ಸೂಪರ್ ಮಗು ಎಂಬ ಮಶೀನ್

ನಿಮ್ಮ ನಾಲ್ಕು ವರ್ಷದ ಮಗು... ಓದಬಲ್ಲ, 6ಕ್ಕೂ ಹೆಚ್ಚು ಭಾಷೆ ಮಾತನಾಡಬಲ್ಲ, ಕಂಪ್ಯೂಟರ್ ಬಳಸಬಲ್ಲ, ಸಂಗೀತವಾದ್ಯ ನುಡಿಸಬಲ್ಲ, ಒಂದು ಗಂಟೆ ಧ್ಯಾನಾವಸ್ಥೆಯಲ್ಲಿ ಕೂರಬಲ್ಲ..
ಇದು ಶಾಲೆಯೊಂದು ಪೋಷಕರನ್ನು ಆಕರ್ಷಿಸಲು ನೀಡಿರುವ ಜಾಹೀರಾತಿನ ಸಾಲುಗಳು. ಬಹುಶಃ ಇಂಥ ಶಾಲೆಗಳಿಗೆ ಜನ ಮುಗಿಬೀಳುವುದರಲ್ಲಿ, ಕೇಳಿದಷ್ಟು ಫೀಸು, ಡೊನೇಷನ್ ಕಕ್ಕುವುದರಲ್ಲಿ ಆಶ್ಚರ್ಯವಿಲ್ಲ.
ಇಂಥ ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತು ಹನ್ನೆರೆಡು ವರ್ಷಕ್ಕೆ ವಯಸ್ಕರ ಜ್ಞಾನ, ಗುಣ ಸ್ವಭಾವಗಳನ್ನೆಲ್ಲಾ ಬೆಳೆಸಿಕೊಂಡರೆ ಪೋಷಕರಿಗೆ ಅತ್ಯಂತ ಆನಂದ ಮತ್ತು ಹೆಮ್ಮೆ ತರುವ ವಿಚಾರವೇನೋ ನಿಜ. ಆದರೆ, ಇದರ ಇನ್ನೊಂದು ಮುಖವನ್ನು ನಾವು ಯೋಚಿಸಿದ್ದೇವೆಯೇ?
ಇಂಥ ಮಕ್ಕಳು ಪೋಷಕರ ಹತ್ತಿರ ಬಂದು, 'ಅಪ್ಪಾ ನಾನೀಗ ಮಾನಸಿಕವಾಗಿ, ಬೌದ್ಧಿಕವಾಗಿ ಬೆಳೆದಿದ್ದೇನೆ. ನನಗೊಂದು ಮದುವೆ ಮಾಡು' ಅಂದರೆ? ಹಾಗೊಮ್ಮೆ ನೇರವಾಗಿ ಕೇಳದಿದ್ದರೂ, ಹದಿವಯಸ್ಸಿನ ಮಕ್ಕಳು ಡೇಟಿಂಗ್ ಹೋದರೆ, ದುಶ್ಚಟಗಳ ದಾಸರಾದರೆ ಭಾರತೀಯ ಪೋಷಕರು ಅಕ್ಸೆಪ್ಟ್ ಮಾಡಿಕೊಳ್ಳಲು ತಯಾರಿದ್ದಾರೆಯೇ? ಮಕ್ಕಳು ಕೆಲವೇ ವಿಚಾರದಲ್ಲಿ, ಅದೂ ಪೋಷಕರಿಗೆ ಬೇಕಾದ ವಿಚಾರದಲ್ಲಿ ಮಾತ್ರ ದೊಡ್ಡವರಂತಿರಬೇಕು. ಉಳಿದಂತೆ ಮಕ್ಕಳಾಗಿಯೇ ಇರಬೇಕು ಎಂದರೆ ಹೇಗೆ ಸಾಧ್ಯ? ಇದು ವಿತಂಡವಾದ ಎನಿಸಿದರೂ, ವಾಸ್ತವ.
ಪ್ರಕೃತಿಯ ಎಲ್ಲ ಚಲನೆಗೂ ಒಂದು ವೇಗವನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಅದನ್ನು ಅಲ್ಪ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಮಾಡಬಹುದೇನೊ. ಆದರೆ ಆಧುನಿಕ ಮಾನವ ಮಾಡುತ್ತಿರುವಂತೆ ಆ ಕೆಲಸಗಳ ವೇಗ ಮತ್ತು ನೀತಿನಿಯಮಗಳನ್ನು ತೀವ್ರವಾಗಿ ಹೆಚ್ಚಿಸಲು ಅಥವಾ ಬದಲಾಯಿಸಲು ಯತ್ನಿಸಿದರೆ, ಭಯಂಕರ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ.
ಇದೇ ರೀತಿ ಮನುಷ್ಯನ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯೂ ಪ್ರಕೃತಿ ನಿರ್ಧರಿತ ವೇಗದಲ್ಲೇ ಆಗಬೇಕು. ದೇಹದ ಮತ್ತು ಮನಸ್ಸಿನ ಬೆಳವಣಿಗೆಗೆ ಸಾಮರಸ್ಯವಿರಬೇಕು. ಇದನ್ನು ಕಡೆಗಣಿಸಿ ಯಾವುದಾದರೂ ಒಂದರ ಬೆಳವಣಿಗೆಯನ್ನು ತೀವ್ರಗೊಳಿಸಲೆತ್ನಿಸಿದರೆ ಮಕ್ಕಳ ಭಾವಿ ಜೀವನದ ಮೇಲೆ ಕೆಲವು ಅಡ್ಡ ಪರಿಣಾಮಗಳಾಗಬಹುದು.
ಇದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿದ್ದರೂ ನಾವು ಒಪ್ಪಿಕೊಳ್ಳುವುದಿಲ್ಲ. ಒಲಿಂಪಿಕ್‌ನಲ್ಲಿ ಮೆಡಲ್ ಗೆಲ್ಲುವುದಕ್ಕಾಗಿಯೇ ಮಕ್ಕಳ ಮೇಲೆ ಎಂಥ ಒತ್ತಡಗಳನ್ನು ಹೇರಿ ಚಾಂಪಿಯನ್‌ಗಳನ್ನು ಸಿದ್ಧಪಡಿಸುತ್ತಾರೆಂಬುದು ಮಕ್ಕಳ ದೈಹಿಕ ಬೆಳವಣಿಗೆಯನ್ನು ತೀವ್ರಗೊಳಿಸುವ ಕ್ರೂರ ಕ್ರಿಯೆ. ಇವತ್ತಿನ ವಿದ್ಯಾವಂತ ತಂದೆತಾಯಂದಿರು ಮಾಡುತ್ತಿರುವುದು ಇದರ ಇನ್ನೊಂದು ಮುಖ. ಅಂದರೆ ದೇಹ, ಮನಸ್ಸುಗಳ ಬೆಳವಣಿಗೆಯ ವೇಗವನ್ನು ಮೀರಿ ಬುದ್ಧಿ ಮಾತ್ರ ಬೆಳೆವಣಿಗೆ ಆಗಬೇಕೆಂದು ಅಪೇಕ್ಷಿಸುತ್ತಾರೆ. ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾರದ ಮುಗ್ಧ ಮಕ್ಕಳ ಮೇಲೆ ಪೋಷಕರು ನಡೆಸುವ ಈ ದಬ್ಬಾಳಿಕೆ ಯಾವುದೇ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾರದ್ದು.
ಶಾಲಾ ದಿನಗಳಲ್ಲಿ ಸರಿಯಾಗಿ ಊಟ, ನಿದ್ದೆ ಮಾಡಲೂ ಆಗದಷ್ಟು ಕಲಿಕೆಯ ಒತ್ತಡ, ರಜ ಬಂತೆಂದರೆ ಬೇಸಿಗೆ ಶಿಬಿರಗಳು, ಅಬಾಕಸ್ ತರಗತಿಗಳು, ನೆನಪಿನ ಶಕ್ತಿ ವೃದ್ಧಿಸುವ ತರಬೇತಿ, ಮುಂದಿನ ತರಗತಿಗೆ ಟ್ಯೂಷನ್ ಕ್ಲಾಸ್‌ಗಳು ಮುಂತಾದವು. ಪೋಷಕರೇನು ತಮ್ಮ ಮಕ್ಕಳನ್ನು ಕೀ ಹಾಕಿದೊಡನೆ ಸ್ಟಾರ್ಟ್ ಆಗಿ, ಆಕ್ಸಿಲರೇಟರ್ ಒತ್ತಿದೊಡನೆ ಬೇಕಾದ ವೇಗದಲ್ಲಿ ಓಡುವ ತಮ್ಮ ಐಷಾರಾಮಿ ಕಾರು ಎಂದುಕೊಡಿದ್ದಾರೆಯೇ?
ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸದ ಮಕ್ಕಳು ಮುಂದೆ ಕ್ರೂರಿಗಳೂ, ಸಮಾಜಘಾತಕರೂ ಆಗುವ ಸಾಧ್ಯತೆಗಳಿವೆಯೆಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಇದು ಎಲ್ಲ ಮಕ್ಕಳಿಗೂ ಅನ್ವಯಿಸುವುದಿಲ್ಲವೆಂದುಕೊಂಡರೂ, ನಾವೀಗ ಮಕ್ಕಳಿಗೆ ಕೊಡುತ್ತಿರುವ ಬಾಲ್ಯದ ಅನುಭವಗಳು ಅವರ ಸಂತೃಪ್ತ ಜೀವನಕ್ಕೆ ಬುನಾದಿಯನ್ನಂತೂ ಹಾಕುವುದು ಸಾಧ್ಯವಿಲ್ಲ. ಇದರಿಂದ ತಾವು ಗಳಿಸಿರುವ ಭರಪೂರ ಹಣದ ಮಧ್ಯೆಯೂ ಅವರು ಅಸುಖಿಗಳಾಗುವುದಷ್ಟೇ ಅಲ್ಲ, ಅದನ್ನು ತಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸುತ್ತಾರೆ. ಈ ಪ್ರಪಂಚದ ಪ್ರತಿ ಜೀವಿಯೂ ಅನನ್ಯವಾದದ್ದು. ಅದನ್ನು ಸಹಜವಾಗಿ ಬೆಳೆಯಲು ಬಿಟ್ಟರೆ ನಮ್ಮ ಚಿಂತನೆಯ ಮಿತಿಗಳನ್ನು ಮೀರಿ ಅವು ಅರಳುವ ಸಾಧ್ಯತೆಗಳಿರುತ್ತವೆ.
-ನಡಹಳ್ಳಿ ವಸಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


