ಹೌಸ್ ದ್ಯಾಟ್!

ಮುಂದಿನ ಪೀಳಿಗೆಯ ಮನೆಗಳು ಹೇಗಿರಬಹುದು! ಅದನ್ನು ಊಹಿಸಲು ಅಸಾಧ್ಯ. ಜಾಗದ ಕೊರತೆಯಿಂದಾಗಿ ಜನ ಜಂಜಾಟ ಅನುಭವಿಸುವ ಕಾಲವೂ ಬರಬಹುದು. ಹೀಗಾಗಿ ಇರುವ ಜಾಗದಲ್ಲಿಯೇ ಮನೆಯನ್ನು ವೈವಿಧ್ಯಮಯವಾಗಿ ಮಾಡಬಹುದು.
ಇರುವ ಅಲ್ಪ ಜಾಗದಲ್ಲಿ ವೈವಿಧ್ಯವನ್ನು ರೂಪಿಸುವುದು ಕಷ್ಟವೇ ಸರಿ. ಆದರೆ, ಅದರಲ್ಲಿ ಫೋರ್ ಇನ್ ಒನ್ ಮನೆ ರೂಪಿಸಿದರೆ ಹೇಗೆ! ಹೌದು. ಇಂತಹ ಅದ್ಭುತ ಮನೆಯೊಂದು ಸಿದ್ಧವಾಗಿ ನಿಂತಿದೆ. ಆದರೆ, ಭಾರತದಲ್ಲಿ ಅಲ್ಲ, ಲಂಡನ್‌ನಲ್ಲಿ.
ಈತನ ಹೆಸರು ಸಿಮನ್ ವುಡ್‌ರೋಫ್. ಲಂಡನ್‌ನಲ್ಲಿ ನೆಲೆಸಿದ್ದಾನೆ. ಅಷ್ಟೇ ಅಲ್ಲ ಆತ ತನಗಾಗಿ ಫೋರ್ ಇನ್ ಒನ್ ಮನೆಯನ್ನೂ ಸೃಷ್ಟಿಸಿಕೊಂಡಿದ್ದಾನೆ. ವುಡ್‌ರೋಫ್ ಈ ರೀತಿಯ ಮನೆ ಮಾಡಿಕೊಳ್ಳಲು ಜಪಾನಿಗರ ರಂಗವಿನ್ಯಾಸ ಮತ್ತು ಜನರ ವಾಸಸ್ಥಳವೇ ಸ್ಫೂರ್ತಿಯಾಗಿದೆ.
ಈತ ರೂಪಿಸಿದ ಮನೆಯೊಳಗೆ ಒಮ್ಮೆ ಹೋದರೆ ಸಾಕು. ತಕ್ಷಣಕ್ಕೆ ಅದರ ನಿಜ ಸ್ವರೂಪ ತಿಳಿಯುವುದಿಲ್ಲ. ನೋಡಲು ಅದು ಸಾಮಾನ್ಯ ಮನೆಯಂತೆ ಕಾಣುತ್ತದೆ. ಏನೂ ಇಲ್ಲವೇನೋ ಎಂಬಂತೆಯೂ ಅದು ಭಾಸವಾಗುತ್ತದೆ. ನಂತರ ಬಟನ್ ಒತ್ತುತ್ತ ಹೋದಂತೆ ಬೆಡ್‌ರೂಂ, ಅಡುಗೆ ಮನೆ, ಅತಿಥಿಗಳ ಹಾಲ್, ಡೈನಿಂಗ್ ಹಾಲ್ ಎಲ್ಲವೂ ಬಿಚ್ಚಿಕೊಳ್ಳುತ್ತಾ ಹೋಗುತ್ತಾ, ನೋಡುಗರನ್ನು ಆಶ್ಚರ್ಯಚಕಿತರಾಗುವಂತೆ ಮಾಡುತ್ತದೆ.
ನೋಡಲು ಹಾಲ್‌ನ ನೆಲದಂತೆ ಕಂಡರೂ ಅದರಡಿ ಅತಿಥಿಗಳು ಕೂರುವ ಹಾಲ್‌ಗೆ ಬೇಕಾದ ಆರಾಮದಾಯಕ ಕುರ್ಚಿ, ಟೇಬಲ್ ಎಲ್ಲವೂ ನೆಲದ ಅಡಿಯಿಂದಲೇ ಮೇಲೇಳುತ್ತವೆ. ಅಡುಗೆ ಮನೆಯೂ ಕೂಡ ನೋಡಲು ಸಾಧಾರಣವಾಗಿಯೇ ಕಾಣಿಸುತ್ತದೆ. ಆದರೆ, ಅಲ್ಲಿಯೂ ವಿಶಿಷ್ಟತೆ ಇದ್ದು, ಅಲ್ಲಿಯೂ ನೆಲದಡಿಯಿಂದ ಡೈನಿಂಗ್ ಟೇಬಲ್ ವ್ಯವಸ್ಥೆ ರೂಪಿತವಾಗುತ್ತದೆ.
ಇನ್ನು ಬೆಡ್ ರೂಂ. ಇದೂ ವಿಶಿಷ್ಟ ಬಗೆಯಾಗಿದೆ. ಅತಿಥಿಗಳ ಹಾಲ್‌ನ ಕುರ್ಚಿಗಳು, ಟೇಬಲ್‌ಗಳು ನೆಲದಡಿಯಿಂದ ಮೇಲಕ್ಕೆದ್ದರೆ, ಬೆಡ್‌ರೂಂ ಕಾಟ್‌ಗಳು ಅದರ ನೇರಕ್ಕೆ ಮೇಲಕ್ಕೆ ಅಂಟಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ. ವಿಶ್ರಾಂತಿ ಬೇಕು ಎಂದಾಗ ಅತಿಥಿ ಹಾಲ್ ಪೀಠೋಪಕರಣಗಳನ್ನು ಮತ್ತೆ ನೆಲದಡಿ ಹಾಕಿ ಬೆಡ್ ಅನ್ನು ಮೇಲಿನಿಂದ ಕೆಳಕ್ಕೆ ಇಳಿಸಿಕೊಳ್ಳಬಹುದು!
ಅಡುಗೆ ಮನೆ, ಬಾತ್ ರೂಂನಲ್ಲಿಯೂ ಇದೇ ತೆರನಾದ ಹಲವಾರು ತಾಂತ್ರಿಕ ಆಟೋಮೆಟಿಕ್ ವ್ಯವಸ್ಥೆ ಮಾಡಿಕೊಂಡಿದ್ದಾನೆ ವುಡ್‌ರೋಫ್. ಇಂತಹ ಅದ್ಭುತ ಮನೆಯನ್ನು ಆತ ಕಟ್ಟಿರುವುದು ದೊಡ್ಡ ಪ್ರಮಾಣದ ಜಾಗದಲ್ಲಿ ಅಲ್ಲ. ಬರೀ 80 ಚದರ ಮೀಟರ್ ಜಾಗದಲ್ಲಿ ಮಾತ್ರ!
ಇಂತಹ ತಂತ್ರಜ್ಞಾನ ಈಗಾಗಲೇ ಕಾರು, ರಂಗವೇದಿಕೆ ಸೇರಿದಂತೆ ಹಲವೆಡೆ ನೋಡಿದ್ದೇವೆ ಎನ್ನುವ ವುಡ್‌ರೋಫ್, ಈಗ ಮುಂದುವರಿದ ಭಾಗವಾಗಿ ಮನೆಯಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾನೆ.
ಇಷ್ಟಕ್ಕೆಲ್ಲ ಕಾರಣ ಜಪಾನ್ ದೇಶದ ಜನರು. ಮೇಲಿಂದ ಮೇಲೆ ಪ್ರಕೃತಿ ವಿಕೋಪಗಳಾದ ಭೂಕಂಪ, ಸುನಾಮಿಯಿಂದ ಬರೀ ಕಷ್ಟಗಳನ್ನೇ ಅನುಭವಿಸುವ ಅವರು ಅನಾಹುತ ಆಗದಿರಲಿ ಎಂಬ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಣ್ಣ ಪ್ರಮಾಣದ ಜಾಗದಲ್ಲೇ ಹಲವು ವಿನ್ಯಾಸಗಳಲ್ಲಿ ಮನೆ ರೂಪಿಸುತ್ತಾರೆ. ಇದನ್ನೇ ವುಡ್‌ರೋಫ್ ಆಧಾರವಾಗಿಟ್ಟುಕೊಂಡು ರಂಗಸಜ್ಜಿಕೆಯ ಮೆಕ್ಯಾನಿಕ್ ಮತ್ತು ಬೆಳಕಿನ ತಂತ್ರಜ್ಞನನ್ನು ಬಳಸಿಕೊಂಡು ಈ ಮನೆ ರೂಪಿಸಿಕೊಂಡಿದ್ದಾನೆ! ಸ್ಫೂರ್ತಿ ಯಾರದ್ದೇ ಇರಲಿ. ಇಂತಹ ಮನೆ ಮಾಡಿಕೊಳ್ಳಬೇಕೆಂಬ ಅವನ ಕಲ್ಪನೇ ನಿಜಕ್ಕೂ ಮುಂದಿನ ಪೀಳಿಗೆಗೆ ಮಾದರಿ ಎನ್ನುವುದರಲ್ಲಿ ಅನುಮಾನ ಇಲ್ಲ.
-ಬ್ರಹ್ಮಾನಂದ ಎನ್. ಹಡಗಲಿ
hnbrahmanand@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


