ಮಹಿಳೆ-ಮನೆ-ಬದುಕು

ಕಿಡ್ ಕೋಣೆ

ಕಿಡ್ ಕೋಣೆ
Published On :

ಮಕ್ಕಳ ಕೋಣೆ ಗಾಳಿ, ಬೆಳಕಿನಿಂದ ಕೂಡಿರಬೇಕು. ಗಾಳಿ, ಬೆಳಕು ಇದ್ದಲ್ಲಿ ಮಕ್ಕಳು ಸದಾ ಉತ್ಸುಕತೆಯಿಂದ, ಲವಲವಿಕೆಯಿಂದ ಕೂಡಿರುತ್ತಾರೆ.

ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ಅಷ್ಟೇ ಮೃದು ಕೂಡ. ಹೀಗಾಗಿ ಅವರ ಎಳೆಯ ಮನಸ್ಸಿನ ಮೇಲೆ ಪರಿಣಾಮ ಬೀರುವಲ್ಲಿ ಅವರು ವಾಸಿಸುವ ತಾಣವೂ ಒಂದು ಬಗೆಯಲ್ಲಿ ಕಾರಣವಾಗುತ್ತದೆ. ಹೀಗಾಗಿ ದೊಡ್ಡವರು ಅವರ ಮನಸ್ಸಿನ ಆಳಕ್ಕೆ ಇಳಿದು ತಮ್ಮತ್ತ ಸೆಳೆದುಕೊಳ್ಳಬೇಕು.
ಇದಕ್ಕೂ ಮೊದಲು ಅವರನ್ನು ಸೆಳೆಯಲು ಅವರಿಗೆ ಇಷ್ಟವಾದ ವಾತಾವರಣ ಸೃಷ್ಟಿಸಬೇಕು. ಅದು ಮನೆಯಿಂದಲೇ ಪ್ರಾರಂಭವಾಗಬೇಕು. ಮಕ್ಕಳ ಬೆಳಗ್ಗೆ ಎದ್ದ ತಕ್ಷಣ ಚಟುವಟಿಕೆಯಿಂದ ಇರಬೇಕು. ಅಂತಹ ವಾತಾವರಣವನ್ನು ಅವರ ಸುತ್ತಮುತ್ತಲು ಸೃಷ್ಟಿಯಾಗಬೇಕು. ಅದು ಮನೆ ಒಳಗಿಂದಲೇ ಆರಂಭವಾಗಲಿ. ಅಷ್ಟೇ ಅಲ್ಲ ಅವರು ಹೋಂ ವರ್ಕ್‌ನಿಂದ ಹಿಡಿದು ಇತರೆ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಬೇಕಾದ ಅಗತ್ಯ ವಾತಾವರಣವೂ ಅಲ್ಲಿರಬೇಕು.
ಜತೆಗೆ ಅವರ ಓದಿಗೆಂದು ಪೋಷಕರು ಪ್ರತ್ಯೇಕ ಕೋಣೆಯನ್ನೇ ಬಿಟ್ಟುಕೊಟ್ಟಿರುತ್ತಾರೆ. ಈ ಕೋಣೆಯಲ್ಲಿ ಮಗುವಿನ ಹೊಸ ಜೀವನ ಪ್ರಾರಂಭವಾಗುತ್ತದೆ. ಈ ಅಂಶವನ್ನೂ ಪೋಷಕರು ಅರಿತಿದ್ದರೆ ಒಳ್ಳೆಯದು.
ಮಗು ತಂದೆ-ತಾಯಿ ಕಣ್ಣೆದುರು ಇದ್ದಾಗಿನ ವರ್ತನೆಗೂ ಅವರ ಹೊರತಾಗಿ ತನ್ನ ಪ್ರಪಂಚದಲ್ಲಿರುವ ವರ್ತನೆಗಳಿಗೂ ಅಜಗಜಾಂತರ ಇದೆ. ಪ್ರತ್ಯೇಕ ಕೋಣೆಯಲ್ಲಿ ಅದರದೇ ಜಗತ್ತಿನಲ್ಲಿದ್ದಾಗ ಸಂತೋಷದಿಂದ ನಲಿದಾಡುತ್ತೆ.
ಆದರೆ, ಮಗುವಿಗೆ ಪ್ರತ್ಯೇಕ ಕೋಣೆ ನೀಡಿದಾಕ್ಷಣ ಜವಾಬ್ದಾರಿಯಿಂದ ವಿಮುಖರಾಗಬೇಡಿ. ಅಲ್ಲಿಂದ ಮಗುವಿಗೆ ಪ್ರತ್ಯೇಕತೆಯ ಪಾಠ ಹೇಳಿ. ಅಂದರೆ ಸ್ವಚ್ಛತೆ, ಸಂಸ್ಕೃತಿ, ಧಾರ್ಮಿಕತೆ ಇತ್ಯಾದಿ ಅಳವಡಿಸಿಕೊಳ್ಳಲು ಪೂರಕ ವಾತಾವರಣವನ್ನು ಆ ಪುಟ್ಟ ಕೋಣೆಯಲ್ಲಿ ಸೃಷ್ಟಿಸಿ. ಸದಾ ಚಟುವಟಿಕೆಯಿಂದ ಇರುವಂತೆ ಏನೇನು ಅವಶ್ಯಕವೋ ಮಾಡಬೇಕೋ ಅದನ್ನೆಲ್ಲಾ ಮಾಡಿ. ಈ ಪ್ರತ್ಯೇಕ ಕೋಣೆ ಹೇಗಿರಬೇಕೆಂಬುದನ್ನು ಸ್ವಲ್ಪ ಗಮನಿಸಿ.
ಗಾಳಿ, ಬೆಳಕಿರಲಿ
ಮಕ್ಕಳ ಕೋಣೆ ಗಾಳಿ, ಬೆಳಕಿನಿಂದ ಕೂಡಿರಬೇಕು. ಇದು ವೈಜ್ಞಾನಿಕವಾಗಿಯೂ ಅನುಸರಿಸಬೇಕಾದ ಕ್ರಮ. ಗಾಳಿ, ಬೆಳಕು ಇದ್ದಲ್ಲಿ ಮಕ್ಕಳು ಸದಾ ಉತ್ಸುಕತೆಯಿಂದ, ಲವಲವಿಕೆಯಿಂದ ಕೂಡಿರುತ್ತಾರೆ. ಕತ್ತಲೆ ಇದ್ದರೆ ಭಯಪಡುವ ಮಕ್ಕಳೇ ಹೆಚ್ಚು. ಹೀಗಾಗಿ ಬೆಳಕು ನಿರಂತರವಾಗಿರಲಿ.
ಸ್ವಚ್ಛತೆ ಬೇಕು
ಸದಾ ಸ್ವಚ್ಛವಾಗಿರಬೇಕು. ಕೋಣೆಯಲ್ಲಿ ಕ್ರಿಮಿ ಕೀಟಗಳು ಬಾರದಂತೆ ನಿತ್ಯ ಶುಚಿಗೊಳಿಸಿ. ಇದರಿಂದ ಮಕ್ಕಳೂ ಸ್ವಚ್ಛತೆಯ ಪಾಠ ಕಲಿಯುತ್ತಾರೆ. ಎರಡು ಮೂರು ದಿನಕ್ಕೊಮ್ಮೆ ಒದ್ದೆ ಬಟ್ಟೆಯಿಂದ ಒರೆಸುತ್ತೀರಿ. ಮಕ್ಕಳು ಹೆಚ್ಚಾಗಿ ನೆಲದ ಮೇಲೆಯೇ ಆಟವಾಡುವುದರಿಂದ ನೆಲದಲ್ಲಿ ಯಾವುದೇ ಬಗೆಯ ಕಸ, ಕಡ್ಡಿ ಇರದಂತೆ ನೋಡಿಕೊಳ್ಳಿ.
ಹಾಸಿಗೆ, ಮಂಚಗಳು ಹೇಗಿರಬೇಕು?
ಕೋಣೆಯಲ್ಲಿ ಮಕ್ಕಳಿಗೆ ಎತ್ತರದ ಮಂಚಗಳು ಇರುವುದು ಬೇಡ. ಮಕ್ಕಳು ಆಗಾಗ ಮಂಚದ ಮೇಲೆ ಎಗರಾಡುವುದು, ಜಿಗಿದಾಡುವುದು ಮಾಡುವುದರಿಂದ ಮಂಚದ ಮೇಲೆ ಮೆತ್ತನೆ ಹಾಸಿಗೆಗಳು ಇದ್ದರೆ ಚೆನ್ನ. ಆದಷ್ಟು ಬೆಡ್‌ಶೀಟ್‌ಗಳ ಮೇಲೆ ಟಾಮ್ ಅಂಡ್ ಜೆರ್ರಿಯಂತಹ ಕಾರ್ಟೂನ್‌ಗಳಿರುವ ಚಿತ್ರಗಳಿದ್ದರೆ ಚೆನ್ನ. ಮಕ್ಕಳಿಗೂ ಆಕರ್ಷಣೆ. ನಗುತ್ತಾ ಮಲಗುತ್ತಾರೆ. ಏಳುತ್ತಾರೆ. ಬೆಡ್‌ಸೀಟ್‌ಗೂ ಧೂಳು ಮೆತ್ತುವುದರಿಂದ ವಾರದಲ್ಲಿ ಒಂದೆರಡು ಸಲ ಸ್ವಚ್ಛಗೊಳಿಸುತ್ತೀರಿ.
ಕಪಾಟು (ಬೀರೂ) ಇರಲಿ
ಮಕ್ಕಳು ತಮ್ಮ ಸಾಮಾನು ಸರಂಜಾಮುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಕಪಾಟು ಇರಲಿ. ಅವರ ಬಟ್ಟೆ, ಬ್ಯಾಗ್, ಪುಸ್ತಕ, ಪೆನ್, ಪೆನ್ಸಿಲ್ ಎಲ್ಲವನ್ನೂ ಇಟ್ಟುಕೊಳ್ಳಲು ಪುಟ್ಟದಾದ ಕಪಾಟು ಇರಲಿ.
ಗೋಡೆ ಹೀಗಿರಲಿ
ಗೋಡೆಯ ಮೇಲೆ ಒಂದು ಕ್ಯಾಲೆಂಡರ್, ಗಡಿಯಾರ, ಮಹಾತ್ಮರ ಇಲ್ಲವೇ ಸಾಧಕರ ಫೋಟೋ ಜತೆಗೆ ಧಾರ್ಮಿಕ ಒಲವು ಮೂಡಿಸಲು ದೇವರ ಫೋಟೋ ಹಾಕಿಟ್ಟರೆ ಸೂಕ್ತ. ಇದರೊಟ್ಟಿಗೆ ಕಾರ್ಟೂನ್ ಕೂಡ ಇರಲಿ. ಮಕ್ಕಳಿಗೆ ಗೋಡೆ ಮೇಲೆ ಪೆನ್ಸಿಲ್‌ನಿಂದ ಬರೆಯುವ ಹವ್ಯಾಸ. ಹೀಗಾಗಿ ಅವರಿಗೆಂದೆ ಗೋಡೆಯಲ್ಲಿ ಚಿತ್ತಾರ ಬಿಡಿಸಲು ಜಾಗ ಬಿಡಿ.
ಕ್ರೀಡಾ ಸಾಮಗ್ರಿಗಳಿರಲಿ
ಕೊಠಡಿಯಲ್ಲಿ ಒಳಾಂಗಣ ಆಟಗಳಿಗೆ ಬೇಕಾದ, ಬುದ್ಧಿ ಚುರುಕು ಮಾಡುವ ಚೆಸ್ ಬೋರ್ಡ್, ಕೇರಂ, ಸ್ಕಿಪ್ಪರ್ ಇತ್ಯಾದಿ ಆಟದ ಸಾಮಗ್ರಿಗಳನ್ನು ಇರಿಸಿ. ಮಕ್ಕಳ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯೂ ಅಲ್ಲಿರಲಿ.
ಮೊಬೈಲ್, ಕಂಪ್ಯೂಟರ್ ಬೇಡ
ಮಕ್ಕಳನ್ನು ಯಾಂತ್ರಿಕೃತವಾಗಿ ಹೆಚ್ಚು ಆಲಸ್ಯರನ್ನಾಗಿಸುವುದು ಕಂಪ್ಯೂಟರ್ ಮತ್ತು ಮೊಬೈಲ್. ಹೀಗಾಗಿ ಮಕ್ಕಳ ಕೋಣೆಯಲ್ಲಿ ಇವುಗಳಿಗೆ ಜಾಗ ಬೇಡ. <

-ಆದರ್ಶ ಎಸ್. ಅಂಚೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.