ಟ್ ಇಡಲು ಶೆಲ್ಫ್ ಮಾಡಿಕೊಂಡಿದ್ದಾರೆ. ನಿಜವಾಗಿ ಮನೆಯನ್ನು ಅಂದವಾಗಿಸುವುದು ಈಗಾಗಲೇ ಇರುವ ವಸ್ತುಗಳೇ ಎನ್ನಲು ಇವಕ್ಕಿಂತ ನಿದರ್ಶನ ಬೇಕೆ?
= ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

