ಸಂಶಿಸಬೇಡಿ ಪ್ರಶಂಸಿಸಿ...

ಮನೆ ಹತ್ತಿರವಿರುವ ರಘುಗೆ ಪ್ರಮೋಷನ್/ಸಂಬಳ ಹೆಚ್ಚಿದರೆ ಓಡೋಡಿ ಬಂದು ಕಂಗ್ರಾಟ್ಸ್ ಹೇಳುತ್ತೀರಿ. ಹತ್ತು ಜನರಲ್ಲಿ ಒಳ್ಳೆಯವನು ಎಂಬ ಹೆಸರು ಪಡೆಯುತ್ತೀರಿ. ಅದೇ ನಿಮ್ಮ ಸಂಗಾತಿ ಹಬ್ಬಗಳಂದು ಸುಂದರವಾಗಿ ಅಂಗಳದಲ್ಲಿ ರಂಗೋಲಿ ಹಾಕಿದರೆ ನೀವದರ ಬಗ್ಗೆ ಮೆಚ್ಚುಗೆ ಮಾತಾಡುವುದಿರಲಿ, ಆಕೆ ಹೇಳುವವರೆಗೆ ಗಮನಿಸಲೂ ಹೋಗುವುದಿಲ್ಲ. ಸಣ್ಣಪುಟ್ಟ ವಿಷಯಗಳನ್ನು, ಗೆಲವುಗಳನ್ನು ಗುರುತಿಸಿ ಮನಪೂರ್ತಿಯಾಗಿ ಅಭಿನಂದಿಸಿದರೆ ಸಂಗಾತಿಗೆಷ್ಟು ಖುಷಿಯಾಗುತ್ತದೆ ಗೊತ್ತಾ?
ಪತ್ನಿ ಆದರೂ, ಪತಿಯಾದರೂ ಬಾಳ ಸಂಗಾತಿ ತನ್ನನ್ನು ಮನಃಪೂರ್ವಕವಾಗಿ, ಪ್ರಾಮಾಣಿಕವಾಗಿ ಅಭಿನಂದಿಸಬೇಕೆಂದು ಬಯಸುತ್ತಾರೆ. ಈ ಅಭಿನಂದನೆಗಳು ಅವರಿಗೆ ಎರಡರಷ್ಟು ಆನಂದ, ಆತ್ಮವಿಶ್ವಾಸ ನೀಡುತ್ತವೆ. ಜೊತೆಗೆ ನಂಬಿಕೆ, ಪ್ರೇಮಾಭಿಮಾನಗಳನ್ನು ಹೆಚ್ಚಿಸುತ್ತವೆ. ದಂಪತಿಗಳು ಈ ರಹಸ್ಯಗಳನ್ನು ತಿಳಿದುಕೊಂಡರೆ ಬಹಳ ಕುಟುಂಬಗಳ ಸಮಸ್ಯೆ ದೂರವಾದಂತೆ.
ಆಫೀಸಿನಲ್ಲಿ ಬಾಸ್‌ನಿಂದ ಮೆಚ್ಚುಗೆ ಪಡೆಯಲು ತುಂಬಾ ಕಷ್ಟಪಡುತ್ತೀರಿ. ಆತ 'ಗುಡ್' ಎಂದು ಎರಡಕ್ಷರ ಉದುರಿಸಿದರೆ ಸಾಕು, ಹಿರಿಹಿರಿ ಹಿಗ್ಗುತ್ತೀರಿ. ಅದೇ ರೀತಿ ಮನೆಯಲ್ಲಿ ಸಂಬಳವಿಲ್ಲದೆ ದುಡಿಯುವ ನಿಮ್ಮ ಹೆಂಡತಿ ನಿಮ್ಮ ಒಂದು ಮೆಚ್ಚುಗೆ ಮಾತಿಗಾಗಿ ಹಗಲೂ ರಾತ್ರಿ ಕಾಯುತ್ತಿರುತ್ತಾಳೆ ಎಂಬುದು ನಿಮ್ಮ ಗಮನಕ್ಕೆ ಬರುವುದೇ ಇಲ್ಲ.
ಆಕೆ ಅಡುಗೆ ಚೆನ್ನಾಗಿ ಮಾಡಿದ ದಿನ ಹೊಗಳುವುದಿಲ್ಲ. ಚೆನ್ನಾಗಿ ಮಾಡಿರದ ದಿನ ಕೂಗಾಡುತ್ತೀರಿ. ಒಂದೊಂದು ಸಾರಿ ಅಡುಗೆಯ ರುಚಿಯಲ್ಲಿ ಏರುಪೇರಾದರೆ ದೇಶವೇ ಮುಳುಗಿ ಹೋಗುತ್ತದೆಯೇ? ಅನುಸರಿಸಿಕೊಂಡೇಕೆ ಹೋಗಬಾರದು? ಅಡುಗೆ ಕೆಟ್ಟಿದೆಯೆಂದು ಮನಸ್ಸು ಕುಗ್ಗಿದ್ದ ಆಕೆಗೆ ಮತ್ತಷ್ಟು ನೋವು ಮಾಡುವುದು ಸರಿಯೇ? ದಿನವೂ ಚೆನ್ನಾಗಿ ಮಾಡುತ್ತೀಯಾ, ಇಂದು ತಪ್ಪಾಗಿದೆ. ತೊಂದರೆ ಇಲ್ಲ ಎನ್ನಬಾರದೇ?
ಆಫೀಸಿನಿಂದ ಮನೆಗೆ ಬಂದಾಗ ಮನೆಯ ಬಾಗಿಲು ತೆಗೆಯುವುದು ಸ್ವಲ್ಪ ತಡವಾದರೆ, ಒಳಗೆ ಬಂದ ಮೇಲೆ ಮಾತನಾಡಿಸದೆ ಒಳಗೆ ಹೋದರೆ, ನೀರು, ಟೀ ನೀಡಲಿಲ್ಲವೆಂದರೆ ಆಕೆಯ ಮೇಲೆ ರೇಗಾಡುತ್ತೀರಿ. ಮನೆ ಕೆಲಸಗಳಿಂದ ಆಕೆ ಸುಸ್ತಾಗಿರುತ್ತಾಳೆ ಎಂದು ಅರ್ಥೈಸಿಕೊಂಡು ಸಂತೈಸಿದರೆ ಪ್ರೀತಿಯ ಧಾರೆಯೇ ನಿಮಗಾಗಿ ಹರಿದು ಬರುತ್ತದೆ. ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ಕಷ್ಟ ಪಡುವ ಆಕೆಗೆ ನೀವು ಕಾಣಿಕೆಗಳನ್ನು ಕೊಡಬೇಕಿಲ್ಲ... ಒಂದು ಸುಂದರ ಮನಃಪೂರ್ವಕ ನಗು, ಒಂದು ಪುಟ್ಟ ಪ್ರಶಂಸೆ, ಒಂದು ಮೆಚ್ಚುಗೆಯ ಮಾತು ಸಾಕು ಅದಕ್ಕೆ ಯಾಕೆ ಜಿಪುಣತನ?
ಪತ್ನಿಗೂ ಇದು ಅನ್ವಯಿಸುತ್ತದೆ. ಸಿಟಿ ಬಸ್ನಲ್ಲಿ ಸೀಟು ದೊರಕದೆ ಮೆಟ್ಟಿಲು ಮೇಲೆ ಜೋತಾಡುತ್ತಾ ಬಂದ ಗಂಡ ಮನೆಯೊಳಗೆ ಬಂದೊಡನೆ ಮನೆಗೆ ಬೇಕಾದ ಕೆಲ ಸಾಮಾನುಗಳನ್ನು ತನ್ನಿ ಎಂದಿದ್ದೆ. ತರದೆ ಹಾಗೇ ಬಂದಿದ್ದೀರಲ್ಲ ಎನ್ನುತ್ತೀರಿ. ಒಂದು ವೇಳೆ ತಂದರೆ ಅದನ್ಯಾಕೆ ತಂದಿರಿ, ಇದನ್ಯಾಕೆ ಬಿಟ್ಟು ಬಂದಿರಿ ಎಂದು ಸುಖಾಸುಮ್ಮನೆ ರೇಗುತ್ತೀರಿ. ಅದನ್ನು ಬಿಟ್ಟು ನೀವು ನಗುನಗುತ್ತಾ 'ಮಕ್ಕಳಿಗೆ ಲೆಕ್ಕ ಹೇಳಿ ಕೊಟ್ಟಿರಲ್ಲ, ಅದು ಅವರಿಗೆ ಚೆನ್ನಾಗಿ ಅರ್ಥವಾಗಿದೆ' ಎಂದೋ... 'ನೀವು ನನಗೆ ಗೊತ್ತಾಗದೇ ತಂದಿಟ್ಟಿದ್ದ ಬರ್ತ್‌ಡೇ ಗಿಫ್ಟ್ ತುಂಬಾ ಇಷ್ಟವಾಯಿತು' ಎಂದು ಪ್ರಶಂಸಿಸಿದರೆ ಪತಿರಾಯನ ಮುಖ ಅರಳುತ್ತದೆ ಅಲ್ಲವೇ?
ಆದಷ್ಟು ಮೃದುವಾಗಿ ನಗುನಗುತಾ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅವರು ಸಾಧಿಸಿದ್ದು ಚಿಕ್ಕ ಗೆಲವಾದರೂ, ದೊಡ್ಡ ಮನಸ್ಸಿನಿಂದ ಅಭಿನಂದಿಸಿ. ಅಪಜಯ ಉಂಟಾದರೆ ಸಣ್ಣತನ ತೋರದೆ ಅವರು ಗೆಲ್ಲುವ ಹಾದಿಯತ್ತ ನಡೆಯಲು ಧೈರ್ಯ ತುಂಬಿ. ಆಗ ನಿಮ್ಮ ವೈವಾಹಿಕ ಜೀವನ ಪ್ರಶಾಂತವಾಗಿ ಸಾಗುತ್ತದೆ.
-ಮಹಾಂತೇಶ ಎಸ್. ತಾರಿವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


